‘ಕಾಶ್ಮೀರ್ ಫೈಲ್ಸ್’: ಸಂಘಿ ಅಜೆಂಡಾಗಳ ಸುಳ್ಳು ಸಿನೆಮಾ

Update: 2022-03-23 04:29 GMT

ಭಾಗ 1

ಕಾಶ್ಮೀರದ ಬಗ್ಗೆ, ಕಾಶ್ಮೀರಿಯತ್ ಎಂಬ ಕಾಶ್ಮೀರಿಗಳ ಮತಧರ್ಮಗಳನ್ನು ಮೀರಿದ ಕಾಶ್ಮೀರಿ ಅಸ್ಮಿತೆಯ ಬಗ್ಗೆ, ಸ್ವಾತಂತ್ರ್ಯಾನಂತರ ಕಾಂಗ್ರೆಸನ್ನೂ ಒಳಗೊಂಡು ದಿಲ್ಲಿಯನ್ನು ಆಳಿದ ಎಲ್ಲಾ ಸರಕಾರಗಳೂ ಕಾಶ್ಮೀರಿಗಳಿಗೆ ಮಾಡಿದ ಅನ್ಯಾಯದ ಬಗ್ಗೆ, ಬಿಜೆಪಿ-ಆರೆಸ್ಸೆಸ್ ಮೊದಲಿಂದಲೂ ಕಾಶ್ಮೀರಿಯತ್ ಅನ್ನು ಕೋಮುವಾದೀಕರಿಸಲು ಮಾಡುತ್ತಲೇ ಬಂದ ಪ್ರಯತ್ನಗಳ ಬಗ್ಗೆ.. ‘ಕಾಶ್ಮೀರ್ ಫೈಲ್ಸ್’ ಮುಚ್ಚಿಡುವ, ಮೌನ ವಹಿಸುವ ಹಾಗೂ ತಿರುಚಿರುವ ಅಂಶಗಳನ್ನು ಮಾತ್ರ ಇಲ್ಲಿ ಚರ್ಚಿಸಲಾಗಿದೆ.

ವಿವೇಕ್ ಅಗ್ನಿಹೋತ್ರಿಯವರ ‘ಕಾಶ್ಮೀರ್ ಫೈಲ್ಸ್’ ಒಂದು (ಕಥಾ ಚಿತ್ರದ) ಸಿನೆಮಾ ಅಲ್ಲವೇ ಅಲ್ಲ. ಹಾಗೆಂದು ಸಾಕ್ಷಚಿತ್ರವೂ ಅಲ್ಲ. ಏಕೆಂದರೆ ಸಾಕ್ಷ-ಪುರಾವೆಗಳಿಲ್ಲದ್ದು ಸಾಕ್ಷಚಿತ್ರವಾಗುವುದಿಲ್ಲ. ಹಾಗೂ ಅದನ್ನು ಮನರಂಜನೆ ಅಥವಾ ಚಿಂತನೆಯ ಪ್ರಚೋದನೆಗಳ ಉದ್ದೇಶವಿಟ್ಟುಕೊಂಡು ಮಾಡಿಲ್ಲ.

ಈ ಸಿನೆಮಾದಲ್ಲಿ ಕಾಶ್ಮೀರಿ ಪಂಡಿತರು ಮತ್ತು ಅವರ ದಾರುಣ ಪರಿಸ್ಥಿತಿಗಳು ನೆಪಮಾತ್ರ. ಅಸಲಿ ವಿಷಯ ಮತ್ತು ಉದ್ದೇಶವೇನೆಂದರೆ ಕಾಶ್ಮೀರದ ಬಗ್ಗೆ, ಮುಸ್ಲಿಮರ ಬಗ್ಗೆ, ಬಿಜೆಪಿಯೇತರ ಪಕ್ಷಗಳ ಬಗ್ಗೆ, ಎಲ್ಲರೂ ಸಮಾನರೆಂದು ಬೋಧಿಸುವ ವಿಚಾರವಂತರ ಬಗ್ಗೆ, ಈ ದೇಶದ ಜನರಲ್ಲಿ ದ್ವೇಷವನ್ನು ಬಿತ್ತಿ ಅವರ ಮೇಲೆ ಮುಂದಿನ ದಿನಗಳಲ್ಲಿ ನಡೆಯಲಿರುವ ಜಿನೋಸೈಡ್ ದಾಳಿಗಳಿಗೆ ಜನರ ಸಮ್ಮತಿಯನ್ನು ರೂಢಿಸುವುದೇ ಆಗಿದೆ.

ಆದ್ದರಿಂದ ಈ ‘ಕಾಶ್ಮೀರ್ ಫೈಲ್ಸ್’ ಕಾಶ್ಮೀರಿ ಪಂಡಿತರ ಇತಿಹಾಸ ಹಾಗೂ ವರ್ತಮಾನಗಳಿಗೂ ದ್ರೋಹ ಬಗೆದಿರುವ ಮತ್ತು ಅವರ ಭವಿಷ್ಯಕ್ಕೂ ಆತಂಕ ಒಡ್ಡಿರುವ ಚಿತ್ರವಾಗಿದೆ. ಹೀಗಾಗಿಯೇ ಅದರಲ್ಲಿ ಹೇಳಿರುವ ತಮ್ಮ ಕಹಾನಿ ಅರ್ಧ ಸತ್ಯ ಮಾತ್ರ ಎಂದೂ, ಅದರ ಉದ್ದೇಶ ಪಂಡಿತರ ಪರಿಸ್ಥಿತಿಯನ್ನು ಬಳಸಿಕೊಂಡು ಬಿಜೆಪಿ ತನ್ನ ರಾಜಕೀಯ ಪ್ರಚಾರ ಮಾಡಿಕೊಳ್ಳುವುದೇ ಆಗಿದೆಯೆಂದು ಜಮ್ಮುವಿನ ನಿರಾಶ್ರಿತರ ಕ್ಯಾಂಪಿನಲ್ಲಿ ಮೂರು ದಶಕಗಳಿಂದ ಬದುಕುತ್ತಿರುವ ಪಂಡಿತರೇ ಹಿಂಜರಿಯದೆ ಹೇಳುತ್ತಿದ್ದಾರೆ.

(ಇದನ್ನು ಬಿಬಿಸಿಗೆ ಪಂಡಿತರು ಕೊಟ್ಟಿರುವ ಸಂದರ್ಶನಗಳೂ ದಾಖಲಿಸಿದೆ -https://twitter.com/BBCHindi/status/1504022442527928320)

ಈಗಾಗಲೇ ಈ ಸಿನೆಮಾದ ಬಗ್ಗೆ ಹಾಗೂ ಅದರ ಹಿಂದಿರುವ ದ್ವೇಷದ ಅಜೆಂಡಾಗಳ ಬಗ್ಗೆ ಸಾಕಷ್ಟು ವಿಮರ್ಶೆಗಳು ಬಂದಾಗಿವೆ.

ಆದ್ದರಿಂದ ಈ ಲೇಖನದಲ್ಲಿ ಈ ಸಿನೆಮಾಗಿಂತ ಜಾಸ್ತಿ ಈ ಸಿನೆಮಾದ ಕಥನವು:

ಕಾಶ್ಮೀರದ ಬಗ್ಗೆ, ಕಾಶ್ಮೀರಿಯತ್ ಎಂಬ ಕಾಶ್ಮೀರಿಗಳ ಮತಧರ್ಮಗಳನ್ನು ಮೀರಿದ ಕಾಶ್ಮೀರಿ ಅಸ್ಮಿತೆಯ ಬಗ್ಗೆ, ಸ್ವಾತಂತ್ರ್ಯಾನಂತರ ಕಾಂಗ್ರೆಸನ್ನೂ ಒಳಗೊಂಡು ದಿಲ್ಲಿಯನ್ನು ಆಳಿದ ಎಲ್ಲಾ ಸರಕಾರಗಳೂ ಕಾಶ್ಮೀರಿಗಳಿಗೆ ಮಾಡಿದ ಅನ್ಯಾಯದ ಬಗ್ಗೆ, ಬಿಜೆಪಿ-ಆರೆಸ್ಸೆಸ್ ಮೊದಲಿಂದಲೂ ಕಾಶ್ಮೀರಿಯತ್ ಅನ್ನು ಕೋಮುವಾದೀಕರಿಸಲು ಮಾಡುತ್ತಲೇ ಬಂದ ಪ್ರಯತ್ನಗಳ ಬಗ್ಗೆ.. ‘ಕಾಶ್ಮೀರ್ ಫೈಲ್ಸ್’ ಮುಚ್ಚಿಡುವ, ಮೌನ ವಹಿಸುವ ಹಾಗೂ ತಿರುಚಿರುವ ಅಂಶಗಳನ್ನು ಮಾತ್ರ ಇಲ್ಲಿ ಚರ್ಚಿಸಲಾಗಿದೆ.

ಕನ್ನಡದಲ್ಲಿ ಕಾಶ್ಮೀರದ ಬಗ್ಗೆ ಬರವಣಿಗೆಯ ಬರ

ಕಾಶ್ಮೀರದ ಈ ಸಂಕೀರ್ಣ ವಿದ್ಯಮಾನದ ಬಗ್ಗೆ ಇತರ ಭಾಷೆಗಳಿಗೆ ಹೋಲಿಸಿದಲ್ಲಿ ಕನ್ನಡದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಸಿಗುವ ಕೆಲವೇ ಕೆಲವು ಗಂಭೀರ ಹಾಗೂ ವಿದ್ವತ್ಪೂರ್ಣ ಬರಹಗಳನ್ನು ಬಿಟ್ಟರೆ ಉಳಿದವೆಲ್ಲಾ ಸೆಲೆಕ್ಟೀವ್ ಕಟ್ ಆ್ಯಂಡ್ ಪೇಸ್ಟ್ ಅಥವಾ ಫಾರ್ವರ್ಡ್ ಪಾಂಡಿತ್ಯಗಳು ಮಾತ್ರ. ಅವನ್ನು ಬಿಟ್ಟರೆ ಕನ್ನಡದಲ್ಲಿ ಕಾಶ್ಮೀರದ ಬಗ್ಗೆ ಸಮಗ್ರ ವಿಶ್ಲೇಷಣೆ ಮತ್ತು ಮಾಹಿತಿ ನೀಡಬಲ್ಲ ಆಕರಗಳೂ ಇಲ್ಲವೆನ್ನುವಷ್ಟು ಅಪರೂಪ. ಕಾಶ್ಮೀರದ ಇಂದಿನ ಎಲ್ಲಾ ಸಮಸ್ಯೆಗಳಿಗೂ ಪ್ರಮುಖ ಕಾರಣರಾದ ಬಿಜೆಪಿಯ ಜಗ್‌ಮೋಹನ್ ಕಾಶ್ಮೀರದಲ್ಲಿ ರಾಜ್ಯಪಾಲರಾಗಿದ್ದಾಗ ಬರೆದ ಹಿಂದೂ ದುರಭಿಮಾನಿ ದೃಷ್ಟಿಕೋನವುಳ್ಳ ‘My Frozen Turbulence in Kashmir’ ಎಂಬ ಪುಸ್ತಕವನ್ನು ಮತ್ತೊಬ್ಬ ಕನ್ನಡದ ಬಿಜೆಪಿ ವಕ್ತಾರ ಎಂ.ವಿ. ಕಾಮತ್ ಅನುವಾದಿಸಿದ (ಪ್ರಕ್ಷುಬ್ಧ ಕಾಶ್ಮೀರ)ಪುಸ್ತಕವೇ ಕನ್ನಡದಲ್ಲಿ ಕಾಶ್ಮೀರದ ಬಗ್ಗೆ ಬಂದ ಮೊದಲ ‘ಗಂಭೀರ’ ಕೃತಿ.

ಎರಡನೆಯದು ಶಮಂತ ಅವರು ಕಾಶ್ಮೀರಕ್ಕೆ ಭೇಟಿ ಕೊಟ್ಟು ಬಂದ ನಂತರ ಅಲ್ಲಿನ ಕಣ್ಣೀರ ಕಥೆಯನ್ನು ್ವಲ್ಪಮಟ್ಟಿಗೆ ಹಿಡಿದು ಕೊಟ್ಟಿದ್ದರು.

ಆನಂತರ ಹನ್ನೆರಡು ವರ್ಷಗಳ ಕೆಳಗೆ ಕರ್ನಾಟಕದ ಪ್ರಮುಖ ಮಾನವ ಹಕ್ಕು ಸಂಘಟನೆಗಳಲ್ಲಿ ಒಂದಾದ ಪ್ರಜಾತಾಂತ್ರಿಕ ಜನರ ವೇದಿಕೆ (ಪಿ.ಡಿ.ಎಫ್.) ಕಾಶ್ಮೀರದ ಸಮಸ್ಯೆಯ ಬಗ್ಗೆ ಸಮಗ್ರ ಚಿತ್ರಣ, ಮಾಹಿತಿ ಮತ್ತು ವಿಶ್ಲೇಷಣೆ ಕೊಡುವ ‘ಪ್ರಕ್ಷುಬ್ಧ ಕಣಿವೆ’ ಎಂಬ ಪುಸ್ತಕವನ್ನು ಕನ್ನಡಿಗರಿಗೆ ಕೊಟ್ಟಿದ್ದಾರೆ. ಈಗ ಅದರ ಪ್ರಕಾಶಕರ ಬಳಿಯೇ ಅವುಗಳ ಪ್ರತಿಯಾದರೂ ಲಭ್ಯವೇ ತಿಳಿದಿಲ್ಲ. ಈ ಎಲ್ಲಾ ಕಾರಣಗಳಿಂದ ಸಾಮಾನ್ಯ ಭಾರತೀಯನಂತೆ ಸಾಮಾನ್ಯ ಕನ್ನಡಿಗರು ಕಾಶ್ಮೀರದ ಸಮಸ್ಯೆಯ ನಿಜ ಸ್ವರೂಪವನ್ನು ಅರ್ಥ ಮಾಡಿಕೊಳ್ಳುತ್ತಲೂ ಆಗುತ್ತಿಲ್ಲ. ಅದರ ಬಗ್ಗೆ ನಿಲುವಿಗೆ ಬರಲೂ ಆಗುತ್ತಿಲ್ಲ. ಈ ಬಗ್ಗೆ ಸಾಮಾನ್ಯ ಕನ್ನಡಿಗರಿಗೆ ಮಾರ್ಗದರ್ಶನ ಮಾಡಬಹುದಾಗಿದ್ದ ಕನ್ನಡದ ಪ್ರಗತಿಪರ ವಲಯ ಭಾರತ ಪ್ರಭುತ್ವವನ್ನು ಮತ್ತು ಭಾರತದ ರಾಷ್ಟ್ರ ರಚನೆಗೊಂಡ ರೀತಿಯನ್ನು ಪ್ರಜಾಸತ್ತೆಯ ನೆಲೆಯಿಂದ ವಿಮರ್ಶೆ ಮಾಡುವ ಸಾಹಸಕ್ಕೆ ಕೈ ಹಾಕಿಲ್ಲ. ಒಂದು ಬಗೆಯಲ್ಲಿ ಈ ವಿಮರ್ಶಾ ದೃಷ್ಟಿಯ ಕೊರತೆಯಿಂದಾಗಿಯೇ ಅವರು ಕಾಶ್ಮೀರದಲ್ಲಿ ಭಾರತದ ಪ್ರಭುತ್ವ ನಡೆಸುತ್ತಿರುವ ದಮನಕಾಂಡವನ್ನು ನೋಡಿದರೂ ಒಪ್ಪಿಕೊಳ್ಳದ ಮನಸ್ಥಿತಿಯಲ್ಲಿದ್ದಾರೆ.

ಲಲ್ಲೇಶ್ವರಿಯ ಕಾಶ್ಮೀರ- ನೂರುದ್ದೀನ್ ಚಿಷ್ತಿಯ ಕಾಶ್ಮೀರ

ಕಾಶ್ಮೀರದ ಇತಿಹಾಸವು ಭಾರತದ ಬಹುತ್ವ ಸಂಸ್ಕೃತಿಗೆ ಅತ್ಯುತ್ತಮ ಉದಾಹರಣೆ. ಭಾರತದ ನಾಗರಿಕತೆಯ ಇತಿಹಾಸದೊಂದಿಗೆ ನಾಗಾ ಜನರ ವಾಸಸ್ಥಾನವಾಗಿದ್ದ ಕಾಶ್ಮೀರ ಸಮಾಜ-ಜನಜೀವನ ಇತಿಹಾಸದಲ್ಲಿ ಬೌದ್ಧ, ಶೈವ ಹಾಗೂ ಸೂಫಿ ಸ್ವರೂಪದ ಇಸ್ಲಾಮಿಕ್ ಪ್ರಭಾವಗಳಿಗೆ ದಟ್ಟವಾಗಿ ಒಳಗಾಗಿದೆ. ಬೌದ್ಧದ ವಿರುದ್ಧ ಬ್ರಾಹ್ಮಣ್ಯದ ದಿಗ್ವಿಜಯದ ಭಾಗವಾಗಿ ಮಿಹಿರಕುಲನ ಕ್ರೂರ ದಾಳಿಗಳು ಕಾಶ್ಮೀರದಲ್ಲೂ ಬೌದ್ಧರನ್ನು ಕೊಂದು ಬ್ರಾಹ್ಮಣೀಯ ಸಾಮಾಜಿಕ ರಚನೆಗೆ ಶೈವ-ವೈಷ್ಣವಗಳಿಗೆ ಅವಕಾಶ ಮಾಡಿಕೊಟ್ಟಿತು. ಇದು ಕಲ್ಹಣನ ರಾಜತರಂಗಣಿಯಲ್ಲೂ, ಆಗ ಭಾರತಕ್ಕೆ ಭೇಟಿ ಕೊಟ್ಟ ವಿದೇಶಿ ಪ್ರವಾಸಿಗರ ಕಥನಗಳಲ್ಲೂ ಸ್ಪಷ್ಟವಾಗಿ ದಾಖಲಾಗಿದೆ. 12ನೇ ಶತಮಾನದಲ್ಲಿ ಕಾಶ್ಮೀರಕ್ಕೆ ಕಾಲಿಟ್ಟ ಸೂಫಿ ರೂಪದ ಇಸ್ಲಾಮಿಗೆ ಅಲ್ಲಿನ ಆಗಿನ ಟಿಬೆಟ್ ಮೂಲದ ರಾಜನೂ ಒಳಗೊಂಡಂತೆ ಸಮಾಜದ ಗಣ್ಯರೂ ಮತಾಂತರಗೊಂಡರು. ಅದು ಸಂಭವಿಸಿದ ಎಷ್ಟೋ ವರ್ಷಗಳ ನಂತರ ಭಾರತದ ಇತರ ಭಾಗಗಳಂತೆ ಕಾಶ್ಮೀರಿ ಜನರೂ ಸೂಫಿ ರೂಪದ ಜನಧರ್ಮಕ್ಕೆ ಆಕರ್ಷಿತರಾಗಿ ಕಾಶ್ಮೀರಿ ಕಣಿವೆ ಹಾಗೂ ಜಮ್ಮು ಗುಡ್ಡಗಾಡಿನ ಪ್ರದೇಶ ವಿಶೇಷವಾಗಿ ಇಸ್ಲಾಮನ್ನು ಸ್ವೀಕರಿಸಿದರು. ಈ ಸಮ್ಮಿಶ್ರ ಸಂಸ್ಕೃತಿಯು ನಮ್ಮ ಅಕ್ಕಮಹಾದೇವಿಯಂಥ ಶೈವೆ ಲಲ್ಲೇಶ್ವರಿಯನ್ನು ಮುಸ್ಲಿಮರು ಲಾಲ್ ದೇಡ್ ಎಂದು ಗೌರವಿಸುವುದರಲ್ಲೂ, ಚರಾರ್-ಎ-ಶರೀಫ್ ದರ್ಗಾದ ನೂರುದ್ದೀನ್ ಚಿಷ್ತಿಯನ್ನು ಹಿಂದೂಗಳು ನಂದರಿಷಿ ಎಂದು ಈಗಲೂ ನಡೆದುಕೊಳ್ಳುವುದರಲ್ಲಿ ಜೀವಂತವಾಗಿದೆ.

 ಮೊಘಲರ ಆಳ್ವಿಕೆಯ ನಂತರ ತಾತ್ಕಾಲಿಕವಾಗಿ ಅಫ್ಘಾನ್ ಮುಸ್ಲಿಮರ ಆ ನಂತರ ಸಿಖ್ ದೊರೆಗಳ ಆಳ್ವಿಕೆಯಲ್ಲಿದ್ದ ಜಮ್ಮು-ಕಾಶ್ಮೀರವನ್ನು 1846ರ ನಂತರ ಬ್ರಿಟಿಷರು 75 ಲಕ್ಷ ರೂಪಾಯಿಗೆ ದೋಗ್ರಾ ರಜಪೂತ ವಂಶದ ಗುಲಾಬ್ ಸಿಂಗ್‌ಗೆ ಮಾರಿಬಿಡುತ್ತಾರೆ. ಅಲ್ಲಿಂದಾಚೆಗೆ ಸ್ವಾತಂತ್ರ್ಯಕಾಲದವರೆಗೆ ಕಾಶ್ಮೀರದ ಜನ ವಿಶೇಷವಾಗಿ ಅಲ್ಲಿನ ಮುಸ್ಲಿಮ್ ರೈತಾಪಿ ಹಾಗೂ ಸ್ವಲ್ಪ ಮಟ್ಟಿಗೆ ಇತರ ಹಿಂದೂಗಳೂ ದೋಗ್ರಾ ಆಡಳಿತದಲ್ಲಿ ನಲುಗುತ್ತಾರೆ. ಅಪಾರವಾದ ಊಳಿಗಮಾನ್ಯ ಹಾಗೂ ಭೂಮಾಲಕತ್ವದ ಶೋಷಣೆಯ ವಿರುದ್ಧ 1936ರಲ್ಲಿ ಎದ್ದ ಬಂಡಾಯಕ್ಕೆ ನ್ಯಾಷನಲ್ ಕಾನ್ಫರೆನ್ಸ್‌ನ ಶೇಕ್ ಅಬ್ದುಲ್ಲಾ ನಾಯಕತ್ವ ಕೊಡುತ್ತಾರೆ. ದೋಗ್ರಾ ರಾಜರು ಮತ್ತು ಅವರ ರಕ್ಷಣೆಯಲ್ಲಿದ್ದ ಕಾಶ್ಮೀರಿ ಪಂಡಿತ ಭೂ ಮಾಲಕರ ವಿರುದ್ಧ ಬಹುಪಾಲು ಮುಸ್ಲಿಮ್ ರೈತಾಪಿ ಹಾಗೂ ಪ್ರಜ್ಞಾವಂತ ಪಂಡಿತರು ಮತ್ತು ಇತರ ಗ್ರಾಮೀಣ ಹಿಂದೂಗಳು ನಡೆಸಿದ ಈ ಬಂಡಾಯಕ್ಕೆ ರಾಜ ಹಾಗೂ ಭೂಮಾಲಕ ಪಂಡಿತರು ಹೆದರುತ್ತಾರೆ.

ಆ ಸಮಯದಲ್ಲೇ ಆರೆಸ್ಸೆಸ್-ಹಿಂದೂ ಮಹಾಸಭಾಗಳು ಕಾಶ್ಮೀರಿ ಜನರನ್ನು ಖಂಡಿಸಿ ರಾಜನನ್ನು ಬೆಂಬಲಿಸುತ್ತಾರೆ! ಮತ್ತು ಅದಕ್ಕೆ ಹಿಂದೂ ರಾಜರ ವಿರುದ್ಧ ಮುಸ್ಲಿಮರ ಬಂಡಾಯ ಎಂಬ ಬಣ್ಣ ಕೊಡಲು ಪ್ರಯತ್ನಿಸುತ್ತಾರೆ.

ಪಾಕಿಸ್ತಾನಕ್ಕೆ ಸೈ ಎಂದ ಹಿಂದೂ ರಾಜ- ಭಾರತವೇ ಬೇಕೆಂದ ಮುಸ್ಲಿಮ್‌ರೈತಾಪಿ!

 ಬ್ರಿಟಿಷರು ಭಾರತ ಬಿಟ್ಟು ಹೋಗುವಾಗ ಅವರ ನೇರಾಳ್ವಿಕೆಯಲ್ಲಿದ್ದ ಪ್ರದೇಶಗಳು ಭಾರತ ಮತ್ತು ಪಾಕಿಸ್ತಾನ ಎಂದು ವಿಭಜನೆಗೊಂಡವು. ಮತ್ತು ಉಳಿದ 480 ಸಂಸ್ಥಾನಗಳಿಗೆ ಭಾರತ ಅಥವಾ ಪಾಕಿಸ್ಥಾನ ಸೇರುವ ಅಥವಾ ತಟಸ್ಥವಾಗುಳಿಯುವ ಅವಕಾಶವನ್ನು ನೀಡಲಾಗಿತ್ತು. ಆದರೆ ಜಮ್ಮು-ಕಾಶ್ಮೀರದ ರಾಜ ಹರಿಸಿಂಗ್ ಪ್ರತ್ಯೇಕವಾಗುಳಿಯುವ ತೀರ್ಮಾನ ಮಾಡಿದ್ದರು. ಅದಕ್ಕೆ ತದ್ವಿರುದ್ಧವಾಗಿ ಅಲ್ಲಿನ ಬಹುಸಂಖ್ಯಾತ ಮುಸ್ಲಿಮ್ ರೈತಾಪಿ ಜನರು ಶೇಕ್ ಅಬ್ದುಲ್ಲಾ ಅವರ ನೇತೃತ್ವದಲ್ಲಿ ಭಾರತವನ್ನು ಸೇರಬೇಕೆಂದು ರಾಜನ ಮೇಲೆ ಒತ್ತಾಯ ಹಾಕುತ್ತಿದ್ದರು. ಅದೇ ಸಮಯದಲ್ಲಿ ಪಾಕಿಸ್ತಾನ ಸರಕಾರದ ಬೆಂಬಲದೊಂದಿಗೆ ಗುಡ್ಡಗಾಡು ದಾಳಿಕೋರರು ಕಾಶ್ಮೀರದ ಮೇಲೆ ದಾಳಿ ಮಾಡಿದಾಗ ರಾಜ ಅನಿವಾರ್ಯವಾಗಿ ಭಾರತ ಸೈನ್ಯದ ಸಹಾಯ ಬೇಡಬೇಕಾಯಿತು. ಆ ಕಾರಣದಿಂದಲೇ 1947ರ ಅಕ್ಟೋಬರ್ 27ರಂದು ಭಾರತ ಸರಕಾರ ಮತ್ತು ರಾಜಾ ಹರಿಸಿಂಗ್ ನಡುವೆ ಸೇರ್ಪಡೆ ಒಪ್ಪಂದವಾಯಿತು. ಅದರ ಪ್ರಕಾರ ಕಾಶ್ಮೀರವು ಭಾರತಕ್ಕೆ ಸೇರಿಕೊಳ್ಳುತ್ತದೆ. ಆದರೆ ಕಾಶ್ಮೀರದ ಮೇಲೆ ಭಾರತ ಸರಕಾರದ ಅಧಿಕಾರ ಕೇವಲ ರಕ್ಷಣೆ, ವಿದೇಶಾಂಗ ಮತ್ತು ಸಂಪರ್ಕಗಳಿಗೆ ಮಾತ್ರ ಸೀಮಿತವಾಗಿರುತ್ತದೆ. ಇನ್ನುಳಿದ ಎಲ್ಲಾ ಅಧಿಕಾರಗಳು ಕಾಶ್ಮೀರದ ಜನ ರಚಿಸಿಕೊಳ್ಳುವ ಶಾಸನ ಸಭೆಗೆ ಸೇರಿರುತ್ತದೆ. ಕಾಶ್ಮೀರದ ಸಂವಿಧಾನ ಸಭೆ/ ಶಾಸನ ಸಭೆಯ ಒಪ್ಪಿಗೆ ಇಲ್ಲದೆ ಭಾರತವು ಇನ್ಯಾವುದೇ ಅಧಿಕಾರವನ್ನು ಕಾಶ್ಮೀರದ ಮೇಲೆ ಚಲಾಯಿಸುವಂತಿಲ್ಲ. ಹಾಗೂ ಕಾಶ್ಮೀರದಲ್ಲಿ ಶಾಂತಿ ನೆಲೆಸಿದ ಮೇಲೆ ಕಾಶ್ಮೀರದ ಜನಾಭಿಪ್ರಾಯದ ಮೇರೆಗೇ ಈ ಒಪ್ಪಂದವನ್ನು ಶಾಶ್ವತಗೊಳಿಸಲಾಗುವುದು ಎಂಬುದು ಭಾರತ ಕೊಟ್ಟ ಆಶ್ವಾಸನೆಯಾಗಿತ್ತು ಹಾಗೂ ಆ ಸೇರ್ಪೆ ಒಪ್ಪಂದದ ತಾತ್ಪರ್ಯವೂ ಆಗಿತ್ತು.

ಭಾರತ ಸರಕಾರವು ರಾಜಾ ಹರಿಸಿಂಗ್ ಜೊತೆ ಈ ಒಪ್ಪಂದ ಮಾಡಿ ಕೊಳ್ಳುವಾಗ ಇಂದಿನ ಬಿಜೆಪಿಯ ಪಿತಾಮಹ ಶ್ಯಾಮ ಪ್ರಸಾದ್ ಮುಖರ್ಜಿ ಕೂಡಾ ಆಗ ಇದರ ಬಗ್ಗೆ ಚಕಾರವೆತ್ತಿರಲಿಲ್ಲ. ಇನ್ನು ಇಂದು ಬಿಜೆಪಿ ಆರಾಧಿಸುವ ಸರ್ದಾರ್ ವಲಭಭಾಯಿ ಪಟೇಲರೇ ಆ ಮಾತುಕೆಯ ಒಟ್ಟಾರೆ ಉಸ್ತುವಾರಿ ವಹಿಸಿದ್ದರು.

ಆರ್ಟಿಕಲ್ 370- ಕಾಶ್ಮೀರಕ್ಕೆ ಪಟೇಲ್-ಮುಖರ್ಜಿ ಕೊಟ್ಟ ಭರವಸೆಯಲ್ಲವೇ?

 ಆ ನಂತರದಲ್ಲಿ ಈ ಒಪ್ಪಂದವನ್ನು ಆರ್ಟಿಕಲ್ 370ರ (ಆಗ ಆರ್ಟಿಕಲ್ 306-ಎ) ರೂಪದಲ್ಲಿ ಭಾರತ ಸಂವಿಧಾನದಲ್ಲಿ ಸೇರಿಸುವ ಪ್ರಕ್ರಿಯೆ ಪ್ರಾರಂಭವಾಯಿತು. ಆ ಒಟ್ಟಾರೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದವರು ಕಾಶ್ಮೀರದ ರಾಜನಿಂದ ಕಾಶ್ಮೀರದ ತಾತ್ಕಾಲಿಕ ಸರಕಾರದ ಮುಖ್ಯಸ್ಥರಾದ ಶೇಕ್ ಅಬ್ದುಲ್ಲಾ ಮತ್ತು ಇತರರು ಹಾಗೂ ಭಾರತ ಪ್ರಭುತ್ವದ ಕಡೆಯಿಂದ ನೆಹರೂ, ಸರ್ದಾರ್ ವಲ್ಲಭಭಾಯಿ ಪಟೇಲ್, ಸಂವಿಧಾನ ರಚನಾ ಸಭೆಯ ಕರಡು ಸಮಿತಿಯ ಸದಸ್ಯರಾದ ಗೋಪಾಲಸ್ವಾಮಿ ಅಯ್ಯಂಗಾರ್. ಇದರ ಬಹುಪಾಲು ಚರ್ಚೆಗಳು ವಲ್ಲಭಭಾಯಿ ಪಟೇಲರ ಗೃಹ ಕಚೇರಿಯಲ್ಲೇ ನಡೆಯುತ್ತಿದ್ದವು.

(Article 370- A Constitutional History Of Jammu And Kasmir- A.G. Noorani)

ಒಪ್ಪಿತ ಕರಡನ್ನು ಗೋಪಾಲಸ್ವಾಮಿ ಅಯ್ಯಂಗಾರ್ ಅವರು 1949ರ ಅಕ್ಟೋಬರ್ 17ರಂದು ಸಂವಿಧಾನ ರಚನಾ ಸಭೆಯಲ್ಲಿ ಮಂಡಿಸಿದರು. ಅಂದು ಸಭೆಯಲ್ಲಿದ್ದ ಶ್ಯಾಂ ಪ್ರಸಾದ್ ಮುಖರ್ಜಿಯವರು ಅರ್ಧ ಮಾತಿನ ಆಕ್ಷೇಪಣೆಯನ್ನೂ ವ್ಯಕ್ತಪಡಿಸಲಿಲ್ಲ. ವಲ್ಲಭಭಾಯಿ ಪಟೇಲರೇ ಅದನ್ನು ಅನುಮೋದಿಸುವ ಚರ್ಚೆಯ ನಾಯಕತ್ವ ವಹಿಸಿದರು. ಅಂದು ಈ ಆರ್ಟಿಕಲ್ ಸೇರ್ಪಡೆಯ ಮಾಡಲು ನಮ್ಮ ಸಂವಿಧಾನ ಸಭೆಯು ತೆಗೆದುಕೊಂಡ ಸಮಯ ಅರ್ಧ ದಿನಕ್ಕಿಂತಲೂ ಕಡಿಮೆ!

(ಇವೆಲ್ಲವೂ ಸಂವಿಧಾನ ಸಭೆಯ ನಡಾವಳಿಯಲ್ಲಿ ದಾಖಲುಗೊಂಡಿದ್ದು ಆಸಕ್ತರು ಈ ವೆಬ್ ವಿಳಾಸದಲ್ಲಿ ಇದನ್ನು ಪರಿಶೀಲಿಸಬಹುದು: (http://164.100.47.194/loksabha/writereaddata/cadebatefiles/C17101949.html)

ಹಾಗೆ ನೋಡಿದರೆ ಆರ್ಟಿಕಲ್ 370 ಕಾಶ್ಮೀರಕ್ಕೆ ವಿಶೇಷ ರಾಜಕೀಯಾಧಿಕಾರವನ್ನಾದರೂ ಕೊಡಬೇಕಿತ್ತು. ವಿದೇಶಾಂಗ, ರಕ್ಷಣೆ ಮತ್ತು ಸಂಪರ್ಕದ ವಿಷಯಗಳನ್ನು ಬಿಟ್ಟು ಭಾರತ ಸಂವಿಧಾನದ ಏಳನೇ ಶೆಡ್ಯೂಲಿನಲ್ಲಿರುವ ಯಾವುದೇ ಬಾಬತ್ತಿನ ಬಗ್ಗೆ ಶಾಸನ ರೂಪಿಸುವ ಸರ್ವಾಧಿಕಾರ ಕಾಶ್ಮೀರದ ಶಾಸನಸಭೆಗೆ ದಕ್ಕಬೇಕಿತ್ತು.

ಆರ್ಟಿಕಲ್ 370-ವಿಶ್ವಾಸದ್ರೋಹ ಮಾಡಿದ ಭಾರತ ಸರಕಾರಗಳು

ಆದರೆ ವಾಸ್ತವವಾಗಿ ನಡೆದದ್ದೇ ಬೇರೆ. ಕಾಂಗ್ರೆಸ್ ಸರಕಾರವೂ 1953ರಿಂದ ಮಾಡುತ್ತಾ ಬಂದ ವಂಚನೆಯಿಂದಾಗಿ ಏಳನೇ ಶೆಡ್ಯೂಲಿನಲ್ಲಿ ಕೇಂದ್ರದ ಪಟ್ಟಿಯಲ್ಲಿರುವ 97 ವಿಷಯಗಳಲ್ಲಿ 94 ವಿಷಯಗಳು ಈಗಾಗಲೇ ಕಾಶ್ಮೀರಕ್ಕೆ ಅನ್ವಯವಾಗುತ್ತಿದೆ. ಸಮವರ್ತಿ ಪಟ್ಟಿಯಲ್ಲಿರುವ 47 ವಿಷಯಗಳಲ್ಲಿ 27 ವಿಷಯಗಳಲ್ಲಿ ಕೇಂದ್ರದ ಶಾಸನವೇ ಕಾಶ್ಮೀರಕ್ಕೂ ಅನ್ವಯಿಸುತ್ತದೆ. ಹಾಗೆಯೇ ಭಾರತದ ಸಂವಿಧಾನದಲ್ಲಿರುವ 395 ಕಲಮುಗಳಲ್ಲಿ 260 ಕಲಮುಗಳು ಕಾಶ್ಮೀರಕ್ಕೆ ಅನ್ವಯವಾಗುತ್ತಿವೆ. ಬಾಕಿ 135 ಕಲಮುಗಳು ಈಗಾಗಲೇ ಕಾಶ್ಮೀರದ ಸಂವಿಧಾನದಲ್ಲಿದ್ದವು. ಹೀಗಾಗಿ ಕಾಶ್ಮೀರದಲ್ಲಿದ್ದದ್ದು ಪ್ರಾಣವನ್ನು ಕಳೆದುಕೊಂಡ ಆರ್ಟಿಕಲ್ 370 ಮಾತ್ರ. ಈಗ ಬಿಜೆಪಿ ಆ ಅಸ್ಥಿಪಂಜರವನ್ನು ೊಡೆದು ಪುಡಿ ಮಾಡಿದೆ.

ವಾಸ್ತವವೇನೆಂದರೆ ಕಳೆದ 70 ವರ್ಷಗಳಲ್ಲಿ ಕಾಶ್ಮೀರಕ್ಕೆ ಕರ್ನಾಟಕ ಹಾಗೂ ಇತರ ರಾಜ್ಯಗಳಿಗಿರುವಷ್ಟು ಅಧಿಕಾರವೂ ಸಿಕ್ಕಿಲ್ಲ. ಸಿಗದಂತೆ ಮಾಡಲಾಗಿದೆ. ಅದಕ್ಕೆಂದೇ 1953ರಲ್ಲಿ ಈ ಆರ್ಟಿಕಲ್ 370ರ ಪ್ರಾಮಾಣಿಕ ಅನುಷ್ಠಾನಕ್ಕೆ ಒತ್ತಾಯಿಸುತ್ತಿದ್ದ ಚುನಾಯಿತ ನಾಯಕ ಶೇಕ್ ಅಬ್ದುಲ್ಲಾರನ್ನು ನೆಹರೂ ಸರಕಾರ ಮೋಸದಿಂದ ಸೆರೆಮನೆಗೆ ದೂಡಿ ಅಲ್ಲಿ ತನ್ನ ಕೈಗೊಂಬೆ ಸರಕಾರವನ್ನು ಸ್ಥಾಪಿಸಿತು.

ದಿಲ್ಲಿ ದರ್ಬಾರಿನ ಕುತಂತ್ರಗಳು-ಕಾಶ್ಮೀರಿಗಳ ಭ್ರಮನಿರಸನಗಳು

ಇಲ್ಲಿಂದ ಶುರುವಾದ ಭಾರತ ಪ್ರಭುತ್ವದ ದ್ರೋಹದ ಕಥೆ ಈವರೆಗೂ ಮುಂದುವರಿಯುತ್ತಲೇ ಇದೆ. ಈ ಮಧ್ಯೆ ಒಮ್ಮೆ ತಾತ್ಕಾಲಿಕವಾಗಿ ಬಿಡುಗಡೆಯಾಗಿದ್ದ ಶೇಕ್ ಅಬ್ದುಲ್ಲಾರನ್ನು ಮತ್ತೆ 1965ರಲ್ಲಿ ಜೈಲಿಗೆ ತಳ್ಳಲಾಯಿತು. ಅಂತಿಮವಾಗಿ ಅವರು ದಿಲ್ಲಿ ಹೇಳುವಂತೆ ಕೇಳುವವರೆಗೆ ಸೆರೆಮನೆಯೇ ಗತಿಯಾಯಿತು. 1953ರಿಂದ ಈವರೆಗೆ ನಡೆದಿರುವ ಎಲ್ಲಾ ಚುನಾವಣೆಗಳೂ ರಿಗ್ ಆಗಿದ್ದವೆಂದು ಕೆಲವೊಮ್ಮೆ ಸರಕಾರ ಹಾಗೂ ಎಲ್ಲಾ ಸ್ವತಂತ್ರ ಅಧ್ಯಯನಗಳು ಸ್ಪಷ್ಟಪಡಿಸಿವೆ. 1984ರಲ್ಲಿ ಫಾರೂಕ್ ಅಬ್ದುಲ್ಲಾ ಸರಕಾರವನ್ನು ರಾಜ್ಯಪಾಲ ಜಗ್‌ಮೋಹನ್ ವಜಾ ಮಾಡಿ ಕೇಂದ್ರಾಡಳಿತವನ್ನು ಸ್ಥಾಪಿಸಿದರು. ಹೀಗಾಗಿ ಸಾರಾಂಶದಲ್ಲಿ ಆರ್ಟಿಕಲ್ 370 ಕೊಡುವ ಸ್ವಾಯತ್ತತೆ ಇರಲಿ ಇತರ ರಾಜ್ಯಗಳಿಗಿದ್ದ ಕನಿಷ್ಠ ಪ್ರಾತಿನಿಧಿಕ ಆಡಳಿತವನ್ನೂ ಕಾಶ್ಮೀರಿಗಳು ಅನುಭವಿಸಲಿಲ್ಲ. 1986ರಿಂದ ಏನಿಲ್ಲವೆಂದರೂ ಕಾಶ್ಮೀರದಲ್ಲಿ 8 ಬಾರಿ ರಾಷ್ಟ್ರಪತಿ ಆಡಳಿತವನ್ನು ಹೇರಲಾಗಿದೆ. ಈಗಲೂ ಕಳೆದ ಮೂರು ವರ್ಷಗಳಿಂದ ಅದು ರಾಷ್ಟ್ರಪತಿ ಆಡಳಿತದಲ್ಲೇ ಇದೆ. ರಾಜಕೀಯ ಪಕ್ಷಗಳ ನಾಯಕರು ಜೈಲಿನಲಿ್ಲ ಅಥವಾ ಗೃಹಬಂಧನದಲ್ಲಿ ಇದ್ದಾರೆ.

ಈ ಎಲ್ಲಾ ದಿಲ್ಲಿ-ದ್ರೋಹಗಳು ಉತ್ತುಂಗವನ್ನು ಮುಟ್ಟಿದ್ದು 1987ರಲ್ಲಿ. ಆಗ ನಡೆದ ವಿಧಾನಸಭಾ ಚುನಾವಣೆಯಲ್ಲಿ ಎಷ್ಟರ ಮಟ್ಟಿಗೆ ರಿಗ್ಗಿಂಗ್ ನಡೆಯಿತೆಂದರೆ ಆ ಚುನಾವಣೆಯಲ್ಲಿ ದಿಲ್ಲಿ ಚೇಲಾಗಳೆಂದೇ ಜನರು ತಿರಸ್ಕರಿಸಿದ್ದ ಕಾಂಗ್ರೆಸ್-ನ್ಯಾಷನಲ್ ಕಾನ್ಫರೆನ್ಸ್ ಅಭ್ಯರ್ಥಿಗಳು ಬಹುಪಾಲು ಕಡೆ ಸೋತರೂ ಅವನ್ನೇ ವಿಜಯಿಯೆಂದು ಘೋಷಿಸಲಾಯಿತು.

ಈ ದ್ರೋಹ ಮತ್ತು ವಂಚನೆಯಿಂದ ಹತಾಶಗೊಂಡವರಿಂದಲೇ 1989ರ ನಂತರ ಮಿಲಿಟೆಂಟ್ ಹೋರಾಟ ಪ್ರಾರಂಭವಾಯಿತು.

Writer - ಶಿವಸುಂದರ್

contributor

Editor - ಶಿವಸುಂದರ್

contributor

Similar News