ಅಮೆರಿಕದ ನಿರ್ಬಂಧ ವ್ಯಾಪ್ತಿಗೆ ರಶ್ಯದ 400ಕ್ಕೂ ಅಧಿಕ ಮಂದಿ ಸೇರ್ಪಡೆ

Update: 2022-03-25 18:42 GMT

ವಾಷಿಂಗ್ಟನ್, ಮಾ.25: ರಶ್ಯ ಸಂಸತ್ತಿನ ಕೆಳಮನೆ(ಡ್ಯೂಮಾ), ಅದರ 382 ಸದಸ್ಯರು, ರಕ್ಷಣಾ ಸಾಮಾಗ್ರಿ ಉತ್ಪಾದನಾ ಸಂಸ್ಥೆಗಳ ಸಹಿತ 400ಕ್ಕೂ ಅಧಿಕ ವ್ಯಕ್ತಿ/ಸಂಸ್ಥೆಗಳನ್ನು ಅಮೆರಿಕದ ನಿರ್ಬಂಧ ವ್ಯಾಪ್ತಿಯಡಿ ಸೇರಿಸಲಾಗಿದೆ ಎಂದು ಅಮೆರಿಕದ ಅಧ್ಯಕ್ಷ ಬೈಡನ್ ಹಾಗೂ ಯುರೋಪಿಯನ್ ಕಮಿಷನ್ ಅಧ್ಯಕ್ಷೆ ಉರ್ಸುಲಾ ವಾನ್ಡರ್ ಲಿಯೆನ್ ಜಂಟಿ ಹೇಳಿಕೆ ತಿಳಿಸಿದೆ.

ಯುರೋಪಿಯನ್ ಯೂನಿಯನ್, ನಮ್ಮ ಮಿತ್ರರು ಮತ್ತು ಪಾಲುದಾರರು ತೆಗೆದುಕೊಂಡ ಕ್ರಮಗಳಿಗೆ ಅನುಗುಣವಾಗಿ ಮತ್ತು ಪೂರಕವಾಗಿ 400 ಕ್ಕೂ ಅಧಿಕ ವ್ಯಕ್ತಿಗಳು/ಘಟಕಗಳನ್ನು ಹೊಸದಾಗಿ ನಿರ್ಬಂಧದ ವ್ಯಾಪ್ತಿಗೆ ಸೇರಿಸಲು ಅಮೆರಿಕ ನಿರ್ಧರಿಸಿದೆ. ಇದರಲ್ಲಿ ರಶ್ಯ ಸಂಸತ್ತಿನ ಕೆಳಮನೆ ಡ್ಯೂಮಾ ಮತ್ತು ಅದರ 382 ಸದಸ್ಯರು, ಹಲವು ರಕ್ಷಣಾ ಸಾಮಾಗ್ರಿ ಉತ್ಪಾದನಾ ಸಂಸ್ಥೆಗಳು ಸೇರಿವೆ. ಪುಟಿನ್ ಅವರ ಯುದ್ಧದ ಯಂತ್ರಗಳಿಗೆ ಇಂಧನ ಒದಗಿಸುವ ಮತ್ತು ರಶ್ಯದ ರಕ್ಷಣಾ ಉದ್ಯಮದ ಮೂಲಾಧಾರವಾಗಿರುವ ಕೆಲವು ಸಂಸ್ಥೆಗಳು, ರಶ್ಯದ ಬೃಹತ್ ಆರ್ಥಿಕ ಸಂಸ್ಥೆಯ ಮುಖ್ಯಸ್ಥರ ಸಹಿತ 20ಕ್ಕೂ ಅಧಿಕ ಆರ್ಥಿಕ ಸಂಸ್ಥೆಗಳು ನಿರ್ಬಂಧದ ವ್ಯಾಪ್ತಿಗೆ ಸೇರಿವೆ ಎಂದು ಜಂಟಿ ಹೇಳಿಕೆ ತಿಳಿಸಿದೆ.

ಉಕ್ರೇನ್‌ ಗೆ ಲಭಿಸುವ ಅಂತರಾಷ್ಟ್ರೀಯ ನೆರವಿನ ಸಮನ್ವಯದಲ್ಲಿ ಮತ್ತು ರಶ್ಯದ ವಿರುದ್ಧದ ನಿರ್ಬಂಧ ಜಾರಿಗೆ ಸಂಬಂಧಿಸಿ ಅಮೆರಿಕ ಮತ್ತು ಯುರೋಪಿಯನ್ ಯೂನಿಯನ್ ನಿಕಟವಾಗಿ ಕಾರ್ಯನಿರ್ವಹಿಸಲಿವೆ. ಉಕ್ರೇನ್ ವಿರುದ್ಧ ರಶ್ಯದ ಅಸಮರ್ಥನೀಯ ಮತ್ತು ಅಪ್ರಚೋದಿತ ಆಕ್ರಮಣವನ್ನು ಒಕ್ಕೊರಲಿನಿಂದ ಖಂಡಿಸುತ್ತೇವೆ. ತಮ್ಮ ಮಾತೃಭೂಮಿಯನ್ನು ಕೆಚ್ಚೆದೆಯಿಂದ ರಕ್ಷಿಸಿಕೊಳ್ಳುತ್ತಿರುವ ಉಕ್ರೇನ್ ಜನರೊಂದಿಗೆ ನಾವಿದ್ದೇವೆ. ತನ್ನ ನೆರೆರಾಷ್ಟ್ರದ ವಿರುದ್ಧದ ಕ್ರೂರ ಪ್ರಹಾರವನ್ನು ತಕ್ಷಣ ನಿಲ್ಲಿಸುವಂತೆ ರಶ್ಯವನ್ನು ಆಗ್ರಹಿಸುತ್ತಿದ್ದೇವೆ. ಉಕ್ರೇನ್ ನ ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆಗೆ ನಮ್ಮ ಬೆಂಬಲವಿದೆ. ಮಾನವ ಹಕ್ಕುಗಳಿಗೆ ಗೌರವ, ಪ್ರಜಾಪ್ರಭುತ್ವ, ಜಾಗತಿಕ ಶಾಂತಿ ಮತ್ತು ಸ್ಥಿರತೆ ಹಾಗೂ ನಿಯಮಾಧಾರಿತ ಅಂತರಾಷ್ಟ್ರೀಯ ಕಾನೂನನ್ನು ಗೌರವಿಸಬೇಕು ಎಂಬ ನಮ್ಮ ನಿಲುವಿಗೆ ಬದ್ಧವಾಗಿದ್ದೇವೆ ಎಂದು ಹೇಳಿಕೆ ತಿಳಿಸಿದೆ. 

ರಶ್ಯದ ಆಕ್ರಮಣದ ಬಳಿಕ ದೇಶಬಿಟ್ಟಿರುವ ಲಕ್ಷಾಂತರ ಉಕ್ರೇನ್ ಪ್ರಜೆಗಳಿಗೆ ಮತ್ತು ರಶ್ಯದ ಯುದ್ಧದಿಂದ ತೀವ್ರ ಪರಿಣಾಮಕ್ಕೆ ಒಳಗಾಗಿರುವ ವಿಶ್ವದಾದ್ಯಂತದ ಜನರಿಗೆ ಮಾನವೀಯ ನೆರವು ತಲುಪಿಸುವ ಕಾರ್ಯ ಮುಂದುವರಿಯಲಿದೆ. ಅಂತರಾಷ್ಟ್ರೀಯ ನೆರವು ನಿಧಿಗೆ ಅಮೆರಿಕ 1 ಬಿಲಿಯನ್ ಡಾಲರ್ ಗೂ ಹೆಚ್ಚಿನ ನೆರವು ಒದಗಿಸಲು ನಿರ್ಧರಿಸಿದೆ ಮತ್ತು ಯುರೋಪಿಯನ್ ಯೂನಿಯನ್ 550 ಮಿಲಿಯನ್ ಯೂರೊ ಮೊತ್ತದ ನೆರವನ್ನು ಒದಗಿಸಲಿದೆ. ಜತೆಗೆ, ಉಕ್ರೇನ್‌ ನಿಂದ ಹರಿದು ಬರುತ್ತಿರುವ ನಿರಾಶ್ರಿತರಿಗೆ ತಾತ್ಕಾಲಿಕ ನೆಲೆ ಕಲ್ಪಿಸಲು ನೆರೆರಾಷ್ಟ್ರಗಳಿಗೆ ನೆರವು ಒದಗಿಸಲಾಗುವುದು ಎಂದು ಜಂಟಿ ಹೇಳಿಕೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News