ತೈಲ ಬೆಲೆಯೇರಿಕೆ: ಬಡವರಿಗೆ ದೊಣ್ಣೆ, ಕಾರ್ಪೊರೇಟ್ ಧಣಿಗಳಿಗೆ ಬೆಣ್ಣೆ!

Update: 2022-04-02 04:11 GMT

ದ್ವೇಷದ ಬೆಳೆ ಮತ್ತು ತೈಲಗಳ ಬೆಲೆ ಜೊತೆ ಜೊತೆಯಾಗಿ ಏರಿಕೆಯಾಗುತ್ತಿದೆ. ತೈಲ ಬೆಲೆಯನ್ನು ದ್ವೇಷದ ಬೆಳೆಯ ಮರೆಯಲ್ಲಿ ಮುಚ್ಚಿ ಹಾಕುವ ಪ್ರಯತ್ನವನ್ನು ಸರಕಾರ ಮಾಡುತ್ತಿದೆ. ಜನರು ತೈಲ ಬೆಲೆಯೇರಿಕೆಯ ಬಗ್ಗೆ ಮಾತನಾಡುವ ಬದಲು, ಹಲಾಲ್, ಹಿಜಾಬ್, ಜಟ್ಕಾದ ಹಿಂದೆ ಬಿದ್ದಿದ್ದಾರೆ. ಪರಿಣಾಮವಾಗಿ, ಸರಕಾರ ನಿರಾತಂಕವಾಗಿದೆ. ಒಂದು ಕಾಲದಲ್ಲಿ ತೈಲ ಬೆಲೆಯೇರಿಕೆಯ ಬಗ್ಗೆ ಮಾತನಾಡುತ್ತಿದ್ದ ರಾಮ್‌ದೇವ್‌ನಂತಹ ಸ್ವಯಂಘೋಷಿತ ಬಾಬಾಗಳು, ಬೆಲೆಯೇರಿಕೆಯ ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳುವ ಸಲಹೆ ನೀಡುತ್ತಿದ್ದಾರೆ. ಪ್ರಶ್ನಿಸಿದ ಪತ್ರಕರ್ತರನ್ನು 'ಬಾಯಿ ಮುಚ್ಚು' ಎಂದು ಬಹಿರಂಗವಾಗಿ ಅವಾಝ್ ಹಾಕುತ್ತಿದ್ದಾರೆ. ಕಳೆದ ಹತ್ತು ದಿನಗಳಲ್ಲಿ ತೈಲ ದರಗಳು 9 ಸಲ ಹೆಚ್ಚಳವಾಗಿದೆ. ಪೆಟ್ರೋಲ್, ಡೀಸೆಲ್ ಹಾಗೂ ಎಲ್‌ಪಿಜಿ ದರಗಳು ದಾಖಲೆ ಏರಿಕೆಯನ್ನು ಕಂಡಿವೆ. ಇದಕ್ಕೂ ಮುನ್ನ ತೈಲ ದರಗಳು 2021ರ ನವೆಂಬರ್‌ನಲ್ಲಿ ಕೊನೆಯ ಬಾರಿಗೆ ಪರಿಷ್ಕರಿಸಲ್ಪಟ್ಟಿದ್ದು, ಆಗ ಪೆಟ್ರೋಲ್ ದರವು ಲೀಟರ್‌ಗೆ 100 ರೂ.ಗೆ ತಲುಪಿತ್ತು. ಚುನಾವಣೆ ಸಮೀಪಿಸಿದಾಗಲೆಲ್ಲಾ ಕೇಂದ್ರ ಸರಕಾರವು ಮತದಾರರ ಕಣ್ಣಿಗೆ ಮಣ್ಣೆರಚಲು ತೈಲದರವನ್ನು ನಿಯಂತ್ರಣದಲ್ಲಿಡುತ್ತದೆ. ಚುನಾವಣೆ ಮುಗಿಯುತ್ತಿದ್ದಂತೆಯೇ ಅದು ಮತದಾರರನ್ನು ಕೈಬಿಟ್ಟು ಬೆಲೆಯೇರಿಕೆಯ ಕೈ ಹಿಡಿಯುತ್ತದೆ. ಇದರಿಂದಾಗಿ ಬಡ ಹಾಗೂ ಮಧ್ಯಮವರ್ಗದವರ ಬದುಕು ದುಸ್ತರವಾಗುತ್ತಿದೆ.

ತೈಲ ಬೆಲೆಯೇರಿಕೆಗೂ ಹಿಂದಿನ ಯುಪಿಎ ಸರಕಾರವನ್ನೇ ದೂರುವ ಜಾಯಮಾನವನ್ನು ಬಿಜೆಪಿ ಸರಕಾರ ಈಗಲೂ ಮುಂದುವರಿಸಿದೆ. ಯುಪಿಎ ಆಡಳಿತಾವಧಿಯಲ್ಲಿ ತೈಲ ಬಾಂಡ್‌ಗಳನ್ನು ಬಿಡುಗಡೆಗೊಳಿಸಿದುದೇ ತೈಲ ಬೆಲೆಯೇರಿಕೆಗೆ ಕಾರಣವೆಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ದೂರಿದ್ದಾರೆ. ಕೆಲವೇ ತಿಂಗಳುಗಳ ಹಿಂದೆ ಕೇಂದ್ರ ಪೆಟ್ರೋಲಿಯಂ ಸಚಿವ ಹರ್‌ದೀಪ್ ಸಿಂಗ್ ಪುರಿ ಅವರು ರಾಜ್ಯ ಸರಕಾರಗಳ ತೆರಿಗೆ ಹೇರಿಕೆಯ ಕಾರಣದಿಂದಾಗಿ ತೈಲ ದರಗಳಲ್ಲಿ ಏರಿಕೆಯಾಗುತ್ತಿದೆ ಎಂದು ಹೇಳಿದ್ದರು. ಕಳೆದ ವರ್ಷ ಆಗ ಪೆಟ್ರೋಲಿಯಂ ಸಚಿವರಾಗಿದ್ದ ಧರ್ಮೇಂದ್ರ ಪ್ರಧಾನ್ ಅವರು ತೈಲದ ಮೇಲೆ ವಿಧಿಸಲಾಗುವ ತೆರಿಗೆಯ ಹಣವನ್ನು ಭಾರತದ ಕೋವಿಡ್-19 ಲಸಿಕೀಕರಣ ಕಾರ್ಯಕ್ರಮ ಹಾಗೂ ಇತರ ಸಾಮಾಜಿಕ ಕಲ್ಯಾಣ ಯೋಜನೆಗಳಿಗೆ ಬಳಸಲಾಗುತ್ತದೆ ಎಂದು ಸಮಜಾಯಿಷಿ ನೀಡಿದ್ದರು.

 ಆದರೆ ಹಾಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಹೇಳಿಕೆಗೆ ವ್ಯತಿರಿಕ್ತವಾಗಿ, ಕಳೆದ ಎಂಟು ವರ್ಷಗಳಲ್ಲಿ ಮೋದಿ ಸರಕಾರವು ಕೇವಲ 3,500 ಕೋಟಿ ರೂ. ವೌಲ್ಯದ ತೈಲ ಬಾಂಡ್‌ಗಳನ್ನು ಮರುಪಾವತಿಸಿತ್ತು. 2020-21ನೇ ಸಾಲಿನಲ್ಲಿ ಪೆಟ್ರೋಲಿಯಂ ಉತ್ಪನ್ನಗಳಿಂದ 3 ಲಕ್ಷ ಕೋಟಿ ರೂ. ಅಬಕಾರಿ ಸುಂಕವನ್ನು ಸಂಗ್ರಹಿಸಲಾಗಿತ್ತು. 2020ರ ಮೇನಲ್ಲಿ ಮೋದಿ ಸರಕಾರವು ಎಲ್‌ಪಿಜಿಗೆ ಸಬ್ಸಿಡಿ ನೀಡಿಕೆಯನ್ನು ರದ್ದುಪಡಿಸಿತ್ತು. ಹೀಗಾಗಿ ತೈಲ ಮಾರಾಟದಿಂದ ಸಂಗ್ರಹಿಸಲಾದ ತೆರಿಗೆಯ ಬಹುಪಾಲು ಹಣವು ಕೇಂದ್ರ ಸರಕಾರಕ್ಕೆ ಹೋಗುತ್ತದೆಯೇ ಹೊರತು ರಾಜ್ಯಗಳಿಗಿಲ್ಲ. ಕಳೆದ ಎಂಟು ವರ್ಷಗಳ ಮೋದಿ ಸರಕಾರದ ಆಳ್ವಿಕೆಯಲ್ಲಿ ಕಚ್ಚಾ ತೈಲ ದರಗಳ ಬೆಲೆಗಳು ಗಣನೀಯವಾಗಿ ಇಳಿಕೆಯಾಗಿದ್ದರೂ, ಪೆಟ್ರೋಲ್‌ನ ರಿಟೇಲ್ ದರ ಇನ್ನೂ ಹೆಚ್ಚುತ್ತಲೇ ಹೋಗುತ್ತಿದೆ. ಭಾರತದಲ್ಲಿ ತೈಲ ದರದಲ್ಲಿನ ಹೆಚ್ಚಿನ ಭಾಗವನ್ನು ತೆರಿಗೆಗಳೇ ಒಳಗೊಂಡಿರುತ್ತವೆ. ಅಂದರೆ ಪೆಟ್ರೋಲ್ ಬೆಲೆಯ ಸುಮಾರು ಅರ್ಧದಷ್ಟು ಭಾಗವು ತೆರಿಗೆಗಳಾಗಿರುತ್ತವೆ.

2020-21ರಲ್ಲಿ ಕೋವಿಡ್ ಹಾವಳಿಯ ಹಿನ್ನೆಲೆಯಲ್ಲಿ ಉದ್ಭವಿಸಿದ ಆರ್ಥಿಕ ಬಿಕ್ಕಟ್ಟಿನಿಂದಾಗಿ ಇಡೀ ದೇಶವೇ ಸಿಕ್ಕಿ ಒದ್ದಾಡುತ್ತಿದ್ದಾಗ ಪೆಟ್ರೋಲ್, ಡೀಸೆಲ್ ಹಾಗೂ ಎಲ್‌ಪಿಜಿ ದರಗಳು ಅಗಾಧವಾದ ಏರಿಕೆಯನ್ನು ಕಂಡಿದ್ದವು. ಒಂದು ವರ್ಷದ ಅವಧಿಯಲ್ಲಿ ಪೆಟ್ರೋಲ್ ದರದಲ್ಲಿ 35 ಶೇಕಡ ಏರಿಕೆಯಾಗಿದ್ದು ಪ್ರತಿ ಲೀಟರ್‌ಗೆ 100 ರೂ.ಗಡಿಯನ್ನು ದಾಟಿತು. ಹಲವಾರು ರಾಜ್ಯಗಳಲ್ಲಿ ಎಲ್‌ಪಿಜಿ ದರದಲ್ಲಿ 50 ಶೇಕಡ ಏರಿಕೆಯಾಗಿದ್ದು, ಪ್ರತಿ ಸಿಲಿಂಡರ್ ದರ 1 ಸಾವಿರದ ಸನಿಹವನ್ನು ತಲುಪಿದೆ.

ತೈಲ ದರಗಳಲ್ಲಿನ ಏರಿಕೆಯು ಕಾರುಗಳು ಹಾಗೂ ಮೋಟಾರ್ ಸೈಕಲ್‌ಗಳಂತಹ ಖಾಸಗಿ ಸಾರಿಗೆಗಳ ಮಾಲಕರಿಗೆ ಹೊಡೆತ ನೀಡಿದೆ. ಮಾತ್ರವಲ್ಲದೆ ಬಸ್,ಟ್ಯಾಕ್ಸಿ ಹಾಗೂ ಆಟೋರಿಕ್ಷಾಗಳಂತಹ ಸಾರ್ವಜನಿಕ ಸಾರಿಗೆಗಳ ದರಗಳೂ ಅಗಾಧವಾಗಿ ಏರಿಕೆಯಾಗಿವೆ. ಟ್ರಾಕ್ಟರ್ ಹಾಗೂ ನೀರಾವರಿ ಪಂಪ್‌ಗಳನ್ನು ನಡೆಸಲು ತೈಲದ ಅಗತ್ಯವಿರುವುದರಿಂದ ಆಹಾರ ಉತ್ಪಾದನಾ ವೆಚ್ಚವೂ ಹೆಚ್ಚುತ್ತಿದೆ. ಇನ್ನೊಂದೆಡೆ ಕೈಗಾರಿಕೆಗಳ ಉತ್ಪಾದನಾ ವೆಚ್ಚವೂ ನಾಗಾಲೋಟದಲ್ಲಿ ಏರುತ್ತಿದೆ. ಲಾರಿಗಳು ಹಾಗೂ ಟ್ರಕ್‌ಗಳ ಸಾಗಣೆ ದರವೂ ದುಬಾರಿಯಾಗುತ್ತಿದೆ. ಒಟ್ಟಾರೆಯಾಗಿ ತೈಲ ದರಗಳಲ್ಲಿ ಹೆಚ್ಚಳವು ಹಣದುಬ್ಬರದ ಮೇಲೆ ಗಂಭೀರ ದುಷ್ಪರಿಣಾಮವುಂಟು ಮಾಡಿದೆ. ಕೋವಿಡ್ ಸಾಂಕ್ರಾಮಿಕವು ತಂದೊಡ್ಡಿದ ಆರ್ಥಿಕ ಸಂಕಷ್ಟದ ಕಾರಣದಿಂದಾಗಿ ದೇಶದ ದೊಡ್ಡ ಸಂಖ್ಯೆಯ ಜನರು, ಉದ್ಯೋಗ ಹಾಗೂ ಜೀವನೋಪಾಯದ ವೃತ್ತಿಗಳನ್ನು ಕಳೆದುಕೊಂಡಿದ್ದಾರೆ. ತೈಲ ದರದಲ್ಲಿನ ಹೆಚ್ಚಳದ ಜೊತೆಗೆ ಮೋದಿ ಸರಕಾರವು ಎಲ್‌ಪಿಜಿ ಮೇಲೆ ನೀಡುತ್ತಿದ್ದ ಸಬ್ಸಿಡಿಯನ್ನು ಕೂಡಾ ರದ್ದುಪಡಿಸಿದೆ. 2020ರ ಮೇ ತಿಂಗಳಿನಿಂದೀಚೆಗೆ ಎಲ್‌ಪಿಜಿ ಮೇಲೆ ಪಾವತಿಸಲಾಗುವ ಸಬ್ಸಿಡಿಯನ್ನು ಸಂಪೂರ್ಣವಾಗಿ ನಿಲ್ಲಿಸಲಾಗಿದೆ.

ಎಲ್‌ಪಿಜಿ ಸಿಲಿಂಡರ್‌ಗಳ ಮೇಲಿನ ಸಬ್ಸಿಡಿ ರದ್ದತಿಯಿಂದಾಗಿ ಮೋದಿ ಸರಕಾರವು ಸುಮಾರು 36 ಸಾವಿರ ಕೋಟಿ ರೂ.ಗಳನ್ನು ಉಳಿತಾಯ ಮಾಡುವ ನಿರೀಕ್ಷೆಯನ್ನು ಹೊಂದಿದೆ. ಆದಾಗ್ಯೂ ಸಬ್ಸಿಡಿ ರದ್ದಾದರೂ ಎಲ್‌ಪಿಜಿ ಸಿಲಿಂಡರ್‌ಗಳ ಬೇಡಿಕೆಯಲ್ಲಿ ಇಳಿಮುಖವುಂಟಾಗಿಲ್ಲ. ಅಡುಗೆ ಅನಿಲದ ಬಳಕೆಯನ್ನು ಕಡಿತಗೊಳಿಸಲು ಸಾಧ್ಯವಾಗದೆ ಅನೇಕ ಬಡಕುಟುಂಬಗಳು 1 ಸಾವಿರ ರೂ. ತೆತ್ತಾದರೂ, ತಮ್ಮ ದೈನಂದಿನ ಜೀವನ ನಿರ್ವಹಣೆಗೆ ಅತ್ಯಗತ್ಯವಾದ ಅಡುಗೆ ಅನಿಲ ಸಿಲಿಂಡರ್ ಖರೀದಿಸುತ್ತಾರೆ. ಆದರೆ ಅವರು ದುಬಾರಿ ಹಣ ತೆತ್ತಾದರೂ ಎಲ್‌ಪಿಜಿ ಸಿಲಿಂಡರ್ ಕೊಳ್ಳಬಲ್ಲರೆಂಬುದು ಇದರರ್ಥವಲ್ಲ. ಅವರು ತಮ್ಮ ಶಿಕ್ಷಣ ಹಾಗೂ ಆರೋಗ್ಯಪಾಲನೆಯಂತಹ ಇತರ ಜೀವನಾವಶ್ಯಕತೆಗಳ ಮೇಲಿನ ವೆಚ್ಚವನ್ನು ಅಗಾಧವಾಗಿ ಕಡಿತಮಾಡಿಕೊಂಡು ಎಲ್‌ಪಿಜಿ ಸಿಲಿಂಡರ್ ಖರೀದಿಗೆ ಆ ಹಣವನ್ನು ವೆಚ್ಚ ಮಾಡುತ್ತಾರೆ. ಇನ್ನು ಗ್ರಾಮೀಣ ಭಾಗದಲ್ಲಿ ಪರಿಸ್ಥಿತಿ ಭಿನ್ನವಾಗಿದೆ. ಎಲ್‌ಪಿಜಿ ದರ ಹೆಚ್ಚಳದಿಂದಾಗಿ ಅವರು ಸಿಲಿಂಡರ್ ಮರುಪೂರಣವನ್ನು ಕೈಬಿಟ್ಟಿದ್ದು, ಮತ್ತೆ ಕಟ್ಟಿಗೆ, ಸೌದೆಗಳ ಬಳಕೆಯತ್ತ ಮುಖ ಮಾಡಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ಮೋದಿ ಸರಕಾರವು ನೇರ ತೆರಿಗೆಗಳನ್ನು ಗಣನೀಯವಾಗಿ ಕಡಿಮೆಗೊಳಿಸಿದೆ ಹಾಗೂ ಪರೋಕ್ಷ ತೆರಿಗೆಗಳನ್ನು ಹೆಚ್ಚಿಸಿದೆ. 2015ರಲ್ಲಿ ಮೋದಿ ಸರಕಾರವು ಸಂಪತ್ ತೆರಿಗೆ (ವೆಲ್ತ್ ಟ್ಯಾಕ್ಸ್)ಯನ್ನು ರದ್ದುಪಡಿಸಿದೆ. 2019ರಲ್ಲಿ ಕಾರ್ಪೊರೇಟ್ ತೆರಿಗೆಯನ್ನು ಶೇ.30ರಿಂದ ಶೇ.22ಕ್ಕೆ ಇಳಿಸಲಾಯಿತು. ಸಂಪತ್ ತೆರಿಗೆ ರದ್ದತಿಯಿಂದ ದೇಶದ ಬೊಕ್ಕಸಕ್ಕೆ 950 ಕೋಟಿ ರೂ.ನಷ್ಟವಾಗಿದೆ. ಕಾರ್ಪೊರೇಟ್ ತೆರಿಗೆ ಇಳಿಕೆಯಿಂದಾಗಿ 2019-20ರಲ್ಲಿ 1 ಲಕ್ಷ ಕೋಟಿ ರೂ. ನಷ್ಟವಾಗಿದೆ. ಕಾರ್ಪೊರೇಟ್ ತೆರಿಗೆ ರದ್ದತಿಯಿಂದ ಶ್ರೀಮಂತ ಉದ್ಯಮಿಗಳು ಭಾರೀ ಲಾಭ ಮಾಡಿಕೊಂಡರು. ಕೋವಿಡ್-19 ಸಾಂಕ್ರಾಮಿಕದ ಹಾವಳಿಯ ಸಂದರ್ಭದಲ್ಲಿ ಕಾರ್ಪೊರೇಟ್ ಕಂಪೆನಿಗಳ ಲಾಭ ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ) ಅನುಪಾತವು 10 ವರ್ಷಗಳಲ್ಲೇ ಗರಿಷ್ಠ ಏರಿಕೆಯನ್ನು ಕಂಡಿತು. ಶೇರುಮಾರುಕಟ್ಟೆಯಲ್ಲಿ ನೋಂದಾಯಿತವಾದ ಕಂಪೆನಿಗಳ ಲಾಭವು ಶೇ.57ರಷ್ಟು ಅಧಿಕಗೊಂಡಿದೆ. ದೇಶದಲ್ಲಿನ ಸಹಸ್ರಕೋಟ್ಯಧಿಪತಿಗಳ ಸಂಖ್ಯೆಯು 40ಕ್ಕೇರಿತು ಹಾಗೂ ಅವರ ಆದಾಯದಲ್ಲಿ ಶೇ.35ರಷ್ಟು ಹೆಚ್ಚಳವುಂಟಾಯಿತು.
ಕೋವಿಡ್ ಹಾವಳಿಯಿಂದ ಉಂಟಾದ ಆರ್ಥಿಕ ಸಂಕಷ್ಟದ ಪರಿಣಾಮವಾಗಿ ಮೋದಿ ಸರಕಾರದ ಆರ್ಥಿಕ ನೀತಿಗಳು ಬಡವರ ಮೇಲೆ ಗಂಭೀರವಾದ ಪರಿಣಾಮವನ್ನುಂಟು ಮಾಡಿದೆ. ವಾಸ್ತವಿಕವಾಗಿ ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ಶ್ರೀಮಂತರು ಅಸಾಧಾರಣವಾದ ಲಾಭವನ್ನು ಮಾಡಿಕೊಂಡಿದ್ದಾರೆ, ಆದರೆ ಬಡವರು ತಮ್ಮ ಉದ್ಯೋಗಗಳನ್ನು ಮತ್ತು ಕಷ್ಟಪಟ್ಟು ಕೂಡಿಟ್ಟಿದ್ದ ಉಳಿತಾಯದ ಹಣವನ್ನು ಕಳೆದುಕೊಂಡರು. ಕೋವಿಡ್-19 ಸಾಂಕ್ರಾಮಿಕದ ಅವಧಿಯಲ್ಲಿ ಇನ್ನೂ 23 ಕೋಟಿ ಮಂದಿ ಬಡತನ ರೇಖೆಯ ಕೆಳಗೆ ಜಾರಿದ್ದಾರೆ. ಶೇ.70ರಷ್ಟು ಭಾರತೀಯರ ಆದಾಯವು ಕೆಳಮಟ್ಟಕ್ಕೆ ಕುಸಿಯಿತು. ಹಸಿವೆ ಹಾಗೂ ಅಪೌಷ್ಟಿಕತೆಯ ಪ್ರಮಾಣವು ಕಳವಳಕಾರಿ ಹಂತವನ್ನು ತಲುಪಿತು. ಬಡ, ಮಧ್ಯಮವರ್ಗಗಳ ಉಳಿತಾಯದ ಹಣವು ಕರಗತೊಡಗಿದವು ಹಾಗೂ ಕೌಟುಂಬಿಕ ಸಾಲದ ಮೊತ್ತ 4.25 ಲಕ್ಷ ಕೋಟಿ ರೂ.ಗೆ ಹೆಚ್ಚಿತು ಹಾಗೂ ಕೋಟ್ಯಂತರ ಮಂದಿ ಉದ್ಯೋಗಗಳನ್ನು ಕಳೆದುಕೊಂಡರು.
ಬಡವರು ಹಾಗೂ ಮಧ್ಯಮವರ್ಗದ ಜನರು ತಮ್ಮ ಜೀವನೋಪಾಯ ಹಾಗೂ ಉಳಿತಾಯಗಳನ್ನು ಕಳೆದುಕೊಳ್ಳುತ್ತಿರುವಾಗಲೇ, ಮೋದಿ ಸರಕಾರವು ಅವರ ಮೇಲೆ ತೆರಿಗೆಯ ಹೊರೆಯನ್ನು ಹೆಚ್ಚಿಸಿತು ಹಾಗೂ ಶ್ರೀಮಂತ ವರ್ಗಕ್ಕೆ ಊಹೆಗೂ ನಿಲುಕದಷ್ಟು ರಿಯಾಯಿತಿಗಳನ್ನು ನೀಡಿದೆ. ತನ್ನ ಪ್ರತಿಗಾಮಿ ತೆರಿಗೆ ನೀತಿಗಳ ಮೂಲಕ ಮೋದಿ ಸರಕಾರವು ಕರಭಾರವನ್ನು ಶ್ರೀಮಂತರಿಂದ ಬಡವರಿಗೆ ವರ್ಗಾಯಿಸಿದೆ. ಇಷ್ಟೆಲ್ಲ ನಡೆಯುತ್ತಿದ್ದರೂ ಭಾರತದ ಮಾಧ್ಯಮಗಳು ಜನರನ್ನು ವಿಭಜಿಸುವ ದ್ವೇಷ ರಾಜಕಾರಣಗಳಿಗೆ ಮುಖಪುಟದಲ್ಲಿ ಆದ್ಯತೆಯನ್ನು ನೀಡಿ ಸರಕಾರವನ್ನು ರಕ್ಷಿಸುತ್ತಿದೆ. ಜನರು ಇನ್ನಾದರೂ ತಮ್ಮ ಮೂಲಭೂತ ಅವಶ್ಯಕತೆಗಳಿಗಾಗಿ ಸರಕಾರದ ವಿರುದ್ಧ ಬೀದಿಗಿಳಿಯದೇ ಇದ್ದರೆ, ಭಾರತ ಇನ್ನೊಂದು ಶ್ರೀಲಂಕಾವಾಗಿ ಪರಿವರ್ತನೆಯಾಗುವುದರಲ್ಲಿ ಅನುಮಾನವಿಲ್ಲ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News