ಸಮವಸ್ತ್ರ: ಹೊಟ್ಟೆಗೆ ಹಿಟ್ಟಿಲ್ಲ, ಜುಟ್ಟಿಗೆ ಮಲ್ಲಿಗೆ!

Update: 2022-02-12 11:35 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಶಿಕ್ಷಣ ವ್ಯವಸ್ಥೆಯ ಇಂದಿನ ಅತಿ ದೊಡ್ಡ ಅಗತ್ಯವೇ ಸಮವಸ್ತ್ರ ಎಂದು ಸರಕಾರ ಹೇಳುತ್ತಿದೆ. ಸಮವಸ್ತ್ರವಿಲ್ಲದ ಕಾರಣದಿಂದಲೇ ಇಂದು ನಾಡಿನ ಶಿಕ್ಷಣ ವ್ಯವಸ್ಥೆ ಅಸ್ತವ್ಯಸ್ತವಾಗಿರುವುದು. ಶಾಲೆಗಳಲ್ಲಿ ಸಮವಸ್ತ್ರ ಕಟ್ಟು ನಿಟ್ಟಾಗಿ ಜಾರಿಗೆ ಬಂದಾಕ್ಷಣ ಎಲ್ಲ ಸರಕಾರಿ ಶಾಲೆಗಳ ಸಮಸ್ಯೆ ಪರಿಹಾರವಾಗಿ ಬಿಡುತ್ತದೆ. ಈಗಾಗಲೇ ಕಟ್ಟಡವಿಲ್ಲದೆ, ಶಿಕ್ಷಕರಿಲ್ಲದೆ ಪಾಳು ಬಿದ್ದಿರುವ ಸರಕಾರಿ ಶಾಲೆಗಳು ಪುನರುತ್ಥಾನಗೊಳ್ಳುತ್ತವೆ. ಸರಕಾರಿ ಶಾಲೆಗಳ ಗುಣ ಮಟ್ಟ ಏಕಾಏಕಿ ಉತ್ತಮ ಗೊಳ್ಳುತ್ತದೆ ಎನ್ನುವಂತೆ ಸರಕಾರ ಸಮವಸ್ತ್ರದ ಬಗ್ಗೆ ಆದೇಶ ಹೊರಡಿಸಿದೆ. ಕಳೆದ ಎರಡು ವರ್ಷಗಳ ಕೊರೋನ ಅವಧಿಯಲ್ಲಿ ಸರಕಾರಿ ಶಾಲೆಗಳ ಸ್ಥಿತಿಗತಿಗಳು ಹೇಗಿವೆ, ಅಲ್ಲಿರುವ ವಿದ್ಯಾರ್ಥಿಗಳ ಶಿಕ್ಷಣದ ಕಲಿಕೆ ಯಾವ ಮಟ್ಟದಲ್ಲಿದೆ? ಎನ್ನುವುದರ ಬಗ್ಗೆ ಸಮೀಕ್ಷೆ ನಡೆಸಿ ವರದಿ ತರಿಸಿಕೊಳ್ಳಬೇಕಾದ ಸರಕಾರ, ಸಮವಸ್ತ್ರದ ಹೆಸರಿನಲ್ಲಿ ಸರಕಾರಿ ಶಾಲೆಗಳ ಗಾಯಗಳಿಗೆ ಬರೆ ಹಾಕಲು ಹೊರಟಿದೆ.

ಕೊರೋನ ಕಾರಣದಿಂದ ಮುಚ್ಚಿದ್ದ ಶಾಲೆ ಇದೀಗ ತೆರೆದಿರುವುದು ಪುಣ್ಯ ಎನ್ನುವುಂತಹ ಸ್ಥಿತಿ ಇದೆ. ಲಾಕ್‌ಡೌನ್‌ನಿಂದಾಗಿ ಶೇಕಡ 50ರಷ್ಟು ಕುಟುಂಬಗಳು ಶಾಲೆಯ ಶುಲ್ಕವನ್ನು ಭರಿಸುವ ಶಕ್ತಿಯನ್ನು ಹೊಂದಿಲ್ಲ. ಕೆಲವು ಕುಟುಂಬಗಳಿಗೆ ಬಡತನದ ಸಮಸ್ಯೆಯಿಂದಾಗಿ ಮಕ್ಕಳನ್ನು ಶಾಲೆಗೆ ಕಳುಹಿಸುವುದಕ್ಕೆ ಸಾಧ್ಯವಾಗುತ್ತಿಲ್ಲ. ಕೊರೋನ ಕಾರಣದಿಂದ ಸಹಸ್ರಾರು ವಿದ್ಯಾರ್ಥಿಗಳು ಶಾಲೆ ತೊರೆದಿದ್ದಾರೆ. ಅವರು ಮತ್ತೆ ಶಾಲೆಯನ್ನು ಸೇರುವ ಸಾಧ್ಯತೆಗಳು ಕಡಿಮೆ. ಇದಕ್ಕಾಗಿ ಇನ್ನೊಂದು ಆಂದೋಲನವೇ ನಡೆಯಬೇಕಾಗಬಹುದು ಎಂದು ಈಗಾಗಲೇ ವಿವಿಧ ಸಂಸ್ಥೆಗಳು ನಡೆಸಿದ ಅಧ್ಯಯನಗಳು ಹೇಳುತ್ತಿವೆ. ಆನ್‌ಲೈನ್ ಶಿಕ್ಷಣದ ಕಾರಣದಿಂದಲೂ ಬಡವರ ಮಕ್ಕಳು ಶಿಕ್ಷಣದಿಂದ ಹೊರಗಿದ್ದಾರೆ. ಇದೀಗಷ್ಟೇ ಶಾಲೆಗಳು ತೆರೆದಿವೆ. ಅಸ್ತವ್ಯಸ್ತಗೊಂಡಿರುವ ಶಿಕ್ಷಣ ವ್ಯವಸ್ಥೆಯನ್ನು ಮತ್ತೆ ಎತ್ತಿ ನಿಲ್ಲಿಸುವ ಸವಾಲು ಸರಕಾರದ ಮುಂದಿದೆ. ಮೊದಲು ಶಾಲೆಯಿಂದ ಹೊರದಬ್ಬಲ್ಪಟ್ಟ ವಿದ್ಯಾರ್ಥಿಗಳನ್ನು ಹೇಗೆ ಒಳಗೆ ಸೇರಿಸಿಕೊಳ್ಳಬೇಕು ಎನ್ನುವುದರ ಬಗ್ಗೆ ಸರಕಾರ ತಲೆಕೆಡಿಸಿಕೊಳ್ಳಬೇಕು. ಆದರೆ ಕುಂದಾಪುರ, ಉಡುಪಿ ಸೇರಿದಂತೆ ರಾಜ್ಯದ ವಿವಿಧೆಡೆಗಳಲ್ಲಿ ಶಾಲೆಗೆ ಬಂದ ವಿದ್ಯಾರ್ಥಿಗಳು ಅದರಲ್ಲೂ ಬಾಲಕಿಯರನ್ನು ಶಾಲೆಯಿಂದ ಹೊರದಬ್ಬುವ ಅಮಾನವೀಯ ಮತ್ತು ಸಂವಿಧಾನ ವಿರೋಧಿ ಕೃತ್ಯಗಳು ಸರಕಾರದ ನೇತೃತ್ವದಲ್ಲೇ ನಡೆಯುತ್ತಿದೆ ಮತ್ತು ವಿದ್ಯಾವಂತರೆಂದು ಕರೆಸಿಕೊಂಡವರೇ ಇದನ್ನು ಬೆಂಬಲಿಸುತ್ತಿದ್ದಾರೆ ಅಥವಾ ಈ ಬಗ್ಗೆ ವೌನವಹಿಸಿ ಕುಮ್ಮಕ್ಕು ನೀಡುತ್ತಿದ್ದಾರೆ.

ಸಮವಸ್ತ್ರವನ್ನು ಕಡ್ಡಾಯವಾಗಿ ಪಾಲಿಸಲು ಅವೇನೂ ಮಿಲಿಟರಿ ಶಾಲೆಗಳಲ್ಲ. ಈ ದೇಶದಲ್ಲಿ ಇನ್ನೂ ವಸ್ತ್ರ, ಆಹಾರ, ಆರೋಗ್ಯದಂತಹ ಮೂಲಭೂತ ಕೊರತೆಗಳಿಂದ ನರಳುತ್ತಿರುವ ಕೋಟ್ಯಂತರ ಜನರಿದ್ದಾರೆ. ಅವರೆಲ್ಲರಿಗೂ ಶಿಕ್ಷಣ ತಲುಪಬೇಕು ಎನ್ನುವ ಉದ್ದೇಶದಿಂದ ಸರಕಾರಿ ಶಾಲೆಗಳನ್ನು ತೆರೆಯಲಾಗಿದೆಯೇ ಹೊರತು, ಎಲ್ಲರೂ ಸಮವಸ್ತ್ರ ಹಾಕಿ ಕವಾಯತು ನಡೆಸುವುದಕ್ಕಲ್ಲ. ಹೊಟ್ಟೆಯ ಹಿಟ್ಟಿಗೆ ಚಡಪಡಿಸುತ್ತಿರುವ ಸಮಾಜದಲ್ಲಿ ‘ಜುಟ್ಟಿಗೆ ಮಲ್ಲಿಗೆ ಇಲ್ಲದೇ ಶಾಲೆಗೆ ಪ್ರವೇಶವಿಲ್ಲ’ ಎಂಬ ಆದೇಶವನ್ನು ಸರಕಾರ ನೀಡಿದಂತಾಗಿದೆ. ರಾಜ್ಯದಲ್ಲಿ ನಡೆಯುತ್ತಿರುವುದನ್ನು ಇಡೀ ದೇಶ ಮಾತ್ರವಲ್ಲ, ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಮಾನವ ಹಕ್ಕು ಸಂಘಟನೆಗಳು ನೋಡುತ್ತಿವೆ. ಸ್ವಾತಂತ್ರ ಪೂರ್ವದಲ್ಲಿ ಜಾತಿಯ ಹೆಸರಿನಲ್ಲಿ, ಲಿಂಗದ ಹೆಸರಿನಲ್ಲಿ ಜನರನ್ನು ಶಿಕ್ಷಣದಿಂದ ಹೊರಗಿಡಲಾಗಿತ್ತು. ಅದನ್ನೀಗ ಬೇರೆಯದೇ ರೂಪದಲ್ಲಿ ಕರ್ನಾಟಕ ಮತ್ತೆ ಅನುಷ್ಠಾನಕ್ಕೆ ತರಲು ಹೊರಟಿದೆ. ಬಸವಣ್ಣನಂತಹ ಕ್ರಾಂತಿಕಾರಿಗಳು ಹುಟ್ಟಿದ ನೆಲದಲ್ಲಿ ವಿದ್ಯಾರ್ಥಿನಿಯರು ರಸ್ತೆಯಲ್ಲಿ ಕುಳಿತು ಪಾಠ ಓದುತ್ತಿರುವುದು ಕರ್ನಾಟಕಕ್ಕೆ ಆದ ಐತಿಹಾಸಿಕ ಅವಮಾನ. ಈ ಕಳಂಕವನ್ನು ಅದೆಷ್ಟು ಸಮವಸ್ತ್ರಗಳಿಂದ ಉಜ್ಜಿ ತೆಗೆದರೂ ಅಳಿಸುವುದಕ್ಕೆ ಸಾಧ್ಯವಿಲ್ಲ. ಇಡೀ ಪ್ರಕರಣದಲ್ಲಿ ಸಂತ್ರಸ್ತರನ್ನೇ ಆರೋಪಿಗಳನ್ನಾಗಿ ಮಾಡುವ ಪ್ರಯತ್ನ ನಡೆಯುತ್ತಿದೆ ಮತ್ತು ನಿಜವಾದ ಆರೋಪಿಗಳು ತೀರ್ಪುಗಾರರ ಪಾತ್ರವನ್ನು ವಹಿಸಲು ಮುಂದಾಗಿದ್ದಾರೆ.

ದಿಲ್ಲಿಯಲ್ಲಿ ಕೋಮುಗಲಭೆ ನಡೆಸಿ 40ಕ್ಕೂ ಅಧಿಕ ಮುಸ್ಲಿಮರನ್ನು ಕೊಂದು ಹಾಕಲಾಯಿತು. ಬಳಿಕ ನೂರಕ್ಕೂ ಅಧಿಕ ಮುಸ್ಲಿಮರನ್ನು ಗಲಭೆ ಸಂಚಿನಲ್ಲಿ ಬಂಧಿಸಲಾಯಿತು. ದಾದ್ರಿಯಲ್ಲಿ ಫ್ರಿಜ್‌ನಲ್ಲಿ ಬೀಫ್ ಇದೆ ಎಂದು ವೃದ್ಧರೋರ್ವರನ್ನು ಥಳಿಸಿ ಕೊಲ್ಲಲಾಯಿತು. ಆದರೆ ಮಾಧ್ಯಮಗಳು ಚರ್ಚೆ ನಡೆಸಿದ್ದು ಕೊಲೆಯ ಬಗ್ಗೆ ಅಲ್ಲ. ಫ್ರಿಜ್‌ನಲ್ಲಿ ಇದ್ದದ್ದು ಬೀಫ್ ಹೌದೋ ಅಲ್ಲವೋ ಎನ್ನುವುದರ ಬಗ್ಗೆ. ಹಾಗೆಯೇ, ಇಲ್ಲಿ ಮುಸ್ಲಿಮ್ ವಿದ್ಯಾರ್ಥಿನಿಯರನ್ನು ಶಾಲೆ ಕಲಿಯದಂತೆ ಅವರನ್ನು ಹೊರ ಹಾಕಿ ಗೇಟಿಗೆ ಬೀಗ ಹಾಕಿರುವುದು ಚರ್ಚಿಸಬೇಕಾದ ವಿಷಯ. ಆದರೆ ಚರ್ಚೆ ನಡೆಯುತ್ತಿರುವುದು ಸ್ಕಾರ್ಫ್ ಧರಿಸಬಹುದೋ ಬೇಡವೋ ಎನ್ನುವುದರ ಬಗ್ಗೆ. ವಿದ್ಯಾರ್ಥಿನಿಯರನ್ನು ಶಾಲೆಯಿಂದ ಹೊರಹಾಕಿ ಹೊಸತೊಂದು ಅಸ್ಪಶ್ಯತೆಗೆ ಮುನ್ನುಡಿ ಬರೆದ ಪ್ರಾಂಶುಪಾಲರನ್ನು ವಜಾ ಮಾಡಬೇಕಾಗಿದ್ದ ಸರಕಾರ, ‘ಸಮವಸ್ತ್ರ ಕಡ್ಡಾಯವಲ್ಲ’ ಎಂದು ಹೇಳಿದ ಅಧಿಕಾರಿಯನ್ನೇ ವರ್ಗಾವಣೆ ಮಾಡಿದೆ. ಈ ನಾಡಿನ ಹಿರಿಯರು, ಸಾಹಿತಿಗಳು ‘ಧರ್ಮ ಸೂಕ್ಷ್ಮ’ದ ಬಗ್ಗೆ ಮಾತನಾಡುತ್ತಿದ್ದಾರೆ. ಹಿಜಾಬ್, ಮುಸ್ಲಿಮ್ ಮಹಿಳೆಯರ ಸ್ವಾತಂತ್ರ ಇತ್ಯಾದಿಗಳ ಬಗ್ಗೆ ಸ್ತ್ರೀವಾದಿಗಳು ತಮ್ಮ ಪ್ರಬಂಧ ಮಂಡಿಸುತ್ತಿದ್ದಾರೆ. ಇದೊಂದು ರೀತಿಯಲ್ಲಿ, ಹಸ್ತಿನಾವತಿಯಲ್ಲಿ ದ್ರೌಪದಿಯ ವಸ್ತ್ರಾಪಹರಣ ಗೈಯುತ್ತಿರುವಾಗ ಭೀಷ್ಮ, ದ್ರೋಣಾದಿಗಳು ಮಹಿಳೆಗೆ ರಕ್ಷಣೆ ನೀಡದೆ ಧರ್ಮ ಸೂಕ್ಷ್ಮಗಳ ಬಗ್ಗೆ ಚರ್ಚೆ ನಡೆಸಿದಂತೆ ಆಗಿದೆ.

ಇಂದು ಸರಕಾರಿ ಶಾಲೆಗಳಿಗೆ ಬೇಕಾಗಿರುವುದು ಶಿಕ್ಷಕರು. ಅತ್ಯುತ್ತಮ ಕಟ್ಟಡ. ಮೂಲಭೂತ ಸೌಕರ್ಯಗಳು. ಕೊರೋನ ಮತ್ತು ಲಾಕ್‌ಡೌನ್‌ನಿಂದ ಅಸ್ತವ್ಯಸ್ತಗೊಂಡಿರುವ ಶಿಕ್ಷಣ ವ್ಯವಸ್ಥೆಯ ಸುಧಾರಣೆ. ಹಾಗೆಯೇ ಇಂಗ್ಲಿಷ್ ಮಾಧ್ಯಮಗಳಿಗೆ ಸ್ಪರ್ಧಿಸಲು ಸಾಧ್ಯವಾಗದೆ ಒಂದೊಂದಾಗಿ ಮುಚ್ಚಲ್ಪಡುತ್ತಿರುವ ಸರಕಾರಿ ಶಾಲೆಗಳ ರಕ್ಷಣೆ. ಈ ಎಲ್ಲ ಘಟನೆಗಳಿಂದ ಈ ನಾಡಿನ ಶಿಕ್ಷಣ ವ್ಯವಸ್ಥೆ ಮತ್ತು ಶಿಕ್ಷಣ ಸಚಿವರು ಬೆತ್ತಲೆಯಾಗಿದ್ದಾರೆ. ವಿದ್ಯಾರ್ಥಿಗಳ ಸಮವಸ್ತ್ರವನ್ನು ಮುಂದಿಟ್ಟು ತಮ್ಮ ಮಾನವನ್ನು ರಕ್ಷಿಸಿಕೊಳ್ಳುವುದು ಸಾಧ್ಯವಿಲ್ಲ ಎನ್ನುವುದನ್ನು ಅವರು ಇನ್ನಾದರೂ ಅರ್ಥ ಮಾಡಿಕೊಳ್ಳಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News