ಚುನಾವಣಾ ಗೆಲುವಿಗಾಗಿ ದ್ವೇಷದ ವಿಷಬೀಜ

Update: 2022-03-24 04:28 GMT

ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಎಂಬತ್ತರ ದಶಕದ ವರೆಗೆ ಇಡೀ ಜಗತ್ತಿನ ಗಮನ ಸೆಳೆದಿತ್ತು. ಹೊಸದಾಗಿ ಸ್ವಾತಂತ್ರ್ಯ ಪಡೆದ ದೇಶವೊಂದು ಸಂಸದೀಯ ಜನತಂತ್ರ ಪದ್ಧತಿಯನ್ನು ಅಳವಡಿಸಿಕೊಂಡು ಯಶಸ್ವಿಯಾಗಿರುವುದು ಹೆಮ್ಮೆಯ ಸಂಗತಿಯಾಗಿತ್ತು. ಆದರೆ ತೊಂಭತ್ತರ ದಶಕದ ನಂತರ ಪರಿಸ್ಥಿತಿ ಬದಲಾಯಿತು. ಸೊವಿಯತ್ ರಶ್ಯದ ಸಮಾಜವಾದಿ ವ್ಯವಸ್ಥೆ ಕುಸಿದು ಬಿತ್ತು. ಆಗ ಮಾರುಕಟ್ಟೆ ಆರ್ಥಿಕತೆಯೊಂದಿಗೆ ಭಯೋತ್ಪಾದಕತೆ, ಕೋಮುವಾದಗಳು ತಲೆ ಎತ್ತಿದವು. ಭಾರತವೂ ಇದಕ್ಕೆ ಹೊರತಲ್ಲ. 1992ರ ಬಾಬರಿ ಮಸೀದಿಯ ನೆಲಸಮದೊಂದಿಗೆ ಆರಂಭಗೊಂಡ ಕೋಮು ದ್ವೇಷದ ರಾಜಕಾರಣ ಒಂದು ರಾಜಕೀಯ ಪಕ್ಷಕ್ಕೆ ಲಾಭವನ್ನು ತಂದುಕೊಟ್ಟಿತು. ಇನ್ನೊಂದೆಡೆ ಪ್ರಜಾಪ್ರಭುತ್ವ ವ್ಯವಸ್ಥೆಯ ಅಡಿಪಾಯದ ಕಲ್ಲುಗಳು ಸಡಿಲವಾಗತೊಡಗಿದವು.

ಯಾವುದೇ ಅಭಿವೃದ್ಧಿ ಕಾರ್ಯಕ್ರಮಗಳಿಲ್ಲದೆ, ಸಾಧನೆಗಳ ಅಗತ್ಯವಿಲ್ಲದೆ ಸಮುದಾಯಗಳ ನಡುವೆ ವೈಷಮ್ಯದ ವಿಷ ಬೀಜವನ್ನು ಬಿತ್ತಿ ಸುಲಭವಾಗಿ ಗೆದ್ದು ಅಧಿಕಾರವನ್ನು ಹಿಡಿಯಬಹುದು ಎಂಬುದು ಭಾರತದ ರಾಜಕೀಯ ಚಿತ್ರವನ್ನು ಬದಲಿಸಿತು. ಲೋಕಸಭೆಯಲ್ಲಿ ಕೇವಲ ಇಬ್ಬರು ಸದಸ್ಯರನ್ನು ಹೊಂದಿದ್ದ ಪಕ್ಷವೊಂದು ಕೋಮು ಪ್ರಚೋದಕ ರಾಜಕೀಯದಿಂದ ಒಕ್ಕೂಟ ಸರಕಾರದ ಸೂತ್ರ ಹಿಡಿದು ಕುಳಿತಿದೆ. ಅನಾಯಾಸವಾಗಿ ದೊರೆತ ಅಧಿಕಾರವನ್ನು ಉಳಿಸಿಕೊಳ್ಳಲು ಮತ್ತು ಆಗಾಗ ಎದುರಾಗುವ ವಿವಿಧ ಚುನಾವಣೆಗಳನ್ನು ಗೆಲ್ಲಲು ಅದು ಅನುಸರಿಸುವ ತಂತ್ರಕ್ಕೆ ಬಹುತ್ವ ಭಾರತದ ನೆಮ್ಮದಿಯ ಬದುಕು ಸಾಕಷ್ಟು ಬೆಲೆ ತೆತ್ತಿದೆ. ಅಯೋಧ್ಯೆಯಿಂದ ಆರಂಭವಾದ ಈ ಜನ ವಿಭಜಕ ರಾಜಕಾರಣ ಈಗ ಕರ್ನಾಟಕದ ಉಡುಪಿ ಜಿಲ್ಲೆಯ ಕಾಪು ಸೇರಿದಂತೆ ರಾಜ್ಯದ ಹಲವು ದೇವಸ್ಥಾನಗಳ ಜಾತ್ರೆಗಳ ತನಕ ಬಂದು ನಿಂತಿದೆ.

  ಕರ್ನಾಟಕದಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಗಳಿಸಲಾಗದ ಬಿಜೆಪಿ ಆಪರೇಷನ್ ಕಮಲದ ಮೂಲಕ ಪಕ್ಷಾಂತರಿಗಳ ಖರೀದಿಯ ಮೂಲಕ ರಾಜ್ಯದ ಅಧಿಕಾರ ಸೂತ್ರ ಹಿಡಿಯಿತು. ಅಧಿಕಾರ ವಹಿಸಿಕೊಂಡ ನಂತರ ಹೇಳಿಕೊಳ್ಳುವ ಯಾವ ಸಾಧನೆಯನ್ನೂ ಮಾಡಲಿಲ್ಲ. ಕೋವಿಡ್ ಸಾಂಕ್ರಾಮಿಕದ ಎರಡೂ ಅಲೆಗಳನ್ನು ನಿಭಾಯಿಸುವಲ್ಲಿ ಎಡವಿತು. ಅದರಲ್ಲೂ ಭ್ರಷ್ಟಾಚಾರದ ಹಗರಣಗಳು ನಡೆದವು. ಏತನ್ಮಧ್ಯೆ ಮುಂದಿನ ವರ್ಷ ಮತ್ತೆ ವಿಧಾನಸಭಾ ಚುನಾವಣೆ ನಡೆಯಲಿದೆ. ಜನರ ಬಳಿ ಹೋಗಲು ಮುಖವಿಲ್ಲ. ಹೇಳಿಕೊಳ್ಳಲು ಸಾಧನೆಗಳ ಪಟ್ಟಿಯಿಲ್ಲ. ಈಗ ಅದಕ್ಕೆ ಉಳಿದಿರುವ ಏಕೈಕ ದಾರಿ ಕೋಮು ವಿಭಜನೆ.ಅದಕ್ಕಾಗಿ ಹಿಜಾಬ್ ವಿವಾದ ಕೆರಳಿಸಲಾಯಿತು. ಇದೀಗ ಜಾತ್ರೆ, ಉತ್ಸವಗಳಲ್ಲಿ ಮುಸ್ಲಿಮ್ ವ್ಯಾಪಾರಿಗಳಿಗೆ ಅಂಗಡಿ ಇಡಲು ಬಿಡುವುದಿಲ್ಲ ಎಂದು ಗೂಂಡಾಗಿರಿ ನಡೆಸಲಾಗುತ್ತಿದೆ. ಶಿವಮೊಗ್ಗದ ಮಾರಿಕಾಂಬಾ ಜಾತ್ರೆಯಿಂದ ಆರಂಭವಾದ ಈ ದ್ವೇಷದ ರಾಜಕಾರಣ ಕಾಪು ಸೇರಿದಂತೆ ರಾಜ್ಯದ ಇನ್ನಿತರ ಕಡೆಗಳಿಗೂ ಕಾಲಿಟ್ಟಿದೆ. ಸಂಘ ಪರಿವಾರಕ್ಕೆ ಸೇರಿದ ಬಜರಂಗದಳ, ವಿಶ್ವ ಹಿಂದೂ ಪರಿಷತ್ತು ಮಾತ್ರವಲ್ಲ ಬಿಜೆಪಿಯಂತಹ ರಾಜಕೀಯ ಪಕ್ಷವೂ ಕೂಡ ಮುಸ್ಲಿಮ್ ವ್ಯಾಪಾರಿಗಳಿಗೆ ಜಾತ್ರೆಗಳಲ್ಲಿ ಅಂಗಡಿ ಹಾಕಲು ಬಿಡುವುದಿಲ್ಲ ಎಂದು ಬೆದರಿಕೆ ಹಾಕುತ್ತಿವೆ.

ಕಾಪುವಿನ ಮಾರಿಗುಡಿ ಜಾತ್ರೆ ಮಂಗಳವಾರದಂದು ಆರಂಭವಾಗಿದೆ. ಇಲ್ಲಿ ಮುಸ್ಲಿಮ್ ವ್ಯಾಪಾರಿಗಳಿಗೆ ಅವಕಾಶ ನೀಡಲಾಗಿಲ್ಲ. ಪಡುಬಿದ್ರಿಯ ಮಹಾಲಿಂಗೇಶ್ವರ ದೇವಸ್ಥಾನದ ರಥೋತ್ಸವದಲ್ಲೂ ಮುಸಲ್ಮಾನರಿಗೆ ಅವಕಾಶ ನೀಡಿಲ್ಲ. ಈ ಜಾತ್ರೆ, ಉತ್ಸವಗಳಲ್ಲಿ ಎಲ್ಲ ಸಮುದಾಯದವರಂತೆ ಮುಸ್ಲಿಮ್ ವ್ಯಾಪಾರಿಗಳು ಅಂಗಡಿ ಹಾಕುತ್ತಾ ಬಂದಿದ್ದಾರೆ. ಈ ಸಾಮರಸ್ಯದ, ಸೌಹಾರ್ದ ಬದುಕಿಗೆ ಹುಳಿ ಹಿಂಡಿ ತನ್ನ ವೋಟ್ ಬ್ಯಾಂಕನ್ನು ಗಟ್ಟಿಗೊಳಿಸಿಕೊಳ್ಳಲು ಹೊರಟಿರುವ ಬಿಜೆಪಿ ಸಂವಿಧಾನದ ಮೂಲಕ ಅಧಿಕಾರಕ್ಕೆ ಬಂದು ಅದೇ ಸಂವಿಧಾನಕ್ಕೆ ದ್ರೋಹ ಬಗೆಯುತ್ತಿದೆ ಎಂದು ಹೇಳಿದರೆ ತಪ್ಪಿಲ್ಲ.

ಪ್ರತಿ ಚುನಾವಣೆ ಸಮೀಪಿಸಿದಾಗೆಲ್ಲ ತನ್ನ ಆಡಳಿತ ವೈಫಲ್ಯಗಳನ್ನು ಮತ್ತು ಹಗರಣಗಳನ್ನು ಮುಚ್ಚಿಕೊಳ್ಳಲು ಬಿಜೆಪಿ ದ್ವೇಷ ರಾಜಕೀಯದ ಮೊರೆ ಹೋಗುತ್ತದೆ. ಇದು ಯಾರದೋ ಆರೋಪವಲ್ಲ. ಇಷ್ಟೆಲ್ಲಾ ನಡೆದರೂ ರಾಜ್ಯದ ಬಿಜೆಪಿ ಸರಕಾರ ಮೂಕ ಪ್ರೇಕ್ಷಕನಂತಿರುವುದೇ ಇದಕ್ಕೆ ಸಾಕ್ಷಿಯಾಗಿದೆ.

ಜಾತ್ಯತೀತ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾವುದೋ ಒಂದು ಸಮುದಾಯದ ಜನರಿಗೆ ವ್ಯಾಪಾರ ಮಾಡಲು ಬಿಡುವುದಿಲ್ಲ ಎಂದು ಬೀದಿಯಲ್ಲಿ ಪುಂಡಾಟಿಕೆ ನಡೆಸುವುದು ಕಾನೂನು ಭಂಗ ಎನಿಸಿಕೊಳ್ಳುತ್ತದೆ. ನಾವು ಒಪ್ಪಿಕೊಂಡಿರುವ ಬಾಬಾಸಾಹೇಬರ ಸಂವಿಧಾನದ ಪ್ರಕಾರ ಹಿಂದೂ ವ್ಯಾಪಾರಿಗಳಂತೆ ಮುಸ್ಲಿಮ್ ಮತ್ತು ಇತರ ಸಮುದಾಯದ ವ್ಯಾಪಾರಿಗಳಿಗೂ ವ್ಯಾಪಾರ ಮಾಡಲು ಅವಕಾಶವಿದೆ. ರಾಜ್ಯಾಂಗ ಒದಗಿಸಿರುವ ಈ ಅವಕಾಶಕ್ಕೆ ಯಾರಿಂದಲೂ ಅಡ್ಡಿಯಾಗಬಾರದು. ಇಂತಹ ಸೂಕ್ಷ್ಮ ಸನ್ನಿವೇಶದಲ್ಲಿ ರಾಜ್ಯ ಸರಕಾರ ಕಂಡೂ ಕಾಣದಂತೆ ತೆಪ್ಪಗಿರಬಾರದು. ಕ್ರಿಯೆ, ಪ್ರತಿಕ್ರಿಯೆಗಳ ಬಗ್ಗೆ ಮಾತಾಡುವ ಮುಖ್ಯ ಮಂತ್ರಿಗಳು ಇನ್ನಾದರೂ ತಮ್ಮ ಸ್ಥಾನದ ಹೊಣೆಗಾರಿಕೆ ಅರಿತು ಕಾನೂನು, ಸುವ್ಯವಸ್ಥೆ ಪಾಲನೆಗೆ ಮುಂದಾಗಬೇಕು.

ಶಿವಮೊಗ್ಗ ಮತ್ತು ಕಾಪು ಪ್ರಕರಣಗಳಿಗೆ ಸಂಬಂಧಿಸಿದಂತೆ ರಾಜ್ಯ ಸರಕಾರ ತಕ್ಷಣ ಮಧ್ಯಪ್ರವೇಶ ಮಾಡಬೇಕು. ಮುಸ್ಲಿಮ್ ಹಾಗೂ ಇತರ ಸಮುದಾಯಗಳ ವ್ಯಾಪಾರಿಗಳಿಗೆ ಜಾತ್ರೆಗಳಲ್ಲಿ ಅಂಗಡಿ ಹಾಕಿ ವ್ಯಾಪಾರ ಮಾಡಲು ಅವಕಾಶವನ್ನು ಕಲ್ಪಿಸಿಕೊಡಬೇಕು.
ಕೋವಿಡ್ ಸಾಂಕ್ರಾಮಿಕದಿಂದಾಗಿ ಎರಡು ವರ್ಷಗಳಿಂದ ನಡೆಯದ ಜಾತ್ರೆ ಉತ್ಸವಗಳು ಈಗ ನಡೆಯುತ್ತಿವೆ. ಜನಸಾಮಾನ್ಯರು ಸಂಭ್ರಮದಿಂದ ಒಂದುಗೂಡಿ ಆಚರಿಸುವ ಜಾತ್ರೆ, ಉತ್ಸವಗಳಿಗೆ ಅಡ್ಡಿಯುಂಟು ಮಾಡುವವರ ವಿರುದ್ಧ ಸರಕಾರ ಕ್ರಮ ಕೈಗೊಳ್ಳಬೇಕು. ಜನರನ್ನು ಜಾತಿ, ಮತದ ಹೆಸರಿನಲ್ಲಿ ಒಡೆದು ವೋಟಿನ ಬೆಳೆ ತೆಗೆಯುವುದು ಅನೈತಿಕ, ದೇಶ ವಿರೋಧಿ ರಾಜಕಾರಣ. ತಾತ್ಕಾಲಿಕವಾಗಿ ಇದು ಲಾಭದಾಯಕ ಎನಿಸಿದರೂ ಮುಂದೆ ಇದಕ್ಕಾಗಿ ಭಾರೀ ಬೆಲೆಯನ್ನು ತೆರಬೇಕಾಗುತ್ತದೆ.

ಭಾರತ ಎಂಬುದು ಎಲ್ಲ ಜನ ಸಮುದಾಯಗಳಿಗೆ ಸೇರಿದ ದೇಶ. ಬಹುತ್ವ ಈ ನೆಲದ ಅಂತಸತ್ವ. ಇಲ್ಲಿ ಎಲ್ಲರಿಗೂ ಬದುಕುವ ಹಕ್ಕಿದೆ. ಈ ಹಕ್ಕಿಗೆ ಸಂವಿಧಾನ ಖಾತರಿ ನೀಡಿದೆ. ಸಾಂವಿಧಾನಿಕವಾಗಿ ಅಸ್ತಿತ್ವಕ್ಕೆ ಬಂದ ಸರಕಾರ ಸಂವಿಧಾನದ ಬಗ್ಗೆ ನಿಷ್ಠೆ ಹೊಂದಿರಬೇಕು ಸಂವಿಧಾನೇತರ ಶಕ್ತಿ ಕೇಂದ್ರಗಳ ಕೈಗೊಂಬೆಯಂತೆ ವರ್ತಿಸಬಾರದು. ಚುನಾವಣಾ ಲಾಭಗಳಿಕೆಗಾಗಿ ಜನಸಾಮಾನ್ಯರ ನೆಮ್ಮದಿಯ ಬದುಕಿಗೆ ಕೊಳ್ಳಿ ಇಡುವ ಕೆಲಸಕ್ಕೆ ಕೈ ಹಾಕಬಾರದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News