"ನಾನು ಹಲವು ಬಾರಿ ದಾಳಿಗಳನ್ನು ಎದುರಿಸಿದ್ದೇನೆ, ನಾನು ಹೇಡಿಯಲ್ಲ, ಹೋರಾಟಗಾರ್ತಿ": ಮಮತಾ ಬ್ಯಾನರ್ಜಿ

Update: 2022-03-03 17:56 GMT
ಮಮತಾ ಬ್ಯಾನರ್ಜಿ (PTI)

ವಾರಣಾಸಿ: ನರೇಂದ್ರ ಮೋದಿ ಕ್ಷೇತ್ರ ವಾರಣಾಸಿಗೆ ನಾನು ಬಂದಾಗ ನನ್ನ ವಿರುದ್ಧ ನಡೆದ ಬಲಪಂಥೀಯರ ಪ್ರತಿಭಟನೆಯು ಅವರು (ಬಿಜೆಪಿ) ಅಧಿಕಾರದಿಂದ ದೂರ ಸರಿಯುವುದನ್ನು ಸೂಚಿಸುತ್ತದೆ ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಅಖಿಲೇಶ ಯಾದವ್‌ ಅವರ ಸಮಾಜವಾದಿ ಪಕ್ಷದ ಪರ ಪ್ರಚಾರಕ್ಕೆ ಆಗಮಿಸಿದ ಸಿಎಂ ಮಮತಾ, ವಾರಣಾಸಿ ಕ್ಷೇತ್ರದಲ್ಲಿ ಬಲಪಂಥೀಯ ಗುಂಪುಗಳಿಂದ ಪ್ರತಿಭಟನೆಯನ್ನು ಎದುರಿಸಿದ್ದಾರೆ.

“ನಾನು ಹಲವು ಬಾರಿ ದಾಳಿಗಳನ್ನು ಎದುರಿಸಿದ್ದೇನೆ, ದೊಣ್ಣೆಗಳಿಂದ ಹೊಡೆತ ತಿಂದಿದ್ದೇನೆ, ಆದರೆ, ಯಾವುದಕ್ಕೂ ನಾನು ತಲೆ ಬಾಗಲಿಲ್ಲ. ನಾನು ಹೇಡಿಯಲ್ಲ, ಹೋರಾಟಗಾರ್ತಿ. ವಾರಣಾಸಿಗೆ ನಾನು ತಲುಪಿದಾಗ ನನ್ನ ಮೇಲೆ ನಡೆದ ಬಿಜೆಪಿ ಕಾರ್ಯಕರ್ತರ ದಾಳಿಯು ಅವರು ಅಧಿಕಾರದಿಂದ ದೂರ ಸರಿಯುತ್ತಿರುವುದನ್ನು ಸೂಚಿಸುತ್ತದೆ” ಎಂದು ಬ್ಯಾನರ್ಜಿ ಹೇಳಿದ್ದಾರೆ. 

ಬುಧವಾರ ಸಂಜೆ, ಗಂಗಾ ಆರತಿ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಮಮತಾ ವಿರುದ್ಧ ಹಿಂದೂ ಯುವ ವಾಹಿನಿ ಸಂಘಟನೆಯ ಕಾರ್ಯಕರ್ತರು ಕಪ್ಪು ಪತಾಕೆ ಹಾರಿಸಿ, ಅವರ ವಿರುದ್ಧ ಘೋಷಣೆಗಳನ್ನು ಕೂಗಿತ್ತು. ಹಿಂದೂ ಯುವ ವಾಹಿನಿಯನ್ನು ಎರಡು ದಶಕಗಳ ಹಿಂದೆ ಈಗಿನ ಯುಪಿ ಸಿಎಂ ಆದಿತ್ಯನಾಥ್‌ ಸ್ಥಾಪಿಸಿದ್ದರು.  

ಪಶ್ಚಿಮ ಬಂಗಾಳದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ವಿಜಯ ಸಾಧಿಸಿರುವ ಮಮತಾ ಬ್ಯಾನರ್ಜಿ, ರಾಷ್ಟ್ರ ರಾಜಕಾರಣಕ್ಕೆ ಇಳಿಯುವ ಪ್ರಯತ್ನದಲ್ಲಿದ್ದಾರೆ. ಆ ನಿಟ್ಟಿನಲ್ಲಿ ಪ್ರಾದೇಶಿಕ ಶಕ್ತಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಅದೇ ರೀತಿ ಸಮಾಜವಾದಿ ಪಕ್ಷವನ್ನೂ ಬೆಂಬಲಿಸುತ್ತಿರುವ ಬ್ಯಾನರ್ಜಿ, ಅಖಿಲೇಶ್‌ ಯಾದವ್‌ರ ಪಕ್ಷವನ್ನು ಪ್ರಬಲ ವಿರೋಧ ಪಕ್ಷ ಎಂದು ಬಣ್ಣಿಸಿದ್ದಾರೆ. 

ವಾರಣಾಸಿಯಲ್ಲಿ ಚುನಾವಣಾ ಸಮಾವೇಶ ಉದ್ದೇಶಿಸಿ ಮಾತನಾಡಿದ ಬ್ಯಾನರ್ಜಿ, ʼಪಶ್ಚಿಮ ಬಂಗಾಳದಲ್ಲಿ ಬಿಜೆಪಿಯನ್ನು ಸೋಲಿಸಲು ಸಾಧ್ಯವಾದರೆ, ಉತ್ತರ ಪ್ರದೇಶದಲ್ಲೂ ಸಾಧ್ಯʼ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News