ಕೃಷಿ ಕಾನೂನುಗಳ ವಾಪಸಾತಿಯನ್ನು ವಿರೋಧಿಸಿದ್ದ ಸುಪ್ರೀಂ ಕೋರ್ಟ್ ನೇಮಿತ ಸಮಿತಿ

Update: 2022-03-21 16:59 GMT

ಹೊಸದಿಲ್ಲಿ: ಮೂರು ಕೃಷಿ ಕಾನೂನುಗಳ ಅಧ್ಯಯನಕ್ಕಾಗಿ ಸುಪ್ರೀಂ ಕೋರ್ಟ್ ನೇಮಿಸಿದ್ದ ಸಮಿತಿಯು, ಈ ಕಾನೂನುಗಳನ್ನು ವಾಪಸ್ ಪಡೆಯಬಾರದು ಎಂಬುದಾಗಿ ಶಿಫಾರಸು ಮಾಡಿತ್ತು ಹಾಗೂ ಅವುಗಳು ರೈತರಿಗೆ ಉಪಯುಕ್ತವಾಗಿವೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿತ್ತು. ಆದರೆ, ಈ ಕಾನೂನುಗಳನ್ನು ಕಳೆದ ವರ್ಷದ ನವೆಂಬರ್‌ ನಲ್ಲಿ ಸಂಸತ್ತು ರದ್ದುಪಡಿಸಿದೆ.

ಸುಪ್ರೀಂ ಕೋರ್ಟ್ ಗೆ 2021 ರ ಮಾರ್ಚ್ 19 ರಂದು ಸಲ್ಲಿಸಲಾಗಿದ್ದ ಸಮಿತಿಯ ವರದಿಯನ್ನು ಸೋಮವಾರ ಬಹಿರಂಗಪಡಿಸಲಾಗಿದೆ.

ಅದೇ ವೇಳೆ, ಕನಿಷ್ಠ ಬೆಂಬಲ ಬೆಲೆ (ಎಮ್ಎಸ್‌ಪಿ) ವ್ಯವಸ್ಥೆಯನ್ನು ಕಾನೂನು ಸಮ್ಮತವಾಗಿಸಲು ರಾಜ್ಯಗಳಿಗೆ ಸ್ವಾತಂತ್ರ ನೀಡುವುದು ಸೇರಿದಂತೆ ಕಾನೂನಿನಲ್ಲಿ ಹಲವು ಬದಲಾವಣೆಗಳಿಗೆ ಮೂವರು ಸದಸ್ಯರ ಸಮಿತಿಯು ಸಲಹೆ ನೀಡಿತ್ತು.

ಸಮಿತಿಯ ಸದಸ್ಯರ ಪೈಕಿ ಒಬ್ಬರಾಗಿರುವ ಅನಿಲ್ ಘನ್ವತ್ ವರದಿಯನ್ನು ಹೊಸದಿಲ್ಲಿಯಲ್ಲಿ ಸೋಮವಾರ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆಗೊಳಿಸಿದರು.

“2021 ಮಾರ್ಚ್ 19ರಂದು ನಾವು ಸುಪ್ರೀಂ ಕೋರ್ಟ್ ಗೆ ವರದಿಯನ್ನು ಸಲ್ಲಿಸಿದೆವು. ವರದಿಯನ್ನು ಬಿಡುಗಡೆಗೊಳಿಸುವಂತೆ ಕೋರಿ ನಾವು ಮೂರು ಬಾರಿ ಸುಪ್ರೀಂ ಕೋರ್ಟ್ ಗೆ ಪತ್ರಗಳನ್ನು ಬರೆದೆವು. ಆದರೆ, ನಮಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ” ಎಂದು ಸ್ವತಂತ್ರ ಭಾರತ ಪಕ್ಷದ ಅಧ್ಯಕ್ಷರೂ ಆಗಿರುವ ಘನ್ವತ್ ಹೇಳಿದರು. 
“ನಾನು ಇಂದು ವರದಿಯನ್ನು ಬಿಡುಗಡೆಗೊಳಿಸುತ್ತಿದ್ದೇನೆ. ಮೂರು ಕಾನೂನುಗಳನ್ನು ಈಗ ವಾಪಸ್ ಪಡೆಯಲಾಗಿದೆ. ಹಾಗಾಗಿ, ಈಗ ಈ ವರದಿಗೆ ಮಹತ್ವವಿಲ್ಲ” ಎಂದರು.

ಭವಿಷ್ಯದಲ್ಲಿ ಕೃಷಿ ಕ್ಷೇತ್ರಕ್ಕಾಗಿ ನೀತಿಗಳನ್ನು ರೂಪಿಸುವಾಗ ಈ ವರದಿಯು ಸಹಾಯಕ್ಕೆ ಬರುವುದು ಎಂದು ಅವರು ಅಭಿಪ್ರಾಯಪಟ್ಟರು.

“ಕೃಷಿ ಕಾನೂನುಗಳನ್ನು ಹಿಂದಕ್ಕೆ ಪಡೆಯುವುದು ಅಥವಾ ಸುದೀರ್ಘ ಕಾಲ ಅಮಾನತಿನಲ್ಲಿಡುವುದು, ಈ ಕಾನೂನುಗಳಿಗೆ ಮೌನವಾಗಿ ಬೆಂಬಲ ನೀಡುತ್ತಿರುವ ಬಹುಸಂಖ್ಯಾತ ರೈತರಿಗೆ ಅನ್ಯಾಯ ಮಾಡಿದಂತೆ ಆಗುತ್ತದೆ ಎಂಬುದಾಗಿ ಸಮಿತಿಯು ತನ್ನ ವರದಿಯಲ್ಲಿ ಹೇಳಿದೆ” ಎಂದು ಘನ್ವತ್ ನುಡಿದರು.

ಸಮಿತಿಗೆ 73 ರೈತ ಸಂಘಟನೆಗಳು ಮನವಿಗಳನ್ನು ಸಲ್ಲಿಸಿವೆ ಹಾಗೂ ಈ ಪೈಕಿ 3.3 ಕೋಟಿ ರೈತರನ್ನು ಪ್ರತಿನಿಧಿಸುವ 61 ಸಂಘಟನೆಗಳು ಕೃಷಿ ಕಾನೂನುಗಳಿಗೆ ಬೆಂಬಲ ವ್ಯಕ್ತಪಡಿಸಿವೆ ಎಂದು ಹೇಳಿದರು.
ಸಂಯುಕ್ತ ಕಿಸಾನ್ ಮೋರ್ಚಾದ ಅಡಿಯಲ್ಲಿ ಕೃಷಿ ಕಾನೂನುಗಳ ವಿರುದ್ಧ ಚಳವಳಿ ನಡೆಸಿರುವ 40 ಸಂಘಟನೆಗಳು ಪದೇ ಪದೇ ಮನವಿಗಳನ್ನು ಮಾಡಿರುವ ಹೊರತಾಗಿಯೂ ಮನವಿಗಳನ್ನು ಸಲ್ಲಿಸಿಲ್ಲ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News