ಹಕ್ಕುಪತ್ರಕ್ಕಾಗಿ ನೀಡಿದ ಹಣ ಹಿಂದಿರುಗಿಸಲು ಒತ್ತಾಯಿಸಿ ತಹಶೀಲ್ದಾರ್ ಗೆ ದೂರವಾಣಿ ಕರೆ: ಆಡಿಯೋ ವೈರಲ್

Update: 2022-02-03 15:45 GMT
ಅಂಬುಜಾ 

ಚಿಕ್ಕಮಗಳೂರು, ಫೆ.3: ಜಿಲ್ಲೆಯ ಶೃಂಗೇರಿ ತಾಲೂಕು ಕಚೇರಿಯಲ್ಲಿ 94ಸಿ, 94ಸಿಸಿ ಹಕ್ಕುಪತ್ರಗಳ ವಿತರಣೆ ಸಂಬಂಧ ನಡೆದಿರುವ ವ್ಯಾಪಕ ಭ್ರಷ್ಟಾಚಾರ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. 

ಹಗರಣದಲ್ಲಿ ಎಸಿಬಿ ಬಲೆ ಬಿದ್ದು ಸದ್ಯ ಅಮಾನತುಗೊಂಡಿರುವ ತಹಶೀಲ್ದಾರ್ ಗೆ ಹಕ್ಕುಪತ್ರಕ್ಕಾಗಿ ಹಣ ನೀಡಿರುವ ಜನರು ಹಕ್ಕುಪತ್ರ ಸಿಗದಿರುವುದು ಹಾಗೂ ಸಿಕ್ಕ ಹಕ್ಕುಪತ್ರಗಳು ಬೋಗಸ್ ಎಂಬ ಭೀತಿಯಿಂದ ಹಣ ಹಿಂದಿರುಗಿಸಲು ತಹಶೀಲ್ದಾರ್ ಗೆ ಕರೆ ಮಾಡಿ ತರಾಟೆಗೆ ಪಡೆಯುತ್ತಿರುವ ಮೊಬೈಲ್ ಆಡಿಯೋಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

ಇದನ್ನೂ ಓದಿ: ಮನೆ ಹಕ್ಕು ಪತ್ರಕ್ಕೆ ಲಂಚ ಕೇಳಿದ ಆರೋಪ: ಶೃಂಗೇರಿ ತಹಶೀಲ್ದಾರ್ ಬಂಧನ

ಶೃಂಗೇರಿ ತಾಲೂಕು ಕಚೇರಿಯ ತಹಶೀಲ್ದಾರ್ ಅಂಬುಜಾ ಹಾಗೂ ಗ್ರಾಮ ಲೆಕ್ಕಿಗ ಸಿದ್ದಪ್ಪ ಎಂಬವರು 94ಸಿ, 94ಸಿಸಿ ಹಕ್ಕುಪತ್ರಗಳನ್ನು ನೀಡಲು ಸಾರ್ವಜನಿಕರಿಂದ ಹಣ ಪಡೆಯುತ್ತಿರುವ ಬಗ್ಗೆ ಸ್ಥಳೀಯರು ಎಸಿಬಿ ದೂರು ನೀಡಿದ್ದು, ಈ ಸಂಬಂಧ ಕಾರ್ಯಾಚರಣೆ ನಡೆಸಿದ ಎಸಿಬಿ ಅಧಿಕಾರಿಗಳ ತಂಡ ವಿಎ ಸಿದ್ದಪ್ಪ ಅವರನ್ನು ಲಂಚದ ಹಣ ಸಮೇತ ಬಲೆ ಬೀಳಿಸಿತ್ತು. ಈ ಪ್ರಕರಣದಲ್ಲಿ ತಹಶೀಲ್ದಾರ್ ಅಂಬುಜಾ ಎ1 ಆರೋಪಿಯಾಗಿದ್ದರಿಂದ ಪೊಲೀಸರು ತಹಶೀಲ್ದಾರ್ ಅಂಬುಜಾ ಅವರನ್ನು ಬಂಧಿಸಿದ್ದರು. ಈ ಘಟನೆ ಬಳಿಕ ತಹಶೀಲ್ದಾರ್ ಹಾಗೂ ವಿಎ ಅಮಾನತುಗೊಂಡಿದ್ದು, ಹಗರಣದ ತನಿಖೆಯನ್ನು ಕಂದಾಯ ಉಪವಿಭಾಗಾಧಿಕಾರಿ ಡಾ.ನಾಗರಾಜ್ ಅವರಿಗೆ ವಹಿಸಲಾಗಿತ್ತು.

ತನಿಖೆ ಆರಂಭಿಸಿದ ಎಸಿ ನಾಗರಾಜ್, ಶೃಂಗೇರಿ ತಾಲೂಕು ಕಚೇರಿಯಲ್ಲಿ ವಿತರಿಸಲಾಗಿರುವ 671 ಹಕ್ಕುಪತ್ರಗಳು ಬೋಗಸ್ ಎಂದು ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಿದ್ದು, ನಿಯಮ ಉಲ್ಲಂಘಿಸಿ ಹಕ್ಕುಪತ್ರ ವಿತರಣೆ ಮಾಡಿದ ಪ್ರಕರಣದಲ್ಲಿ ಕರ್ತವ್ಯ ಲೋಪ ಎಸಗಿದ್ದ ಶೃಂಗೇರಿ ತಾಲೂಕಿನ ವಿವಿಧ ಕಂದಾಯ ವೃತ್ತದ ಮೂವರು ಗ್ರಾಮಲೆಕ್ಕಿಗರ ವಿರುದ್ಧ ವರದಿಯಲ್ಲಿ ಉಲ್ಲೇಖಿಸಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಮೂವರು ವಿಎಗಳನ್ನು ಅಮಾನತು ಮಾಡಿದ್ದಲ್ಲದೇ ಶೃಂಗೇರಿ ಠಾಣೆಯಲ್ಲಿ ದೂರನ್ನೂ ದಾಖಲಿಸಲಾಗಿತ್ತು. ಈ ಮಧ್ಯೆ ತನಿಖೆ ನಡೆಯುತ್ತಿರುವಂತೆಯೇ ಶೃಂಗೇರಿ ತಾಲೂಕು ಕಚೇರಿಯಲ್ಲಿದ್ದ ಹಕ್ಕುಪತ್ರಗಳ ವಿತರಣೆಯ ನೋಂದಣಿ ಪುಸಕ್ತವೊಂದು ನಾಪತ್ತೆಯಾಗಿದ್ದು, ಈ ಸಂಬಂಧವೂ ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲು ಮಾಡಲಾಗಿದೆ.

ಈ ಬೆಳವಣಿಗೆಗಳ ಮಧ್ಯೆ ತಹಶೀಲ್ದಾರ್ ಅವರ ಕಾರು ಚಾಲಕನೋರ್ವ ಹಕ್ಕುಪತ್ರ ಹಗರಣದಲ್ಲಿ ಬಂಧನಕ್ಕೊಳಗಾಗುವ ಭೀತಿಯಿಂದ ತನ್ನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಮೃತ ಚಾಲಕ ಬರೆದಿಟ್ಟಿದ್ದ ಡೆತ್‍ನೋಟ್‍ನಲ್ಲಿ ಆಧರಿಸಿ ಶೃಂಗೇರಿ ಪೊಲೀಸರು ಆರು ಚಾಲಕನ ಆತ್ಮಹತ್ಯೆಗೆ ಕಾರಣರಾದ ತಾಲೂಕು ಕಚೇರಿಯ ಓರ್ವ ಸಿಬ್ಬಂದಿ ಸೇರಿದಂತೆ ಇಬ್ಬರು ಮಧ್ಯವರ್ತಿಗಳ ಮೇಲೆ ಪ್ರಕರಣ ದಾಖಲಿಸಿಕೊಂಡು ವಶಕ್ಕೆ ಪಡೆದ ಘಟನೆ ನಡೆದಿತ್ತು.

ತಹಶೀಲ್ದಾರ್ ಹಾಗೂ ಗ್ರಾಮಲೆಕ್ಕಿಗರು ಸೇರಿ ಶೃಂಗೇರಿ ತಾಲೂಕಿನ ನೂರಾರು ಜನರಿಂದ ಲಂಚಪಡೆದು ಹಕ್ಕುಪತ್ರ ವಿತರಣೆ ಮಾಡಿದ್ದು, ಈ ಹಕ್ಕುಪತ್ರಗಳನ್ನು ಅಕ್ರಮವಾಗಿ ಕಾನೂನು ಉಲ್ಲಂಘಿಸಿ ವಿತರಣೆ ಮಾಡಿದ್ದು, ಬಹುತೇಕ ಹಕ್ಕುಪತ್ರಗಳು ಬೋಗಸ್ ಎಂದು ತನಿಖಾಧಿಕಾರಿ ವರದಿ ನೀಡಿರುವ ಹಿನ್ನೆಲೆಯಲ್ಲಿ ಹಣ ನೀಡಿ ಹಕ್ಕುಪತ್ರ ಪಡೆದುಕೊಂಡವರು ಹಾಗೂ ಹಕ್ಕುಪತ್ರಕ್ಕಾಗಿ ತಹಶೀಲ್ದಾರ್ ಅವರಿಗೆ ಮುಂಗಡ ಹಣ ನೀಡಿದ ಸಾರ್ವಜನಿಕರು ಹಕ್ಕುಪತ್ರವೂ ಇಲ್ಲ, ಹಣವೂ ಇಲ್ಲ ಎಂಬಂತಹ ಅತಂತ್ರ ಸ್ಥಿತಿಯಲ್ಲಿದ್ದು, ಈ ಪೈಕಿ ಸಾಲ ಸೂಲ ಮಾಡಿ ಹಣ ಹೊಂದಿಸಿ ಅಧಿಕಾರಿಗಳಿಗೆ ನೀಡಿದ್ದವರು ಸದ್ಯ ಅಮಾನತುಗೊಂಡಿರುವ ತಹಶೀಲ್ದಾರ್‍ಗೆ ದೂರವಾಣಿ ಕರೆ ಮಾಡಿ ಹಣ ಹಿಂದಿರುಗಿಸುವಂತೆ ಒತ್ತಾಯಿಸುತ್ತಿದ್ದಾರೆ. ಮಧ್ಯವರ್ತಿಗಳ ಮೂಲಕ ಹಣ ನೀಡಿದವರು ಮಧ್ಯವರ್ತಿಗಳಿಗೆ ಕರೆ ಮಾಡಿ ಹಣ ಹಿಂದಿರುಗಿಸುವಂತೆ ಆಗ್ರಹಿಸಿದ್ದಾರೆ. ಹೀಗೆ ತಹಶೀಲ್ದಾರ್, ಮಧ್ಯವರ್ತಿಗಳಿಗೆ ಕರೆ ಮಾಡಿರುವ ಕೆಲವರು ತಾವು ಮಾತನಾಡಿರುವ ಆಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದು, ಹಕ್ಕುಪತ್ರ ಹಗರಣದಲ್ಲಿ ಭಾರೀ ಹಣಕಾಸಿನ ವ್ಯವಹಾರ ನಡೆದಿರುವುದು ಇದರಿಂದ ಸ್ಪಷ್ಟವಾಗುತ್ತಿದೆ.

ಆಡಿಯೋಗಳಲ್ಲಿ ಸಾರ್ವಜನಿಕರು ತಾವು ನೀಡಿದ ಹಣದ ಬಗ್ಗೆ ಅಮಾನತಾಗಿರುವ ತಹಶೀಲ್ದಾರ್ ಅಂಬುಜಾ ಅವರನ್ನು ತರಾಟೆಗೆ ಪಡೆದಿದ್ದು, ತಹಶೀಲ್ದಾರ್ ಅಂಬುಜಾ ಅವರು, ತಾನು ವಿತರಣೆ ಮಾಡಿದ ಹಕ್ಕುಪತ್ರಗಳು ಬೋಗಸ್ ಅಲ್ಲ ಎಂದು ಪ್ರತಿಕ್ರಿಯಿಸಿರುವ, ತಾಲೂಕು ಕಚೇರಿಯಿಂದ ವಿತರಣೆಯಾದ ಹಕ್ಕುಪತ್ರಗಳು ಬೋಗಸ್ ಆಗಲು ಹೇಗೆ ಸಾಧ್ಯ? ಎಂದು ಪ್ರಶ್ನಿಸಿರುವುದು ಆಡಿಯೋದಲ್ಲಿ ಕೇಳಿ ಬರುತ್ತಿದೆ. 

"ತಹಶೀಲ್ದಾರ್ ನೀಡಿರುವ ಹಕ್ಕುಪತ್ರಗಳು ಬೋಗಸ್ ಎಂದು ಎಸಿ ವರದಿ ನೀಡಿದ್ದಾರೆ, ಹಣ ನೀಡಿದವರಿಗೆ ಹಕ್ಕುಪತ್ರ ನೀಡಲು ಕ್ರಮವಹಿಸದಿರುವು ತಪ್ಪಲ್ಲವೇ ಎಂದು ಹಣ ನೀಡಿದವರು ಆಡಿಯೋದಲ್ಲಿ ತಹಶೀಲ್ದಾರ್ ಅವರನ್ನು ಪ್ರಶ್ನಿಸಿದರೇ, ಇದಕ್ಕೆ ತಹಶೀಲ್ದಾರ್, ಹಕ್ಕುಪತ್ರ ವಿತರಣೆಗೂ ಮುನ್ನ ಟ್ಯ್ರಾಪ್ ಆಗಿದ್ದೇನೆ, ನಾನೇನು ಮಾಡಲಿ, ತಾಲೂಕು ಕಚೇರಿಯಿಂದ ವಿತರಿಸಿದ ಹಕ್ಕುಪತ್ರ ಬೋಗಸ್ ಅಲ್ಲ, ಶಿರಸ್ತೇದಾರ್ ಬಳಿ ಮಾತನಾಡಿ ಸರಿ ಮಾಡುತ್ತೇನೆ" ಎಂದು ಪ್ರತಿಕ್ರಿಯಿಸಿದ್ದಾರೆ.

ಒಟ್ಟಾರೆ ಶೃಂಗೇರಿ ತಾಲೂಕು ಕಚೇರಿಯಲ್ಲಿ ನಡೆದಿರುವ ಹಕ್ಕಪುತ್ರಕ್ಕಾಗಿ ಲಂಚ ಹಗರಣ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಅಕ್ರಮ ಹಕ್ಕುಪತ್ರಗಳ ವಿತರಣೆಗೂ ಅಧಿಕಾರಿಗಳು ಲಕ್ಷಾಂತರ ರೂ. ಲಂಚ ಪಡೆದಿರುವುದು ಸದ್ಯ ಬೆಳಕಿಗೆ ಬರುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News