ಐಎಎಸ್ ನಿಯೋಜನೆ ನಿಯಮಗಳಿಗೆ ಕೇಂದ್ರದ ಪ್ರಸ್ತಾವಿತ ಬದಲಾವಣೆಗಳಿಗೆ ಒಂಭತ್ತು ರಾಜ್ಯಗಳ ವಿರೋಧ

Update: 2022-01-26 16:18 GMT

ಹೊಸದಿಲ್ಲಿ,ಜ.26: ಐಎಎಸ್ ಅಧಿಕಾರಿಗಳ ಕೇಂದ್ರ ನಿಯೋಜನೆಯನ್ನು ನಿರ್ಧರಿಸುವಾಗ ಅಂತಿಮ ಅಧಿಕಾರವನ್ನು ತಾನೇ ಪಡೆದುಕೊಳ್ಳುವ ಕೇಂದ್ರ ಸರಕಾರದ ಪ್ರಸ್ತಾವನೆಗೆ ಈವರೆಗೆ ಒಡಿಶಾ,ಪ.ಬಂಗಾಳ,ಕೇರಳ ಸೇರಿದಂತೆ ಒಂಭತ್ತು ಬಿಜೆಪಿಯೇತರ ಆಡಳಿತದ ರಾಜ್ಯಗಳು ವಿರೋಧದ ಕೂಗನ್ನೆಬ್ಬಿಸಿದ್ದು,ಇದು ದೇಶದ ಒಕ್ಕೂಟವಾದಕ್ಕೆ ವಿರುದ್ಧವಾಗಿದೆ ಎಂದು ಪ್ರತಿಪಾದಿಸಿವೆ. 

ಇನ್ನೊಂದೆಡೆ ಪ್ರಸ್ತಾವನೆಯನ್ನು ಸಮರ್ಥಿಸಿಕೊಂಡಿರುವ ಕೇಂದ್ರ ಸರಕಾರವು,ರಾಜ್ಯಗಳು ನಿಯೋಜನೆಗೆ ಸಾಕಷ್ಟು ಐಎಎಸ್ ಅಧಿಕಾರಿಗಳನ್ನು ಒದಗಿಸುತ್ತಿಲ್ಲ ಮತ್ತು ಇದು ಕೇಂದ್ರ ಸರಕಾರದ ಆಡಳಿತ ಕಾರ್ಯ ನಿರ್ವಹಣೆಯ ಮೇಲೆ ವ್ಯತಿರಿಕ್ತ ಪರಿಣಾಮವನ್ನುಂಟು ಮಾಡುತ್ತಿದೆ ಎಂದು ಹೇಳಿದೆ.

ಹೆಚ್ಚಿನ ರಾಜ್ಯಗಳು ತಮ್ಮ ಕೇಂದ್ರ ನಿಯೋಜನೆ ಮೀಸಲು (ಸಿಡಿಆರ್) ಬಾಧ್ಯತೆಗಳನ್ನು ಪೂರೈಸುತ್ತಿಲ್ಲ ಮತ್ತು ಕೇಂದ್ರ ಸರಕಾರದ ಸೇವೆಗೆ ಅವು ನಿಯೋಜಿಸಿರುವ ಅಧಿಕಾರಿಗಳ ಸಂಖ್ಯೆ ತುಂಬ ಕಡಿಮೆಯಿದೆ,ಹೀಗಾಗಿ ಕೇಂದ್ರ ಸರಕಾರದಲ್ಲಿ ಜಂಟಿ ಕಾರ್ಯದರ್ಶಿ ಮಟ್ಟದವರೆಗೆ ಐಎಎಸ್ ಅಧಿಕಾರಿಗಳ ಪ್ರಾತಿನಿಧ್ಯ ಕಡಿಮೆಯಾಗುತ್ತಿರುವ ಪ್ರವೃತ್ತಿಯನ್ನು ಗಮನಿಸಲಾಗಿದೆ ಎಂದು ಸಿಬ್ಬಂದಿ ಮತ್ತು ತರಬೇತಿ ಇಲಾಖೆ (ಡಿಒಪಿಟಿ)ಯಲ್ಲಿನ ಮೂಲಗಳು ಹೇಳಿವೆ.

ಐಎಎಸ್ ಅಧಿಕಾರಿಗಳಿಗೆ ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳ ಕೇಡರ್‌ಗಳನ್ನು ಹಂಚಿಕೆ ಮಾಡಲಾಗುತ್ತದೆ. ಅವರು ತಮ್ಮ ಅನುಭವವನ್ನು ಹೆಚ್ಚಿಸಿಕೊಳ್ಳಲು ಕೇಂದ್ರ ನಿಯೋಜನೆಯಲ್ಲಿ ಕೆಲಸ ಮಾಡಲು ಅವಕಾಶ ದೊರೆಯುವಂತಾಗಲು ಪ್ರತಿ ಕೇಡರ್ ಸಿಡಿಆರ್ ಅನ್ನು ಹೊಂದಿರುತ್ತದೆ. ಡಿಒಪಿಟಿ ಇತ್ತೀಚಿಗೆ ಐಎಎಸ್ (ಕೇಡರ್)ನಿಯಮಗಳು,1954ಕ್ಕೆ ಬದಲಾವಣೆಗಳನ್ನು ಪ್ರಸ್ತಾವಿಸಿದ್ದು,ಕೇಂದ್ರ ಸೇವೆಗೆ ಅಧಿಕಾರಿಗಳ ನಿಯೋಜನೆಗಾಗಿ ಕೇಂದ್ರ ಸರಕಾರದ ಮನವಿಯನ್ನು ತಳ್ಳಿಹಾಕುವ ರಾಜ್ಯಗಳ ಅಧಿಕಾರವನ್ನು ಈ ಬದಲಾವಣೆಗಳು ಕಿತ್ತುಕೊಳ್ಳುತ್ತವೆ.

ಈ ಕ್ರಮವು ಜಾರಿಗೊಂಡರೆ ರಾಜ್ಯಗಳ ಆಡಳಿತದ ಮೇಲೆ ಪ್ರತಿಕೂಲ ಪರಿಣಾಮಗಳು ಉಂಟಾಗುತ್ತವೆ ಮತ್ತು ವಿವಿಧ ಅಭಿವೃದ್ಧಿ ಯೋಜನೆಗಳ ಅನುಷ್ಠಾನವೂ ಬಾಧಿತಗೊಳ್ಳುತ್ತದೆ ಎಂದು ಒಡಿಶಾ ಹೇಳಿದೆ. ಮಹಾರಾಷ್ಟ್ರ,ಕೇರಳ,ತಮಿಳುನಾಡು,ಪ.ಬಂಗಾಳ,ತೆಲಂಗಾಣ,ಛತ್ತೀಸ್‌ಗಡ,ಜಾರ್ಖಂಡ್ ಮತ್ತು ರಾಜಸ್ಥಾನಗಳೂ ತಿದ್ದುಪಡಿಗಳ ವಿರುದ್ಧ ಧ್ವನಿಗಳನ್ನೆತ್ತಿವೆ.

ಪ್ರಸ್ತಾವಿತ ತಿದ್ದುಪಡಿಗಳನ್ನು ಕರಾಳ ಮತ್ತು ಏಕಪಕ್ಷೀಯವಾದವನ್ನು ಉತ್ತೇಜಿಸುವ ಉದ್ದೇಶದ್ದಾಗಿವೆ ಎಂದು ಬಣ್ಣಿಸಿರುವ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರು,ಈ ಪ್ರಸ್ತಾವಗಳನ್ನು ‘ಹೂತು ಹಾಕುವಂತೆ ’ ಪ್ರಧಾನಿ ನರೇಂದ್ರ ಮೋದಿಯವರನ್ನು ಕೇಳಿಕೊಂಡಿದ್ದಾರೆ. ಸರಕಾರದ ಕ್ರಮದ ವಿರುದ್ಧ ಮೊದಲು ಧ್ವನಿಯೆತ್ತಿದ್ದ ಪ.ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು, ಪ್ರಸ್ತಾವನೆಯು ಅಧಿಕಾರಿಗಳಲ್ಲಿ ಭೀತಿಯ ಮಾನಸಿಕತೆಯನ್ನು ಸೃಷ್ಟಿಸುತ್ತದೆ ಮತ್ತು ಅವರ ಕಾರ್ಯಕ್ಷಮತೆಯ ಮೇಲೆ ಪರಿಣಾಮವನ್ನುಂಟು ಮಾಡುವುದರಿಂದ ಅದನ್ನು ಹಿಂದೆಗೆದುಕೊಳ್ಳುವಂತೆ ಮೋದಿಯವರನ್ನು ಆಗ್ರಹಿಸಿದ್ದಾರೆ.

ದೇಶದ ಒಕ್ಕೂಟ ಪ್ರಭುತ್ವ ಮತ್ತು ರಾಜ್ಯಗಳ ಸ್ವಾಯತ್ತೆಯ ಮೂಲಕ್ಕೇ ಕೊಡಲಿಯೇಟು ಹಾಕುವ ಈ ಕ್ರಮವನ್ನು ನಿಲ್ಲಿಸುವಂತೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಮೋದಿಯವರನ್ನು ಆಗ್ರಹಿಸಿದ್ದರೆ,ಪ್ರಸ್ತಾವಿತ ಬದಲಾವಣೆಗಳು ಕೇಂದ್ರ ಮತ್ತು ರಾಜ್ಯ ಸರಕಾರಗಳ ಸಾಂವಿಧಾನಿಕ ಅಧಿಕಾರ ಕ್ಷೇತ್ರವನ್ನು ಅತಿಕ್ರಮಿಸುತ್ತವೆ ಮತ್ತು ಅಧಿಕಾರಿಗಳ ನೈತಿಕ ಸ್ಥೈರ್ಯವನ್ನು  ಉಡುಗಿಸುತ್ತವೆ ಎಂದು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.

ಪ್ರಸ್ತಾವಿತ ತಿದ್ದುಪಡಿಗಳು ಒಕ್ಕೂಟವಾದದ ಆಶಯಕ್ಕೆ ವಿರುದ್ಧವಾಗಿವೆ ಮತ್ತು ಅವುಗಳನ್ನು ಜಾರಿಗೊಳಿಸಿದರೆ ರಾಜ್ಯಗಳ ಆಡಳಿತಾತ್ಮಕ ವ್ಯವಸ್ಥೆಯ ಕುಸಿತಕ್ಕೆ ಕಾರಣವಾಗಬಹುದು ಎಂದು ಛತ್ತೀಸ್‌ಗಡದ ಮುಖ್ಯಮಂತ್ರಿ ಭೂಪೇಶ್ ಭಘೇಲ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News