ನಿಟ್ಟೆ: ಉದ್ಘಾಟನೆಗೆ ಸಜ್ಜುಗೊಂಡ ವೈಜ್ಞಾನಿಕ ತ್ಯಾಜ್ಯ ಸಂಸ್ಕರಣಾ ಕೇಂದ್ರ

Update: 2022-03-28 14:34 GMT

ಉಡುಪಿ: ಗ್ರಾಮೀಣ ಭಾರತದ, ಸಾರ್ವಜನಿಕ  ವಲಯದಲ್ಲಿ ಪ್ರತಿ ದಿನ 10 ಟನ್ ಸಾಮರ್ಥ್ಯದ ಘನ ತ್ಯಾಜ್ಯವನ್ನು ಆಧುನಿಕ ರೀತಿಯಲ್ಲಿ, ಪರಸರಕ್ಕೆ ಹಾನಿಯಾಗದಂತೆ, ಅತ್ಯಂತ ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ಏಕೈಕ ಸಮಗ್ರ ತ್ಯಾಜ್ಯ ನಿರ್ವಹಣಾ ಕೇಂದ್ರ (ಮೆಟಿರಿಯಲ್ಸ್ ರಿಕವರಿ ಫೆಸಿಲಿಟಿ ಸೆಂಟರ್- ಎಂಆರ್‌ಎಫ್ ಕೇಂದ್ರ) ಉಡುಪಿ ಜಿಲ್ಲಾ ಪಂಚಾಯತ್ ಅನುಷ್ಠಾನ ಗೊಳಿಸುತ್ತಿರುವ ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ) ಕಾರ್ಯಕ್ರಮದಡಿಯಲ್ಲಿ ಕಾರ್ಕಳ ತಾಲೂಕು ನಿಟ್ಟೆ ಗ್ರಾಪಂ ವ್ಯಾಪ್ತಿಯಲ್ಲಿ ಸಂಪೂರ್ಣ ಸಜ್ಜುಗೊಂಡಿದ್ದು, ಎಪ್ರಿಲ್ 3ರಂದು ಉದ್ಘಾಟನೆಗೊಂಡು ಕಾರ್ಯಾರಂಭಿಸಲಿದೆ.

ಈ ಕೇಂದ್ರ ತ್ಯಾಜ್ಯದಿಂದ  ಸುಮಾರು  ಶೇ.90ಕ್ಕಿಂತಲೂ  ಅಧಿಕ ಸಂಪನ್ಮೂಲ ವನ್ನು ಪಡೆಯುವ ಸಾಮರ್ಥ್ಯವನ್ನು ಹೊಂದಿದ್ದು, ಕಡಿಮೆ ಮಾನವ ಸಂಪನ್ಮೂಲ ಸಹಾಯದಿಂದ ಪರಿಣಾಮಕಾರಿಯಾಗಿ ತ್ಯಾಜ್ಯ ನಿರ್ವಹಣೆ ಮಾಡುವ ಈ ಕೇಂದ್ರ ಅವೈಜ್ಞಾನಿಕ ತ್ಯಾಜ್ಯ ನಿರ್ವಹಣೆಗೆ ಪರಿಹಾರ ಒದಗಿಸಿ ಪರಿಸರ ಸಂರಕ್ಷಣೆ ಗೆ ಮಹತ್ತರವಾದ ಕೊಡುಗೆ ನೀಡಬಲ್ಲದು.

ಯೋಜನೆಯ ಉದ್ದೇಶಗಳು:

೧.ಗ್ರಾಪಂ ವ್ಯಾಪ್ತಿಯಲ್ಲಿ ಕಡಿಮೆ ಮಾನವ ಸಂಪನ್ಮೂಲದ ಬಳಕೆಯಿಂದ ಉತ್ತಮ ತ್ಯಾಜ್ಯ ನಿರ್ವಹಣಾ ಸೇವೆ ಒದಗಿಸುವುದು. ೨.ತ್ಯಾಜ್ಯವನ್ನು ಕೇಂದ್ರೀಕೃತವಾಗಿ  ನಿರ್ವಹಣೆ ಮಾಡುವುದು. ಆ ಮೂಲಕ ತ್ಯಾಜ್ಯ ನಿರ್ವಹಣಾ ಯೋಜನೆಯನ್ನು ದಕ್ಷತೆಯಿಂದ ಜಾರಿ ಗೊಳಿಸುವುದು.
೩.ತ್ಯಾಜ್ಯದಿಂದ ಅತೀ ಹೆಚ್ಚಿನ ಸಂಪನ್ಮೂಲವನ್ನು ಪಡೆಯುವುದು ಆ ಮೂಲಕ ಅವೈಜ್ಞಾನಿಕ ತ್ಯಾಜ್ಯ ನಿರ್ವಹಣೆಯನ್ನು ತಡೆಗಟ್ಟಿ ಪರಿಸರ ಸಂರಕ್ಷಣೆ ಮಾಡುವುದು.
೪.ಸರಳ ಯಂತ್ರಗಳ ಬಳಕೆಯಿಂದ ತ್ಯಾಜ್ಯ ನಿರ್ವಹಣೆಯಲ್ಲಿ ಕರ್ತವ್ಯ ನಿರ್ವಹಿಸುವ ಮಾನವ ಸಂಪನ್ಮೂಲದ ದಕ್ಷತೆ ಹೆಚ್ಚಿಸುವುದು. ೫.ಸ್ವಚ್ಛ ಸಂಕೀರ್ಣದಲ್ಲಿ ಉತ್ಪತಿಯಾಗುವ ಮರುಬಳಕೆ ಮಾಡಲು ಸಾಧ್ಯವಿಲ್ಲದ ತ್ಯಾಜ್ಯಕ್ಕೆ ವಿಲೇವಾರಿ ಸವಾಲು ಹಾಗೂ ವೆಚ್ಚದಾಯಕವಾಗಿದ್ದು ಇದಕ್ಕೆ ಸೂಕ್ತ ಪರಿಹಾರ ಒದಗಿಸುವುದು.
೬.ತ್ಯಾಜ್ಯವನ್ನು ಅಧಿಕೃತ ಹಾಗೂ ಅಂತಿಮ ರಿಸೈಕ್‌ಲಿಂಗ್ ಕೇಂದ್ರಕ್ಕೆ ವಿಲೇವಾರಿ ಮಾಡುವುದು.
೭. ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕೆಲಸಗಾರರಿಗೆ  ಉತ್ತಮ ಸೌಲಭ್ಯ, ಸಾಮಾಜಿಕ ಭದ್ರತೆ, ಆರೋಗ್ಯ ಮತ್ತು ಸುರಕ್ಷಾ ಸೌಲಭ್ಯ ಒದಗಿಸುವುದು.
೮. ತ್ಯಾಜ್ಯ ನಿರ್ವಹಣೆ ಕುರಿತಂತೆ ಉತ್ತಮ ವಾದ ದತ್ತಾಂಶ/ದಾಖಲೆಗಳ ನಿರ್ವಹಣೆ ಮಾಡುವುದು.
೯. ಮರುಬಳಕೆ ಮಾಡಲು ಸಾಧ್ಯಲ್ಲದ ರಿಸೈಕಲಿಂಗ್ ಕಂಪನಿಗಳಿಗೆ ಕಚ್ಛಾವಸ್ತುಗಳಾಗಿ ಪೂರೈಕೆ ಮಾಡುವುದು
ಅನುಷ್ಠಾನ ಇಲಾಖೆಗಳು ಮತ್ತು ಪಾಲುದಾರರು: ರಾಜ್ಯ ಸರಕಾರದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಮಂಜೂರು ಮಾಡಿದ ಯೋಜನೆಯನ್ನು ಉಡುಪಿ ಜಿಲ್ಲಾಪಂಚಾಯತ್‌ನ ಮೇಲ್ವಿಚಾರಣೆ ಯಲ್ಲಿ ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಪಂ ವ್ಯಾಪ್ತಿಯಲ್ಲಿ ಅನುಷ್ಠಾನ ಮಾಡಲಾಗಿದೆ. ಕಾರ್ಕಳ, ಉಡುಪಿ, ಕಾಪು, ಹೆಬ್ರಿಯ ಸುಮಾರು 42 ಗ್ರಾಮ ಪಂಚಾಯತ್‌ಗಳು ಈ ಯೋಜನೆಗೆ ಒಳಪಡುತ್ತವೆ. ಈ ಯೋಜನೆ ಅನುಷ್ಠಾನಕ್ಕೆ ಸಾಹಸ್ ಜೀರೋ ವೇಸ್ಟ್ ಪ್ರೈವೇಟ್ ಲಿ. ಇವರು ತಾಂತ್ರಿಕ ಮಾರ್ಗದರ್ಶನ ನೀಡಿದ್ದು, ಮಂಗಳೂರಿನ ಮಂಗಳ ರಿಸೋರ್ಟ್ ಮ್ಯಾನೇಜ್‌ಮೆಂಟ್ ಇವರು ಘಟಕದ ನಿರ್ವಹಣೆ ಮಾಡುತ್ತಿದ್ದಾರೆ. 

ಯೋಜನೆಯ ವಿವರಣೆ: ಯೋಜನೆ ಒಳಪಡುವ ಗ್ರಾಪಂ ವ್ಯಾಪ್ತಿಯಲ್ಲಿ ಮನೆ ಮನೆಯಿಂದ ಸಂಗ್ರಹಿಸಲಾಗುವ ಒಣ ತ್ಯಾಜ್ಯವನ್ನು ಒಣ ತ್ಯಾಜ್ಯ ನಿರ್ವಹಣಾ ಕೇಂದ್ರದ ಸ್ವಚ್ಛ ಸಂಕೀರ್ಣಕ್ಕೆ ತರಲಾಗುತ್ತದೆ. ಸ್ವಚ್ಛ ಸಂಕೀರ್ಣದಲ್ಲಿ ತ್ಯಾಜ್ಯವನ್ನು ತೂಕ ಮಾಡಿ ಪ್ಯಾಕ್ ಮಾಡಿ ಇಡಲಾಗುತ್ತದೆ. ಪ್ರತಿವಾರ ಎಂಆರ್‌ಎಫ್ ಕೇಂದ್ರದ  ತ್ಯಾಜ್ಯ ಸಂಗ್ರಹಣಾ ವಾಹನವು ಸ್ವಚ್ಛ ಸಂಕೀರ್ಣ ಗಳಿಂದ ಒಣ ತ್ಯಾಜ್ಯವನ್ನು ಸಂಗ್ರಹಿಸುತ್ತದೆ.

ಹೀಗೆ ಸಂಗ್ರಹಿಸಿದ ತ್ಯಾಜ್ಯವನ್ನು ಎಂಆರ್‌ಎಫ್ ಕೇಂದ್ರದಲ್ಲಿ ತೂಕ ಮಾಡಿ ಶೇಖರಣಾ ವಿಭಾಗದಲ್ಲಿ ಶೇಖರಿಸಲಾಗುತ್ತದೆ. ನಂತರ ಕ್ವನ್ವೆಯರ್ ಬೆಲ್ಟ್ ಸಹಾಯದಿಂದ ಸುಮಾರು 25 ರಿಂದ 30 ವಿಭಾಗವಾಗಿ ವಿಂಗಡಿಸಲಾಗುತ್ತದೆ. ಹೀಗೆ ವಿಂಗಡಿಸಿದ ತ್ಯಾಜ್ಯವನ್ನು ಬೈಲಿಂಗ್ ಯಂತ್ರದ ಸಹಾಯದಿಂದ ಬೈಲ್ ಮಾಡಲಾಗುತ್ತದೆ. ಬೈಲ್ ಮಾಡಿದ ತ್ಯಾಜ್ಯದಲ್ಲಿ ಪುನರ್ ಬಳಕೆ ಮಾಡಬಹುದಾದ ತ್ಯಾಜ್ಯವನ್ನು ಅಧಿಕೃತ ರಿಸೈಕಲಿಂಗ್ ಕಂಪೆನಿಗಳಿಗೆ ಮಾರಾಟ ಮಾಡಲಾಗುತ್ತದೆ. ಪುರ್ನಬಳಕೆ ಮಾಡಲು ಸಾಧ್ಯಲ್ಲದ ತ್ಯಾಜ್ಯವನ್ನು ಕೋ ಪ್ರೋಸೆಸಿಂಗ್ ಉದ್ದೇಶಕ್ಕೆ ಸಿಮೆಂಟ್ ಫ್ಯಾಕ್ಟರಿಗಳಿಗೆ ಸಾಗಿಸಲಾಗುತ್ತದೆ.

ಈ ಘಟಕದಲ್ಲಿ 30 ಸಿಬ್ಬಂದಿಗಳು ಕರ್ತವ್ಯ ನಿರ್ವಸುತ್ತಿದ್ದಾರೆ. 15 ಮಂದಿ ಯನ್ನು ಕನ್ವೆಯರ್‌ಲೈನ್‌ನಲ್ಲಿ ತ್ಯಾಜ್ಯ ವಿಂಗಡಣೆಯನ್ನು ಮಾಡಲು ನಿಯೋಜಿ ಸಲಾಗಿದೆ. 4 ಮಂದಿ ಬೈಲಿಂಗ್ ಯಂತ್ರದ ನಿರ್ವಹಣೆಯನ್ನು ಮಾಡುತ್ತಾರೆ. ಒಬ್ಬರು ಲೆಕ್ಕಪತ್ರ ನಿರ್ವಹಣೆಯನ್ನು ಮಾಡುತ್ತಾರೆ.ಇಬ್ಬರು ಸೆಕ್ಯೂರಿಟ್ ಗಾರ್ಡ್ ಹಾಗೂ ಇಬ್ಬರು ಹೌಸ್ ಕೀಪಿಂಗ್ ಸಿಬ್ಬಂದಿಗಳು ಇದ್ದಾರೆ. ಹಾಗೂ ಘಟಕದ ಮೇಲ್ವಿಚಾರಣೆಗೆ ಇಬ್ಬರು ಮೇಲ್ವಿಚಾರಕರಿದ್ದಾರೆ. ಒಬ್ಬರು ಡ್ರೈವರ್ ಹಾಗೂ ಇಬ್ಬರು ಲೋಡರ್‌ಗಳು ಸ್ವಚ್ಛ ಸಂಕೀರ್ಣದಿಂದ ತ್ಯಾಜ್ಯವನ್ನು ಸಂಗ್ರಹಣೆ ಮಾಡುತ್ತಾರೆ.

ಎಂಆರ್‌ಎಫ್ ಘಟಕವು 10 ಸಾವಿರ ಚದರಅಡಿಯ ಕಟ್ಟಡವನ್ನು ಹೊಂದಿದ್ದು, ದಿನವೊಂದಕ್ಕೆ 10 ಟನ್ ತ್ಯಾಜ್ಯವನ್ನು ನಿರ್ವಹಣೆ ಮಾಡುವ ಸಾಮರ್ಥ್ಯ ಹೊಂದಿದೆ. ಘಟಕದಲ್ಲಿ ತ್ಯಾಜ್ಯ ಶೇಖರಣೆ, ವಿಂಗಡಣೆ ಹಾಗೂ ಬೈಲಿಂಗ್ ಮಾಡುವ ವಿಭಾಗಗಳಿದ್ದು, ಕಚೇರಿ, ಸೆಕ್ಯೂರಿಟಿ ರೂಮ್, ವಿಶ್ರಾಂತಿ ಕೊಠಡಿ ಹಾಗೂ ಶೌಚಾಲಯ ಸೌಲಭ್ಯವನ್ನು ಹೊಂದಿದೆ.  ಕನ್ವೆಯರ್ ಬೆಲ್ಟ್, ಬೈಲಿಂಗ್ ಯಂತ್ರ, ಸ್ಟ್ಯಾಕರ್, ಫೈರ್ ಸೇಫ್ಟಿ ಸೌಲಭ್ಯ, ಜನರೇಟರ್, ಸಿಸಿಟಿವಿ, 70 ಟನ್ ಸಾಮರ್ಥ್ಯದ ವೇ ಬ್ರಿಡ್ಜ್ ಹಾಗೂ 7 ಟನ್ ಸಾಮರ್ಥ್ಯದ ಟ್ರಕ್ ಮುಂತಾದ ಸೌಲಭ್ಯಗಳಿವೆ.

ಈ ಯೋಜನೆಗೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಬೆಂಗಳೂರು ಇಲ್ಲಿಂದ  ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ) ಯೋಜನೆಯಡಿ  ಬಿಡುಗಡೆಯಾದ ೨.೫೦ ಕೋಟಿ ರೂ. ಅನುದಾನವನ್ನು ಬಳಸಿಕೊಳ್ಳಲಾಗಿದೆ. ಅಲ್ಲದೆ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ  ೮.೩೨ ಲಕ್ಷ ರೂ. ಹಾಗೂ ೧೫ನೇ ಹಣಕಾಸು ಯೋಜನೆಯಡಿ ೨೮.೩೫ ಲಕ್ಷ ರೂ. ಗ್ರಾಮ ವಿಕಾಸ ಯೋಜನೆಯಡಿ ೧೦.೦೦ ಲಕ್ಷ ಹಾಗೂ ನಿಟ್ಟೆ ಗ್ರಾಪಂನ ಸ್ವಂತ ಅನುದಾನ  ೨೩.೦೦ ಲಕ್ಷ ರೂ. ಅನುದಾನ ಸೇರಿ ಸುಮಾರು ೬೦.೬೭ ಲಕ್ಷ ರೂ. ಇತರೇ ಅನುದಾನವನ್ನು ಬಳಸಿಕೊಳ್ಳಲಾಗಿದೆ.

ಇನ್ನೂ 3 ಎಂಆರ್‌ಎಫ್ ಘಟಕಕ್ಕೆ ಸಿದ್ಧತೆ

ದೇಶದ ಗ್ರಾಮೀಣ ಭಾಗದಲ್ಲಿ ಸಾರ್ವಜನಿಕ ವಲಯದಲ್ಲಿ ನಿರ್ಮಾಣವಾ ಗಿರುವ ಈ ಎಂಆರ್‌ಎಫ್ ಘಟಕದಿಂದ ನಿಟ್ಟೆ ಆಸುಪಾಸಿನ ೪೨ ಗ್ರಾಮ ಪಂಚಾಯತ್‌ಗಳ ಕಸ ವಿಲೇವಾರಿಗೆ ಪರಿಹಾರ ದೊರೆಯಲಿದೆ.  ಈ ಘಟಕದಲ್ಲಿ ಸ್ಥಳೀಯರಿಗೆ ಉದ್ಯೋಗವಕಾಶಗಳನ್ನು ನೀಡಿದ್ದು, ಈ ಕೇಂದ್ರದ ಆರಂಭದಿಂದ ಗ್ರಾಮೀಣ ಭಾಗದ ತ್ಯಾಜ್ಯ ವಿಲೇವಾರಿ ಕುರಿತಂತೆ ಜಿಲ್ಲೆ ಮಾತ್ರವಲ್ಲದೇ ರಾಜ್ಯ ದಲ್ಲೇ ಹೊಸ ಅಧ್ಯಾಯ ಆರಂಭಗೊಳ್ಳಲಿದೆ.

ʼʼಇನ್ನು ನಿಟ್ಟೆ ಮಾತ್ರವಲ್ಲದೇ ಮಣಿಪಾಲ ಸಮೀಪದ 80 ಬಡಗಬಗೆಟ್ಟುನಲ್ಲಿ ಮಿನಿ ಎಂಆರ್‌ಎಫ್ ಘಟಕ ಸ್ಥಾಪನೆ ಕುರಿತಂತೆ ಈಗಾಗಲೇ ಡಿಪಿಆರ್ ತಯಾರಿಸಿ ರಾಜ್ಯಕ್ಕೆ ಕಳುಹಿಸಲಾಗಿದೆ. ಅಲ್ಲದೇ ಇನ್ನೂ 2 ಎಂಆರ್‌ಎಫ್‌ಗೆ ಜಾಗ ಗುರುತಿಸಿದ್ದು, ಡಿಪಿಆರ್  ತಯಾರಾಗುತ್ತಿದೆʼʼ. 
-ಡಾ.ನವೀನ್ ಭಟ್ ವೈ., ಮುಖ್ಯ ಕಾರ್ಯ ನಿರ್ವಹಣಾಧಿಕಾರಿ, ಉಡುಪಿ ಜಿಪಂ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News