ಉಕ್ರೇನ್‌ನಿಂದ ಭಾರತೀಯರ ಸುರಕ್ಷಿತ ತೆರವಿಗೆ ಕ್ರಮ: ಪ್ರಧಾನಿ ಮೋದಿಗೆ ರಶ್ಯಾ ಅಧ್ಯಕ್ಷ ಪುಟಿನ್ ಭರವಸೆ

Update: 2022-03-03 18:42 GMT

ಮಾಸ್ಕೊ, ಮಾ.3: ಉಕ್ರೇನ್ ನಗರ ಖಾರ್ಕಿವ್ ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳನ್ನು ಅಲ್ಲಿಂದ ತಕ್ಷಣ ತೆರವುಗೊಳಿಸುವ ವಿಷಯದಲ್ಲಿ ರಶ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಭಾರತದ ಪ್ರಧಾನಿ ನರೇಂದ್ರ ಮೋದಿ ಜತೆ ಮಾತುಕತೆ ನಡೆಸಿದ್ದಾರೆ ಎಂದು ರಶ್ಯಾ ಅಧ್ಯಕ್ಷರ ಕಚೇರಿಯ ಹೇಳಿಕೆ ತಿಳಿಸಿದೆ.

ಸಂಘರ್ಷ ಪೀಡಿತ ಪ್ರದೇಶದಲ್ಲಿರುವ ಭಾರತೀಯ ಪ್ರಜೆಗಳು ತಮ್ಮ ತಾಯ್ನಡಿಗೆ ಸುರಕ್ಷಿತವಾಗಿ ಮರಳುವುದನ್ನು ಖಾತರಿ ಪಡಿಸುವಂತೆ ಸೇನೆಗೆ ಸೂಚಿಸಿರುವುದಾಗಿ ಮೋದಿಗೆ ವೀಡಿಯೊ ಕರೆ ಮಾಡಿದ ಪುಟಿನ್ ಹೇಳಿದ್ದಾರೆ. ಮಾನವೀಯ ಕಾರಿಡಾರ್ ಮೂಲಕ ಖಾರ್ಕಿವ್‌ನಲ್ಲಿನ ಭಾರತೀಯ ವಿದ್ಯಾರ್ಥಿಗಳ ತಂಡವನ್ನು ತುರ್ತು ತೆರವುಗೊಳಿಸಲು ಕ್ರಮ ಕೈಗೊಳ್ಳುವುದಾಗಿ ಪುಟಿನ್ ಭರವಸೆ ನೀಡಿದರು ಎಂದು ಹೇಳಿಕೆ ತಿಳಿಸಿದೆ. 

ಈ ಮಧ್ಯೆ, ಉಕ್ರೇನ್ ಅಧಿಕಾರಿಗಳು ಭಾರತೀಯ ವಿದ್ಯಾರ್ಥಿಗಳ ತಂಡವನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದಾರೆ ಎಂಬ ರಶ್ಯಾ ರಕ್ಷಣಾ ಇಲಾಖೆಯ ಹೇಳಿಕೆಯನ್ನು ಭಾರತ ನಿರಾಕರಿಸಿದೆ. ಉಕ್ರೇನ್‌ನಲ್ಲಿನ ಭಾರತೀಯರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ. ಯಾವುದೇ ವಿದ್ಯಾರ್ಥಿಯನ್ನು ಒತ್ತೆಯಾಳಾಗಿ ಇರಿಸಿಕೊಂಡಿರುವ ಬಗ್ಗೆ ಮಾಹಿತಿ ದೊರಕಿಲ್ಲ. ಖಾರ್ಕಿವ್ ನಗರದಿಂದ ಭಾರತೀಯ ವಿದ್ಯಾರ್ಥಿಗಳು ಪಶ್ಚಿಮ ಪ್ರಾಂತದತ್ತ ತೆರಳಲು ರೈಲಿನ ವ್ಯವಸ್ಥೆ ಮಾಡುವಂತೆ ಉಕ್ರೇನ್ ಅಧಿಕಾರಿಗಳ ನೆರವು ಯಾಚಿಸಿದ್ದೇವೆ ಎಂದು ಭಾರತದ ವಿದೇಶ ವ್ಯವಹಾರ ಇಲಾಖೆಯ ವಕ್ತಾರ ಅರಿಂದಮ್ ಬಾಗ್ಚಿ ಹೇಳಿದ್ದಾರೆ.

ಭಾರತೀಯ ವಿದ್ಯಾರ್ಥಿಗಳು ಪೋಲಂಡ್ ನೊಂದಿಗಿನ ಪಶ್ಚಿಮದ ಗಡಿ ಮೂಲಕ ತೆರಳುವಂತೆ ಉಕ್ರೇನ್ ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ಈ ವಲಯದಲ್ಲಿ ಸಂಘರ್ಷ ತೀವ್ರವಾಗಿದೆ ಎಂದು ರಶ್ಯಾದ ರಕ್ಷಣಾ ಇಲಾಖೆಯ ವಕ್ತಾರ ಕೊನಶೆಂಕೋವ್ ಹೇಳಿದ್ದಾರೆ. ಭಾರತೀಯ ಪ್ರಜೆಗಳನ್ನು ಸುರಕ್ಷಿತವಾಗಿ ತೆರವುಗೊಳಿಸಲು ರಶ್ಯಾದ ಸಶಸ್ತ್ರ ಪಡೆ ಎಲ್ಲಾ ಕ್ರಮ ಕೈಗೊಳ್ಳಲಿದೆ ಎಂದವರು ಹೇಳಿದ್ದಾರೆ.

ರಶ್ಯಾ ಆಕ್ರಮಣಕ್ಕೂ ಮುನ್ನ ಉಕ್ರೇನ್‌ನಲ್ಲಿ  ಸುಮಾರು 20,000 ಭಾರತೀಯರಿದ್ದರು. ಇದುವರೆಗೆ 8,000 ಮಂದಿಯನ್ನು ಸ್ಥಳಾಂತರಿಸಲಾಗಿದೆ. ಉಳಿದವರ ಸುರಕ್ಷಿತ ಸ್ಥಳಾಂತರಕ್ಕೆ ಗರಿಷ್ಟ ಪ್ರಯತ್ನ ನಡೆಸಲಾಗುತ್ತಿದೆ ಎಂದು ಭಾರತ ಹೇಳಿದೆ.

ಈ ಮಧ್ಯೆ, ಉಕ್ರೇನ್ ಆಕ್ರಮಣವನ್ನು ಅಂತ್ಯಗೊಳಿಸುವಂತೆ ವಿಶ್ವಸಂಸ್ಥೆಯಲ್ಲಿ ಆಗ್ರಹಿಸುವ ನಿರ್ಣಯದ ಮೇಲಿನ ಮತದಾನದಿಂದ ಭಾರತ ದೂರ ಉಳಿದಿದೆ. 193 ಸದಸ್ಯ ದೇಶಗಳಲ್ಲಿ 141 ದೇಶಗಳು ನಿರ್ಣಯದ ಪರ ಮತ ಚಲಾಯಿಸಿವೆ. ಎರೀಟಿಯಾ, ಉತ್ತರ ಕೊರಿಯಾ, ಸಿರಿಯಾ, ಬೆಲರುಸ್ ಮತ್ತು ರಶ್ಯಾ ನಿರ್ಣಯದ ವಿರುದ್ಧ ಮತ ಚಲಾಯಿಸಿದರೆ, ಭಾರತ, ಚೀನಾ ಸಹಿತ 35 ದೇಶಗಳು ಮತದಾನದಿಂದ ದೂರ ಉಳಿದವು ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News