ಆಕಾಂಕ್ಷಿಗಳ ಪ್ರತಿಭಟನೆಯ ನಂತರ ಎನ್‌ಟಿಪಿಸಿ, ಮೊದಲ ಹಂತದ ಪರೀಕ್ಷೆ ಸ್ಥಗಿತಗೊಳಿಸಿದ ರೈಲ್ವೆ

Update: 2022-01-26 09:46 GMT

ಹೊಸದಿಲ್ಲಿ: ತನ್ನ ನೇಮಕಾತಿ ಪರೀಕ್ಷೆಗಳ ಆಯ್ಕೆ ಪ್ರಕ್ರಿಯೆಯ ಕುರಿತು ಉದ್ಯೋಗ ಆಕಾಂಕ್ಷಿಗಳಿಂದ ಹಿಂಸಾತ್ಮಕ ಪ್ರತಿಭಟನೆಯ ನಂತರ ರೈಲ್ವೇ ತನ್ನ ಎನ್‌ಟಿಪಿಸಿ ಹಾಗೂ ಲೆವೆಲ್ 1 ಪರೀಕ್ಷೆಗಳನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ ಎಂದು ರಾಷ್ಟ್ರೀಯ ಸಾರಿಗೆಯ ವಕ್ತಾರರು ಬುಧವಾರ ತಿಳಿಸಿದ್ದಾರೆ.

ವಿವಿಧ ರೈಲ್ವೇ ನೇಮಕಾತಿ ಮಂಡಳಿಗಳ (ಆರ್‌ಆರ್‌ಬಿ) ಅಡಿಯಲ್ಲಿ ಪರೀಕ್ಷೆಗಳಲ್ಲಿ ಉತ್ತೀರ್ಣರಾದವರು ಹಾಗೂ ಅನುತ್ತೀರ್ಣರಾದವರ ಕುಂದುಕೊರತೆಗಳನ್ನು ಪರಿಶೀಲಿಸುವ ಸಮಿತಿಯನ್ನು ಕೂಡ  ರೈಲ್ವೆ ರಚಿಸಿದೆ.

ಉಭಯ ಪಕ್ಷಗಳ ಮಾತುಗಳನ್ನು ಆಲಿಸಿದ ನಂತರ ಸಮಿತಿಯು ರೈಲ್ವೆ ಸಚಿವಾಲಯಕ್ಕೆ ವರದಿ ಸಲ್ಲಿಸಲಿದೆ ಎಂದು ವಕ್ತಾರರು ಹೇಳಿದ್ದಾರೆ.

ಮಂಗಳವಾರ  ರೈಲ್ವೇ ತನ್ನ ಉದ್ಯೋಗಾಕಾಂಕ್ಷಿಗಳಿಗೆ ಸಾಮಾನ್ಯ ಸೂಚನೆಯನ್ನು ನೀಡಿತ್ತು. ಪ್ರತಿಭಟನೆಯ ಸಮಯದಲ್ಲಿ ವಿಧ್ವಂಸಕ ಮತ್ತು ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವವರು ರೈಲ್ವೇಯಲ್ಲಿ ಶಾಶ್ವತವಾಗಿ ನೇಮಕಾತಿ ಪಡೆಯುವುದನ್ನು ನಿರ್ಬಂಧಿಸಲಾಗುವುದು ಎಂದು ಎಚ್ಚರಿಸಿದೆ.

ಬಿಹಾರ ರಾಜ್ಯವ್ಯಾಪಿ ಹಿಂಸಾತ್ಮಕ ಪ್ರತಿಭಟನೆ: ಬಿಹಾರದಲ್ಲಿ ರೈಲ್ವೇ ನೇಮಕಾತಿ ಮಂಡಳಿಯ ಆರ್ ಆರ್ ಬಿ-ಎನ್ ಟಿಪಿಸಿ ಪರೀಕ್ಷೆ 2021 ರ ವಿರುದ್ಧ ವಿದ್ಯಾರ್ಥಿಗಳ ಹಿಂಸಾತ್ಮಕ ಪ್ರತಿಭಟನೆಯು ಇಡೀ ರಾಜ್ಯಕ್ಕೆ ವ್ಯಾಪಿಸಿದೆ.

 ಪ್ರತಿಭಟನಾಕಾರರು ಗಯಾದಲ್ಲಿ ನಿಂತಿದ್ದ ಪ್ಯಾಸೆಂಜರ್ ರೈಲಿಗೆ ಬೆಂಕಿ ಹಚ್ಚಿದ್ದಾರೆ. ಓಡುತ್ತಿರುವ ರೈಲಿಗೆ ಕಲ್ಲೆಸೆದಿದ್ದಾರೆ. ರೈಲಿಗೆ ಬೆಂಕಿ ಹೊತ್ತಿಕೊಂಡಿದ್ದು, ಅದನ್ನು ನಂದಿಸಲು ಅಗ್ನಿಶಾಮಕ ದಳ ಧಾವಿಸುತ್ತಿರುವ ದೃಶ್ಯ ಕಂಡುಬಂದಿದೆ. ಭಾರೀ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದರೂ ವಿದ್ಯಾರ್ಥಿಗಳನ್ನು ನಿಯಂತ್ರಿಸುವಲ್ಲಿ ಪೊಲೀಸರು ವಿಫಲರಾಗಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News