ಯುರೋಪ್‌ನಲ್ಲಿ ಕೋವಿಡ್ ಸೋಂಕು ಅಂತಿಮ ಹಂತದಲ್ಲಿರಬಹುದು: ವಿಶ್ವ ಆರೋಗ್ಯ ಸಂಸ್ಥೆ ‌

Update: 2022-01-24 18:31 GMT
ಸಾಂದರ್ಭಿಕ ಚಿತ್ರ

ಕೋಪನ್ಹೆಗನ್, ಜ.24: ಒಮೈಕ್ರಾನ್ ರೂಪಾಂತರಿಯು ಕೋವಿಡ್ ಸಾಂಕ್ರಾಮಿಕರನ್ನು ಹೊಸ ಹಂತಕ್ಕೆ ಮುಂದೊತ್ತಿದೆ ಮತ್ತು ಇದು ಕೋವಿಡ್ ಸಾಂಕ್ರಾಮಿಕದ ಅಂತಿಮ ಹಂತವಾಗಿರುವ ಸಾಧ್ಯತೆಯಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಯುರೋಪ್ ನಿರ್ದೇಶಕ ಹ್ಯಾನ್ಸ್ ಕ್ಲೂಗ್ ಹೇಳಿದ್ದಾರೆ.

ಮಾರ್ಚ್ ವೇಳೆಗೆ ಯುರೋಪ್ನ 60% ಜನ ಒಮೈಕ್ರಾನ್ ಸೋಂಕುಪೀಡಿತರಾಗಬಹುದು . ಯುರೋಪ್‌ನಾದ್ಯಂತ ಒಮೈಕ್ರಾನ್ ಸೋಂಕು ಹರಡಿದ ಬಳಿಕ , ಲಸಿಕೆಯ ಕಾರಣದಿಂದ ಅಥವಾ ಮನುಷ್ಯರ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಲಿದೆ. ಇದರಿಂದ ಮತ್ತು ಒಮೈಕ್ರಾನ್ ರೂಪಾಂತರವು ಕೊರೋನ ಸೋಂಕಿನ ಅಂತಿಮ ಹಂತವಾಗಿರುವ ಎಲ್ಲಾ ಸಂಭವನೀಯತೆ ಇದೆ ಎಂದವರು ಎಎಫ್‌ಪಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಕೋವಿಡ್ ಸೋಂಕು ಈ ವರ್ಷಾಂತ್ಯಕ್ಕೆ ಮರಳಿ ಬರುವ ಮುನ್ನ ‘ಮೌನದ ಅವಧಿ’ ಇರಬಹುದು ಎಂದು ನಿರೀಕ್ಷಿಸಬಹುದು. ಆದರೆ ಕೋವಿಡ್ ಮರಳಿ ಬರುವುದು ಖಚಿತ ಎಂದು ಹೇಳಲಾಗದು ಎಂದವರು ಹೇಳಿದ್ದಾರೆ. ಒಮೈಕ್ರಾನ್ ಸೋಂಕು ಕ್ಷಿಪ್ರಗತಿಯಲ್ಲಿ ಹರಡುವುದಾದರೂ ಲಸಿಕೆ ಪಡೆದವರ ಮೇಲೆ ಹೆಚ್ಚಿನ ಪರಿಣಾಮ ಬೀರದಿರುವುದು, ಕೋವಿಡ್ ಸಾಂಕ್ರಾಮಿಕ ವ್ಯಾಧಿಯು ಫ್ಲೂ ರೀತಿಯ ಸಾಮಾನ್ಯ ಕಾಯಿಲೆಯಾಗಿ ಬದಲಾಗುತ್ತಿರುವ ಲಕ್ಷಣವಾಗಿದೆ ಎಂಬ ಆಶಾವಾದವನ್ನು ಚಿಗುರಿಸಿದೆ. ಆದರೆ ಕೋವಿಡ್ ಸಾಮಾನ್ಯ ಕಾಯಿಲೆಯಾಗಿ ಮಾರ್ಪಡಲಿದೆ ಎಂದು ಈಗಲೇ ಖಚಿತವಾಗಿ ಹೇಳಲಾಗದು ಎಂದವರು ಎಚ್ಚರಿಸಿದ್ದಾರೆ.

ಅಮೆರಿಕದ ಪ್ರಮುಖ ವಿಜ್ಞಾನಿ ಆ್ಯಂಟನಿ ಫಾಸಿ ಇದೇ ಆಶಾವಾದವನ್ನು ವ್ಯಕ್ತಪಡಿಸಿದ್ದಾರೆ. ಅಮೆರಿಕದ ಹಲವೆಡೆ ಕೋವಿಡ್ ಸೋಂಕಿನ ಪ್ರಕರಣಗಳು ಕ್ಷಿಪ್ರಗತಿಯಲ್ಲಿ ಇಳಿಕೆಯಾಗುತ್ತಿರುವುದು ಶುಭ ಲಕ್ಷಣವಾಗಿದೆ. ಈ ಪ್ರಕ್ರಿಯೆ ಮುಂದಿನ ದಿನದಲ್ಲೂ ಮುಂದುವರಿಯುವ ಲಕ್ಷಣವಿದೆ. ಆದರೆ ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ ಎಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News