ಐಒಸಿ ಸಭೆಗೆ ಹುರಿಯತ್ ಮುಖಂಡರಿಗೆ ಆಹ್ವಾನ: ಭಾರತದ ಖಂಡನೆ

Update: 2022-03-17 17:01 GMT
OIC PHOTO PTI

ಹೊಸದಿಲ್ಲಿ, ಮಾ.17: ಮುಂದಿನ ವಾರ ಇಸ್ಲಮಾಬಾದ್‌ನಲ್ಲಿ ನಡೆಯಲಿರುವ ಇಸ್ಲಾಮಿಕ್ ಸಹಕಾರ ಸಂಘಟನೆ(ಒಐಸಿ)ಯ ವಿದೇಶ ವ್ಯವಹಾರ ಸಚಿವರ ಸಭೆಗೆ ಸರ್ವ ಪಕ್ಷ ಹುರಿಯತ್ ಕಾನ್ಫರೆನ್ಸ್‌ನ ಅಧ್ಯಕ್ಷರನ್ನು ಆಹ್ವಾನಿಸಿರುವುದನ್ನು ಭಾರತ ತೀವ್ರವಾಗಿ ಖಂಡಿಸಿದೆ. 

ಭಯೋತ್ಪಾದನೆ ಮತ್ತು ಭಾರತ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿರುವವರು ಮತ್ತು ಅಂತವರಿಗೆ ನೆರವು ನೀಡುವವರನ್ನು ಒಐಸಿ ಪ್ರೋತ್ಸಾಹಿಸುತ್ತದೆ ಎಂದು ಭಾರತ ನಿರೀಕ್ಷಿಸಿರಲಿಲ್ಲ ಎಂದು ವಿದೇಶ ವ್ಯವಹಾರ ಇಲಾಖೆಯ ವಕ್ತಾರ ಅರಿಂದಮ್ ಬಾಗ್ಚಿ ಹೇಳಿದ್ದಾರೆ. ದೇಶದ ಏಕತೆಯನ್ನು ಹಾಳುಮಾಡುವ, ಅದರ ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಉಲ್ಲಂಘಿಸುವ ಗುರಿಯನ್ನು ಹೊಂದಿರುವ ಇಂತಹ ಕ್ರಮಗಳನ್ನು ಭಾರತ ಗಂಭೀರವಾಗಿ ಪರಿಗಣಿಸುತ್ತದೆ. ಒಐಸಿಯು ಪ್ರಮುಖ ಅಭಿವೃದ್ಧಿ ಚಟುವಟಿಕೆಗಳ ಬಗ್ಗೆ ಕೇಂದ್ರೀಕರಿಸುವ ಬದಲು ಓರ್ವ ಸದಸ್ಯನ ರಾಜಕೀಯ ಉದ್ದೇಶದ ಕಾರ್ಯಸೂಚಿಯಿಂದ ಮಾರ್ಗದರ್ಶನ ಪಡೆಯುವುದನ್ನು ಮುಂದುವರಿಸಿರುವುದು ಅತ್ಯಂತ ದುರದೃಷ್ಟಕರವಾಗಿದೆ ಎಂದವರು, ಪಾಕಿಸ್ತಾನವನ್ನು ಪರೋಕ್ಷವಾಗಿ ಉಲ್ಲೇಖಿಸಿ ಸುದ್ಧಿಗೋಷ್ಟಿಯಲ್ಲಿ ಹೇಳಿದ್ದಾರೆ. 

ಭಾರತದ ಆಂತರಿಕ ವ್ಯವಹಾರಗಳ ಬಗ್ಗೆ ಪ್ರತಿಕ್ರಿಯಿಸಲು ವೇದಿಕೆಯನ್ನು ಬಳಸಿಕೊಳ್ಳುವ ಸ್ಥಾಪಿತ ಹಿತಾಸಕ್ತಿಯ ಪ್ರಯತ್ನಕ್ಕೆ ಅವಕಾಶ ಮಾಡದಂತೆ ಒಐಸಿಗೆ ಹಲವು ಬಾರಿ ಕರೆ ನೀಡಿದ್ದೇವೆ ಎಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News