ಅಫ್ಘಾನ್ ಗೆ ಮಾನವೀಯ ನೆರವು ಹೆಚ್ಚಿಸಲು ವಿಶ್ವಸಂಸ್ಥೆ ಮುಖ್ಯಸ್ಥರ ಆಗ್ರಹ

Update: 2022-01-27 17:57 GMT
ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್

ವಿಶ್ವಸಂಸ್ಥೆ, ಜ.27: ಅತ್ಯಂತ ಸಂಕಷ್ಟದ ಸ್ಥಿತಿಯಲ್ಲಿರುವ ಅಫ್ಘಾನ್‌ನ ಲಕ್ಷಾಂತರ ಮಂದಿಗೆ ಮಾನವೀಯ ನೆರವನ್ನು ಹೆಚ್ಚಿಸುವಂತೆ ಮತ್ತು ಕುಸಿತದ ಅಂಚಿಗೆ ತಲುಪಿರುವ ಅಫ್ಘಾನ್‌ನ ಅರ್ಥವ್ಯವಸ್ಥೆಗೆ ಚೇತರಿಕೆ ನೀಡುವ ನಿಟ್ಟಿನಲ್ಲಿ, ಸ್ಥಂಭನಗೊಳಿಸಿರುವ ಸುಮಾರು 9 ಬಿಲಿಯನ್ ಡಾಲರ್‌ನಷ್ಟು ಮೊತ್ತವನ್ನು ತಕ್ಷಣ ಬಿಡುಗಡೆಗೊಳಿಸುವಂತೆ ವಿಶ್ವಸಂಸ್ಥೆಯ ಮುಖ್ಯಸ್ಥರು ರಾಷ್ಟ್ರಗಳನ್ನು ಆಗ್ರಹಿಸಿದ್ದಾರೆ.

ಸಮಯಕ್ಕೆ ಮಹತ್ವವಿದೆ. ಸಕಾಲಿಕ ನೆರವು ಒದಗಿಸಬೇಕಿದೆ. ಇಲ್ಲದಿದ್ದರೆ ಹಲವರು ಮೃತಪಡಬಹುದು ಮತ್ತು ಹತಾಶೆ ಮತ್ತು ಉಗ್ರವಾದ ಹೆಚ್ಚಬಹುದು ಎಂದು ಭದ್ರತಾ ಸಮಿತಿಯಲ್ಲಿ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಹೇಳಿದ್ದಾರೆ. ಅಫ್ಘಾನ್‌ನ ಅರ್ಥವ್ಯವಸ್ಥೆಗೆ ತಕ್ಷಣ ಹಣವನ್ನು ಸೇರಿಸುವ ಅಗತ್ಯವಿದೆ. ವಿದೇಶದಲ್ಲಿ ಸ್ಥಂಭನಗೊಳಿಸಿರುವ ಅಫ್ಘಾನ್‌ನ ವಿದೇಶಿ ವಿನಿಮಯ ಮೀಸಲು ನಿಧಿಯನ್ನು ಬಿಡುಗಡೆಗೊಳಿಸುವುದು, ವೈದ್ಯರು, ಶಿಕ್ಷಕರು, ನೈರ್ಮಲ್ಯ ಕೆಲಸಗಾರರು ಹಾಗೂ ಇತರ ಪೌರ ಕಾರ್ಮಿಕರಿಗೆ ವೇತನ ಪಾವತಿಸಲು ಅಂತರಾಷ್ಟ್ರೀಯ ನಿಧಿಯ ಬಳಕೆಗೆ ಅವಕಾಶ, ಸೆಂಟ್ರಲ್ ಬ್ಯಾಂಕ್‌ಗೆ ಹಣ ಒದಗಿಸುವ ಮೂಲಕ ಸಕ್ರಿಯವಾಗಿ ಕಾರ್ಯನಿರ್ವಹಿಸಲು ನೆರವಾಗುವುದು ಮುಂತಾದ ತುರ್ತು ಉಪಕ್ರಮಗಳ ಅಗತ್ಯವಿದೆ ಎಂದವರು ಹೇಳಿದ್ದಾರೆ.

ವಿಶ್ವಬ್ಯಾಂಕ್‌ನ ಅಫ್ಘಾನಿಸ್ತಾನ ಪುನನಿರ್ಮಾಣ ನಿಧಿ ಟ್ರಸ್ಟ್ ಫಂಡ್‌ನಿಂದ ಕಳೆದ ತಿಂಗಳು 280 ಮಿಲಿಯನ್ ಡಾಲರ್ ಮೊತ್ತವನ್ನು ವಿಶ್ವಸಂಸ್ಥೆಯ ಮಕ್ಕಳ ನಿಧಿ ಯುನಿಸೆಫ್‌ಗೆ ಮತ್ತು ವಿಶ್ವ ಆಹಾರ ಯೋಜನೆಗೆ ವರ್ಗಾಯಿಸಲಾಗಿದೆ. ಉಳಿದ 1.2 ಮಿಲಿಯನ್ ಡಾಲರ್ ಮೊತ್ತವನ್ನು ಅಫ್ಘಾನಿಸ್ತಾನೀಯರಿಗೆ ನೆರವಾಗಲು ತಕ್ಷಣ ಬಿಡುಗಡೆಗೊಳಿಸಬೇಕು ಎಂದವರು ಆಗ್ರಹಿಸಿದ್ದಾರೆ.

2 ವಾರದ ಹಿಂದೆ ವಿಶ್ವಸಂಸ್ಥೆಯು ಆರಂಭಿಸಿದ ಅಫ್ಗಾನಿಸ್ತಾನಕ್ಕೆ ಮಾನವೀಯ ನೆರವು ಅಭಿಯಾನದಡಿ 4.4 ಬಿಲಿಯನ್ ಡಾಲರ್ಗೂ ಹೆಚ್ಚು ದೇಣಿಗೆ ಸಂಗ್ರಹಿಸಲಾಗಿದೆ ಎಂದು ಅಫ್ಗಾನ್ಗೆ ವಿಶ್ವಸಂಸ್ಥೆಯ ವಿಶೇಷ ಪ್ರತಿನಿಧಿ ಡೆಬೊರಾ ಲಿಯೋನ್ಸ್ ಹೇಳಿದ್ದಾರೆ. ವಿದೇಶದಲ್ಲಿ ಸ್ಥಂಭನಗೊಳಿಸಿರುವ ಅಫ್ಗಾನ್ನ ಆಸ್ತಿಯನ್ನು ಬಿಡುಗಡೆಗೊಳಿಸುವ ಆಗ್ರಹಕ್ಕೆ ರಶ್ಯಾ ಮತ್ತು ಚೀನಾ ಬೆಂಬಲ ಸೂಚಿಸಿದೆ. ಆದರೆ, ಅಫ್ಗಾನ್ನ ಆರ್ಥಿಕ ಸಮಸ್ಯೆಗೆ ಬೇರೆ ರೀತಿಯ ಪರಿಹಾರೋಪಾಯ ಇದೆಯೇ ಎಂಬ ಬಗ್ಗೆ ಪರಿಶೀಲಿಸುವುದಾಗಿ ಅಮೆರಿಕ ಪ್ರತಿಕ್ರಿಯಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News