ಬಿಜೆಪಿ-ಆರೆಸ್ಸೆಸ್ ಕಚೇರಿಗಳಲ್ಲಿ ಬಿಬಿಎಂಪಿ ವಾರ್ಡುಗಳ ವಿಂಗಡನೆ: ರಾಮಲಿಂಗಾರೆಡ್ಡಿ ಆರೋಪ

Update: 2022-02-02 14:43 GMT

ಬೆಂಗಳೂರು, ಫೆ.2: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(BBMP)ಯ ವಾರ್ಡುಗಳ ಪುನರ್ ವಿಂಗಡನೆ ಪ್ರಕ್ರಿಯೆ ಕ್ರಮಬದ್ಧವಾಗಿ ನಡೆಯುತ್ತಿಲ್ಲ. ಕಾಂಗ್ರೆಸ್ ಶಾಸಕರು ಇರುವ ಕ್ಷೇತ್ರಗಳಲ್ಲಿ ಬಿಜೆಪಿಯ ಶಾಸಕರು, ಸಂಸದರು ಹಾಗೂ ಆರೆಸೆಸ್ಸ್(RSS) ನವರು ತಮ್ಮ ಕಚೇರಿಗಳಲ್ಲಿ ವಾರ್ಡುಗಳ ಪುನರ್ ವಿಂಗಡಣೆ(ಡಿಲಿಮಿಟೇಶನ್) ಮಾಡಿಸುತ್ತಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಆರೋಪಿಸಿದರು.

ಬುಧವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದೇಶಿಸಿ ಮಾತನಾಡಿದ ಅವರು, ವಾಮಮಾರ್ಗದಲ್ಲಿ ಪಾಲಿಕೆಯಲ್ಲಿ ಅಧಿಕಾರಕ್ಕೆ ಬರಲು ಮನಬಂದಂತೆ ಡಿಲಿಮಿಟೇಶನ್ ಮಾಡುತ್ತಿದ್ದಾರೆ. ವಾರ್ಡುಗಳ ಪುನರ್ ವಿಂಗಡನೆ ಮಾಡಲು ರಚನೆ ಮಾಡಿರುವ ಸಮಿತಿಯಲ್ಲಿರುವ ಅಧಿಕಾರಿಗಳ ಬಳಿ ಈ ಬಗ್ಗೆ ಸಣ್ಣ ದಾಖಲೆ ಇದ್ದರೆ ತೋರಿಸಲಿ ಎಂದು ಸವಾಲು ಹಾಕಿದರು.

ಬಿಬಿಎಂಪಿಯಲ್ಲಿ ವಾರ್ಡುಗಳ ವಿಂಗಡನೆಯು ವೈಜ್ಞಾನಿಕವಾಗಿ ನಡೆಯದೇ, ಪಕ್ಷಪಾತವಾಗಿ ನಡೆಯುತ್ತಿದೆ. ಅಧಿಕಾರಿಗಳು ಪ್ರಾಮಾಣಿಕವಾಗಿ ಈ ಪ್ರಕ್ರಿಯೆ ಮಾಡಿದ್ದರೆ ಅದು ವೈಜ್ಞಾನಿಕವಾಗಿ ನಡೆಯುತ್ತಿತ್ತು. ಆದರೆ, ಈ ಪ್ರಕ್ರಿಯೆ ಬಿಜೆಪಿ ಹಾಗೂ ಆರೆಸೆಸ್ಸ್ನವರ ಕಚೇರಿಗಳಲ್ಲಿ ನಡೆಯುತ್ತಿದೆ ಎಂದು ರಾಮಲಿಂಗಾರೆಡ್ಡಿ ಕಿಡಿಗಾರಿದರು.

ಮುಂದಿನ ಸೆಪ್ಟೆಂಬರ್ ಬಂದರೆ ಪಾಲಿಕೆಯಲ್ಲಿ ಅಧಿಕಾರಿಗಳ ಆಡಳಿತ ಆರಂಭವಾಗಿ ಎರಡು ವರ್ಷ ಪೂರ್ಣಗೊಳ್ಳುತ್ತದೆ. ನಾವು ವಿರೋಧ ಪಕ್ಷದಲ್ಲಿದ್ದಾಗ ಜೆಡಿಎಸ್ ಜತೆ ಸೇರಿ ಬೆಂಗಳೂರಿಗೆ ಒಳ್ಳೆಯದಾಗುತ್ತದೆ ಎಂದು ಸರಕಾರ ಬೆಂಗಳೂರಿಗೆ ವಿಶೇಷ ಕಾನೂನು ತರಲು ಮುಂದಾದಾಗ ಸಹಕಾರ ನೀಡಿದೆವು. ಆದರೆ ಸರಕಾರ ಮನಸ್ಸಿಗೆ ಬಂದಂತೆ ತಿದ್ದುಪಡಿ ಮಾಡಿ 198 ವಾರ್ಡುಗಳಿದ್ದ ಪಾಲಿಕೆಯನ್ನು 243 ವಾರ್ಡ್ ಆಗಿ ಪರಿವರ್ತಿಸಿ ಚುನಾವಣೆ ನಡೆಸುತ್ತೇವೆ ಎಂದು ಹೇಳುತ್ತಿದೆ ಎಂದು ಅವರು ತಿಳಿಸಿದರು.

ಎಪ್ರಿಲ್ ಮೊದಲ ವಾರದಲ್ಲಿ ಪಾಲಿಕೆಗೆ ಚುನಾವಣೆ ನಡೆಯಬಹುದು. ಈಗ ಡಿಲಿಮಿಟೇಶನ್ ಮಾಡಬೇಕಿರೋದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ. ಸಂಚಾಲಕರಾಗಿ ಬೆಂಗಳೂರು ಜಿಲ್ಲಾಧಿಕಾರಿ ಮಂಜುನಾಥ್ ಇದ್ದಾರೆ. ಇವರ ಜತೆ ಒಂದಿಬ್ಬರು ಸದಸ್ಯರು ಈ ಸಮಿತಿಯಲ್ಲಿದ್ದು, ಪಾಲಿಕೆಯಲ್ಲಿ ಡಿಲಿಮಿಟೇಶನ್ ಅನ್ನು ಇವರು ಯಾರು ಮಾಡುತ್ತಿಲ್ಲ ಎಂದು ರಾಮಲಿಂಗಾರೆಡ್ಡಿ ಆರೋಪಿಸಿದರು.

ಡಿಲಿಮಿಟೇಶನ್ ಸರಿಯಾಗಿ ಮಾಡದಿದ್ದರೆ, ಮುಖ್ಯಮಂತ್ರಿಯನ್ನು ಭೇಟಿ ಮಾಡುತ್ತೇವೆ. ಇದರ ನಂತರ ಕೋರ್ಟ್ ಮೆಟ್ಟಿಲೇರುವ ಅವಕಾಶ ಇರುತ್ತದೆ. ಕೋರ್ಟ್ ಮೆಟ್ಟಿಲೇರಿದಾಗ ಈ ಹಿಂದೆ ಅನೇಕ ತೀರ್ಪುಗಳು ನೀಡಿ ನ್ಯಾಯ ದೊರಕಿಸಲಾಗಿದೆ. ಸರಿಯಾದ ರೀತಿಯಲ್ಲಿ ಡಿಲಿಮಿಟೇಶನ್ ಮಾಡಿದರೆ ನಾವು ಪ್ರತಿಭಟನೆ ಮಾಡುವ ಅಗತ್ಯವೇ ಇರುವುದಿಲ್ಲ ಎಂದು ಅವರು ಹೇಳಿದರು.

ಇದನ್ನೂ ಓದಿ: ಅಂಬೇಡ್ಕರ್ ಭಾವಚಿತ್ರಕ್ಕೆ ಅಗೌರವ - ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ವಿರುದ್ಧ ಪೊರಕೆ ಚಳವಳಿ

ಡಿಲಿಮಿಟೇಶನ್‌ನಲ್ಲಿ ಹೊಸ ಹಳ್ಳಿಗಳ ಸೇರ್ಪಡೆ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಈ ಹಿಂದೆ ಆ ಪ್ರಸ್ತಾಪವಿತ್ತು, ಅದನ್ನು ಕೈಬಿಟ್ಟಿದ್ದು, ಯಾವುದೇ ಹೊಸ ಹಳ್ಳಿಗಳನ್ನು ಪಾಲಿಕೆ ವ್ಯಾಪ್ತಿಗೆ ಸೇರಿಸುತ್ತಿಲ್ಲ. ಈಗ ಇರುವ 198 ವಾರ್ಡ್ಗಳನ್ನೇ 243 ವಾರ್ಡ್ಗಳಾಗಿ ಮಾಡುತ್ತಿದ್ದಾರೆ ಎಂದರು.

ಸರಕಾರ ತನ್ನಿಷ್ಟಕ್ಕೆ ಡಿಲಿಮಿಟೇಶನ್ ಮಾಡಿದರೆ, ಚುನಾವಣೆ ಬಹಿಷ್ಕಾರ ಮಾಡುವ ಸಾಧ್ಯತೆ ಇದೆಯಾ ಎಂಬ ಪ್ರಶ್ನೆಗೆ ಉತ್ತರಿಸಿದ ರಾಮಲಿಂಗಾರೆಡ್ಡಿ, ‘ಈ ಚುನಾವಣೆಯಲ್ಲಿ ನಾವೇ ಗೆಲ್ಲುವಾಗ ನಾವ್ಯಾಕೆ ಚುನಾವಣೆ ಬಹಿಷ್ಕರಿಸೋಣ? ನಗರಸಭೆ, ಪುರಸಭೆ, ಪಟ್ಟಣ ಪಂಚಾಯ್ತಿ ಚುನಾವಣೆಯಲ್ಲಿ ನಾವೇ ಗೆದ್ದಿದ್ದೇವೆ. ಬಿಜೆಪಿಯವರು ಪಕ್ಷ ಚಿಹ್ನೆ ಹೊರತಾಗಿ ನಡೆಯುವ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ತಮ್ಮ ಕಾರ್ಯಕರ್ತರೇ ಗೆದ್ದಿದ್ದಾರೆ ಎಂದು ಬೀಗಿದ್ದರು ಎಂದರು.

ಆದರೆ ಚುನಾಯಿತ ಪ್ರತಿನಿಧಿಗಳು ಮತದಾನ ಮಾಡುವ ವಿಧಾನ ಪರಿಷತ್ ಚುನಾವಣೆಯಲ್ಲಿ ನಮ್ಮ ಪಕ್ಷಕ್ಕೆ ಶೇ.48ರಷ್ಟು ಮತ ಬಂದಿವೆ. ಈಗಲೂ ಚುನಾವಣೆ ಆದರೆ ಕಾಂಗ್ರೆಸ್ ಪಕ್ಷವೇ ಗೆಲ್ಲಲಿದೆ. ರಾಜ್ಯದ ಹಿತಕ್ಕಾಗಿ ಕೆಲಸ ಮಾಡುವುದು ಕಾಂಗ್ರೆಸ್ ಮಾತ್ರ ಎಂಬುದು ಜನರಿಗೆ ಅರಿವಾಗಿದೆ ಎಂದು ರಾಮಲಿಂಗಾರೆಡ್ಡಿ ಹೇಳಿದರು.

ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಕಟ್ಟಡ ನಿರ್ಮಾಣ ಯೋಜನೆ ಶುಲ್ಕವನ್ನು ನಾಲ್ಕುಪಟ್ಟು ಹೆಚ್ಚಿಸಿದೆ. ನೀರಿನ ದರ ಹೆಚ್ಚಿಸಿದರು, ವೃತ್ತಿ ತೆರಿಗೆ ಹೆಚ್ಚಿಸಿದರು. ಇತ್ತೀಚೆಗೆ ವಿದ್ಯುತ್ ಬಿಲ್ ದರ ಏರಿಸುವ ಪ್ರಸ್ತಾವನೆ ಬಂತು. ಆದರೆ ಚುನಾವಣೆ ಹಿನ್ನೆಲೆಯಲ್ಲಿ ತಕ್ಷಣ ಅದನ್ನು ಜಾರಿ ಮಾಡುವುದು ಬೇಡ ಎಂದು ತಡೆ ಹಿಡಿದಿದ್ದಾರೆ. ಚುನಾವಣೆ ನಂತರ ಖಂಡಿತವಾಗಿ ದರ ಹೆಚ್ಚಿಸುತ್ತಾರೆ ಎಂದು ಅವರು ತಿಳಿಸಿದರು.

ಮೇಕೆದಾಟು ಪಾದಯಾತ್ರೆ: ಕೋವಿಡ್ ಕಡಿಮೆಯಾದ ನಂತರ ಪೊಲೀಸರು ಅನುಮತಿ ನೀಡುತ್ತಾರೆ. ಆನಂತರ ಮೇಕೆದಾಟು ಪಾದಯಾತ್ರೆಯನ್ನು ಎಲ್ಲಿಗೆ ನಿಲ್ಲಿಸಿದ್ದೆವೋ ಅಲ್ಲಿಂದಲೇ ಮುಂದುವರಿಸುತ್ತೇವೆ. ಕೋವಿಡ್ ಇರುವವರೆಗೂ ಪೊಲೀಸರ ಅನುಮತಿ ಸಿಗುವುದಿಲ್ಲ, ಅದು ಕಡಿಮೆಯಾದ ನಂತರ ಅವರು ಅನುಮತಿ ನೀಡಲೇಬೇಕಾಗುತ್ತದೆ. ಈ ವಿಚಾರವಾಗಿ ಕೆಪಿಸಿಸಿ ಅಧ್ಯಕ್ಷರು ಹಾಗೂ ಶಾಸಕಾಂಗ ಪಕ್ಷದ ನಾಯಕರ ಜತೆ ಚರ್ಚಿಸಿ ಮಾಹಿತಿ ನೀಡುತ್ತೇನೆ ಎಂದು ರಾಮಲಿಂಗಾರೆಡ್ಡಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News