ಅಡ್ಡಾದಿಡ್ಡಿಯಾಗಿ ಚಲಿಸಿದ ಎಲೆಕ್ಟ್ರಿಕ್ ಬಸ್: 6 ಮಂದಿ ಮೃತ್ಯು

Update: 2022-01-31 01:59 GMT
Photo: twitter.com/RaviPal01

ಕಾನ್ಪುರ: ಎಲೆಕ್ಟ್ರಿಕ್ ಬಸ್ಸೊಂದು ಚಾಲಕನ ನಿಯಂತ್ರಣ ಕಳೆದುಕೊಂಡು ಅಡ್ಡಾದಿಡ್ಡಿಯಾಗಿ ಚಲಿಸಿ, ಅಕ್ಕಪಕ್ಕದಲ್ಲಿ ನೋಡುತ್ತಾ ನಿಂತಿದ್ದವರಿಗೆ ಡಿಕ್ಕಿ ಹೊಡೆದು ಸಂಭವಿಸಿದ ದುರಂತದಲ್ಲಿ ಕನಿಷ್ಠ ಆರು ಮಂದಿ ಮೃತಪಟ್ಟು ಹಲವು ಮಂದಿ ಗಾಯಗೊಂಡಿದ್ದಾರೆ. ಕಾನ್ಪುರದ ತಾತ್ ಮಿಲ್ ಅಡ್ಡರಸ್ತೆ ಬಳಿ ಈ ದುರಂತ ಸಂಭವಿಸಿದೆ. ಈ ಅಪಘಾತ ನಡೆದ ಸಂದರ್ಭದಲ್ಲಿ 15 ಮಂದಿಯ ಗುಂಪು ಇತ್ತು ಎಂದು ಪೊಲೀಸರು ಹೇಳಿದ್ದಾರೆ.

ಮೂವರು ಸಂತ್ರಸ್ತರನ್ನು ಗುರುತಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಇತರರ ಪತ್ತೆಯನ್ನು ಗುರುತು ಹಚ್ಚಲು ಪ್ರಯತ್ನ ನಡೆದಿದೆ ಎಂದು ಕಾನ್ಪುರ ಪೂರ್ವ ಡಿಸಿಪಿ ಪ್ರಮೋದ್ ಕುಮಾರ್ ಹೇಳಿದ್ದಾರೆ. ತಾತ್ ಮಿಲ್ ಕ್ರಾಸ್ ಬಳಿ ಬಸ್ಸಿನ ಬ್ರೇಕ್ ಕಾರ್ಯನಿರ್ವಹಣೆ ಸ್ಥಗಿತಗೊಂಡಿದ್ದರಿಂದ ಈ ದುರಂತ ಸಂಭವಿಸಿದೆ. ಪರಿಣಾಮವಾಗಿ ಕಾರು, ಮೋಟರ್‍ಸೈಕಲ್‍ಗಳು ಮತ್ತು ಪಾದಚಾರಿಗಳಿಗೆ ಬಸ್ ಡಿಕ್ಕಿ ಹೊಡೆಯಿತು ಎಂದು ವಿವರಿಸಿದ್ದಾರೆ.

ಘಟನೆಯಲ್ಲಿ ಗಾಯಗೊಂಡ ಒಂಬತ್ತು ಮಂದಿಯ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿದೆ. ಘಟನೆ ಬಗ್ಗೆ ತನಿಖೆ ಆರಂಭಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಏತನ್ಮಧ್ಯೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಟ್ವಿಟ್ಟರ್ ನಲ್ಲಿ, ಅಪಘಾತದಲ್ಲಿ ಮೃತಪಟ್ಟ ಕುಟುಂಬದವರಿಗೆ ಸಾಂತ್ವನ ಹೇಳಿದ್ದಾರೆ. ಕಾನ್ಪುರದಲ್ಲಿ ದುರದೃಷ್ಟಕರ ರಸ್ತೆ ಅಪಘಾತದ ಬಗ್ಗೆ ಮಾಹಿತಿ ಸಿಕ್ಕಿದೆ. ಮೃತರ ಕುಟುಂಬಗಳಿಗೆ ಸಾಂತ್ವನ ಹೇಳುತ್ತಿದ್ದೇನೆ. ಗಾಯಾಳುಗಳು ತ್ವರಿತವಾಗಿ ಚೇತರಿಸಿಕೊಳ್ಳಲಿ ಎಂದು ಅವರು ಹಿಂದಿಯಲ್ಲಿ ಪೋಸ್ಟ್ ಮಾಡಿದ ಟ್ವೀಟ್‍ನಲ್ಲಿ ಆಶಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News