ಪಂಜಾಬ್: ರೈಲು ರಸ್ತೆ ಕ್ರಾಸಿಂಗ್ ಬಂದ್; ಮತದಾರರಿಂದ ಮತದಾನ ಬಹಿಷ್ಕಾರ

Update: 2022-02-20 19:01 GMT

ಹೋಶಿಯಾರ್ಪುರ, ಫೆ. 20: ರೈಲು ರಸ್ತೆ ಕ್ರಾಸಿಂಗ್ ಅನ್ನು ಮುಚ್ಚಿರುವ ಬಗ್ಗೆ ಅಸಮಾಧಾನಗೊಂಡಿರುವ ಗರಶಂಕರ್ ವಿಧಾನ ಸಭಾ ಕ್ಷೇತ್ರದ ಬಸಿಯಾಲ ಗ್ರಾಮದ ಮತದಾರರು ರವಿವಾರ ಮತದಾನ ಬಹಿಷ್ಕರಿಸಿದ್ದಾರೆ. ಆಡಳಿತದ ಪ್ರಯತ್ನ ಹೊರತಾಗಿಯೂ ಮೊದಲು ತಮ್ಮ ಗ್ರಾಮದ ಸಮೀಪದ ಜಲಾಂಧರ್-ಎಸ್ಬಿಎಸ್ ನಗರ್-ಜೈಜೋನ್ ರೈಲು ಹಳಿಯಲ್ಲಿರುವ ರೈಲು ಮಾರ್ಗವನ್ನು ತೆರೆಯುವಂತೆ ಆಗ್ರಹಿಸಿ ಮತದಾರರು ಮತದಾನ ಬಹಿಷ್ಕರಿಸಿದರು. ಈ ಕ್ರಾಸಿಂಗ್ ಅನ್ನು ಮೂರು ವರ್ಷಗಳ ಹಿಂದೆಯೇ ಮುಚ್ಚಲಾಗಿದೆ. ಇದರಿಂದ ಆನಂದಪುರ ಲೋಕಸಭಾ ಕ್ಷೇತ್ರದ ಅಡಿಯಲ್ಲಿ ಬರುವ ಬಸಿಯಾಲ, ಬಾಕಪುರ ಗುರು, ರಸೂಲ್ಪುರ, ಚೌಹ್ರಾ, ಡಿನೋವಲ್ ಕಲನ್ ಹಾಗೂ ದೋಗರ್ಪುರ ಗ್ರಾಮಗಳ ಜನರಿಗೆ ತೊಂದರೆ ಉಂಟಾಗಿದೆ ಎಂದು ಬಸಿಯಾಲ ಗ್ರಾಮದ ಸರಪಂಚ್ ಹರ್ದೇವ್ ಸಿಂಗ್ ತಿಳಿಸಿದ್ದಾರೆ. ಗೇಟ್ ಅನ್ನು ಮುಚ್ಚಿರುವುದರಿಂದ ಪಾದಚಾರಿಗಳು ಗ್ರಾಮ ತಲುಪಲು 2 ಕಿ.ಮೀ. ಪ್ರಯಾಣಿಸಬೇಕಾಗುತ್ತದೆ. ಈ ಪರ್ಯಾಯ ರಸ್ತೆಯಲ್ಲಿ ಹಲವು ಕಡಿದಾದ ತಿರುವು ಇದೆ. ಟ್ರಾಕ್ಟರ್-ಟ್ರೈಲರ್ಸ್ ಹಾಗೂ ಶಾಲಾ ಬಸ್ಗಳನ್ನು ಈ ರಸ್ತೆಯಲ್ಲಿ ಚಲಾಯಿಸುವುದು ಕಷ್ಟಕರ ಎಂದು ಅವರು ಹೇಳಿದ್ದಾರೆ. ಇದಕ್ಕೆ ಸಂಬಂಧಿಸಿ ಸಂಸದ ಮನೀಶ್ ತಿವಾರಿ, ಫಿರೋಝ್ಪುರ ರೈಲ್ವೆ ವಿಭಾಗದ ಪ್ರಾಧಿಕಾರ ಹಾಗೂ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದೇವೆ. ಆದರೆ, ಯಾರೂ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅವರು ಹೇಳಿದರು. ರೈಲ್ವೆ ಗಾರ್ಡ್ ವೇತನ ಹಾಗೂ ರೈಲು ರಸ್ತೆ ತೆರೆಯುವುದಕ್ಕೆ ಇರುವ ಇತರ ವೆಚ್ಚವನ್ನು ತೊಂದರೆಗೊಳಗಾದ ಪಂಚಾಯತ್ಗಳು ಭರಿಸಲಿವೆ ಎಂದು ಕೂಡ ರೈಲ್ವೆ ಪ್ರಾಧಿಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಸಿಂಗ್ ಹೇಳಿದ್ದಾರೆ.‌

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News