ʼಹುಡುಗಿಯರ ಸಾಮರ್ಥ್ಯವನ್ನುʼ ಗುರುತಿಸುವಲ್ಲಿ ಎಡವಿದ ಸಮಾಜ ಪ್ರಗತಿ ಹೊಂದಲು ಸಾಧ್ಯವಿಲ್ಲ: ಪ್ರಧಾನಿ ಮೋದಿ

Update: 2022-04-01 12:49 GMT

ಹೊಸದಿಲ್ಲಿ: "ಸಮಾಜವು ಪುತ್ರರು ಮತ್ತು ಪುತ್ರಿಯರನ್ನು ಸಮಾನವಾಗಿ ಕಂಡು ಅವರಿಗೆ ಸಮಾನಾವಕಾಶಗಳನ್ನು ಒದಗಿಸಬೇಕು. ಹುಡುಗಿಯರ ಸಾಮರ್ಥ್ಯಗಳನ್ನು ಗುರುತಿಸುವಲ್ಲಿ ಸಮಾಜವು ಎಡವಿದರೆ ಅದು ಯಾವತ್ತೂ ಪ್ರಗತಿ ಹೊಂದುವುದಿಲ್ಲ" ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಇಂದು ನಡೆದ ಪರೀಕ್ಷಾ ಪೆ ಚರ್ಚಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಯೊಬ್ಬರ ಪ್ರಶ್ನೆಗೆ ಉತ್ತರಿಸುವ ವೇಳೆ ಪ್ರಧಾನಿ ಮೇಲಿನಂತೆ ಹೇಳಿದ್ದಾರೆ. "ಪರಿಸ್ಥಿತಿ ಈಗ ಬದಲಾಗಿದೆ ಹಾಗೂ ಹುಡುಗರು ಮತ್ತು ಹುಡುಗಿಯರ ನಡುವಿನ ತಾರತಮ್ಯ ಕಡಿಮೆಯಾಗಿದೆ" ಎಂದು ಅವರು ಹೇಳಿದರು.

"ಬಾಲಕಿಯರು ಈಗ ಪ್ರತಿ ಕುಟುಂಬದ ದೊಡ್ಡ ಆಸ್ತಿ ಮತ್ತು ಶಕ್ತಿಯಾಗಿದ್ದಾರೆ. ಇಂತಹ ಬದಲಾವಣೆ ಇನ್ನಷ್ಟು ಆದರೆ ಇನ್ನೂ ಒಳ್ಳೆಯದು" ಎಂದು ಪ್ರಧಾನಿ ಹೇಳಿದರು.

"ತಮ್ಮ ಸೀಮಿತ ಸಂಪನ್ಮೂಲಗಳನ್ನು ಪುತ್ರರಿಗಾಗಿ ಬಳಸಿದಲ್ಲಿ ಮುಂದೆ ಅವರು ತಮ್ಮನ್ನು ನೋಡಿಕೊಳ್ಳಬಹುದು ಹಾಗೂ ಪುತ್ರಿ ತನ್ನ  ಗಂಡನ ಮನೆ ಸೇರುವುದರಿಂದ ಆಕೆ ಕೆಲಸ ಮಾಡುವ ಅಗತ್ಯವಿಲ್ಲ ಎಂಬ ಮನಃಸ್ಥಿತಿ ಈಗಲೂ ಇರಬಹುದಾದರೂ ಪರಿಸ್ಥಿತಿ ಬಹಳಷ್ಟು ಬದಲಾಗಿದೆ"ಎಂದು ಅವರು ಹೇಳಿದರು.

"ಪುತ್ರರು ಮತ್ತು ಪುತ್ರಿಯರಿಗೆ ಸಮಾಜದಲ್ಲಿ ಸಮಾನ ಸ್ಥಾನಮಾನ ದೊರೆಯಬೇಕು, ಇದು ಈ ಯುಗದ ಅಗತ್ಯತೆ ಹಾಗೂ ಪ್ರತಿ ಯುಗದ ಅಗತ್ಯತೆ" ಎಂದು ಹೇಳಿದ ಪ್ರಧಾನಿ ಹುಡುಗಿಯರಿಗೆ ಸಮಾನಾವಕಾಶವನ್ನು ಸಾಂಸ್ಥೀಕರಣಗೊಳಿಸಬೇಕು ಎಂದರು.

"ಹಿಂದೆಂದಿಗಿಂತಲೂ ಈಗ ಹೆಚ್ಚು ಮಹಿಳಾ ಸಂಸದರಿದ್ದಾರೆ ಹಾಗೂ ಮಹಿಳೆಯರ ಸಂಖ್ಯೆ ಪೊಲೀಸ್ ಇಲಾಖೆ ಮತ್ತು ಭದ್ರತಾ ಪಡೆಗಳಲ್ಲಿ ಹೆಚ್ಚಾಗುತ್ತಿದೆ,. ಬೋರ್ಡ್ ಪರೀಕ್ಷೆಗಳಲ್ಲೂ ಬಾಲಕಿಯರೇ ಮೇಲುಗೈ ಸಾಧಿಸುತ್ತಿದ್ದಾರೆ" ಎಂದು ಪ್ರಧಾನಿ ಹೇಳಿದರು.

"ಹುಡುಗರು ಮತ್ತು ಹುಡುಗಿಯರಿಗೆ ಸಮಾನ ಅವಕಾಶ ನೀಡಿದರೆ, ಹುಡುಗಿಯರ ನಿರ್ವಹಣೆ ಉತ್ತಮವಾಗಿರಬಹುದು" ಎಂದು ಪ್ರಧಾನಿ ಹೇಳಿದರಲ್ಲದೆ ತಮ್ಮ ಹೆತ್ತವರನ್ನು ನೋಡಿಕೊಳ್ಳಬೇಕು ಎಂದು ವಿವಾಹವಾಗದೇ ಉಳಿದ ಪುತ್ರಿಯರನ್ನೂ ನೋಡಿದ್ದೇನೆ ಹಾಗೂ ಪುತ್ರರು ಸುಖ ಸಂಸಾರ ನಡೆಸುತ್ತಿದ್ದರೂ ಅವರ ಹೆತ್ತವರು ಹಿರಿಯ ನಾಗರಿಕರ ಆಶ್ರಮಗಳಲ್ಲಿರುವುದನ್ನು ಕಂಡಿದ್ದೇನೆ ಎಂದು ಪ್ರಧಾನಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News