ಜಮ್ಮು-ಕಾಶ್ಮೀರದಲ್ಲಿ ಸೇನಾ ಹೆಲಿಕಾಪ್ಟರ್ ಪತನ, ಸಹಪೈಲಟ್ ಸಾವು, ಪೈಲಟ್ ಗಂಭೀರ

Update: 2022-03-11 16:47 GMT
photo courtesy : NDTV 

ಶ್ರೀನಗರ, ಮಾ.11: ಉತ್ತರ ಕಾಶ್ಮೀರದ ಬಂಡಿಪೋರ ಜಿಲ್ಲೆಯ ಗುರೆಝ್ನ ತುಲಾಲಿ ಪ್ರದೇಶದಲ್ಲಿ ಶುಕ್ರವಾರ ಅಪರಾಹ್ನ ಸೇನೆಯ ಚೀತಾ ಹೆಲಿಕಾಪ್ಟರ್ ಪತನಗೊಂಡಿದೆ. 

ದುರಂತದಲ್ಲಿ ಸಹಪೈಲಟ್ ಮೃತಪಟ್ಟಿದ್ದು, ಪೈಲಟ್ಗೆ ತೀವ್ರ ಗಾಯಗಳಾಗಿವೆ. ಮುಂಚೂಣಿ ನೆಲೆಯಿಂದ ಅಸ್ವಸ್ಥ ಯೋಧನೋರ್ವನನ್ನು ತೆರವುಗೊಳಿಸಲು ತನ್ನ ದೈನಂದಿನ ಹಾರಾಟದಲ್ಲಿದ್ದ ಹೆಲಿಕಾಪ್ಟರ್ ಬರೌಬ್ನ ಗುಜರನ್ ಬಳಿ ಸಂಪರ್ಕವನ್ನು ಕಳೆದುಕೊಂಡಿತ್ತು. ಭಾರತೀಯ ಸೇನೆಯ ಪದಾತಿ ದಳವು ತಕ್ಷಣ ಶೋಧ ಕಾರ್ಯಾಚರಣೆಯನ್ನು ಆರಂಭಿಸಿದ್ದು, ಶೋಧ ಮತ್ತು ರಕ್ಷಣಾ ಹೆಲಿಕಾಪ್ಟರ್ಗಳನ್ನು ಕಾರ್ಯಾಚರಣೆಯಲ್ಲಿ ತೊಡಗಿಸಲಾಗಿತ್ತು. 

ಉತ್ತರ ಕಾಶ್ಮೀರದ ಹಿಮಾಚ್ಛಾದಿತ ಗುಜರನ್ ನಾಲಾ ಪ್ರದೇಶದಲ್ಲಿ ಪತನಗೊಂಡ ಹೆಲಿಕಾಪ್ಟರ್ನ ಅವಶೇಷಗಳು ಪತ್ತೆಯಾಗಿದ್ದವು. ಗಾಯಗೊಂಡಿದ್ದ ಪೈಲಟ್ ಮತ್ತು ಸಹಪೈಲಟ್ರನ್ನು ತಕ್ಷಣ ಉಧಮಪುರದ ಕಮಾಂಡ್ ಆಸ್ಪತ್ರೆಗೆ ಸಾಗಿಸಲಾಗಿತ್ತು. ಸಹಪೈಲಟ್ ಮೇಜರ್ ಸಂಕಲ್ಪ ಯಾದವ್ (29) ಅವರು ತೀವ್ರ ಗಾಯಗಳಿಂದಾಗಿ ಆಸ್ಪತ್ರೆಯಲ್ಲಿ ನಿಧನರಾದರು. ಗಂಭೀರವಾಗಿ ಗಾಯಗೊಂಡಿರುವ ಪೈಲಟ್ ದೇಹಸ್ಥಿತಿ ಸ್ಥಿರವಾಗಿದ್ದು,ಐಸಿಯುದಲ್ಲಿ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು. ಯಾದವ ಜೈಪುರದ ನಿವಾಸಿಯಾಗಿದ್ದು, 2015ರಲ್ಲಿ ಸೇವೆಗೆ ಸೇರಿದ್ದರು. ಅವರು ತಂದೆಯನ್ನು ಅಗಲಿದ್ದಾರೆ.
ಹೆಲಿಕಾಪ್ಟರ್ ಪತನಕ್ಕೆ ಕಾರಣವಾದ ಘಟನೆಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News