ರೈತರಿಗೆ ನೆರವು, ಮೇಕ್-ಇನ್-ಇಂಡಿಯಾ ರಕ್ಷಣಾ ಯೋಜನೆಗಳಿಗೆ ಸರಕಾರವು ಹೆಚ್ಚಿನ ಗಮನ ನೀಡಿದೆ

Update: 2022-01-31 18:19 GMT
Photo:twitter

ಹೊಸದಿಲ್ಲಿ,ಜ.31: ಸೋಮವಾರ ಆರಂಭಗೊಂಡ ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ರೈತರ ಸಮಸ್ಯೆಗಳ ಕುರಿತು ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಪ್ರತಿಪಕ್ಷಗಳ ಯೋಜನೆಗಳ ನಡುವೆಯೇ ಉಭಯ ಸದನಗಳ ಜಂಟಿ ಬೈಠಕ್ ಅನ್ನು ಉದ್ದೇಶಿಸಿ ಮಾತನಾಡಿದ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ರೈತರಿಗೆ ನೆರವಾಗಲು ಕೇಂದ್ರದ ಪ್ರಯತ್ನಗಳನ್ನು ಪ್ರಮುಖವಾಗಿ ಬಿಂಬಿಸಿದರು.

ತನ್ನ ಸ್ವಾತಂತ್ರದ 75 ವರ್ಷಗಳಲ್ಲಿ ಭಾರತದ ಅಭಿವೃದ್ಧಿ ಪಯಣ,ರೈತರ ಸಮಸ್ಯೆಗಳು,ಕೋವಿಡ್ ಲಸಿಕೆ ಅಭಿಯಾನ,ಬಡವರಿಗೆ ಉಚಿತ ಪಡಿತರ ಮತ್ತು ವಸತಿ,ಮಹಿಳಾ ಕೇಂದ್ರಿತ ಯೋಜನೆಗಳು,ರಕ್ಷಣಾ ರಫ್ತುಗಳು,ಉತ್ಪಾದನೆ ಆಧಾರಿತ ಪ್ರೋತ್ಸಾಹಕ (ಪಿಎಲ್ಐ) ಯೋಜನೆಗಳು,ಅಫ್ಘಾನಿಸ್ಥಾನ ಬಿಕ್ಕಟ್ಟು ಸೇರಿದಂತೆ ಹಲವಾರು ವಿಷಯಗಳನ್ನು ರಾಷ್ಟ್ರಪತಿಗಳು ತನ್ನ ಭಾಷಣದಲ್ಲಿ ಪ್ರಸ್ತಾವಿಸಿದರು.

ದೇಶದ ರೈತರ ಸಬಲೀಕರಣದ ಸರಕಾರದ ಪ್ರಯತ್ನಗಳನ್ನು ಶ್ಲಾಘಿಸಿದ ಕೋವಿಂದ್,ಸರಕಾರವು ರೈತರ ಪರವಾಗಿದೆ ಮತ್ತು ಸಣ್ಣ ರೈತರು ನೀತಿಗಳಲ್ಲಿ ಪ್ರಧಾನರಾಗಿದ್ದಾರೆ. ಅವರ ಆದಾಯವನ್ನು ಹೆಚ್ಚಿಸಲು ಸರಕಾರವು ಹಲವಾರು ಕ್ರಮಗಳನ್ನು ಕೈಗೊಂಡಿದೆ ಎಂದು ಹೇಳಿದರು.

ನಮ್ಮ ಸಣ್ಣ ಪ್ರಮಾಣದ ರೈತರು ದೇಶದ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರವನ್ನು ಹೊಂದಿದ್ದಾರೆ. ಶೇ.80ರಷ್ಟಿರುವ ಸಣ್ಣ ರೈತರಿಗೆ ಸರಕಾರವು ಯಾವಾಗಲೂ ಆದ್ಯತೆಯನ್ನು ನೀಡಿದೆ. ಪಿಎಂ ಕಿಸಾನ್ ಸಮ್ಮಾನ ನಿಧಿ ಯೋಜನೆಯಡಿ 11 ಕೋಟಿಗೂ ಅಧಿಕ ರೈತ ಕುಟುಂಬಗಳು ಲಾಭವನ್ನು ಪಡೆದುಕೊಂಡಿವೆ. ಸರಕಾರವು 433 ಲಕ್ಷ ಮೆ.ಟನ್‌ಗೂ ಅಧಿಕ ಗೋದಿಯನ್ನು ಖರೀದಿಸಿದ್ದು,ಇದರಿಂದ 50 ಲಕ್ಷಕ್ಕೂ ಅಧಿಕ ರೈತರಿಗೆ ಲಾಭವಾಗಿದೆ ಎಂದರು.

ರಾಷ್ಟ್ರಪತಿಗಳ ಭಾಷಣದ ಮುಖ್ಯಾಂಶಗಳು:

► ಕೋವಿಡ್ ಸಾಂಕ್ರಾಮಿಕವನ್ನು ಸರಕಾರವು ನಿರ್ವಹಿಸಿರುವ ರೀತಿಯು ಶ್ಲಾಘನೀಯವಾಗಿದೆ. ಒಂದು ವರ್ಷಕ್ಕೂ ಕಡಿಮೆ ಅವಧಿಯಲ್ಲಿ 150 ಕೋ.ಡೋಸ್ ಗೂ ಅಧಿಕ ಲಸಿಕೆಯನ್ನು ನೀಡಿರುವುದು ದಾಖಲೆಯಾಗಿದೆ. ಇಂದು ಗರಿಷ್ಠ ಸಂಖ್ಯೆಯಲ್ಲಿ ಡೋಸ್ ಗಳನ್ನು ನೀಡುವ ವಿಷಯದಲ್ಲಿ ನಾವು ವಿಶ್ವದ ಅಗ್ರಮಾನ್ಯ ರಾಷ್ಟ್ರಗಳಲ್ಲಿ ಒಂದಾಗಿದ್ದೇವೆ.

► ಕೋವಿಡ್ ಗೆ ಹಲವಾರು ಜೀವಗಳು ಬಲಿಯಾಗಿವೆ. ಇಂತಹ ಸ್ಥಿತಿಗಳಲ್ಲಿಯೂ ಕೇಂದ್ರ, ರಾಜ್ಯಗಳು, ವೈದ್ಯರು, ನರ್ಸ್‌ಗಳು, ವಿಜ್ಞಾನಿಗಳು, ನಮ್ಮ ಆರೋಗ್ಯ ಕಾರ್ಯಕರ್ತರು ಒಂದು ತಂಡವಾಗಿ ಕೆಲಸ ಮಾಡಿದ್ದಾರೆ. ನಮ್ಮ ಆರೋಗ್ಯ ರಕ್ಷಣೆ ಮತ್ತು ಮುಂಚೂಣಿ ಕಾರ್ಯಕರ್ತರಿಗೆ ನಾನು ಋಣಿಯಾಗಿದ್ದೇನೆ.

► ಆಯುಷ್ಮಾನ್ ಭಾರತ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯು ಬಡವರು ತ್ವರಿತವಾಗಿ ಆರೋಗ್ಯ ಸೇವೆಗಳನ್ನು ಪಡೆದುಕೊಳ್ಳಲು ನೆರವಾಗಿದೆ. 64,000 ಕೋ.ರೂ.ಗಳ ಪಿಎಂ ಆಯುಷ್ಮಾನ್ ಭಾರತ ಆರೋಗ್ಯ ಮೂಲಸೌಕರ್ಯ ಅಭಿಯಾನವು ಭವಿಷ್ಯದಲ್ಲಿ ಆರೋಗ್ಯ ಬಿಕ್ಕಟ್ಟನ್ನು ಎದುರಿಸಲು ದೇಶವನ್ನು ಸಜ್ಜುಗೊಳಿಸಲಿದೆ. ಜನ ಔಷಧಿ ಕೇಂದ್ರಗಳಲ್ಲಿ ಅಗ್ಗದ ದರಗಳಲ್ಲಿ ಔಷಧಿಗಳ ಲಭ್ಯತೆಯು ಅತ್ಯುತ್ತಮ ಕ್ರಮವಾಗಿದೆ.

►ಸರಕಾರವು ಔಷಧಿ ತಯಾರಿಕೆ ಕ್ಷೇತ್ರವನ್ನು ಸಂಪೂರ್ಣವಾಗಿ ಬೆಂಬಲಿಸುತ್ತಿದೆ ಮತ್ತು ಈ ಕ್ಷೇತ್ರಕ್ಕಾಗಿ ಪಿಎಲ್ಐ ಯೋಜನೆಯನ್ನು ಜಾರಿಗೊಳಿಸಿದೆ. ಆಯುರ್ವೇದ ಮತ್ತು ಸ್ವದೇಶಿ ಚಿಕಿತ್ಸಾ ಕ್ರಮಗಳು ಸರಕಾರದ ಯೋಜನೆಗಳ ಲಾಭ ಪಡೆಯುತ್ತಿವೆ.

►ವಿಶ್ವ ಆರೋಗ್ಯ ಸಂಸ್ಥೆಯು ತನ್ನ ಮೊದಲ ಸಾಂಪ್ರದಾಯಿಕ ಔಷಧಿ ಕೇಂದ್ರವನ್ನು ಭಾರತದಲ್ಲಿ ಸ್ಥಾಪಿಸಲಿದೆ.

►ಸರಕಾರವು ಪಿಎಂ ಗರೀಬ್ ಕಲ್ಯಾಣ ಯೋಜನೆಯಡಿ ಪ್ರತಿ ತಿಂಗಳೂ ಉಚಿತ ಪಡಿತರಗಳನ್ನು ವಿತರಿಸುತ್ತಿದೆ. ಇಂದು ಭಾರತವು ವಿಶ್ವದಲ್ಲಿಯೇ ಅತ್ಯಂತ ದೊಡ್ಡದಾದ ಆಹಾರ ವಿತರಣೆ ಕಾರ್ಯಕ್ರಮವನ್ನು ಹೊಂದಿದೆ,ಅದನ್ನು 2022 ಮಾರ್ಚ್ ವರೆಗೆ ವಿಸ್ತರಿಸಲಾಗುವುದು.

►ಪಿಎಂ ಸ್ವನಿಧಿ ಯೋಜನೆಯಡಿ ಈವರೆಗೆ 28 ಲಕ್ಷ ಬೀದಿ ಮಾರಾಟಗಾರರಿಗೆ 2,900 ಕೋ.ರೂ.ಗೂ ಹೆಚ್ಚಿನ ಹಣಕಾಸು ಬೆಂಬಲವನ್ನು ಒದಗಿಸಲಾಗಿದೆ. ಸರಕಾರವು ಈ ಮಾರಾಟಗಾರರನ್ನು ಈಗ ಆನ್‌ಲೈನ್ ಕಂಪನಿಗಳೊಂದಿಗೆ ಸಂಪರ್ಕಿಸುತ್ತಿದೆ.

►ಮಹಿಳಾ ಸಬಲೀಕರಣವು ಸರಕಾರದ ಪ್ರಮುಖ ಆದ್ಯತೆಗಳಲ್ಲೊಂದಾಗಿದೆ. ಉಜ್ವಲ ಯೋಜನೆಯ ಯಶಸ್ಸನ್ನು ನಾವು ಕಂಡಿದ್ದೇವೆ. ಮುದ್ರಾ ಯೋಜನೆಯ ಮೂಲಕ ಮಹಿಳಾ ಉದ್ಯಮಿಗಳನ್ನು ಉತ್ತೇಜಿಸಲಾಗುತ್ತಿದೆ. ‘ಬೇಟಿ ಬಚಾವೊ,ಬೇಟಿ ಪಢಾವೊ’ದೊಂದಿಗೆ ಹಲವಾರು ಧನಾತ್ಮಕ ಫಲಿತಾಂಶಗಳು ದೊರಕಿವೆ.

►ಮಹಿಳೆಯರ ವಿವಾಹ ವಯಸ್ಸನ್ನು 21ಕ್ಕೆ ಹೆಚ್ಚಿಸಿರುವುದು ಮತ್ತು ತ್ರಿವಳಿ ತಲಾಖ್ ಪದ್ಧತಿಯನ್ನು ನಿರ್ಮೂಲಿಸಿರುವುದು ಸ್ತುತ್ಯ ಕ್ರಮಗಳಾಗಿವೆ.

►33 ಸೈನಿಕ ಶಾಲೆಗಳಲ್ಲಿ ಈಗ ಬಾಲಕಿಯರಿಗೂ ಪ್ರವೇಶ ನೀಡಲಾಗುತ್ತಿದೆ. ರಾಷ್ಟ್ರೀಯ ರಕ್ಷಣಾ ಅಕಾಡೆಮಿಯಲ್ಲಿ ಮಹಿಳೆಯರ ಪ್ರವೇಶಕ್ಕೂ ಸರಕಾರವು ಅನುಮತಿ ನೀಡಿದೆ.

►ಟೋಕಿಯೊ ಒಲಿಂಪಿಕ್ಸ್ ಮತ್ತು ಪ್ಯಾರಾಲಿಂಪಿಕ್‌ಗಳಲ್ಲಿ ಭಾರತದ ಕ್ರೀಡಾಪಟುಗಳು ಉತ್ತಮ ಸಾಧನೆಯನ್ನು ಪ್ರದರ್ಶಿಸಿದ್ದಾರೆ.

►ರಾಷ್ಟ್ರೀಯ ಶಿಕ್ಷಣ ನೀತಿಯಡಿ ಸ್ಥಳೀಯ ಭಾಷೆಗಳಿಗೆ ಉತ್ತೇಜನ ನೀಡಲಾಗಿದೆ.

►ರಕ್ಷಣಾ ಖರೀದಿಗಳಲ್ಲಿ ಮೇಕ್ ಇನ್ ಇಂಡಿಯಾಕ್ಕೆ ಆದ್ಯತೆಯನ್ನು ನೀಡಲಾಗಿದೆ. ಶಸ್ತ್ರಾಸ್ತ್ರ ತಯಾರಿಕೆ ಕಾರ್ಖಾನೆಗಳನ್ನು ಏಳು ರಕ್ಷಣಾ ಪಿಎಸ್ಯುಗಳನ್ನಾಗಿ ಪರಿವರ್ತಿಸಲು ಸರಕಾರವು ಮಹತ್ವದ ಹೆಜ್ಜೆಗಳನ್ನಿರಿಸಿದೆ.

►ಭಾರತವು ವಿಶ್ವದಲ್ಲಿಯೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲೊಂದಾಗಿದೆ. ನನ್ನ ಸರಕಾರದ ನೀತಿಗಳಿಂದಾಗಿ ಅಗ್ಗದ ದರಗಳಲ್ಲಿ ಇಂಟರ್ನೆಟ್ ಸೌಲಭ್ಯ ಲಭ್ಯವಾಗುತ್ತಿದೆ. ಸ್ಮಾರ್ಟ್ ಫೋನ್‌ಗಳ ಬೆಲೆಯೂ ಕಡಿಮೆಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News