ತಾಲಿಬಾನ್-ಪಾಶ್ಚಿಮಾತ್ಯ ದೇಶಗಳ ಮಾತುಕತೆ ಆರಂಭ: ಮಾನವೀಯ ನೆರವಿನ ಕುರಿತ ಚರ್ಚೆಗೆ ಆದ್ಯತೆ

Update: 2022-01-23 17:34 GMT
ತಾಲಿಬಾನ್ ಅಧಿಕಾರಿಗಳು(photo:twitter/@HillelNeuer)
 

ಓಸ್ಲೋ, ಜ.23: ನಾರ್ವೆ ರಾಜಧಾನಿ ಓಸ್ಲೋದಲ್ಲಿ ರವಿವಾರ ತಾಲಿಬಾನ್, ಪಾಶ್ಚಿಮಾತ್ಯ ದೇಶಗಳು ಹಾಗೂ ಅಫ್ಘಾನ್ ನಾಗರಿಕ ಸಮಾಜದ ಸದಸ್ಯರ ಮಧ್ಯೆ ಆರಂಭಗೊಂಡ ಮಾತುಕತೆಯಲ್ಲಿ ಅಫ್ಘಾನ್‌ನಲ್ಲಿನ ಮಾನವ ಹಕ್ಕು ಮತ್ತು ಮಾನವೀಯ ಬಿಕ್ಕಟ್ಟಿನ ವಿಷಯಕ್ಕೆ ಆದ್ಯತೆ ನೀಡಲಾಗಿದೆ ಎಂದು ವರದಿಯಾಗಿದೆ.

ಆಗಸ್ಟ್‌ನಲ್ಲಿ ಅಧಿಕಾರಕ್ಕೆ ಮರಳಿದ ಬಳಿಕ ನಾರ್ವೆಗೆ ಪ್ರಥಮ ಭೇಟಿ ನೀಡಿರುವ ತಾಲಿಬಾನ್ ನಿಯೋಗ ಅಲ್ಲಿನ ಅಧಿಕಾರಿಗಳ ಜತೆಗೆ, ಅಮೆರಿಕ, ಬ್ರಿಟನ್, ಫ್ರಾನ್ಸ್, ಜರ್ಮನಿ, ಇಟಲಿ ಮತ್ತು ಯುರೋಪಿಯನ್ ಯೂನಿಯನ್ ಪ್ರತಿನಿಧಿಗಳ ಜತೆ ಮಾತುಕತೆ ನಡೆಸಲಿದೆ. ಅಫ್ಘಾನ್‌ನ ವಿದೇಶ ಸಚಿವ ಅಮೀರ್‌ಖಾನ್ ಮುತ್ತಖಿ ತಾಲಿಬಾನ್ ನಿಯೋಗದ ನೇತೃತ್ವ ವಹಿಸಿದ್ದಾರೆ.

ಪ್ರಾತಿನಿಧಿಕ ರಾಜಕೀಯ ವ್ಯವಸ್ಥೆಯ ರಚನೆ, ಮಾನವೀಯ ಮತ್ತು ಆರ್ಥಿಕ ಬಿಕ್ಕಟ್ಟಗೆ ತುರ್ತು ಸ್ಪಂದನೆ, ಭದ್ರತೆಯ ಸಮಸ್ಯೆ ಮತ್ತು ಭಯೋತ್ಪಾದನೆಯ ವಿರುದ್ಧ ಕೈಗೊಳ್ಳಬೇಕಾದ ಕ್ರಮಗಳು, ವಿಶೇಷವಾಗಿ ಬಾಲಕಿಯರು ಮತ್ತು ಮಹಿಳೆಯರಿಗೆ ಶಿಕ್ಷಣ ಹಕ್ಕು ಸಹಿತ ಮಾನವ ಹಕ್ಕುಗಳ ವಿಷಯ ಸಭೆಯ ಕಾರ್ಯಸೂಚಿಯಲ್ಲಿದೆ ಎಂದು ಅಮೆರಿಕದ ವಿದೇಶ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.

ಈ ಮಾತುಕತೆಯು ಯುದ್ಧದ ವಾತಾವರಣವನ್ನು ಶಾಂತ ಪರಿಸ್ಥಿತಿಗೆ ಬದಲಾಯಿಸಲು ನೆರವಾಗಲಿದೆ ಎಂದು ಆಶಿಸುವುದಾಗಿ ಅಫ್ಘಾನ್ ಸರಕಾರದ ವಕ್ತಾರ ಝಬೀಹುಲ್ಲಾ ಮುಜಾಹಿದ್ ಹೇಳಿರುವುದಾಗಿ ಎಎಫ್‌ಪಿ ವರದಿ ಮಾಡಿದೆ. ಇದುವರೆಗೂ ಯಾವುದೇ ದೇಶ ತಾಲಿಬಾನ್ ಸರಕಾರಕ್ಕೆ ಮಾನ್ಯತೆ ನೀಡಿಲ್ಲ. ಈ ಮಾತುಕತೆ ತಾಲಿಬಾನ್‌ಗೆ ಮಾನ್ಯತೆ ನೀಡುವ ಅಥವಾ ಸರಕಾರವನ್ನು ಕಾನೂನುಬದ್ಧಗೊಳಿಸುವ ಉದ್ದೇಶ ಹೊಂದಿಲ್ಲ. ಆದರೆ ಆ ದೇಶದಲ್ಲಿರುವ ವಾಸ್ತವಿಕ ಪರಿಸ್ಥಿತಿಯನ್ನು ನಾವು ಗಮನಿಸಬೇಕಿದೆ. ರಾಜಕೀಯ ಪರಿಸ್ಥಿತಿ ಮಾನವೀಯ ದುರಂತಕ್ಕೆ ಕಾರಣವಾಗಬಾರದು ಅಥವಾ ಮಾನವೀಯ ದುರಂತ ಪರಿಸ್ಥಿತಿ ಇನ್ನಷ್ಟು ಹದಗೆಡಲು ಅವಕಾಶ ನೀಡಬಾರದು ಎಂದು ನಾರ್ವೆಯ ವಿದೇಶ ಸಚಿವ ಅನೀಕನ್ ಹುಯ್ಟಿಫೆಲ್ಡ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News