ವಿವಾಹದ ವಯಸ್ಸು ಹೆಚ್ಚಳ: ಆದಿವಾಸಿಗಳಲ್ಲಿ ಗೊಂದಲ ಮತ್ತು ಕಳವಳ..?

Update: 2022-01-30 04:02 GMT

ಮದುವೆ ವಯಸ್ಸನ್ನು ಏರಿಸುವಿಕೆಯ ವಿಚಾರ ಸಮಾನ ಲಿಂಗ ಸಂಬಂಧಗಳು, ಮಹಿಳೆಯರ ಸ್ಥಾನಮಾನ, ಉದ್ಯೋಗ, ಭಾಗವಹಿಸುವಿಕೆ, ನಿರ್ಧಾರ ತೆಗೆದುಕೊಳ್ಳುವಿಕೆ, ಸಬಲೀಕರಣ, ಚಲನಶೀಲತೆ ಮತ್ತು ಸಾಂಸ್ಕೃತಿಕ ನಿರ್ಬಂಧಗಳು ಇವೆಲ್ಲದರೊಂದಿಗೆ ನೇರವಾದ ಸಹ ಸಂಬಂಧ ಹೊಂದಿವೆ. ಮೊದಲು ಬುಡಕಟ್ಟು ಜನರ ಆರೋಗ್ಯದ ಸ್ಥಿತಿಯನ್ನು ಗಣನೀಯವಾಗಿ ಸುಧಾರಿಸಬೇಕಾಗಿದೆ. ನಂತರ ಮದುವೆ ವಯಸ್ಸಿನ ಏರಿಕೆಯನ್ನು ಪರಾಮರ್ಶಿಸಬಹುದು.


ಭಾರತದಲ್ಲಿ ಆದಿವಾಸಿಗಳನ್ನು ಪರಿಶಿಷ್ಟ ಪಂಗಡ ಅಥವಾ ಬುಡಕಟ್ಟು ಎಂದು ಗುರುತಿಸಲಾಗಿದೆ. ಬುಡಕಟ್ಟು ಜನರು ರಾಷ್ಟ್ರದ ಒಟ್ಟು ಜನಸಂಖ್ಯೆಯ ಶೇ. 8.6ರಷ್ಟಿದ್ದಾರೆ. ವಿವಿಧ ಸರ್ವೇ ವರದಿಗಳ ಪ್ರಕಾರ ಇವರು ಕಡಿಮೆ ಆರೋಗ್ಯ ಸೂಚ್ಯಂಕಗಳೊಂದಿಗೆ ಬದುಕುತ್ತಿದ್ದಾರೆ. ಅವರ ಸಾಮಾಜಿಕ-ಆರ್ಥಿಕ ಸ್ಥಿತಿಯು ಅತ್ಯಂತ ಕರುಣಾಜನಕ ಮತ್ತು ನಿಜವಾಗಿಯೂ ಕೆಟ್ಟದಾಗಿದೆ. ಕಳಪೆ ಆಹಾರ, ವಸತಿ, ನೈರ್ಮಲ್ಯ, ಅನಾರೋಗ್ಯಕರ ಜೀವನಶೈಲಿ, ಪರಿಸರ ಅಪಾಯಗಳು ಮತ್ತು ಸಾಂಕ್ರಾಮಿಕ ರೋಗಗಳ ವಿರುದ್ಧ ದುರ್ಬಲ ರಕ್ಷಣೆ ಮುಂತಾದ ಹಲವಾರು ಅಂಶಗಳಿಂದ ಬುಡಕಟ್ಟುಗಳ ಆರೋಗ್ಯವು ಅಪಾಯದಿಂದ ಕೂಡಿದೆ. ಈ ಮಧ್ಯೆ ವಿವಾಹದ ವಯಸ್ಸಿನ ಹೆಚ್ಚಳ ಆದಿವಾಸಿಗಳಲ್ಲಿ ಗೊಂದಲ ಮತ್ತು ಕಳವಳ ಉಂಟುಮಾಡುತ್ತಿವೆ.

ಇತ್ತೀಚೆಗೆ ಭಾರತ ಸರಕಾರವು ದೇಶದ ಮಹಿಳೆಯರ ಮದುವೆ ವಯಸ್ಸನ್ನು 18ರಿಂದ 21ಕ್ಕೆ ಏರಿಸಿದೆ. ದೇಶದ ವಿರೋಧ ಪಕ್ಷಗಳ ತೀವ್ರವಾದ ಆಕ್ಷೇಪಣೆಯ ಕಾರಣ ಸದ್ಯ ಮಸೂದೆಯನ್ನು ಆಯ್ಕೆ ಸಮಿತಿಗೆ ಒಪ್ಪಿಸಲಾಗಿದೆ. ಬಹಳ ತಮಾಷೆಯ ಸಂಗತಿಯೆಂದರೆ ಈ ಆಯ್ಕೆ ಸಮಿತಿಯಲ್ಲಿರುವ ಹೆಚ್ಚಿನ ಸದಸ್ಯರು ಪುರುಷರು!. ಒಂದು ರೀತಿಯಲ್ಲಿ ಮದುವೆ ವಯಸ್ಸಿನ ಏರಿಕೆ ಮಹಿಳೆಯ ಆರೋಗ್ಯ ಮತ್ತು ಸಬಲೀಕರಣ ವಿಚಾರದಲ್ಲಿ ಒಂದು ಮಹತ್ತವಾದ ಹೆಜ್ಜೆ. ಇದರಲ್ಲಿ ಯಾವುದೇ ಅನುಮಾನವಿಲ್ಲ. ಇಲ್ಲಿ ಕಾನೂನಿಗಿಂತ ಮದುವೆ ವಯಸ್ಸಿನ ಏರಿಕೆ ಮಹಿಳೆಯ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಬಹಳ ಪೂರಕವಾದ ಅಂಶವಾಗಿದೆ. ಎಲ್ಲಾ ರೀತಿಯಲ್ಲೂ ಇದು ಮಹಿಳೆಯ ಪರವಾದ ನಿರ್ಧಾರ. ಆದರೆ ಇಲ್ಲಿ ದೇಶದ ಒಂದು ವರ್ಗದ ವಿಚಾರದಲ್ಲಿ ಸೂಕ್ಷ್ಮ ಅಂಶವಿದೆ.

ಬಹು ಸಂಸ್ಕೃತಿಯ ಈ ದೇಶದಲ್ಲಿ ಅದರಲ್ಲೂ ವಿಶೇಷವಾಗಿ ಆದಿವಾಸಿಗಳ ವಿಚಾರದಲ್ಲಿ ಇದು ಉಂಟುಮಾಡುವ ಕೆಲವು ಅನನ್ಯ ಪರಿಣಾಮಗಳ ಬಗ್ಗೆ ಈಗ ಯೋಚಿಸುವ ಸಮಯ. ಆದಿವಾಸಿಗಳದು ಬಹಳ ವಿಶಿಷ್ಟವಾದ ದೈಹಿಕ ಮತ್ತು ಮಾನಸಿಕ ಸ್ಥಿತಿ. ಸಾವಿರಾರು ವರ್ಷಗಳ ಹಿಂದೆ ಏಶ್ಯ ಖಂಡದ ವಿವಿಧ ಆದಿವಾಸಿಗಳ ಮಧ್ಯೆ ಉಂಟಾದ ವೈವಾಹಿಕ ಸಂಬಂಧದಿಂದ ವಿವಿಧ ಆದಿವಾಸಿಗಳ ನಡುವೆ ಉಂಟಾದ ಜೀನ್ಸ್‌ಗಳ ಮಿಶ್ರಣದಿಂದ ಸದ್ಯದ ಆದಿವಾಸಿಗಳಲ್ಲಿ ದೇಹದಲ್ಲಿನ ಕೆಲವು ಜೈವಿಕ ಅಂಶಗಳು ವಿಶಿಷ್ಟತೆಯಿಂದ ಕೂಡಿದೆ. ಬಹಳ ವಿಭಿನ್ನವಾದ ಪರಿಸರದಲ್ಲಿ ಇವರು ಬದುಕುತ್ತಿರುವುದರಿಂದ ಇವರ ಸರಾಸರಿ ಜೀವಿತಾವಧಿ ಸಹ ತುಂಬಾ ಕಡಿಮೆ ಇದೆ. ಇದಕ್ಕೆ ಇವರ ಆಹಾರ ಪದ್ಧತಿ, ಬಡತನ, ಸಾಂಸ್ಕೃತಿಕ ಅಂಶಗಳು ಮತ್ತು ಅನಾರೋಗ್ಯ ವರ್ತನೆಗಳು ಮುಖ್ಯ ಕಾರಣವಾಗುತ್ತವೆ. ಸಂಶೋಧನಾ ವರದಿಗಳ ಪ್ರಕಾರ ಅರಣ್ಯ ಮೂಲದ ಬುಡಕಟ್ಟುಗಳ ಸರಾಸರಿ ಜೀವಿತಾವಧಿ ಕೇವಲ 55-60 ವಯಸ್ಸು. ಹೆಚ್ಚಿನವರು ಈ ವಯಸ್ಸು ತಲುಪುವ ಮುಂಚಿತವಾಗಿಯೇ ಮೃತರಾಗುತ್ತಾರೆ. ಇನ್ನೂ ಕೆಲವು ಬುಡಕಟ್ಟುಗಳಲ್ಲಿ ಇನ್ನೂ ಕಡಿಮೆ ಇದೆ. ಸಾಮಾನ್ಯವಾಗಿ ನಗರ ಮತ್ತು ಗ್ರಾಮೀಣ ಪ್ರದೇಶದ ಜನರು ಸರಾಸರಿ 70 ವರ್ಷಕ್ಕಿಂತ ಹೆಚ್ಚು. ಇದಕ್ಕಿಂತ ಮುಖ್ಯವಾದ ವಿಚಾರವೆಂದರೆ ಬುಡಕಟ್ಟಿನ ಜನರು 45 ವರ್ಷಕ್ಕೇ ವೃದ್ಧರಾಗುತ್ತಿದ್ದಾರೆ. ಇನ್ನೂ ಗಂಭೀರ ವಿಚಾರವೆಂದರೆ 40 ವಯಸ್ಸಿನ ನಂತರ ಇವರಲ್ಲಿ ಆರೋಗ್ಯದಿಂದ ಇರುವುದು ಬಹಳ ಅಪರೂಪದಲ್ಲಿ ಅಪರೂಪ. ಇದು ಬಹಳ ಯೋಚಿಸಬೇಕಾದ ವಿಚಾರ.

ಬಹಳಷ್ಟು ವರ್ಷಗಳಿಂದ ಆದಿವಾಸಿ ಮಹಿಳೆಯರ ಆರೋಗ್ಯದ ವಿಚಾರದಲ್ಲಿ ದೇಶದಲ್ಲಿ ಸಂಶೋಧನೆಗಳು ನಡೆಯುತ್ತಿದ್ದು ಆದಿವಾಸಿ ಹೆಣ್ಣು ಮಕ್ಕಳು ಬಹಳ ಸಣ್ಣ ವಯಸ್ಸಿನಲ್ಲೇ ಪ್ರೌಢರಾಗುತ್ತಿದ್ದಾರೆ. ಆದಿವಾಸಿಗಳ ಹೆಣ್ಣು ಮಕ್ಕಳು ಕೆಲವೊಮ್ಮೆ 9ನೇ ವಯಸ್ಸಿಗೆ ಪ್ರೌಢರಾಗುತ್ತಿದ್ದಾರೆ. ಇದಕ್ಕೆ ವಂಶವಾಹಿಗಳು, ಪರಿಸರ ಮತ್ತು ಆಹಾರ ಪದ್ಧತಿಗಳು ಬಹು ಮುಖ್ಯಕಾರಣ ಎಂದು ನಂಬಲಾಗಿದೆ. ಹಾಗಾಗಿ ಇವರಲ್ಲಿ 13-14 ವಯಸ್ಸಿಗೆಲ್ಲಾ ಮದುವೆ ಮಾಡುವ ಸಂಪ್ರದಾಯವಿದೆ. ವೈಜ್ಞಾನಿಕವಾಗಿ ಇದು ಸಂಪೂರ್ಣ ತಪ್ಪು ನಿರ್ಧಾರ. ಆದರೆ ಇವರ ಸಂಸ್ಕೃತಿಯಲ್ಲಿ ಇದೆಲ್ಲಾ ಸಾಮಾನ್ಯ. ಹಾಗಾಗಿ 15-16 ವಯಸ್ಸಿಗೆ ಇಲ್ಲಿನ ಹೆಣ್ಣುಮಕ್ಕಳು ತಾಯಿಯ ಸ್ಥಾನ ಪಡೆಯುತ್ತಾರೆ. 20 ವಯಸ್ಸಿನ ನಂತರ ಮದುವೆಯಾಗುವುದು ಒಂದು ಕೌಟುಂಬಿಕ ಅವಮಾನ ಎಂದು ಕೆಲವು ಬುಡಕಟ್ಟುಗಳು ಭಾವಿಸುತ್ತವೆ. ಹಾಗಾಗಿ ಪುರುಷ/ಮಹಿಳೆ ವಿವಾಹಗಳು ಇವರಲ್ಲಿ 20ಕ್ಕಿಂತ ಮುಂಚೆಯೇ ನಡೆದು ಹೋಗಿರುತ್ತದೆ. ಈ ಹಿನ್ನೆಲೆಯಲ್ಲಿ 18ಕ್ಕಿಂತ ಕಡಿಮೆ ವಯಸ್ಸಿನಲ್ಲಿ ಮದುವೆಯಾಗಿರುವ ಬುಡಕಟ್ಟು ಜೋಡಿಗಳು ಫೊಕ್ಸೊ ಪ್ರಕರಣದಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಈಗ ನಾವು ಈ ಸಮಸ್ಯೆಯ ಇನ್ನೊಂದು ಮುಖವನ್ನು ಗಮನಿಸೋಣ. ಚಿಕ್ಕ ವಯಸ್ಸಿನಲ್ಲಿ ವಿವಾಹ ಮತ್ತು ಮಕ್ಕಳಾಗುವಿಕೆ, ಅವೈಜ್ಞಾನಿಕ ಋತುಸ್ರಾವ ನಿರ್ವಹಣೆ, ಬುಡಕಟ್ಟು ಮಹಿಳೆಯರ ಆರೋಗ್ಯ ವಿಚಾರದಲ್ಲಿ ಬಹಳ ಗಂಭೀರವಾದ ಅಡಚಣೆಯಾಗಿದೆ. ಅರಣ್ಯಾಧಾರಿತ ಬುಡಕಟ್ಟು ಪೋಷಕರ ಶಿಶುಗಳು ಅಪೌಷ್ಟಿಕತೆ, ಕಡಿಮೆ ಜನನ ತೂಕ ಹೊಂದುವುದು, ಅತಿಸಾರ ಮತ್ತು ನ್ಯುಮೋನಿಯಾದಂತಹ ವಿವಿಧ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುವುದರಿಂದ ಸಾವಿನ ಸಂಭವನೀಯತೆಯನ್ನು ಹೆಚ್ಚಿಸುತ್ತಿದೆ. ಕಳಪೆ ಆರ್ಥಿಕ ಸ್ಥಿತಿ, ಆರೋಗ್ಯ ಅನಕ್ಷರತೆ, ತಾಯಿಯ ಕಳಪೆ ಪೋಷಣೆಯ ಸ್ಥಿತಿ, ಅನೈರ್ಮಲ್ಯ, ಆರೋಗ್ಯ ಸೇವೆಗಳ ಅಸಮರ್ಪಕತೆ ಹೆಚ್ಚಿನ ಅಪಾಯಕ್ಕೆ ಕಾರಣವಾಗುತ್ತದೆ ಎಂದು ಜನಸಂಖ್ಯಾಶಾಸ್ತ್ರ ಮತ್ತು ಸಾಂಕ್ರಾಮಿಕ ಅಧ್ಯಯನಗಳು ದಾಖಲಿಸಿವೆ. ಅದರಲ್ಲೂ ಪ್ರಾಚೀನ ಬುಡಕಟ್ಟುಗಳ ವಿಚಾರದಲ್ಲಿ ತಾಯಂದಿರು ಮತ್ತು ಅವರ ಮಕ್ಕಳ ಆರೋಗ್ಯ ಸ್ಥಿತಿ ತೀರಾ ಗಂಭೀರ ಎನ್ನುತ್ತದೆ ಸಂಶೋಧನಾ ವರದಿಗಳು. ಈ ಎಲ್ಲಾ ಆರೋಗ್ಯ ಸಮಸ್ಯೆಗಳನ್ನು ಸರಿಪಡಿಸದೆ ವಿವಾಹದ ವಯಸ್ಸನ್ನು ಏರಿಸುವುದರಲ್ಲಿ ತರ್ಕ ಇದೆ ಎನಿಸುವುದಿಲ್ಲ.

ವಿವಿಧ ಆರೋಗ್ಯ ಸರ್ವೇ ವರದಿಗಳು ಬುಡಕಟ್ಟು ಜನಾಂಗದವರಲ್ಲಿ ಶಿಶುಗಳ ಮರಣವು ಭಾಗಶಃ ಬಡತನ ಮತ್ತು ಭಾಗಶಃ ಕಳಪೆ ಆರೋಗ್ಯ ಸೇವೆಯಿಂದ ಎಂದು ವ್ಯಾಪಕವಾದ ಮಾತಿದೆ. ಭಾರತದ ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ ಸಮೀಕ್ಷೆಗಳು ಮತ್ತು ವಿಶ್ವ ಬ್ಯಾಂಕ್ (2016) ಒಡಿಶಾದಲ್ಲಿ ನಡೆಸಿದ ಅಧ್ಯಯನದ ಡೇಟಾ ವಿಶ್ಲೇಷಣೆಯ ಪ್ರಕಾರ ಒಮ್ಮೆ ಬಡತನದ ಮಟ್ಟವನ್ನು ನಿಯಂತ್ರಿಸಿದರೆ, ಬುಡಕಟ್ಟು ಶಿಶುಗಳ ಮತ್ತು ಮಕ್ಕಳ ಮರಣದರ ದೂರವಾಗುತ್ತದೆ ಎಂದು ತೋರಿಸಿದೆ. ಆದ್ದರಿಂದ, ಭಾರತದಲ್ಲಿನ ಪರಿಶಿಷ್ಟ ಪಂಗಡಗಳ ಶಿಶುಗಳ ಮರಣ ಮತ್ತು ಅದರ ಪರಸ್ಪರ ಸಂಬಂಧಗಳ ಬಗ್ಗೆ ನಮಗೆ ಈಗಾಗಲೇ ತಿಳಿದಿರುವುದನ್ನು ಇದು ಇನ್ನಷ್ಟು ದೃಢಪಡಿಸಿದೆ ಎನ್ನಬಹುದು. ಈ ಮಧ್ಯೆ ಕೆಲವು ಬುಡಕಟ್ಟು ಜನಾಂಗಗಳಲ್ಲಿ ಹೆಣ್ಣು ಭ್ರೂಣಹತ್ಯೆ/ ಶಿಶುಹತ್ಯೆ ನಡೆಯುತ್ತಿರುವುದು ಅಲ್ಲಲ್ಲಿ ವರದಿಯಾಗುತ್ತಿದೆ.

ಶಿಶು ಮರಣ ಪ್ರಮಾಣ ಮತ್ತು ಮಕ್ಕಳ ಮರಣ ಪ್ರಮಾಣಗಳು ಯಾವುದೇ ಸಮುದಾಯದ ಆರೋಗ್ಯ ಮತ್ತು ಪೌಷ್ಟಿಕತೆಯ ಗುಣಮಟ್ಟದ ಸೂಚಕಗಳಾಗಿವೆ. 20ನೇ ಶತಮಾನದ ಅಂತ್ಯದವರೆಗೆ, ದೇಶದ ಬುಡಕಟ್ಟು ಜನಾಂಗದವರ ಫಲವತ್ತತೆ ದರಗಳು ಮತ್ತು ಶಿಶು ಹಾಗೂ ಮಕ್ಕಳ ಮರಣದರ ಬುಡಕಟ್ಟು ಜನಾಂಗದವರಲ್ಲದವರಿಗಿಂತ ಕಡಿಮೆ ಇತ್ತು (ಮಹಾರತ್ನ, 1998). ಆದರೆ ಕಳೆದ 3 ದಶಕದಲ್ಲಿ ಇದು ತಿರುವು ಮುರುವಾಗಿದೆ. ಕಳಪೆ ಆರೋಗ್ಯದಿಂದ ಭಾರತದಲ್ಲಿ ಸುಮಾರು ಐದು ಲಕ್ಷ ಬುಡಕಟ್ಟು ಮಕ್ಕಳು ಐದು ವರ್ಷಕ್ಕಿಂತ ಮೊದಲು ಸಾಯುತ್ತಾರೆ ಎಂದು ಅಂದಾಜು ತೋರಿಸುತ್ತದೆ. ಇತ್ತೀಚಿನ ಸರ್ವೇಗಳು ಭಾರತದ ಮಕ್ಕಳ ಆರೋಗ್ಯ ಸೂಚಕಗಳು ಗಣನೀಯ ಸುಧಾರಣೆಯನ್ನು ತೋರಿಸಿವೆ. ಶಿಶು ಮರಣವು 1,000 ಜೀವಂತ ಜನನಗಳಿಗೆ 58 ರಿಂದ 37ಕ್ಕೆ ಇಳಿದಿದೆ ಮತ್ತು ಐದು ವರ್ಷದೊಳಗಿನ ಮಕ್ಕಳ ಮರಣ ಪ್ರಮಾಣ ಪ್ರತಿ 1,000 ಜನನಗಳಿಗೆ 109 ರಿಂದ 74ಕ್ಕೆ ಇಳಿದಿದೆ. ಆದರೆ ಇದಕ್ಕೆ ತದ್ವಿರುದ್ಧ ಎನ್ನುವಂತೆ ಬುಡಕಟ್ಟು ಮಕ್ಕಳಲ್ಲಿ (ಐದು ವರ್ಷದೊಳಗಿನ) ಮರಣ ದರವು ಹೆಚ್ಚಾಗಿದೆ. ಇಲ್ಲಿ ಪ್ರತಿ 1,000 ಜೀವಂತ ಜನನಗಳಿಗೆ 97 ಸಾವುಗಳು ದಾಖಲಾಗಿವೆ(2015). ಬುಡಕಟ್ಟು ಜನಾಂಗದವರು ದೇಶದ ಒಟ್ಟು ಜನಸಂಖ್ಯೆಯ 8ರಿಂದ 9 ಪ್ರತಿಶತವನ್ನು ಹೊಂದಿದ್ದಾರೆ, ಆದರೆ ಐದು ವರ್ಷದೊಳಗಿನ ಮಕ್ಕಳ ಸಾವುಗಳಲ್ಲಿ ಸುಮಾರು 14 ಪ್ರತಿಶತ ಬುಡಕಟ್ಟು ಮಕ್ಕಳಿದ್ದಾರೆ ಎಂದರೆ ಸಮಸ್ಯೆಯ ಗಂಭೀರತೆಯನ್ನು ನಾವು ಅರ್ಥ ಮಾಡಿಕೊಳ್ಳಬೇಕು. ವರದಿಗಳ ಪ್ರಕಾರ ಬುಡಕಟ್ಟು ಪ್ರದೇಶಗಳಲ್ಲಿ 1-4 ವಯಸ್ಸಿನ 23 ಪ್ರತಿಶತ ಸಾವುಗಳು ವ್ಯಾಪಕವಾಗಿ ಹರಡಿರುವ ಬಡತನ, ಅನಕ್ಷರತೆ, ಸುರಕ್ಷಿತ ಕುಡಿಯುವ ನೀರು ಮತ್ತು ನೈರ್ಮಲ್ಯ ಪರಿಸ್ಥಿತಿಗಳ ಅನುಪಸ್ಥಿತಿ, ಕಳಪೆ ತಾಯಿ ಮತ್ತು ಮಕ್ಕಳ ಆರೋಗ್ಯ ಸೇವೆಗಳು, ಅಪೌಷ್ಟಿಕಾಂಶ ಇತ್ಯಾದಿಗಳಿಂದ ಉಂಟಾಗುತ್ತಿದೆ ಎನ್ನಲಾಗಿದೆ. ಮೊದಲು ಈ ಎಲ್ಲಾ ಸಮಸೆಗಳನ್ನು ನಿವಾರಿಸಬೇಕಾಗಿದೆ.

ವಿಶ್ವಸಂಸ್ಥೆಯ ಸಹಸ್ರಮಾನದ ಅಭಿವೃದ್ಧಿ ಗುರಿಯು 2030ರ ವೇಳೆಗೆ ಶಿಶುಗಳ ಮತ್ತು ಮಕ್ಕಳ ಮರಣದ ಮೂರನೇ ಎರಡರಷ್ಟು ಕಡಿಮೆ ಮಾಡಲು ಬದ್ಧವಾಗಿದೆ. ಬುಡಕಟ್ಟು ವಿಚಾರದಲ್ಲಿ ಮಕ್ಕಳ ಜೀವಗಳನ್ನು ಉಳಿಸಬಹುದಾದ ಅಗತ್ಯ ಆರೋಗ್ಯ ಸೇವೆಗಳು ತುರ್ತಾಗಿ ದೊರೆಯದೆ ಅವುಗಳು ಮನೆಯಲ್ಲಿಯೇ ಕೊನೆಯುಸಿರೆಳೆಯುತ್ತಿವೆ. ಬಹಳ ಆತಂಕದ ವಿಚಾರವೆಂದರೆ ಹೆಚ್ಚಿನ ಬುಡಕಟ್ಟು ಪ್ರಕರಣಗಳಲ್ಲಿ ನವಜಾತ ಶಿಶುಗಳ ಸಾವಿನ ಅರ್ಧದಷ್ಟು ಸಾವುಗಳು ಪೌಷ್ಟಿಕಾಂಶದ ಅಡಿಯಲ್ಲಿ ಸಂಬಂಧಿಸಿವೆ. ಭಾರತದಲ್ಲಿ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಸುಮಾರು ಶೇ. 22ರಷ್ಟು ಬುಡಕಟ್ಟು ಮಕ್ಕಳು ಮಧ್ಯಮ ಅಥವಾ ತೀವ್ರವಾಗಿ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ(2016). ಮೇಲಾಗಿ, ಹಲವಾರು ಅಧ್ಯಯನಗಳು ಅತಿ ಹಿಂದುಳಿದ ಬುಡಕಟ್ಟು ಸಮುದಾಯದ ಸ್ತ್ರೀಯರಲ್ಲಿ ಅಪೌಷ್ಟಿಕಾಂಶದ ಮಟ್ಟವು ಹೆಚ್ಚು ಎಂದು ತೋರಿಸಿದೆ(ಬಿಸಾಯಿ ಮತ್ತು ಮಲ್ಲಿಕ್,2011). ಇದು ಮುಂದೆ ಕಡಿಮೆ ತೂಕ ಮತ್ತು ಕುಂಠಿತ ಬೆಳವಣಿಗೆಯ ಮಕ್ಕಳ ಜನನಕ್ಕೆ ಕಾರಣವಾಗುತ್ತದೆ. ಅಪೌಷ್ಟಿಕಾಂಶ ಸಹ ಗರ್ಭಿಣಿಯರ ಅಕಾಲಿಕ ಮೃತ್ಯುವಿಗೆ ಕಾರಣವಾಗುತ್ತಿದೆ. ಇದರ ಹೊರತಾಗಿ, ಬುಡಕಟ್ಟು ಆಹಾರದ ಮಾದರಿಗಳು ಪ್ರದೇಶದೊಳಗಿನ ಪೌಷ್ಟಿಕಾಂಶದ ವ್ಯತ್ಯಾಸದ ಮೇಲೆ ಪ್ರಭಾವ ಬೀರಬಹುದು. ಆದ್ದರಿಂದ, ಬುಡಕಟ್ಟು ಸಮುದಾಯಗಳಿಗೆ ತಮ್ಮ ಮಕ್ಕಳ ಮತ್ತು ಗರ್ಭಿಣಿಯರ ಪೌಷ್ಟಿಕಾಂಶದ ಸ್ಥಿತಿಯನ್ನು ಸುಧಾರಿಸಲು ಆರೋಗ್ಯ ರಕ್ಷಣೆ ಮಾಹಿತಿ ಮತ್ತು ಅವಕಾಶಗಳು ಮತ್ತು ಸಂಪನ್ಮೂಲಗಳಿಗೆ ಹೆಚ್ಚಿನ ಗಮನದ ತುರ್ತು ಅಗತ್ಯವಿದೆ. ಮದುವೆ ವಯಸ್ಸನ್ನು ಏರಿಸುವಿಕೆಯ ವಿಚಾರ ಸಮಾನ ಲಿಂಗ ಸಂಬಂಧಗಳು, ಮಹಿಳೆಯರ ಸ್ಥಾನಮಾನ ಉದ್ಯೋಗ, ಭಾಗವಹಿಸುವಿಕೆ, ನಿರ್ಧಾರ ತೆಗೆದುಕೊಳ್ಳುವಿಕೆ, ಸಬಲೀಕರಣ, ಚಲನಶೀಲತೆ ಮತ್ತು ಸಾಂಸ್ಕೃತಿಕ ನಿರ್ಬಂಧಗಳು ಇವೆಲ್ಲದರೊಂದಿಗೆ ನೇರವಾದ ಸಹ ಸಂಬಂಧ ಹೊಂದಿವೆ. ಮೊದಲು ಬುಡಕಟ್ಟು ಜನರ ಆರೋಗ್ಯದ ಸ್ಥಿತಿಯನ್ನು ಗಣನೀಯವಾಗಿ ಸುಧಾರಿಸಬೇಕಾಗಿದೆ. ನಂತರ ಮದುವೆ ವಯಸ್ಸಿನ ಏರಿಕೆಯನ್ನು ಪರಾಮರ್ಶಿಸಬಹುದು.

Writer - ಡಾ. ಡಿ.ಸಿ. ನಂಜುಂಡ

contributor

Editor - ಡಾ. ಡಿ.ಸಿ. ನಂಜುಂಡ

contributor

Similar News