ತೆಲಂಗಾಣ: ತರಬೇತಿ ನಿರತ ವಿಮಾನ ಪತನ; ಮಹಿಳಾ ಪೈಲಟ್ ಸಾವು

Update: 2022-02-26 13:45 GMT
photo: twitter

ನಲ್ಗೊಂಡ: ತರಬೇತಿ ನಿರತ ವಿಮಾನವೊಂದು ತೆಲಂಗಾಣದ ನಲ್ಗೊಂಡ ಜಿಲ್ಲೆಯಲ್ಲಿ ಪತನವಾಗಿದೆ. ಖಾಸಗಿ ವಿಮಾನಯಾನ ಅಕಾಡೆಮಿಗೆ ಸೇರಿದ ವಿಮಾನವಾಗಿದ್ದು, ಅಪಘಾತದಲ್ಲಿ ಮಹಿಳಾ ಟ್ರೈನಿ ಪೈಲಟ್ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಚೆನ್ನೈ ಮೂಲದ ಮಹಿಮಾ ಗಜರಾಜ್ (29) ಅಪಘಾತದಲ್ಲಿ ಮೃತಪಟ್ಟವರು. ಅವರು ಹೈದರಾಬಾದ್ ಮೂಲದ ಫ್ಲೈಟೆಕ್ ಏವಿಯೇಷನ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದರು.

ಈ ತರಬೇತಿ ವಿಮಾನವು  ನಲ್ಗೊಂಡ ಜಿಲ್ಲೆಯ ಪೆದ್ದಾಪುರ ಮಂಡಲ, ತುಂಗತ್ತುರಿ ಸಮೀಪ ಪತನಗೊಂಡಿದ್ದು, ನೆಲಕ್ಕೆ ಉರುಳುವ ಮೊದಲು ವಿದ್ಯುತ್‌ ಕಂಭಕ್ಕೆ ಡಿಕ್ಕಿ ಹೊಡೆದಿದೆ ಎಂದು ವರದಿ ತಿಳಿಸಿದೆ.

ನೆಲದ ಮೇಲೆ ಬಿದ್ದ ತಕ್ಷಣ ವಿಮಾನಕ್ಕೆ ಬೆಂಕಿ ಆವರಿಸಿದ್ದು, ಕೃಷಿ ಜಮೀನುಗಳ ಬಳಿ ಹಾದು ಹೋಗುವ ಹೈಟೆನ್ಷನ್​ ವಿದ್ಯುತ್​ ಕಂಬಗಳಿಗೆ ವಿಮಾನ ತಾಗಿ ಅಪಘಾತವಾಗಿರಹುದು ಎಂದು ಸ್ಥಳೀಯ ಪೊಲೀಸರು ಶಂಕಿಸಿದ್ದಾರೆ.  

ಪತನಗೊಂಡ ತರಬೇತಿ ವಿಮಾನವು ನೆರೆಯ ಆಂಧ್ರಪ್ರದೇಶದಿಂದ ಹಾರಿ ಬಂದಿರುವುದಾಗಿ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆಂದು ndtv.com ವರದಿ ಮಾಡಿದೆ.

ಈ ಕುರಿತು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾಧಿತ್ಯ ಸಿಂಧ್ಯಾ ಟ್ವೀಟ್‌ ಮಾಡಿದ್ದು, “ತೆಲಂಗಾಣದ ನಲ್ಗೊಂಡದಲ್ಲಿ ತರಬೇತಿ ವಿಮಾನದ ದುರಂತದ ಬಗ್ಗೆ ಕೇಳಿ ಆಘಾತವಾಯಿತು. ತನಿಖಾ ತಂಡ ಸ್ಥಳಕ್ಕೆ ಧಾವಿಸಿದೆ. ದುರದೃಷ್ಟವಶಾತ್, ನಾವು ವಿದ್ಯಾರ್ಥಿ ಪೈಲಟ್ ಅನ್ನು ಕಳೆದುಕೊಂಡಿದ್ದೇವೆ. ಅಗಲಿದ ಕುಟುಂಬ ಮತ್ತು ಪ್ರೀತಿಪಾತ್ರರಿಗೆ ನನ್ನ ಹೃತ್ಪೂರ್ವಕ ಸಂತಾಪ.” ಎಂದು ಅವರು ಟ್ವೀಟ್‌ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News