ಮಂಗಳ ಗೃಹದಿಂದ ಕಲ್ಲು ಮಣ್ಣಿನ ಸ್ಯಾಂಪಲ್ ತರುವ ಯೋಜನೆಯ ಗುತ್ತಿಗೆ ಪಡೆದ ಅಮೆರಿಕದ ಸಂಸ್ಥೆ

Update: 2022-02-08 18:24 GMT

ವಾಷಿಂಗ್ಟನ್, ಫೆ.8: 2030ರಲ್ಲಿ ಮಂಗಳ ಗೃಹದಿಂದ ಕಲ್ಲಿನ ಮಾದರಿಗಳನ್ನು ಭೂಮಿಗೆ ತರುವ ನಾಸಾ (ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ)ದ 

ಕಾರ್ಯಕ್ರಮಕ್ಕೆ ಸೂಕ್ತವಾದ ರಾಕೆಟ್ಗಳನ್ನು ನಿರ್ಮಿಸುವ ಗುತ್ತಿಗೆಯನ್ನು ಅಮೆರಿಕದ ಸಂಸ್ಥೆ ಪಡೆಯಲು ಯಶಸ್ವಿಯಾಗಿದೆ ಎಂದು ಮೂಲಗಳು ಹೇಳಿವೆ. ಮತ್ತೊಂದು ಗೃಹದಿಂದ ಮಂಗಳನತ್ತ ಹಾರಿ ಅಲ್ಲಿಂದ ಕಲ್ಲು, ಮಣ್ಣು ಮತ್ತು ವಾತಾವರಣದ ಮಾದರಿಯನ್ನು ಸಂಗ್ರಹಿಸಿ ಭೂಮಿಗೆ ತರುವ ಮೊತ್ತ ಮೊದಲ ರಾಕೆಟ್ ಆಗಿ ಲಾಕಿಡ್ ಮಾರ್ಟಿನ್ ಅವರ ಬಾಹ್ಯಾಕಾಶ ಸಂಸ್ಥೆಯ ಸಣ್ಣ, ಲಘುತೂಕದ ರಾಕೆಟ್ ದಾಖಲೆಗೆ ಸೇರಲಿದೆ .

 194 ಮಿಲಿಯನ್ ಡಾಲರ್ ಮೊತ್ತದ ಯೋಜನೆ ಇದಾಗಲಿದೆ ಎಂದು ನಾಸಾದ ಹೇಳಿಕೆ ತಿಳಿಸಿದೆ. ಮಂಗಳ ಗೃಹದಲ್ಲಿ ಪ್ರಾಚೀನ ಜೀವನದ ಕುರುಹುಗಳನ್ನು ಕಂಡುಹಿಡಿಯುವುದು ಈ ಯೋಜನೆಯ ಉದ್ದೇಶವಾಗಿದೆ. ಒಂದು ವರ್ಷದ ಹಿಂದೆ ಮಂಗಳ ಗೃಹ ತಲುಪಿರುವ ನಾಸಾದ ರೋವರ್ ನೌಕೆ ಅಲ್ಲಿ ವಿವಿಧ ಪರೀಕ್ಷೆಗಳನ್ನು ನಡೆಸುತ್ತಿದೆ. ಆದರೆ, ಅಲ್ಲಿಂದ ಮಾದರಿಗಳನ್ನು ಭೂಮಿಗೆ ತಂದು ಇಲ್ಲಿರುವ ಅತ್ಯಾಧುನಿಕ ಪ್ರಯೋಗಾಲಯದಲ್ಲಿ ಪರೀಕ್ಷೆ ನಡೆಸುವ ಯೋಜನೆ ರೂಪಿಸಲಾಗಿದೆ ಎಂದು ನಾಸಾದ ವಿಜ್ಞಾನ ವಿಭಾಗದ ಸಹಾಯಕ ನಿರ್ವಾಹಕ ಥಾಮಸ್ ಝರ್ಬುಚೆನ್ ಹೇಳಿದ್ದಾರೆ. 2026ರಲ್ಲಿ ಮತ್ತೊಂದು ರೋವರ್ ನೌಕೆಯನ್ನು ಹೊತ್ತ ಮಿನಿ ರಾಕೆಟ್ ಅನ್ನು ಮಂಗಳನತ್ತ ರವಾನಿಸಲಾಗುವುದು. ರೋವರ್ ನೌಕೆ ಮಂಗಳ ಗೃಹದಲ್ಲಿ ಉಳಿದಿರುವ ಸ್ಯಾಂಪಲ್ಗಳನ್ನು ಸಂಗ್ರಹಿಸಿ ಮಿನಿ ರಾಕೆಟ್ನಲ್ಲಿ ಇರಿಸುತ್ತದೆ. ಅಲ್ಲಿಂದ ಟೇಕ್ಆಫ್ ಆಗುವ ಮಿನಿ ನೌಕೆ ಮಂಗಳನ ಸುತ್ತದ ಕಕ್ಷೆಗೆ ಬಂದಾಗ, ಅಲ್ಲಿಗೆ ರವಾನಿಸುವ ಮತ್ತೊಂದು ರಾಕೆಟ್, ಈ ಮಿನಿ ರಾಕೆಟ್ ಅನ್ನು ಸೆಳೆದುಕೊಂಡು ತನ್ನೊಂದಿಗೆ ಭೂಮಿಗೆ ತರಲಿದೆ ಎಂದು ಥಾಮಸ್ ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News