ಆಫ್ರಿಕಾ: ಬರಗಾಲದಿಂದ 1.5 ಮಿಲಿಯನ್ ಗೂ ಅಧಿಕ ಜಾನುವಾರುಗಳ ಸಾವು ; ವಿಶ್ವಸಂಸ್ಥೆ

Update: 2022-02-15 18:09 GMT

ವಿಶ್ವಸಂಸ್ಥೆ,ಫೆ.15: ಆಫ್ರಿಕಾದ ಕೋಡು( ಹಾರ್ನ್ ಆಫ್ ಆಫ್ರಿಕಾ) ಎಂದು ಕರೆಸಿಕೊಳ್ಳುವ ಸೊಮಾಲಿ ಪರ್ಯಾಯ ದ್ವೀಪಸಮೂಹದಲ್ಲಿನ ಬರಗಾಲದಿಂದ 1.5 ಮಿಲಿಯನ್ಗೂ ಅಧಿಕ ಜಾನುವಾರುಗಳು ಸಾವನ್ನಪ್ಪಿದ್ದು ದವಸ ಧಾನ್ಯ ಉತ್ಪಾದನೆ ಕನಿಷ್ಟ ಮಟ್ಟಕ್ಕೆ ತಲುಪಿದೆ ಎಂದು ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಘಟನೆ(ಎಫ್ಒಎ)ಯ ಉನ್ನತ ಅಧಿಕಾರಿ ಹೇಳಿದ್ದಾರೆ.

 ಈ ಪ್ರದೇಶದ ಜನತೆ ದುರಂತದ ಅಂಚಿಗೆ ತಲುಪಿದ್ದು ತುರ್ತು ಪರಿಹಾರ ಕಾರ್ಯ ಕೈಗೊಳ್ಳಲು ಅತ್ಯಲ್ಪ ಅವಕಾಶ ಉಳಿದಿದೆ. ಮಾರ್ಚ್ನಿಂದ ಮೇ ತಿಂಗಳಿನವರೆಗೆ ಈ ಪ್ರದೇಶದಲ್ಲಿ ಸುರಿಯುವ ಮಳೆ ಉತ್ತಮ ಪ್ರಮಾಣದಲ್ಲಿರುವುದು ಮತ್ತು ಜೂನ್ವರೆಗೆ ನೆರವು ಒದಗಿಸಲು ಎಫ್ಒಎಗೆ ಅತ್ಯಗತ್ಯವಿರುವ 130 ಮಿಲಿಯನ್ ಡಾಲರ್ ಮೊತ್ತದ ನೆರವು ಲಭಿಸುವುದು ಈಗಿನ ಪ್ರಮುಖ ಅಂಶವಾಗಿದೆ ಎಂದು ಎಫ್ಒಎದ ತುರ್ತು ಸಂದರ್ಭ ವಿಭಾಗದ ನಿರ್ದೇಶಕ ರೀನ್ ಪಾಲ್ಸನ್ ಹೇಳಿದ್ದಾರೆ.
ಸೊಮಾಲಿ ಪರ್ಯಾಯ ದ್ವೀಪಕ್ಕೆ ಸೇರಿದ ಸೊಮಾಲಿಯಾ, ಇಥಿಯೋಪಿಯಾ ಮತ್ತು ಕೆನ್ಯಾದಲ್ಲಿ ಅಕ್ಟೋಬರ್-ಡಿಸೆಂಬರ್ ಅವಧಿಯಲ್ಲಿ ಸುರಿಯುವ ಮಳೆ ಈ ಬಾರಿ ಅತ್ಯಲ್ಪ ಪ್ರಮಾಣದಲ್ಲಿದ್ದರಿಂದ ಸತತ 3ನೇ ವರ್ಷವೂ ಸರಾಸರಿ ಮಟ್ಟಕ್ಕಿಂತ ಕಡಿಮೆ ಮಳೆಯಾಗಿದೆ. ಇದು ಬಡವರ ಹಾಗೂ ಜಾನುವಾರುಗಳ ಮೇಲೆ ತೀವ್ರ ಪರಿಣಾಮ ಬೀರಿದೆ. ದಕ್ಷಿಣ ಸೊಮಾಲಿಯಾದಲ್ಲಿ ದವಸ ಧಾನ್ಯದ ಉತ್ಪಾದನೆಯಲ್ಲಿ 58% ಕುಸಿತವಾಗಿದ್ದು , ಕೆನ್ಯಾದ ಕರಾವಳಿ ಪ್ರದೇಶದಲ್ಲಿ ಬೆಳೆ ಉತ್ಪಾದನೆ ಸರಾಸರಿಗಿಂತ 70%ದಷ್ಟು ಕಡಿಮೆಯಾಗಲಿದೆ. ಮಳೆ ಸುರಿದು ಬೆಳೆ ಉತ್ಪಾದನೆ ಆರಂಭವಾಗುವವರೆಗೆ ಜನತೆಗೆ ಅಗತ್ಯ ವಸ್ತುಗಳ ಖರೀದಿಗೆ , ಜಾನುವಾರುಗಳ ಜೀವ ಉಳಿಸಲು, ರೈತರಿಗೆ ಕೃಷಿ ಕಾರ್ಯ ಆರಂಭಿಸಲು 130 ಮಿಲಿಯನ್ ಡಾಲರ್ ನೆರವಿನ ಅಗತ್ಯವಿದೆ ಎಂದು ಪಾಲ್ಸನ್ ಹೇಳಿದ್ದಾರೆ. ರೋಮ್ನಿಂದ ವರ್ಚುವಲ್ ವೇದಿಕೆಯ ಮೂಲಕ ನಡೆದ ಸುದ್ಧಿಗೋಷ್ಟಿಯಲ್ಲಿ ಅವರು ಮಾತನಾಡಿದರು.
 ಸೊಮಾಲಿ ಪರ್ಯಾಯ ದ್ವೀಪಕ್ಕೆ ಭೇಟಿ ನೀಡಿದಾಗ ಜಾನುವಾರುಗಳು ಹಾಗೂ ರೈತರು ಜತೆಯಲ್ಲೇ ಸಾವನ್ನಪ್ಪಿದ್ದ ಹಲವು ಪ್ರಕರಣಗಳನ್ನು ಕಂಡಿದ್ದೇನೆ. ಕೆನ್ಯಾ ದೇಶದಲ್ಲೇ ಕಳೆದ ವರ್ಷದ ಅಂತಿಮ ಭಾಗದಲ್ಲಿ ಬರಗಾಲದಿಂದಾಗಿ 1.4 ಮಿಲಿಯನ್ ಜಾನುವಾರು ಮೃತಪಟ್ಟಿದ್ದರೆ, ದಕ್ಷಿಣ ಇಥಿಯೋಪಿಯಾದಲ್ಲಿ ಸುಮಾರು 2,40,000 ಜಾನುವಾರುಗಳು ಸಾವನ್ನಪ್ಪಿವೆ ಎಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News