"ಕೇಂದ್ರಕ್ಕೆ ಭವಿಷ್ಯದ ಬಗ್ಗೆ ಭಯ, ವರ್ತಮಾನದ ಮೇಲೆ ಅಪನಂಬಿಕೆ'': ಲೋಕಸಭೆಯಲ್ಲಿ ಮಹುವಾ ಮೊಯಿತ್ರಾ ವಾಗ್ದಾಳಿ

Update: 2022-02-04 09:04 GMT
ಮಹುವಾ ಮೊಯಿತ್ರಾ (PTI)

ಹೊಸದಿಲ್ಲಿ: ಕೇಂದ್ರದ ಎನ್‍ಡಿಎ ಸರಕಾರ "ಭವಿಷ್ಯದ ಬಗ್ಗೆ ಭಯ'' ಹೊಂದಿದೆ ಹಾಗೂ "ವರ್ತಮಾನದ ಮೇಲೆ ಅಪನಂಬಿಕೆ ಹೊಂದಿದೆ,'' ಎಂದು ತೃಣಮೂಲ ಸಂಸದೆ ಮಹುವಾ ಮೊಯಿತ್ರಾ(Mahua Moitra) ಗುರುವಾರ ಲೋಕಸಭೆಯಲ್ಲಿ ಮಾಡಿದ ಭಾಷಣದಲ್ಲಿ ಕೇಂದ್ರದ ವಿರುದ್ಧ ಕಿಡಿಕಾರಿದ್ದಾರೆ.

ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಸಂದರ್ಭ ಮಾತನಾಡಿದ ಅವರು ರಾಷ್ಟ್ರಪತಿಗಳು ತಮ್ಮ ಭಾಷಣದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಮಾತನಾಡಿದ್ದರೂ ಅದು ಕೇವಲ ಬಾಯ್ಮಾತಿಗೆ ಆಗಿತ್ತು ಎಂದಿದ್ದಾರೆ.

ಸುಭಾಶ್ ಚಂದ್ರ ಬೋಸ್ ಅವರ ಪ್ರತಿಮೆಯನ್ನು ಇಂಡಿಯಾ ಗೇಟ್‍ನಲ್ಲಿ ಸ್ಥಾಪಿಸುವ ಸರಕಾರದ ಇತ್ತೀಚಿಗಿನ ನಿರ್ಧಾರ ಕುರಿತು ಪ್ರತಿಕ್ರಿಯಿಸಿದ ಮಹುವಾ, ದ್ವೇಷದ ಭಾಷಣಗಳನ್ನು ನೀಡಲಾಗಿದೆಯೆನ್ನಲಾದ ಹರಿದ್ವಾರ್ ಧರ್ಮ ಸಂಸದ್ ಅನ್ನು ಬೋಸ್ ಅವರು ಒಪ್ಪುತ್ತಿದ್ದರೇ ಎಂದು ಪ್ರಶ್ನಿಸಿದರು.

"ಈ ಸರಕಾರವು ಇತಿಹಾಸವನ್ನು ಬದಲಾಯಿಸಬೇಕೆಂದಿದೆ. ಅವರಿಗೆ ಭವಿಷ್ಯದ ಬಗ್ಗೆ ಭಯವಿದೆ ಹಾಗೂ ವರ್ತಮಾನದ ಮೇಲೆ ಅಪನಂಬಿಕೆಯಿದೆ. ರಾಷ್ಟ್ರಪತಿಗಳು ತಮ್ಮ ಭಾಷಣದಲ್ಲಿ ಭಾರತಕ್ಕೆ ತನ್ನ ಹಕ್ಕುಗಳನ್ನು ನೀಡಿದ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಹೇಳಿದ್ದಾರೆ, ಇದು ಕೇವಲ ಬಾಯ್ಮಾತಿಗೆ,'' ಎಂದು ಅವರು ಹೇಳಿದರು.

"ತನ್ನದೇ ಚರ್ಮದಲ್ಲಿ ಆರಾಮದಾಯಕವಾಗಿರುವ'' ಒಂದು ದೇಶದ ಬಗ್ಗೆ ಸರಕಾರಕ್ಕೆ "ಭಯವಿದೆ'' ಎಂದು ಹೇಳಿದ ಅವರು ಈ ದೇಶವನ್ನು ಜನರು ರಕ್ಷಿಸುವ ಕಾಲ ಬಂದಿದೆ ಎಂದಿದ್ದಾರೆ.

ಹೀಗೆ ಮಹುವಾ ಆವೇಶದಿಂದ ತಮ್ಮ ಭಾಷಣ ಮುಂದುವರಿಸಿರುವಂತೆಯೇ ಸ್ಪೀಕರ್ ರಮಾ ದೇವಿ ಅವರು ಸಮಾಧಾನದಿಂದ ಮಾತು ಮುಂದುವರಿಸುವಂತೆ ಹೇಳಿದರು.

"ಸರಕಾರ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಮಾತನಾಡುತ್ತದೆ, ಆದರೆ ವಾಸ್ತವವಾಗಿ ಭಾರತದ ವೈವಿಧ್ಯತೆ ಮತ್ತು ಜಾತ್ಯತೀತ ಇತಿಹಾಸವನ್ನು ನೆನಪಿಸುವಾಗ ಅದಕ್ಕೆ ಅಭದ್ರತೆ ಕಾಡುತ್ತದೆ,'' ಎಂದು ಅವರು ಹೇಳಿದರು.

ನೇತಾಜಿ ಕುರಿತಾದ ಪಶ್ಚಿಮ ಬಂಗಾಳದ ಗಣರಾಜ್ಯೋತ್ಸವ ಟ್ಯಾಬ್ಲೋ ಅನ್ನು ತಿರಸ್ಕರಿಸಿದ ಕೇಂದ್ರದ ಕ್ರಮವನ್ನು ಟೀಕಿಸಿದ ಮಹುವಾ, ಸರಕಾರವು ವಿನಾಯಕ್ ದಾಮೋದರ್ ಸಾರ್ವರ್ಕರ್ ಅವರನ್ನು ಸ್ವಾತಂತ್ರ್ಯ ಹೋರಾಟಗಾರರಾಗಿ ಮರು ಆವಿಷ್ಕರಿಸಿದೆ ಎಂದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News