ಮೀಡಿಯಾಒನ್ ಪ್ರಸಾರಕ್ಕೆ ಕೇಂದ್ರದ ತಡೆ: ಹೈಕೋರ್ಟ್ ಮೊರೆ ಹೋದ ಸುದ್ದಿವಾಹಿನಿಯ ಉದ್ಯೋಗಿಗಳು, ಕೇರಳ ಪತ್ರಕರ್ತರ ಯೂನಿಯನ್

Update: 2022-02-04 09:49 GMT

ಕೊಚ್ಚಿ: ಮೀಡಿಯಾಒನ್ ಸುದ್ದಿ ವಾಹಿನಿಯ ಪ್ರಸಾರಕ್ಕೆ ತಡೆಹೇರಿದ ಕೇಂದ್ರ ಸರಕಾರದ ಕ್ರಮವನ್ನು ಪ್ರಶ್ನಿಸಿ ಕೇರಳ ಕಾರ್ಯನಿರತ ಪತ್ರಕರ್ತರ ಸಂಘ, ಮೀಡಿಯಾಒನ್ ಸಂಪಾದಕ ಪ್ರಮೋದ್ ರಾಮನ್ ಮತ್ತು ಸುದ್ದಿ ವಾಹಿನಿಯ ಕೆಲ ಉದ್ಯೋಗಿಗಳು ಕೇರಳ ಹೈಕೋರ್ಟಿನಲ್ಲಿ ಎರಡು ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಿದ್ದಾರೆ.

ಈ ಎರಡು ಅರ್ಜಿಗಳು ಹಾಗೂ ಮೀಡಿಯಾಒನ್ ಮಾತೃ ಸಂಸ್ಥೆ ಮಾಧ್ಯಮಂ ಬ್ರಾಡ್‍ಕಾಸ್ಟಿಂಗ್ ಲಿಮಿಟೆಡ್ ಈ ಹಿಂದೆ ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಫೆಬ್ರವರಿ 7ಕ್ಕೆ ನಿಗದಿಪಡಿಸಿದೆ.

ಫೆಬ್ರವರಿ 2ರಂದು ಮಾಧ್ಯಮಂ ಅರ್ಜಿ ವಿಚಾರಣೆಗೆ ಕೈಗೆತ್ತಿಕೊಂಡಿದ್ದ ಹೈಕೋರ್ಟ್ ಕೇಂದ್ರದ ನಿರ್ಧಾರವನ್ನು ಫೆಬ್ರವರಿ 7ರ ತನಕ ತಡೆಹಿಡಿದಿದೆಯಲ್ಲದೆ,  ಸುದ್ದಿ ವಾಹಿನಿಗೆ ಭದ್ರತಾ ಅನುಮೋದನೆ ಕುರಿತಾದ ಕಡತಗಳನ್ನು ಒದಗಿಸುವಂತೆಯೂ ಕೇಂದ್ರ ಗೃಹ ಸಚಿವಾಲಯಕ್ಕೆ ಸೂಚಿಸಿತ್ತು.

ಕೇಂದ್ರದ ಕ್ರಮದಿಂದಾಗಿ ಸಂಸ್ಥೆಯ ನೂರಾರು ಉದ್ಯೋಗಿಗಳು ತಮ್ಮ ಜೀವನೋಪಾಯ ಕಳೆದುಕೊಳ್ಳುತ್ತಾರೆ ಎಂದು ಹೈಕೋರ್ಟ್ ಮುಂದೆ ಸಲ್ಲಿಸಲಾಗಿರುವ ಅರ್ಜಿಯಲ್ಲಿ ತಿಳಿಸಲಾಗಿದೆ. ಸುದ್ದಿವಾಹಿನಿ ಮತ್ತದರ ಉದ್ಯೋಗಿಗಳನ್ನು ವಿಶ್ವಾಸಕ್ಕೆ ಪಡೆದುಕೊಳ್ಳದೆಯೇ ಪ್ರಸಾರ ನಿಲ್ಲಿಸುವಂತೆ ಸೂಚಿಸಲಾಗಿದೆ, ಸುದ್ದಿ ವಾಹಿನಿಯು ಯಾವುದೇ ನಿಯಮ ಅಥವಾ ಕಾಯಿದೆಯನ್ನು ಉಲ್ಲಂಘಿಸಿಲ್ಲವಾದುದರಿಂದ ಕೇಂದ್ರದ ಕ್ರಮ ಅಕ್ರಮ ಮತ್ತು ಅಸಂವಿಧಾನಿಕ ಎಂದೂ ಅರ್ಜಿಯಲ್ಲಿ ಹೇಳಲಾಗಿದೆ.

ಫೆಬ್ರವರಿ 2ರಂದು ಮಾಧ್ಯಮಂ ಅರ್ಜಿ ವಿಚಾರಣೆ ವೇಳೆ ಹಾಜರಿದ್ದ ಕೇಂದ್ರದ ವಕೀಲರು, ಗುಪ್ತಚರ ಮಾಹಿತಿಗಳ ಆಧಾರದಲ್ಲಿ ರಾಷ್ಟ್ರೀಯ ಸುರಕ್ಷತೆ ಕುರಿತ ಕಳವಳದ ಕಾರಣ ಅನುಮತಿ ನಿರಾಕರಿಸಲಾಗಿದೆ, ಆ ಕಾರಣಗಳನ್ನು ಬಹಿರಂಗಪಡಿಸುವ ಅಗತ್ಯವಿಲ್ಲ ಎಂದು ಹೇಳಿದ್ದರು.

ಕೇಂದ್ರ ಗೃಹ ಸಚಿವಾಲಯದ ಅನಮೋದನೆ ಹೊಸ ಅನುಮತಿ/ಪರವಾನಗಿ ಸಂದರ್ಭ ಮಾತ್ರ ಅನ್ವಯವಾಗುತ್ತದೆ ನವೀಕರಣದ ಸಮಯವಲ್ಲ ಎಂದು ಮಾಧ್ಯಮಂ ವಾದಿಸಿದೆ.

ಇದನ್ನೂ ಓದಿ: "ಕೇಂದ್ರಕ್ಕೆ ಭವಿಷ್ಯದ ಬಗ್ಗೆ ಭಯ" - ಲೋಕಸಭೆಯಲ್ಲಿ ಮಹುವಾ ಮೊಯಿತ್ರಾ ವಾಗ್ದಾಳಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News