ಉತ್ತರ ಪ್ರದೇಶದ ಜಾತಿ ಲೆಕ್ಕಾಚಾರ ಈ ಸಲ ಹೇಗಿದೆ?

Update: 2024-05-25 06:58 GMT

ಸಾಂದರ್ಭಿಕ ಚಿತ್ರ (PTI)

ರಾಷ್ಟ್ರ ರಾಜಕಾರಣದ ಮೇಲೆ ತನ್ನದೇಯಾದ ಪ್ರಭಾವ ಹೊಂದಿರುವ ಉತ್ತರ ಪ್ರದೇಶ ರಾಜಕೀಯವಾಗಿ ಬಹಳ ಕುತೂಹಲ ಮೂಡಿಸುವ ರಾಜ್ಯ. ಅಲ್ಲಿನ ರಾಜಕಾರಣದಲ್ಲಿ ಧರ್ಮ ಮತ್ತು ಜಾತಿಗಳೆರಡು ಮಿಳಿತಗೊಂಡಿವೆ. ಅವು ಯಾವಾಗ, ಯಾವುದು, ಯಾವ ರೀತಿ ಪ್ರಭಾವ ಬೀರುತ್ತದೆ ಎನ್ನುವುದರ ಮೇಲೆ ಫಲಿತಾಂಶಗಳು ನಿರ್ಧಾರವಾಗುತ್ತವೆ.

ಒಂದು ಕಾಲಕ್ಕೆ ಎಲ್ಲಾ ವರ್ಗದ ವಿಶ್ವಾಸವನ್ನೂ ಹೊಂದಿದ್ದ ಕಾಂಗ್ರೆಸ್ ಕ್ರಮೇಣ ಧರ್ಮ ಮತ್ತು ಜಾತಿ ರಾಜಕಾರಣದ ನಡುವೆ ಸಮನ್ವಯ ಸಾಧಿಸಲು ವಿಫಲವಾಯಿತು. ಬಾಬರಿ ಮಸೀದಿ ಪ್ರಕರಣದಿಂದ ಭುಗಿಲೆದ್ದ ಧರ್ಮ ರಾಜಕಾರಣವನ್ನು ಅರಗಿಸಿಕೊಳ್ಳಲು, ಪ್ರತಿಯಾಗಿ ಜಾತಿ ರಾಜಕಾರಣವನ್ನು ಕಟೆದು ನಿಲ್ಲಿಸಲು ಕಾಂಗ್ರೆಸ್ ಪಕ್ಷದಿಂದ ಸಾಧ್ಯವಾಗಲಿಲ್ಲ. ಪರಿಣಾಮವಾಗಿ ಉತ್ತರ ಪ್ರದೇಶ ಮಾತ್ರವಲ್ಲ, ರಾಷ್ಟ್ರ ರಾಜಕಾರಣದಲ್ಲೂ ಅದು ತನ್ನ ಹಿಡಿತವನ್ನು ಕಳೆದುಕೊಂಡಿತು. ಇನ್ನೊಂದೆಡೆ ಬಿಜೆಪಿ ರಾಮಜನ್ಮಭೂಮಿ ವಿಷಯ ಪ್ರಸ್ತಾಪಿಸಿ ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡಿಯೂ ಯಶಸ್ವಿಯಾಯಿತು. ‘ಬ್ರಾಹ್ಮಣ-ಬನಿಯಾ ಪಕ್ಷ’ ಎಂಬ ಪೊರೆ ಕಳಚಿಕೊಂಡು ಜಾತಿ ರಾಜಕಾರಣದ ಪ್ರಯೋಗ ಮಾಡಿಯೂ ಫಲ ಕಂಡಿತು.

ದೇಶದ ರಾಜಕೀಯ ಚಿತ್ರಣವನ್ನೇ ಬದಲಿಸಿದ 2014ರ ಲೋಕಸಭಾ ಚುನಾವಣೆ ಬಳಿಕ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಮತ್ತು ಬಹುಜನ ಸಮಾಜ ಪಕ್ಷಗಳು ಆಟಕ್ಕುಂಟು ಲೆಕ್ಕಕ್ಕಿಲ್ಲದಂತಾಗಿವೆ. 2014 ಮತ್ತು 2019ರ ಲೋಕಸಭಾ ಚುನಾವಣೆ ಹಾಗೂ 2017 ಮತ್ತು 2022ರ ವಿಧಾನಸಭಾ ಚುನಾವಣೆಗಳಲ್ಲಿ ಅಲ್ಲಿನ ಜಾತಿ ಸಮೀಕರಣ ಸಂಪೂರ್ಣ ಬದಲಾಗಿದೆ. 2014ರಲ್ಲಿ 80 ಕ್ಷೇತ್ರಗಳ ಪೈಕಿ 71 ಸ್ಥಾನಗಳನ್ನು ಗೆದ್ದಿದ್ದ ಬಿಜೆಪಿ, 2019ರ ವೇಳೆಗೆ ಮೋದಿ ಅಲೆ, ಯೋಗಿ ಅಲೆ, ಪುಲ್ವಾಮ ದಾಳಿಯ ಬಿಸಿ, ಎಲ್ಲಾ ಇದ್ದೂ ಏದುಸಿರು ಬಿಡುತ್ತಿತ್ತು. ಆಗ ಸಮಾಜವಾದಿ ಪಕ್ಷ, ಬಹುಜನ ಸಮಾಜ ಪಕ್ಷ ಮತ್ತು ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿದ್ದರೆ ಬಿಜೆಪಿಗೆ ಇನ್ನೂ ಕಷ್ಟವಾಗಿರುತ್ತಿತ್ತು. ಎಸ್‌ಪಿಗೆ ಮತ ನೀಡಲು ಒಪ್ಪದ ಬಿಎಸ್‌ಪಿ ಮತದಾರರು ಹಾಗೂ ಬಿಎಸ್‌ಪಿಗೆ ಮತ ಕೊಡಲು ಒಪ್ಪದ ಎಸ್‌ಪಿ ಮತದಾರರಿಬ್ಬರೂ ಬಿಜೆಪಿಯತ್ತ ತಿರುಗಿ ನೋಡಿದರು. ಆದರೂ ಮಿತ್ರಪಕ್ಷಗಳೊಂದಿಗೆ ಸೇರಿ 65 ಸೀಟು ಗೆಲ್ಲಲು ಬಿಜೆಪಿಯು ಯಾದವ್ v/s ನಾನ್ ಯಾದವ್ (ಸಮಾಜವಾದಿ ಪಕ್ಷದ ವಿರುದ್ಧ) ಮತ್ತು ಜಾಟವ್ v/s ನಾನ್ ಜಾಟವ್ (ಬಹುಜನ ಸಮಾಜ ಪಕ್ಷದ ವಿರುದ್ಧ) ಎಂಬ ಜಾತಿ ಸಮೀಕರಣ ರೂಪಿಸಬೇಕಾಯಿತು.

ಉತ್ತರ ಪ್ರದೇಶದಲ್ಲಿ 2011ರ ಜನಗಣತಿ ಪ್ರಕಾರ ಶೇ. 9ರಿಂದ 10ರಷ್ಟು ಯಾದವ (ವೈ) ಮತ್ತು ಶೇ. 19.26 ಮುಸ್ಲಿಮ(ಎಂ)ರಿದ್ದಾರೆ. ಅವರ ಬೆಂಬಲ ಸಮಾಜವಾದಿ ಪಕ್ಷಕ್ಕಿದೆ. ‘ಸಿ ವೋಟರ್ಸ್’ ಏಜೆನ್ಸಿ ಪ್ರಕಾರ ಇಲ್ಲಿನ ಪ್ರತೀ ಲೋಕಸಭಾ ಕ್ಷೇತ್ರವೂ ಶೇ. 40ರಷ್ಟು ವೈ ಅಂಡ್ ಎಂ ಕಾಂಬಿನೇಷನ್ ಮತದಾರರನ್ನು ಹೊಂದಿದೆ. ಇದೇ ಕಾಂಬಿನೇಷನ್ ರಾಜಕಾರಣ ಮಾಡಿಕೊಂಡು ಬಂದಿರುವ ಸಮಾಜವಾದಿ ಪಕ್ಷ 2014ರಲ್ಲಿ (ಆಗ ರಾಜ್ಯದಲ್ಲಿ ಅಧಿಕಾರದಲ್ಲಿತ್ತು) 12 ಕಡೆ ಯಾದವರಿಗೆ ಟಿಕೆಟ್ ಕೊಟ್ಟಿತ್ತು. 2019ರಲ್ಲಿ ತನ್ನ ಪಾಲಿನ 37 ಸೀಟುಗಳ ಪೈಕಿ 9 ಕಡೆ ಯಾದವರನ್ನು ಅಖಾಡಕ್ಕಿಳಿಸಿತ್ತು. ಎರಡೂ ಸಲವೂ ಬಿಜೆಪಿಯು ಯಾದವ್ v/s ಯಾದವೇತರ ಹಿಂದುಳಿದವರು ಎಂಬ ಚರ್ಚೆಯನ್ನು ಹುಟ್ಟುಹಾಕಿತು. 79 ಇತರ ಹಿಂದುಳಿದ ಜಾತಿಗಳಿರುವ ಉತ್ತರ ಪ್ರದೇಶದಲ್ಲಿ ಯಾದವರನ್ನು ಹೊರತುಪಡಿಸಿ ಕುರ್ಮಿ, ಮೌರ್ಯ, ಜಾಟ್, ಗುರ್ಜರ್ ಮತ್ತಿತರ ಜಾತಿಗಳನ್ನು ಯಾದವರ ವಿರುದ್ಧ ಎತ್ತಿಕಟ್ಟಿತು. ರಾಜ್ಯದ ಒಟ್ಟೂ ಜನಸಂಖ್ಯೆಯ ಅರ್ಧಕ್ಕೂ ಹೆಚ್ಚು ಜನ ಹಿಂದುಳಿದ ಜಾತಿಗೆ ಸೇರಿದವರಾಗಿರುವುದರಿಂದ ‘ಸೌ ಮೇ ಸಾತ್(60) ಹಮಾರಾ, 40 ಮೇ ಬಟ್ವಾರಾ ಹೈ, ಔರ್ ಬಟ್ವಾರೆ ಮೇ ಭಿ ಹಮಾರಾ ಹೈ

(100ರಲ್ಲಿ 60ರಷ್ಟು ನಮ್ಮದು. ಉಳಿದ 40ರಷ್ಟನ್ನು ಹಂಚಲಾಗಿದೆ. ಆ 40ರಲ್ಲಿಯೂ ನಮಗೆ ಪಾಲು ಇದೆ)’ ಎನ್ನುವ ಕೂಗೆಬ್ಬಿಸಿತು. ಹಿಂದೂಗಳಾದ ಯಾದವರು ಮುಸ್ಲಿಮರ ಜೊತೆ ಸೇರಿದ್ದಾರೆ ಎಂದು ಧರ್ಮದ ಅಂಶವನ್ನೂ ಸೇರಿಸಿ ಉಳಿದ ಜಾತಿಗಳನ್ನು ತನ್ನತ್ತ ಸೆಳೆಯಿತು.

ಬಿಎಸ್‌ಪಿಯ ಮತಬ್ಯಾಂಕ್ ಛಿದ್ರ ಮಾಡಲು ಜಾಟವ್ v/s ಜಾಟವೇತರ ಎಂಬ ಸಮೀಕರಣ ರೂಪಿಸಲಾಯಿತು. 2011ರ ಜನಗಣತಿ ಪ್ರಕಾರ ಉತ್ತರ ಪ್ರದೇಶದಲ್ಲಿ ದಲಿತರು ಶೇ. 20.5ರಷ್ಟು. ದಲಿತರ ಪೈಕಿ ಜಾಟವ್ ಸಮುದಾಯ ಶೇ. 54ರಷ್ಟಿದೆ. ನಂತರ ಪಾಸಿಸ್ ಶೇ. 16, ಚಮ್ಮಾರ್ ಶೇ. 14, ಉಳಿದಂತೆ ಧೋಬಿಸ್, ಕೋರಿಸ್, ಖತಿಕಸ್, ಧನುಕಸ್ ಮತ್ತಿತರ ಸಣ್ಣಪುಟ್ಟ ಸಮುದಾಯಗಳಿವೆ. ಜಾಟವ್ ಜಾತಿ ಮಾಯಾವತಿ ಅವರನ್ನು ಪೂರ್ಣ ಪ್ರಮಾಣದಲ್ಲಿ ಬೆಂಬಲಿಸುತ್ತಿದ್ದುದರಿಂದ ಬಿಜೆಪಿಯು ‘ಜಾಟವೇತರ’ ಎಂಬ ವರ್ಗ ಸೃಷ್ಟಿಸಿ ಪಾಸಿಸ್, ಚಮ್ಮಾರ್, ಧೋಬಿಸ್, ಕೋರಿಸ್ ಮತ್ತಿತರ ಜಾತಿಗಳನ್ನು ತನ್ನತ್ತ ಸೆಳೆಯಿತು. ಹೀಗೆ ಎರಡು ದೊಡ್ಡ ಮತವರ್ಗಗಳನ್ನು ಒಡೆದು ಯಶಸ್ವಿಯಾಯಿತು.

2024ರಲ್ಲಿ ಉತ್ತರ ಪ್ರದೇಶದ ರಾಜಕಾರಣ ಮತ್ತೊಂದು ರೀತಿಯಲ್ಲಿ ಮಗ್ಗಲು ಬದಲಿಸಿದೆ. ಯಾದವ v/s ಯಾದವೇತರ ಸಮೀಕರಣ ರೂಪಿಸಿ ಗೆದ್ದಿದ್ದ ಬಿಜೆಪಿಗೆ ಅದೇ ದಾಟಿಯಲ್ಲಿ ತಿರುಗೇಟು ಕೊಡಲು ಸಮಾಜವಾದಿ ಪಕ್ಷ ಸಜ್ಜಾಗಿದೆ. ಈ ಸಲ ಬಿಜೆಪಿಯನ್ನು ‘ಯಾದವರ ವಿರೋಧಿ-ಜೊತೆಗೆ ಅದು ಹಿಂದುಳಿದವರ ವಿರೋಧಿ’ ಎಂದು ಬಿಂಬಿಸುತ್ತಿದೆ.

80 ಕ್ಷೇತ್ರಗಳ ಪೈಕಿ ಬಿಜೆಪಿ ಯಾದವರಿಗೆ ಟಿಕೆಟ್ ಕೊಟ್ಟಿರುವುದು ಒಂದು ಕಡೆ ಮಾತ್ರ- ಅಜಂಗಢದಲ್ಲಿ. ಉತ್ತರ ಪ್ರದೇಶ ಸರಕಾರದಲ್ಲಿ ಯಾದವ್ ಸಮುದಾಯಕ್ಕೆ ಸೇರಿದ ಮಂತ್ರಿ ಇರುವುದು ಒಬ್ಬರು ಮಾತ್ರ. ಯೋಗಿ ಆದಿತ್ಯನಾಥ್ ಸರಕಾರ 2018ರಲ್ಲಿ ಹಿಂದುಳಿದ ಜಾತಿಗಳ ಮೀಸಲಾತಿ ಮರು ವರ್ಗೀಕರಣ ಮಾಡಲು ಆಯೋಗ ರಚಿಸಿದೆ. ಆಯೋಗವೂ ಪಿಚಡೆ (ಹಿಂದುಳಿದವರು), ಅತಿ ಪಿಚಡೆ (ಹೆಚ್ಚು ಹಿಂದುಳಿದವರು), ಅತ್ಯಂತ್ ಪಿಚಡೆ (ಅತ್ಯಂತ ಹೆಚ್ಚು ಹಿಂದುಳಿದವರು) ಎಂದು ವರ್ಗೀಕರಿಸಿ ಶಿಫಾರಸು ಮಾಡಿದೆ. ಹಿಂದುಳಿದ ಜಾತಿಗಳ ಪೈಕಿ ಯಾದವ್ ಸಮುದಾಯದ ಪ್ರಭಾವವನ್ನು ಕುಗ್ಗಿಸಬೇಕು ಎನ್ನುವ ಕಾರಣಕ್ಕಾಗಿಯೇ ಈ ಆಯೋಗವನ್ನು ರಚಿಸಲಾಗಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಈ ಎಲ್ಲಾ ಸಂಗತಿಗಳನ್ನು ಇಟ್ಟುಕೊಂಡು ಬಿಜೆಪಿಗೆ ‘ಯಾದವರ ವಿರೋಧಿ’ ಪಟ್ಟ ಕಟ್ಟಲಾಗುತ್ತಿದೆ.

ಇನ್ನೊಂದೆಡೆ ಬಿಜೆಪಿ ‘ಚಾರ್ ಸೌ ಕಿ ಪಾರ್’ ಘೋಷ ವಾಕ್ಯದ ಮೂಲಕ 2/3ರಷ್ಟು ಬಹುಮತ ಕೇಳುತ್ತಿರುವುದೇ ಸಂವಿಧಾನ ರದ್ದು ಮಾಡಲು, ಮೀಸಲಾತಿ ರದ್ದು ಮಾಡಲು, ಅದರಲ್ಲೂ ದಲಿತರು ಮತ್ತು ಹಿಂದುಳಿದವರೇ ಬಿಜೆಪಿಯ ಪ್ರಮುಖ ಗುರಿ. ಬಿಜೆಪಿ ಯಾದವ್ ಮಾತ್ರವಲ್ಲ, ಎಲ್ಲಾ ಹಿಂದುಳಿದ ಜಾತಿಗಳ ವಿರೋಧಿ ಎಂದು ಮನವರಿಕೆ ಮಾಡಿಕೊಡಲು ಯತ್ನಿಸುತ್ತಿದೆ.

ಮತ್ತೊಂದು ಮಹತ್ತರ ಬೆಳವಣಿಗೆಯಲ್ಲಿ ಸಮಾಜವಾದಿ ಪಕ್ಷ ಯಾದವರು ಮತ್ತು ಮುಸ್ಲಿಮರಿಗೆ ಮಾತ್ರ ಮಣೆ ಹಾಕುತ್ತದೆ ಎಂಬ ಅಪವಾದದಿಂದ ಪಾರಾಗುವುದಕ್ಕೂ ಪ್ರಯತ್ನಿಸಿದೆ. ತನ್ನ ಪಾಲಿನ 62 ಸೀಟುಗಳ ಪೈಕಿ 5ರಲ್ಲಿ ಮಾತ್ರ ಯಾದವರನ್ನು ಕಣಕ್ಕಿಳಿಸಿದೆ. ಮುಸ್ಲಿಮರಿಗೆ 3 ಕಡೆ, ಅದರಲ್ಲೂ ಶೇ. 50ಕ್ಕಿಂತ ಹೆಚ್ಚು ಮುಸ್ಲಿಮ್ ಮತದಾರರಿರುವ ಕಡೆ ನೀಡಲಾಗಿದೆ. 2014 ಮತ್ತು 2019ರ ಲೋಕಸಭಾ ಚುನಾವಣೆಯ ಮತದಾನದ ವಿಧಾನ ಮತ್ತು ಸೋಷಿಯಲ್ ಇಂಜಿನಿಯರಿಂಗ್ ಕುರಿತು ಸಮೀಕ್ಷೆ ನಡೆಸಿ ಯಾದವ್ ಮತ್ತು ಮುಸ್ಲಿಮ್ ಸಮುದಾಯಗಳಿಗೆ ಕಡಿಮೆ ಸೀಟು ಕೊಟ್ಟು ಒಟ್ಟಾರೆ ಹೆಚ್ಚು ಸೀಟು ಗೆಲ್ಲುವ ತಂತ್ರ ಹೂಡಿದೆ.

ಕಾಂಗ್ರೆಸ್ ಇನ್ನೊಂದು ಬದಿಯಲ್ಲಿ ಜಾತಿಗಣತಿ ಬಗ್ಗೆ ಜೋರು ದನಿಯಲ್ಲಿ ಮಾತನಾಡುತ್ತಿದೆ. ಜಾತಿಗಣತಿ ಆಧರಿಸಿ ಹಿಂದುಳಿದವರ ಮೀಸಲಾತಿ ಪ್ರಮಾಣ ಹೆಚ್ಚಿಸುವುದಾಗಿ ಹೇಳುತ್ತಿದೆ. ರಾಹುಲ್ ಗಾಂಧಿ ಅವರು ದಲಿತರು, ಹಿಂದುಳಿದ ಜಾತಿಯವರು, ಬುಡಕಟ್ಟು ಸಮುದಾಯಗಳು ಮತ್ತು ಅಲ್ಪಸಂಖ್ಯಾತರು ಸೇರಿದಂತೆ ದೇಶದ ಶೇಕಡಾ 90ರಷ್ಟು ಜನಸಂಖ್ಯೆಯು ದೇಶದ ನೀತಿ-ನಿರೂಪಣೆ ಮತ್ತು ಅಧಿಕಾರ ರಚನೆಯಲ್ಲಿ ಪ್ರಾತಿನಿಧ್ಯ ಹೊಂದಿಲ್ಲ. ಈ ವ್ಯವಸ್ಥೆಯು ಕೆಳಜಾತಿಗಳ ವಿರುದ್ಧ ಸಂಘಟಿತವಾಗಿದೆ. ಎಲ್ಲರಿಗೂ ಅರ್ಹ ಪಾಲು ಸಿಗುವಂತಾಗಬೇಕು ಎಂಬ ಮಾತುಗಳನ್ನು ಆಡುತ್ತಿದ್ದಾರೆ. ಬಿಎಸ್‌ಪಿಯಲ್ಲಿ ನಿರ್ವಾತ ಸೃಷ್ಟಿಯಾಗಿದೆ. ಬಿಎಸ್‌ಪಿ ಮತದಾರರು ‘ಬಿಜೆಪಿ ಗೆದ್ದರೆ ಸಂವಿಧಾನ ರದ್ದಾಗುತ್ತದೆ, ಮೀಸಲಾತಿ ಕೊನೆಯಾಗುತ್ತದೆ’ ಎಂದು ವಿಚಲಿತರಾಗಿದ್ದು ಅವರೇನಾದರೂ ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ಕಡೆ ವಾಲಿದರೆ ಬಿಜೆಪಿಗೆ ಹೆಚ್ಚು ಕಷ್ಟವಾಗಬಹುದು.

Tags:    

Writer - ವಾರ್ತಾಭಾರತಿ

contributor

Editor - Naufal

contributor

Contributor - ಧರಣೀಶ್ ಬೂಕನಕೆರೆ

contributor

Similar News