ಮೇಕೆದಾಟು ಯೋಜನೆಗೆ ತ್ವರಿತ ಅನುಮೋದನೆ ಪಡೆಯಲು ಕ್ರಮ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

Update: 2022-03-18 16:41 GMT

ಬೆಂಗಳೂರು, ಮಾ.18: ಮೇಕೆದಾಟು, ಮಹಾದಾಯಿ ಹಾಗೂ ಕೃಷ್ಣಾ ಮೇಲ್ದಂಡೆ ಯೋಜನೆ ಹಂತ 3ಕ್ಕೆ ಸಂಬಂಧಿಸಿದಂತೆ ಅಂತರ್‍ರಾಜ್ಯ ಜಲ ವಿವಾದಗಳ ಬಗ್ಗೆ ಸುದೀರ್ಘವಾಗಿ ಚರ್ಚೆ ಮಾಡಿದ್ದು, ಅಗತ್ಯವಿದ್ದರೆ ಹೊಸದಿಲ್ಲಿಗೆ ಸರ್ವಪಕ್ಷ ಮುಖಂಡರ ನಿಯೋಗವನ್ನು ಕರೆದುಕೊಂಡು ಹೋಗಿ ಕೇಂದ್ರ ಜಲಶಕ್ತಿ ಸಚಿವರ ಜೊತೆ ಚರ್ಚೆ ಮಾಡಿ ಒತ್ತಡ ಹೇರಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಶುಕ್ರವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಅಂತರ್ ರಾಜ್ಯ ಜಲ ವಿವಾದಗಳಿಗೆ ಸಂಬಂಧಿಸಿದಂತೆ ವಿಧಾನಮಂಡಲದ ಉಭಯ ಸದನಗಳ ನಾಯಕರು, ಮಾಜಿ ಜಲಸಂಪನ್ಮೂಲ ಸಚಿವರೊಂದಿಗೆ ನಡೆಸಿದ ಸಭೆಯ ಬಳಿಕ ಅವರು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. 

ಮೇಕೆದಾಟು ಬಗ್ಗೆ ಚರ್ಚೆ ಆಗಿದೆ. ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಬಳಿ ಡಿಪಿಆರ್ ಇದೆ. ಇದರ ಬಗ್ಗೆ ಈಗಾಗಲೇ ಕೇಂದ್ರಕ್ಕೆ ಪತ್ರ ಬರೆಯಲಾಗಿದೆ. ಪ್ರಾಧಿಕಾರದ ನಡಾವಳಿಯಲ್ಲಿ ಏನೆಲ್ಲ ಚರ್ಚೆ ಆಗಿದೆ ಅಂತ ಮಾಹಿತಿ ಕೇಳಿದ್ದೇವೆ. ಮುಂದಿನ ಸಭೆಯಲ್ಲಿ ಡಿಪಿಆರ್‍ಗೆ ಒಪ್ಪಿಗೆ ಪಡೆದುಕೊಳ್ಳಬೇಕು. ಜೊತೆಗೆ ಕೇಂದ್ರದ ಪರಿಸರ ಇಲಾಖೆಯಿಂದಲೂ ಯೋಜನೆಗೆ ಅನುಮತಿ ಪಡೆಯಲು ಕ್ರಮ ಕೈಗೊಳ್ಳಬೇಕು ಎಂದು ನಿರ್ಧರಿಸಲಾಗಿದೆ ಎಂದು ಅವರು ಹೇಳಿದರು.

ಕೇಂದ್ರ ಜಲಶಕ್ತಿ ಸಚಿವರನ್ನು ಸಂಪರ್ಕಿಸಿ ಈ ಸಂಬಂಧ ಸಭೆ ನಿಗದಿ ಮಾಡಲು ತಿಳಿಸಿದ್ದೇನೆ. ಇದೇ ವಾರ ಸೋಮವಾರ ಅಥವಾ ಮಂಗಳವಾರ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ದಿಲ್ಲಿಗೆ ಹೋಗಿ, ಇವತ್ತಿನ ಸಭೆಯಲ್ಲಿ ನಡೆದಿರುವ ವಿದ್ಯಾಮಾನದ ಬಗ್ಗೆ ಅವರಿಗೆ ತಿಳಿಸುತ್ತಾರೆ. ಈ ಅಧಿವೇಶನ ಮುಗಿದ ಬಳಿಕ ನಾನು ದಿಲ್ಲಿಗೆ ಹೋಗಿ ಎಲ್ಲ ಅಂತರ್‍ರಾಜ್ಯ ಜಲ ವಿವಾದಗಳ ಬಗ್ಗೆ ಅವರ ಜೊತೆ ಚರ್ಚೆ ಮಾಡುತ್ತೇನೆ ಎಂದು ಅವರು ಹೇಳಿದರು.

ಅವಶ್ಯಕತೆ ಬಿದ್ದರೆ ನಾನು ಸರ್ವಪಕ್ಷಗಳ ಮುಖಂಡರ ನಿಯೋಗವನ್ನು ದಿಲ್ಲಿಗೆ ಕರೆದುಕೊಂಡು ಹೋಗುತ್ತೇನೆ. ಮಹಾದಾಯಿಯಲ್ಲಿ ನಮಗೆ ನೀರು ಹಂಚಿಕೆಯಾಗಿ, ನೋಟಿಫಿಕೇಷನ್ ಆಗಿದೆ. ಅಲ್ಲಿಯೂ ಪರಿಸರ ಇಲಾಖೆಯ ಅನುಮತಿ ಪಡೆದು ಕಾಮಗಾರಿ ಆರಂಭಿಸಲು ತಿಳಿಸಿದ್ದಾರೆ. ಅತಿ ಶೀಘ್ರವೆ ಪರಿಸರ ಇಲಾಖೆಯ ಅನುಮತಿ ಸಿಗುವ ವಿಶ್ವಾಸವಿದೆ ಎಂದು ಮುಖ್ಯಮಂತ್ರಿ ಹೇಳಿದರು.

ಕೃಷ್ಣಾ ಮೇಲ್ದಂಡೆ ಹಂತ 3ರ ನೋಟಿಫಿಕೇಷನ್ ಆಗಬೇಕು. 2011ರಲ್ಲಿ ತಡೆಯಾಜ್ಞೆಯಾಗಿದೆ, 2013ರಲ್ಲಿ ಅಂತಿಮ ತೀರ್ಮಾನ ಬಂದ ಬಳಿಕ ಆಂಧ್ರಪ್ರದೇಶ ಹಾಗೂ ಹೊಸದಾಗಿ ರಚನೆಯಾದ ತೆಲಂಗಾಣ ಇದಕ್ಕೆ ವಿರೋಧಿಸಿದೆ. ಅಲ್ಲದೆ, ಈ ನಡುವೆ ಇಬ್ಬರು ನ್ಯಾಯಾಧೀಶರು ವಿಚಾರಣೆಯಿಂದ ಹಿಂದಕ್ಕೆ ಸರಿದಿದ್ದಾರೆ. ಅಲ್ಲಿ ಹೊಸ ನ್ಯಾಯಾಧೀಶರ ನೇಮಕವಾಗಬೇಕು. ಈ ಬಗ್ಗೆ ಸುಪ್ರೀಂಕೋರ್ಟ್‍ನ ಮುಖ್ಯ ನ್ಯಾಯಮೂರ್ತಿಗೆ ಅಲ್ಲಿಗೆ ನ್ಯಾಯಾಧೀಶರ ನೇಮಕ ಮಾಡುವಂತೆ ಕೋರಿ ಪತ್ರ ಬರೆಯಲಾಗುವುದು ಎಂದು ಅವರು ತಿಳಿಸಿದರು.

ಅಂತರ್‍ರಾಜ್ಯ ನದಿ ಜೋಡಣೆ ಯೋಜನೆಯಲ್ಲಿ ನಮ್ಮ ರಾಜ್ಯದ ಪಾಲಿನ ನೀರಿನ ಪ್ರಮಾಣ ನಿಗದಿಯಾದ ನಂತರವಷ್ಟೇ ನಾವು ಈ ಯೋಜನೆಗೆ ಒಪ್ಪಿಗೆ ನೀಡುತ್ತೇವೆ. ಆರಂಭದಿಂದಲೂ ನಮ್ಮ ನಿಲುವು ಅದೇ ಇದೆ. ನಮ್ಮ ರಾಜ್ಯದ ಪಾಲಿನ ನೀರಿನ ಹಂಚಿಕೆಯನ್ನು ಭದ್ರಪಡಿಸಿಕೊಳ್ಳುತ್ತೇವೆ. ನದಿ ಜೋಡಣೆ ವಿಚಾರದಲ್ಲಿ ಎಲ್ಲ ಬಗೆಯ ತಾಂತ್ರಿಕ ಮಾಹಿತಿ ಒದಗಿಸುವಂತೆ ವಿರೋಧ ಪಕ್ಷದ ನಾಯಕರು ಕೇಳಿದ್ದಾರೆ. ಅದನ್ನು ಪಡೆದು ನಾನು ಎಲ್ಲರೊಂದಿಗೆ ಹಂಚಿಕೊಳ್ಳುತ್ತೇನೆ ಎಂದು ಮುಖ್ಯಮಂತ್ರಿ ಹೇಳಿದರು.

ಅಂತರ್‍ರಾಜ್ಯ ಜಲ ವಿವಾದಗಳನ್ನು ಬಗೆಹರಿಸಲು ವೇಗ ನೀಡಬೇಕು, ಕಾನೂನು, ತಾಂತ್ರಿಕ ಹಾಗೂ ಆಡಳಿತಾತ್ಮಕ ಸಮಸ್ಯೆಗಳನ್ನು ಆದ್ಯತೆಯ ಮೇರೆಗೆ ಬಗೆಹರಿಸಬೇಕು, ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಬೇಕು ಎಂದು ವಿರೋಧ ಪಕ್ಷದ ನಾಯಕರು ಹೇಳಿದ್ದಾರೆ ಎಂದು ಅವರು ಹೇಳಿದರು.

ಸಭೆಯಲ್ಲಿ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ, ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್, ಮಾಜಿ ಜಲಸಂಪನ್ಮೂಲ ಸಚಿವರಾದ ಎಚ್.ಕೆ.ಪಾಟೀಲ್, ಎಂ.ಬಿ.ಪಾಟೀಲ್, ಡಿ.ಕೆ.ಶಿವಕುಮಾರ್, ಮಾಜಿ ಸಚಿವ ಬಂಡೆಪ್ಪ ಕಾಶೆಂಪುರ್, ವಿಧಾನಪರಿಷತ್ ಸದಸ್ಯ ಶ್ರೀಕಂಠೇಗೌಡ, ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News