ರಾಜ್ಯದಲ್ಲಿ 3 ವರ್ಷದಲ್ಲಿ 63 ಕೋಮುಗಲಭೆ ಪ್ರಕರಣಗಳು: ಶಿಕ್ಷೆ ಶೂನ್ಯ!
ಬೆಂಗಳೂರು: ರಾಜ್ಯದಲ್ಲಿ ಕಳೆದ ಮೂರು ವರ್ಷಗಳಲ್ಲಿ 63 ಕೋಮುಗಲಭೆ ಪ್ರಕರಣಗಳು ಸಂಭವಿಸಿದ್ದು, ಇದುವರೆಗೆ ಯಾವ ಪ್ರಕರಣದಲ್ಲೂ ಆರೋಪಿಗಳಿಗೆ ಶಿಕ್ಷೆಯಾಗಿಲ್ಲ ಎಂದು ಗೃಹಸಚಿವ ಅರಗ ಜ್ಞಾನೇಂದ್ರ, ರಾಜ್ಯ ವಿಧಾನಸಭೆಯಲ್ಲಿ ನೀಡಿರುವ ಲಿಖಿತ ಉತ್ತರದಲ್ಲಿ ಸ್ಪಷ್ಟಪಡಿಸಿದ್ದಾರೆ ಎಂದು deccanherald.com ವರದಿ ಮಾಡಿದೆ.
ಚಿತ್ತಾಪುರದ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಅವರ ಪ್ರಶ್ನೆಗೆ ಉತ್ತರವಾಗಿ ಜ್ಞಾನೇಂದ್ರ ಈ ಅಂಕಿ ಅಂಶ ನೀಡಿದ್ದಾರೆ. ಬಹುತೇಕ ಪ್ರಕರಣಗಳು ವಿಚಾರಣೆಯ ಹಂತದಲ್ಲಿವೆ ಅಥವಾ ನ್ಯಾಯಾಲಯದ ಮುಂದಿವೆ. ಕೋಮುಗಲಭೆ ವಿಚಾರದಲ್ಲಿ ಇದುವರೆಗೆ ಯಾವ ಆರೋಪಿಗೂ ಶಿಕ್ಷೆ ಆಗಿಲ್ಲ ಎನ್ನುವುದನ್ನು ಈ ಅಂಕಿ ಅಂಶಗಳು ಹೇಳುತ್ತವೆ ಎಂದು ವರದಿಯಾಗಿದೆ.
ಶಿವಮೊಗ್ಗದಲ್ಲಿ ನಡೆದ ಬಜರಂಗದಳ ಕಾರ್ಯಕರ್ತ ಹರ್ಷ ಸಾವಿಗೆ ಕಾರಣರಾದವರನ್ನು ಶಿಕ್ಷಿಸಲಾಗುವುದು ಎಂದು ಸರ್ಕಾರ ಹೇಳಿಕೆ ನೀಡಿರುವ ಬೆನ್ನಲ್ಲೇ ಈ ಅಂಶ ಬಹಿರಂಗವಾಗಿದೆ. ಅಂಕಿ ಅಂಶಗಳ ಪ್ರಕಾರ, 2019ರಲ್ಲಿ 12, 2020ರಲ್ಲಿ 21 ಮತ್ತು 2021ರಲ್ಲಿ 23 ಕೋಮುಗಲಭೆ ಪ್ರಕರಣಗಳು ಸಂಭವಿಸಿವೆ ಎಂದು deccanherald.com ವರದಿ ಮಾಡಿದೆ.
ಈ ವರ್ಷದ ಮೊದಲ ಎರಡು ತಿಂಗಳಲ್ಲಿ ಇಂಥ ಏಳು ಪ್ರಕರಣಗಳು ವರದಿಯಾಗಿವೆ. ಕಳೆದ ಮೂರು ವರ್ಷಗಳಲ್ಲಿ ಬಹುತೇಕ ಪ್ರಕರಣಗಳು (12) ಶಿವಮೊಗ್ಗ ವಿಭಾಗದಿಂದ ವರದಿಯಾಗಿವೆ ಎಂದು ಸರ್ಕಾರ ಹೇಳಿದೆ.
ಈ ಪ್ರಕರಣಗಳಲ್ಲಿ ಕಾನೂನಾತ್ಮಕ ಸವಾಲುಗಳು ಇವೆ ಎಂದು ಹಿರಿಯ ವಕೀಲ ಬಿ.ಟಿ.ವೆಂಕಟೇಶ್ ಅಭಿಪ್ರಾಯಪಡುತ್ತಾರೆ. ಸಾಮಾನ್ಯವಾಗಿ ರಾಜಕಾರಣಿಗಳ ಹಸ್ತಕ್ಷೇಪವು ಅಭಿಯೋಜನೆಯ ದಿಕ್ಕು ತಪ್ಪಿಸುತ್ತದೆ ಎಂದು ಅವರು ಹೇಳಿದ್ದಾರೆ.
"ಸಾಕ್ಷಿಗಳಿಲ್ಲದೇ ಶಿಕ್ಷೆ ಸಾಧ್ಯವಿಲ್ಲ. ಹಲವು ಬಾರಿ ಸಾಕ್ಷಿಗಳು ಅಭಿಯೋಜನೆಗೆ ವ್ಯತಿರಿಕ್ತ ಹೇಳಿಕೆ ನೀಡುತ್ತಾರೆ ಅಥವಾ ಸಾಕ್ಷಿ ನೀಡಲು ಬರುವುದಿಲ್ಲ. ಇದರಲ್ಲಿ ರಾಜಕಾರಣಿಗಳ ಹಸ್ತಕ್ಷೇಪವೂ ಇರುತ್ತದೆ. ಸಾಕ್ಷಿಗಳು ಸಾಕ್ಷಿ ಹೇಳದಂತೆ ತಡೆಯಲು ಅವರು ಸಮರ್ಥರಾಗಿರುತ್ತಾರೆ. ಹಲವು ವರ್ಷಗಳಿಂದ ಇದು ನಡೆಯುತ್ತಿದೆ" ಎನ್ನುವುದು ಅವರು ಹೇಳಿದ್ದಾರೆ.
ಇಂಥ ವಿಚಾರದಲ್ಲಿ ಸರ್ಕಾರದ ಪರ ವಾದ ಮಂಡಿಸುವ ವಕೀಲರಲ್ಲಿ ಹೆಚ್ಚಿನ ಉತ್ತರದಾಯಿತ್ವದ ಅಗತ್ಯತೆ ಇದೆ ಎಂದು ಕಾಂಗ್ರೆಸ್ ಮುಖಂಡ ಯು.ಟಿ.ಖಾದರ್ ಹೇಳಿದ್ದಾರೆ.
ಇದನ್ನೂ ಓದಿ: ರಾಜ್ಯದಲ್ಲಿ ಖಾಸಗಿ ಶಾಲಾ ಮಕ್ಕಳ ಪೋಷಕರಿಗೂ ವಸ್ತ್ರಸಂಹಿತೆ!