ರಾಜ್ಯದಲ್ಲಿ ಖಾಸಗಿ ಶಾಲಾ ಮಕ್ಕಳ ಪೋಷಕರಿಗೂ ವಸ್ತ್ರಸಂಹಿತೆ!

ಸಾಂದರ್ಭಿಕ ಚಿತ್ರ (Photo credit: mid-day.com)
ಬೆಂಗಳೂರು: ಹಿಜಾಬ್ ಪ್ರಕರಣದ ನಡುವೆಯೇ, ರಾಜ್ಯದ ಕೆಲ ಖಾಸಗಿ ಅನುದಾನರಹಿತ ಶಿಕ್ಷಣ ಸಂಸ್ಥೆಗಳು ಶಾಲಾ ಮಕ್ಕಳ ಪೋಷಕರಿಗೆ ವಸ್ತ್ರಸಂಹಿತೆ ಜಾರಿಗೆ ತಂದಿವೆ ಎಂದು deccanherald.com ವರದಿ ಮಾಡಿದೆ.
ಮಕ್ಕಳನ್ನು ಶಾಲೆಗೆ ಕರೆ ತರುವ ವೇಳೆ ಮತ್ತು ಶಾಲೆಯಿಂದ ಕರೆದೊಯ್ಯಲು ಆಗಮಿಸುವ ವೇಳೆ ಸಾಮಾನ್ಯವಾಗಿ ಪೋಷಕರು ಅನೌಪಚಾರಿಕ ದಿರಿಸಿನಲ್ಲಿ ಬರುತ್ತಾರೆ. ಆದರೆ ಕೆಲ ಖಾಸಗಿ ಅನುದಾನರಹಿತ ಶಾಲೆಗಳು ಪೋಷಕರ ಮೇಲೂ ವಸ್ತ್ರಸಂಹಿತೆ ವಿಧಿಸಿವೆ. ಶಾಲೆಗಳಿಂದ ಕಳುಹಿಸಿರುವ ಸೂಚನೆಗಳ ಪ್ರಕಾರ, ಶಾಲೆಗಳಿಗೆ ಬರುವಾಗ ಬರ್ಮುಡಾ, ಚೆಡ್ಡಿ, ಕ್ರೀಡಾ ದಿರಿಸು, ಮನೆಯಲ್ಲಿ ತೊಡುವ ವಸ್ತ್ರ, ಸ್ಲೀವ್ಲೆಸ್ ಮತ್ತು ಟ್ರ್ಯಾಕ್ ಪ್ಯಾಂಟ್ ಇತ್ಯಾದಿಗಳನ್ನು ಧರಿಸುವಂತಿಲ್ಲ ಎಂದು ವರದಿಯಾಗಿದೆ.
ಬೆಂಗಳೂರು ದಕ್ಷಿಣದ ಪ್ರಾಥಮಿಕ ಶಾಲೆಯೊಂದರ ಇಂಥ ಸೂಚನೆ ಪ್ರಕಾರ, "ಶಾಲೆಗೆ ಭೇಟಿ ನೀಡುವ ವೇಳೆ ಫಾರ್ಮಲ್/ ಸೆಮಿ ಫಾರ್ಮಲ್ ವಸ್ತ್ರಸಂಹಿತೆಯನ್ನು ಪಾಲಿಸಬೇಕು. ಚಡ್ಡಿ, ಬರ್ಮುಡಾ, ಸ್ಲೀವ್ಲೆಸ್, ಟ್ರ್ಯಾಕ್ ಪ್ಯಾಂಟ್, ಕ್ರೀಡಾ ದಿರಿಸು, ನೈಟ್ವೇರ್ ಮತ್ತು ಮನೆಯಲ್ಲಿ ಧರಿಸುವ ವಸ್ತ್ರಗಳನ್ನು ತೊಡುವಂತಿಲ್ಲ".
ಶಾಲೆಗೆ ಮಕ್ಕಳನ್ನು ಬಿಡಲು ಬರುವ ವೇಳೆ ಹಾಗೂ ಶಾಲೆಯಿಂದ ಕರೆದೊಯ್ಯಲು ಬರುವ ವೇಳೆ ಪೋಷಕರು/ ಪಾಲಕರು ತೊಡುವ ಉಡುಗೆ ತೊಡುಗೆಗಳಿಂದಾಗಿ ಇಂಥ ವಸ್ತ್ರಸಂಹಿತೆ ಸೂಚಿಸಲಾಗಿದೆ" ಎಂದು ಶಾಸಗಿ ಶಾಲೆ ಆಡಳಿತ ಮಂಡಳಿಯ ಪ್ರತಿನಿಧಿಗಳು ಮತ್ತು ಪ್ರಾಚಾರ್ಯರು ಹೇಳಿದ್ದಾರೆ.
"ನಮ್ಮ ಶಿಕ್ಷಕಿಯರಿಗೆ, ಸಿಬ್ಬಂದಿಗೆ ಹಾಗೂ ಇತರ ಕೆಲ ಪೋಷಕರಿಗೂ ಮುಜುಗರವಾಗುವಂತಿರುತ್ತದೆ ಎಂದರೆ ನೀವು ನಂಬಲಾರಿರಿ. ಕೆಲವರಂತೂ ರಾತ್ರಿ ಉಡುಗೆಯಲ್ಲೇ ಬರುತ್ತಾರೆ" ಎಂದು ಜಯನಗರದ ಖಾಸಗಿ ಶಾಲೆಯ ಪ್ರಾಚಾರ್ಯರೊಬ್ಬರು ಹೇಳುತ್ತಾರೆ. ಈ ನಡೆಗೆ ಪೋಷಕರಿಂದ ಸಮ್ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಉಕ್ರೇನ್ ಸಂಘರ್ಷ: ಭಾರತಕ್ಕೆ ತೈಲ ಬೆಲೆಯದ್ದೇ ಚಿಂತೆ







