ಸೌದಿ ಅರೇಬಿಯಾ ಜತೆಗಿನ ನೇರ ಮಾತುಕತೆ ತಾತ್ಕಾಲಿಕ ಸ್ಥಗಿತ: ಇರಾನ್

Update: 2022-03-13 18:30 GMT
PHOTO PTI

ಟೆಹ್ರಾನ್, ಮಾ.13: ಸೌದಿ ಅರೆಬಿಯಾದೊಂದಿಗೆ ನಡೆಯಲಿದ್ದ ನೇರ ಮಾತುಕತೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಇರಾನ್ ನ ಉನ್ನತ ಭದ್ರತಾ ಅಧಿಕಾರಿಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.
 
ಮಾರ್ಚ್ 16ರಂದು ಇರಾಕ್ ನ ಬಗ್ದಾದ್ ನಲ್ಲಿ ಇರಾನ್-ಸೌದಿ ಅರೆಬಿಯಾ ನಡುವಿನ ನೇರ ಮಾತುಕತೆ ಆರಂಭವಾಗಲಿದೆ ಎಂದು ಶನಿವಾರ ಇರಾಕ್ ನ ವಿದೇಶ ಸಚಿವ ಫವದ್ ಹುಸೇನ್ ಘೋಷಿಸಿದ್ದರು. ಈ ಬಗ್ಗೆ ರವಿವಾರ ಪ್ರತಿಕ್ರಿಯಿಸಿರುವ ಇರಾನ್ನ ಸುಪ್ರೀಂ ನ್ಯಾಷನಲ್ ಸೆಕ್ಯುರಿಟಿ ಕೌನ್ಸಿಲ್(ಎಸ್ಎನ್ಎಸ್ಸಿ)ನ ಅಧಿಕಾರಿಗಳು, ಮಾತುಕತೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವುದಾಗಿ ಹೇಳಿದ್ದಾರೆ. ಆದರೆ ಈ ನಿರ್ಧಾರಕ್ಕೆ ಯಾವುದೇ ಕಾರಣ ನೀಡಿಲ್ಲ ಎಂದು ನೂರ್‌ ನ್ಯೂಸ್ ವರದಿ ಮಾಡಿದೆ.
  
2016ರಲ್ಲಿ ಸೌದಿ ಅರೆಬಿಯಾದಲ್ಲಿ ಪ್ರಮುಖ ಶಿಯಾ ಧಾರ್ಮಿಕ ಮುಖಂಡನಿಗೆ ಮರಣದಂಡನೆ ವಿಧಿಸಿರುವುದನ್ನು ವಿರೋಧಿಸಿ ಇರಾನ್ನಲ್ಲಿ ನಡೆದ ಪ್ರತಿಭಟನೆ ಸಂದರ್ಭ ಟೆಹ್ರಾನ್ನಲ್ಲಿನ ಸೌದಿ ಅರೆಬಿಯಾ ರಾಯಭಾರಿ ಕಚೇರಿ ಮೇಲೆ ದಾಳಿ ನಡೆಸಲಾಗಿತ್ತು. ಬಳಿಕ ಉಭಯ ದೇಶಗಳು ರಾಜತಾಂತ್ರಿಕ ಸಂಬಂಧ ಕಡಿದುಕೊಂಡಿದ್ದವು. ಇರಾನ್ ವಿರುದ್ಧ ಕಠಿಣ ನಿರ್ಬಂಧ ಹೇರುವ ಅಮೆರಿಕದ ನಿರ್ಧಾರಕ್ಕೆ ಸೌದಿ ಅರೆಬಿಯಾ ಬೆಂಬಲ ಸೂಚಿಸಿತ್ತು. 

ಅಲ್ಲದೆ ಯೆಮನ್ನಲ್ಲಿ ನಡೆಯುತ್ತಿರುವ ಸಂಘರ್ಷದಲ್ಲಿ ಸೌದಿ ಅರೆಬಿಯಾ ಯೆಮನ್ನ ಸರಕಾರಿ ಪಡೆಯನ್ನು ಬೆಂಬಲಿಸುತ್ತಿದ್ದರೆ, ಹೌದಿ ಬಂಡುಗೋರರಿಗೆ ಇರಾನ್ ಬೆಂಬಲ ನೀಡುತ್ತಿದೆ. ತನ್ನ ತೈಲ ಸಂಸ್ಕರಣಾಗಾರದ ಮೇಲೆ ಇರಾನ್ ದಾಳಿ ನಡೆಸುತ್ತಿದೆ ಎಂದು ಸೌದಿ ಅರೆಬಿಯಾ ಆರೋಪಿಸುತ್ತಿದೆ.

ಈ ಮಧ್ಯೆ, ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧದ ಮರುಸ್ಥಾಪನೆಯ ನಿಟ್ಟಿನಲ್ಲಿ ಇರಾಕ್ನ ರಾಜಧಾನಿ ಬಗ್ದಾದ್ ನಲ್ಲಿ 2020ರ ಎಪ್ರಿಲ್ನಲ್ಲಿ ಪ್ರಥಮ ಸುತ್ತಿನ ಗುಪ್ತಸಭೆ ನಡೆದಿರುವುದನ್ನು ಆ ಬಳಿಕ ಅಧಿಕೃತವಾಗಿ ಘೋಷಿಸಲಾಗಿತ್ತು. ಶೀಘ್ರದಲ್ಲೇ ನೇರ ಮಾತುಕತೆ ನಡೆಸಲು ಉಭಯ ದೇಶಗಳು ಆಸಕ್ತಿ ತೋರಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News