ದೇಶದ ನಿಜವಾದ ಇತಿಹಾಸವನ್ನು ಬದಲಿಸಲು ಯಾರಿಗೂ ಸಾಧ್ಯವಿಲ್ಲ: ಕೇಂದ್ರದ ವಿರುದ್ಧ ಮಮತಾ ಬ್ಯಾನರ್ಜಿ ಕಿಡಿ

Update: 2022-01-23 15:47 GMT
ಮಮತಾ ಬ್ಯಾನರ್ಜಿ

ಕೋಲ್ಕತಾ,ಜ.23: ಕೇಂದ್ರ ಸರಕಾರವು ಒತ್ತಡದಿಂದಾಗಿ ದಿಲ್ಲಿಯ ಇಂಡಿಯಾ ಗೇಟ್‌ನಲ್ಲಿ ನೇತಾಜಿ ಸುಭಾಷಚಂದ್ರ ಬೋಸ್ ಅವರ ಪ್ರತಿಮೆಯನ್ನು ಸ್ಥಾಪಿಸಲು ನಿರ್ಧರಿಸಿದೆ ಎಂದು ರವಿವಾರ ಇಲ್ಲಿ ಹೇಳಿದ ಪ.ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು, ಗಣರಾಜ್ಯೋತ್ಸವ ಪರೇಡ್‌ನಲ್ಲಿ ರಾಜ್ಯದ ಸ್ತಬ್ಧಚಿತ್ರವನ್ನು ಸೇರಿಸಿಕೊಳ್ಳದ ವಿಷಯವನ್ನು ಪ್ರಸ್ತಾಪಿಸಿದರು.

ಇಲ್ಲಿಯ ರೆಡ್ ರೋಡ್‌ನಲ್ಲಿರುವ ನೇತಾಜಿಯವರ ಪ್ರತಿಮೆಯ ಬಳಿ ಅವರ 125ನೇ ಜನ್ಮ ದಿನಾಚರಣೆಯಲ್ಲಿ ಪಾಲ್ಗೊಂಡಿದ್ದ ಬ್ಯಾನರ್ಜಿ, ‘ಪ.ಬಂಗಾಳದ ಬಗ್ಗೆ ಈ ರೀತಿಯ ನಿರ್ಲಕ್ಷವನ್ನು ತೋರಿಸಲಾಗುತ್ತಿದೆ? ಪ.ಬಂಗಾಳದ ಇತಿಹಾಸವನ್ನು ಅಳಿಸುವ ದಾಷ್ಟೀಕ ಯಾರಿಗೂ ಇಲ್ಲ,ನಾನು ಈ ಬಗ್ಗೆ ಸವಾಲು ಹಾಕುತ್ತೇನೆ. ದೇಶದ ನಿಜವಾದ ಇತಿಹಾಸವನ್ನು ಬದಲಿಸಲು ಯಾರಿಗೂ ಸಾಧ್ಯವಿಲ್ಲ. ಯಾರಾದರೂ ಅದನ್ನು ಮಾಡಿದರೆ ಅವರು ಬೆಂಕಿಯೊಂದಿಗೆ ಸರಸವಾಡುತ್ತಾರೆ ’ ಎಂದರು.

ರಾಷ್ಟ್ರಿಯ ಯುದ್ಧ ಸ್ಮಾರಕದಲ್ಲಿ ಅಮರ ಜವಾನ ಜ್ಯೋತಿಯನ್ನು ವಿಲೀನಗೊಳಿಸಿದ ವಿಷಯವನ್ನೆತ್ತಿದ ಅವರು,‘ನೇತಾಜಿಯವರ ಪ್ರತಿಮೆ ಸ್ಥಾಪನೆಯೊಂದೇ ಸಾಲದು. ಇಷ್ಟೊಂದು ವರ್ಷಗಳು ಕಳೆದರೂ ನೇತಾಜಿಯವರ ಸಾವಿನ ಬಗ್ಗೆ ಸ್ಪಷ್ಟತೆಯಿಲ್ಲ. ಪ್ರತಿಮೆಯ ಮೇಲೆ ಅವರ ಜನ್ಮ ದಿನಾಂಕವನ್ನು ಬರೆಯಬಹುದು,ಅವರ ನಿಧನ ದಿನಾಂಕವನ್ನು ಬರೆಯಲು ನಮಗೆ ಸಾಧ್ಯವೇ ’ಎಂದು ಪ್ರಶ್ನಿಸಿದರು.

ದೇಶದ ಸ್ವಾತಂತ್ರ ಹೋರಾಟದಲ್ಲಿ ಪ.ಬಂಗಾಳದ ಕೊಡುಗೆಗೆ ಒತ್ತು ನೀಡಿದ ಬ್ಯಾನರ್ಜಿ,‘ಧರ್ಮ,ಹಿಂದುಗಳು ಮತ್ತು ಮುಸ್ಲಿಮರನ್ನು ಗುರಿಯಾಗಿಸಿಕೊಂಡು ಭಾರತವನ್ನು ವಿಭಜಿಸಲು ಪ್ರಯತ್ನಿಸುತ್ತಿರುವ ಶಕ್ತಿಗಳು ಈ ದೇಶದಲ್ಲಿವೆ. ಮಹಾತ್ಮಾ ಗಾಂಧಿ,ಸ್ವಾಮಿ ವಿವೇಕಾನಂದ ಮತ್ತು ನೇತಾಜಿ ಸುಭಾಷಚಂದ್ರ ಅವರ ಬಗ್ಗೆ ಓದಿಕೊಳ್ಳುವಂತೆ ನಾನು ಅವರನ್ನು ಕೋರುತ್ತೇನೆ. ಇವರ್ಯಾರೂ ದೇಶ ವಿಭಜನೆಯ ಬಗ್ಗೆ ಮಾತನಾಡಿರಲಿಲ್ಲ ’ಎಂದರು.

ನೇತಾಜಿಯವರ ಪರಿಕಲ್ಪನೆಯಾಗಿದ್ದ ಯೋಜನಾ ಆಯೋಗವನ್ನು ವಿಸರ್ಜಿಸಿದ್ದು ನಾಚಿಕೆಗೇಡು ಎಂದ ಅವರು,‘ಪ.ಬಂಗಾಳದಲ್ಲಿ ನಾವು ಯೋಜನಾ ಆಯೋಗವನ್ನು ಹೊಂದಿದ್ದೇವೆ. ದಿಲ್ಲಿಯ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಪಶ್ಚಿಮ ಬಂಗಾಳದ ಸ್ತಬ್ಧಚಿತ್ರಕ್ಕೆ ಅವಕಾಶ ದೊರಕಿಲ್ಲ,ಆದರೆ ಕೋಲ್ಕತಾದ ರೆಡ್ ರೋಡ್‌ನಲ್ಲಿ ನಡೆಯಲಿರುವ ಸಂಭ್ರಮಾಚರಣೆಯಲ್ಲಿ ಅದು ಖಂಡಿತವಾಗಿಯೂ ಪಾಲ್ಗೊಳ್ಳಲಿದೆ ’ಎಂದರು.

ನೇತಾಜಿಯವರ ಜನ್ಮದಿನಾಚರಣೆಯ ಅಂಗವಾಗಿ ಅವರ ಜನನ ಸಮಯವಾದ ಅಪರಾಹ್ನ 12:15ಕ್ಕೆ ರಾಜ್ಯದ ವಿವಿಧ ಸ್ಥಳಗಳಲ್ಲಿ ಸೈರನ್‌ಗಳನ್ನು ಮೊಳಗಿಸಲಾಗಿದ್ದು,ಈ ವೇಳೆ ಬ್ಯಾನರ್ಜಿ ಶಂಖವನ್ನು ಊದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News