ಮಧ್ಯರಾತ್ರಿಯಲ್ಲಿ ಬಿಬಿಎಂಪಿ ಬಜೆಟ್ ಮಂಡನೆ: ಜನಪ್ರತಿನಿಧಿಗಳಿಲ್ಲದ ಬಜೆಟ್ ಗಾತ್ರ 10,480 ಕೋಟಿ ರೂ.

Update: 2022-04-01 12:17 GMT

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು 2022-23ನೇ ಸಾಲಿನ ಆಯವ್ಯಯವನ್ನು ಮಧ್ಯರಾತ್ರಿ ತನ್ನ ವೆಬ್ ಸೈಟ್‍ನಲ್ಲಿ ಪ್ರಕಟಿಸಿದೆ. ಜನಪ್ರತಿನಿಧಿಗಳಿಲ್ಲದ ಈ ಬಜೆಟ್‍ನ ಗಾತ್ರ 10,480 ಕೋಟಿ ರೂ.ಗಳಾಗಿದ್ದು, ಪಾಲಿಕೆಯ ಹಣಕಾಸು ವಿಭಾಗದ ಆಯುಕ್ತೆ ತುಳಿಸಿ ಮದ್ದಿನೇನಿ ಮಂಡಿಸಿದ್ದಾರೆ ಎಂದು ಪಾಲಿಕೆಯ ಅಧಿಕಾರಿಗಳು ತಿಳಿಸಿದ್ದಾರೆ. 

2022-23ರಲ್ಲಿ ಒಟ್ಟು 10,484 ಕೋಟಿ ರೂ.ಗಳ ಆದಾಯವನ್ನು ನಿರೀಕ್ಷಿಸಲಾಗಿದೆ. ಪಾಲಿಕೆಯ ಸ್ವಂತ ಸಂಪನ್ಮೂಲಗಳಿಂದ ಅಂದರೆ ತೆರಿಗೆ ಮತ್ತು ಕರಗಳ ಆದಾಯದಿಂದ 3,680 ಕೋಟಿ ರೂ., ತೆರಿಗೆಯೇತರ ಆದಾಯ 2,302 ಕೋಟಿ ರೂ. ಹಾಗೂ ಅಸಾಧಾರಣ ಆದಾಯ 4,893 ಕೋಟಿ ರೂ. ಆಗಿರುತ್ತದೆ. ಅನುದಾನ ಮತ್ತು ಕೊಡುಗೆಗಳ ಮೂಲಗಳಿಂದ ಅಂದರೆ ಕೇಂದ್ರ ಸರಕಾರದಿಂದ ಅನುದಾನ ಮತ್ತು ಬಂಡವಾಳ ಕಾಮಗಾರಿಗಳಿಗೆ 4,360 ಕೋಟಿ ರೂ.ಗಳನ್ನು, ರಾಜ್ಯ ಸರಕಾರದಿಂದ ಅನುದಾನ ಮತ್ತು ಬಂಡವಾಳ ಕಾಮಗಾರಿಗಳಿಗೆ 3,000 ಕೋಟಿ ರೂ.ಗಳನ್ನು ಹಾಗೂ ರಾಜ್ಯ ಸರಕಾರದ ರಾಜಸ್ವ ಅನುದಾನವಾಗಿ 5,765 ಕೋಟಿ ರೂ.ಗಳನ್ನು ನಿರೀಕ್ಷಿಸಲಾಗಿದೆ.

ಹಾಗೆಯೇ 10,480 ಕೋಟಿ ರೂ. ವೆಚ್ಚವನ್ನು ಈ ಬಾರಿಯ ಬಿಬಿಎಂಪಿ ಬಜೆಟ್‍ನಲ್ಲಿ ತೋರಿಸಲಾಗಿದೆ. ಸಿಬ್ಬಂದಿ ವೆಚ್ಚಗಳಿಗಾಗಿ 1,234 ಕೋಟಿ ರೂಗಳನ್ನು, ಆಡಳಿತ ವೆಚ್ಚಗಳಿಗಾಗಿ 313 ಕೋಟಿ ರೂ.ಗಳನ್ನು, ಕಾರ್ಯಾಚರಣೆ ಮತ್ತು ನಿರ್ವಹಣೆಗಾಗಿ 3,148 ಕೋಟಿ ರೂ.ಗಳನ್ನು, ಬ್ಯಾಂಕ್ ಸಾಲದ ಮೇಲಿನ ಬಡ್ಡಿ ಪಾವತಿಗಾಗಿ 12 ಕೋಟಿ ರೂ.ಗಳನ್ನು, ಕಾರ್ಯಕ್ರಮಗಳಿಗಾಗಿ 456 ಕೋಟಿ ರೂ.ಗಳನ್ನು ಸೇರಿದಂತೆ ಒಟ್ಟು 5,165 ಕೋಟಿ ರೂ. ರಾಜಸ್ವ ಪಾವತಿಯಾಗಿ ಖರ್ಚು ಮಾಡಲಾಗುತ್ತದೆ. 

ಬ್ಯಾಂಕ್ ಸಾಲಗಳ ಮರು ಪಾವತಿಗಾಗಿ 110 ಕೋಟಿ ರೂ.ಗಳನ್ನು, ಪಾಲಿಕೆ ಅನುದಾನದ ಸಾರ್ವಜನಿಕ ಕಾಮಗಾರಿಗಳಿಗಾಗಿ 1,415 ಕೋಟಿ ರೂ.ಗಳನ್ನು, ಕೇಂದ್ರ ಮತ್ತು ರಾಜ್ಯ ಸರಕಾರದ ಅನುದಾನ ಕಾಮಗಾರಿಗಳಿಗಾಗಿ 3,423 ಕೋಟಿ ರೂ.ಗಳನ್ನು ಸೇರಿದಂತೆ ಬಂಡವಾಳ ಪಾವತಿಗಾಗಿ ಒಟ್ಟು 4,948 ಕೋಟಿ ರೂ. ಅನುದಾನವನ್ನು ಬಜೆಟ್‍ನಲ್ಲಿ ಮೀಸಲಿಡಲಾಗಿದೆ. ಹಿಂಪಾವತಿಸುವ ಠೇವಣಿಗಳಿಗಾಗಿ 10 ಕೋಟಿ ರೂ.ಗಳನ್ನು, ಚಾಲ್ತಿ ಹೊಣೆಗಾರಿಕೆಗಳಿಗಾಗಿ 355 ಕೋಟಿ ರೂ.ಗಳನ್ನು, ಸಾಲ ಮತ್ತು ಮುಂಗಡಕ್ಕಾಗಿ 1 ಕೋಟಿ ರೂ.ಗಳು ಸೇರಿದಂತೆ 367 ಕೋಟಿ ರೂ. ಅಸಾಧಾರಣ ಪಾವತಿಗಳಿಗಾಗಿ ಬಜೆಟ್‍ನಲ್ಲಿ ಮೀಸಲಿಡಲಾಗಿದೆ. 

ಇನ್ನು ಇಲಾಖಾವಾರು ಕೌನ್ಸಿಲ್ ನಿರ್ವಹಣೆಗಾಗಿ 12 ಕೋಟಿ ರೂ. ಸಾಮಾನ್ಯ ಆಡಳಿತಕ್ಕಾಗಿ 627 ಕೋಟಿ ರೂ.ಗಳನ್ನು, ಕಂದಾಯ ವಿಭಾಗಕ್ಕೆ 454 ಕೋಟಿ ರೂ. ನಗರ ಯೋಜನೆ ಮತ್ತು ನಿಯಂತ್ರಣಕ್ಕಾಗಿ 22 ಕೋಟಿ ರೂ., ಸಾರ್ವಜನಿಕ ಕಾಮಗಾರಿಗಳಿಗಾಗಿ 6,911 ಕೋಟಿ ರೂ. ಘನತ್ಯಾಜ್ಯ ನಿರ್ವಹಣೆಗಾಗಿ 1,469 ಕೋಟಿ ರೂ., ಸಾರ್ವಜನಿಕ ಆರೋಗ್ಯ (ಸಾಮಾನ್ಯ) 210 ಕೋಟಿ ರೂ., ಸಾರ್ವಜನಿಕ ಆರೋಗ್ಯ (ವೈದ್ಯಕೀಯ) 75 ಕೋಟಿ ರೂ., ತೋಟಗಾರಿಕೆಗೆ 174 ಕೋಟಿ ರೂ. ನಗರ ಅರಣ್ಯೀಕರಣಕ್ಕಾಗಿ 35 ಕೋಟಿ ರೂ. ಸಾರ್ವಜನಿಕ ಶಿಕ್ಷಣಕ್ಕಾಗಿ 113 ಕೋಟಿ ರೂ. ಹಾಗೂ ಸಮಾಜ ಕಲ್ಯಾಣ ಇಲಾಖೆಗೆ 374 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ.

ಬಿಬಿಎಂಪಿ ಆಯವ್ಯಯದಲ್ಲಿ ನಿಗದಿಪಡಿಸಲಾದ ಅನುದಾನವನ್ನು, ವಿವಿಧ ಇಲಾಖೆಗಳ ಹಣ ತೆಗೆಯುವ ಮತ್ತು ಬಟವಾಡೆ ಮಾಡುವ ಅಧಿಕಾರಿಗಳು, ವೇತನ ಮತ್ತು ಕಚೇರಿ ವೆಚ್ಚಗಳನ್ನು ಹೊರತುಪಡಿಸಿ, ಉಳಿದ ಲೆಕ್ಕ ಶೀರ್ಷಿಕೆಗಳಲ್ಲಿನ ಅನುದಾನವನ್ನು ನೇರವಾಗಿ ಖರ್ಚು ಮಾಡುವ ಅಧಿಕಾರವನ್ನು ಹೊಂದಿರುವುದಿಲ್ಲ. ಇಲಾಖಾ ಮುಖ್ಯಸ್ಥರು ಉಳಿದ ಎಲ್ಲಾ ಕಾಮಗಾರಿಗಳು ಮತ್ತು ಇತರೆ ವೆಚ್ಚಗಳಿಗೆ ಆಯುಕ್ತರು, ಸ್ಥಾಯಿ ಸಮಿತಿ ಅಥವಾ ಕೌನ್ಸಿಲ್ ಸಭೆಯ ನಿರ್ದಿಷ್ಟ ಮಂಜೂರಾತಿ ಪಡೆದ ನಂತರವೇ ಸದರಿ ವೆಚ್ಚಗಳನ್ನು ಭರಿಸತಕ್ಕದ್ದು, ಇಲಾಖಾವಾರು ಮತ್ತು ಲೆಕ್ಕ ಶೀರ್ಷಿಕೆವಾರು ಬಿಲ್ಲುಗಳ ಜೇಷ್ಠತೆಯ ಆಧಾರದ ಮೇರೆಗೆ ಪಾವತಿಗೆ ಸಲ್ಲಿಸುವುದು. ಬಟವಾಡೆ ಅಧಿಕಾರಿಗಳು ವೆಚ್ಚಗಳನ್ನು ಭರಿಸುವ ಮುನ್ನ ಚಾಲ್ತಿಯಲ್ಲಿರುವ ಎಲ್ಲಾ ನಿಯಮಗಳನ್ನು ಪಾಲಿಸುವುದು ಕಡ್ಡಾಯವಾಗಿರುತ್ತದೆ ಎಂದು ಬಜೆಟ್‍ನಲ್ಲಿ ವಿಶೇಷ ಸೂಚನೆಯನ್ನು ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News