ನೂತನ ಕ್ರಿಮಿನಲ್ ಕಾರ್ಯವಿಧಾನ ವಿಧೇಯಕ: ನಾಗರಿಕ ಹಕ್ಕುಗಳಿಗೆ ಮಾರಕ

Update: 2022-04-04 04:19 GMT

ಜೈಲು ಶಿಕ್ಷೆಗೊಳಗಾದವರು, ಬಂಧಿತರು ಹಾಗೂ ಪದೇ ಪದೇ ಅಪರಾಧಗಳನ್ನು ಎಸಗುವವರಿಂದ ಮಾಹಿತಿಯನ್ನು ಕಲೆಹಾಕಲು ಸರಕಾರಕ್ಕಿರುವ ಅಧಿಕಾರವನ್ನು ಗಣನೀಯವಾಗಿ ವಿಸ್ತರಿಸುವ ವಿಧೇಯಕವನ್ನು ಕೇಂದ್ರ ಸರಕಾರವು ಕಳೆದ ಸೋಮವಾರ ಲೋಕಸಭೆಯಲ್ಲಿ ಮಂಡಿಸಿದೆ.ಕ್ರಿಮಿನಲ್ ಕಾರ್ಯವಿಧಾನ (ಗುರುತಿಸುವಿಕೆ) ವಿಧೇಯಕ 2022 ಎಂದು ಕರೆಯಲಾಗುವ ಈ ವಿಧೇಯಕವು ಈಗ ಚಾಲ್ತಿಯಲ್ಲಿರುವ 102 ವರ್ಷಗಳಷ್ಟು ಹಳೆಯದಾದ ‘ಕೈದಿಗಳ ಗುರುತಿಸುವಿಕೆ ಕಾಯ್ದೆ 1920’ ಅನ್ನು ತೆರವುಗೊಳಿಸಲಿದೆ.

ಕ್ರಿಮಿನಲ್ ಕಾರ್ಯವಿಧಾನ (ಗುರುತಿಸುವಿಕೆ) ವಿಧೇಯಕ 2022, ದೋಷಿಗಳಿಂದ ಹಾಗೂ ಇತರ ವ್ಯಕ್ತಿಗಳಿಂದ ಬಗೆಬಗೆಯ ಬಯೋಮೆಟ್ರಿಕ್ ದತ್ತಾಂಶ ಹಾಗೂ ಜೈವಿಕ ಮಾದರಿಗಳನ್ನು ಸಂಗ್ರಹಿಸಲು ಕಾನೂನು ಅನುಷ್ಠಾನ ಏಜೆನ್ಸಿಗಳಿಗೆ ಅಧಿಕಾರ ನೀಡುತ್ತದೆ. ಅಲ್ಲದೆ ತನಿಖಾಧಿಕಾರಿಗಳು, ಪೊಲೀಸರಿಗೆ ಕ್ರಿಮಿನಲ್‌ಗಳನ್ನು ಗುರುತಿಸಲು ಹಾಗೂ ಅಪರಾಧಗಳ ಬಗ್ಗೆ ತನಿಖೆ ನಡೆಸಲು ನೆರವಾಗುತ್ತದೆ. ಅಲ್ಲದೆ ದತ್ತಾಂಶಗಳನ್ನು ಹೇಗೆ ದಾಖಲಿಸಬೇಕು ಮತ್ತು ಸಂರಕ್ಷಿಸಬೇಕು ಎಂಬ ಬಗ್ಗೆ ವಿಧೇಯಕದಲ್ಲಿ ವಿವರಿಸಲಾಗಿದೆ.

ಪ್ರಸಕ್ತ ಚಾಲ್ತಿಯಲ್ಲಿರುವ 1920ರ ಕಾನೂನಿನಡಿ ಪೊಲೀಸರು ಕೇವಲ ಸೀಮಿತ ಸಂಖ್ಯೆಯ ಆರೋಪಿಗಳು ಹಾಗೂ ಅಪರಾಧಿಗಳೆಂದು ಪರಿಗಣಿಸಲಟ್ಟವರ ಬೆರಳಚ್ಚು ಹಾಗೂ ಕಾಲಿನ ಅಚ್ಚುಗಳನ್ನು ಸಂಗ್ರಹಿಸಬಹುದಾಗಿದೆ. ಆದರೆ ನೂತನ ವಿಧೇಯಕವು ಪೊಲೀಸರಿಂದ ದತ್ತಾಂಶ ಸಂಗ್ರಹವನ್ನು ಗಣನೀಯವಾಗಿ ವಿಸ್ತರಿಸಲಾಗಿದೆ. ಬೆರಳಚ್ಚುಗಳು ಹಾಗೂ ಕಾಲಿನಚ್ಚುಗಳ ಜೊತೆಗೆ ಪೊಲೀಸರು ವ್ಯಕ್ತಿಯ ಕಣ್ಣಿನ ಅಕ್ಷಿಪಟಗಳ ದಾಖಲೆ (ಐರಿಸ್ )ಗಳನ್ನು ಮತ್ತು ಜೈವಿಕ ಮಾದರಿಗಳನ್ನು ಸ್ಕಾನ್ ಮಾಡಬಹುದಾಗಿದೆ. ಅಲ್ಲದೆ ಹಸ್ತಾಕ್ಷರಗಳು ಹಾಗೂ ಕೈಬರಹದಂತಹ ವರ್ತನೆಯ ಗುಣಲಕ್ಷಣಗಳನ್ನು ವಿಶ್ಲೇಷಣೆಗೆ ಒಳಪಡಿಸಬಹುದಾಗಿದೆೆ. ಜೊತೆಗೆ ಅಪರಾಧ ಪ್ರಕರಣಕ್ಕೆ ಸಂಬಂಧಿಸಿ ಪುರಾವೆಗಳನ್ನು ಸಂಗ್ರಹಿಸುವುದು ಅಗತ್ಯವಿದೆಯೆಂದು ನೋಂದಾಯಿತ ವೈದ್ಯಾಧಿಕಾರಿಯು ಭಾವಿಸಿದಲ್ಲಿ ಕ್ರಿಮಿನಲ್ ನೀತಿ ಸಂಹಿತೆಯ ಸೆಕ್ಷನ್ 53 ಹಾಗೂ 53(ಎ) ನಡಿ ಉಲ್ಲೇಖಿಸಲಾದಂತೆ ರಕ್ತ, ವೀರ್ಯ, ಜೊಲ್ಲು ಮತ್ತು ಬೆವರು, ತಲೆಗೂದಲ ಮಾದರಿಗಳು, ಉಗುರುಗಳು, ಡಿಎನ್‌ಎ ರೂಪುರೇಖೆಗಳು ಮತ್ತಿತರ ಮಾದರಿಗಳನ್ನು ಸಂಗ್ರಹಕ್ಕೂ ಈ ವಿಧೇಯಕ ಅನುಮತಿ ನೀಡುತ್ತದೆ.

ಯಾವುದೇ ಕಾನೂನಿನಡಿ ಅಪರಾಧಿಗಳೆಂದು ಪರಿಗಣಿಸಲ್ಪಟ್ಟವರು ಅಥವಾ ಯಾವುದೇ ಅಪರಾಧ ಪ್ರಕರಣದಲ್ಲಿ ಬಂಧಿಸಲ್ಪಟ್ಟವರು ಅಥವಾ ಯಾವುದೇ ಪ್ರತಿಬಂಧಾತ್ಮಕ ಬಂಧನ ಕಾನೂನಿನಡಿ ಬಂಧಿತರಾದ ಯಾವುದೇ ವ್ಯಕ್ತಿಗಳಿಗೆ ಈ ವಿಧೇಯಕ ಅನ್ವಯವಾಗುತ್ತದೆ.
 ಇದಕ್ಕೆ ವ್ಯತಿರಿಕ್ತವಾಗಿ ಪ್ರಸಕ್ತ ಜಾರಿಯಲ್ಲಿರುವ ಕಾನೂನಿನಲ್ಲಿ ದೋಷಿಯೆಂದು ಪರಿಗಣಿಸಲ್ಪಟ್ಟವರು ಅಥವಾ ಒಂದು ವರ್ಷಕ್ಕಿಂತ ಅಧಿಕ ಸಮಯದ ಜೈಲು ಶಿಕ್ಷೆಯನ್ನು ಅನುಭವಿಸಬೇಕಾದಂತಹ ಅಪರಾಧವನ್ನು ಎಸಗಿದವರಿಂದ ಮಾತ್ರ ಇಂತಹ ಮಾಹಿತಿಯನ್ನು ಸಂಗ್ರಹಿಸಬಹುದಾಗಿದೆ.

ನೂತನ ವಿಧೇಯಕದ ಪ್ರಕಾರ, ಒಂದು ವೇಳೆ ವ್ಯಕ್ತಿಯು ಇಂತಹ ಮಾಹಿತಿಯನ್ನು ನೀಡಲು ಪ್ರತಿರೋಧ ಒಡ್ಡಿದಲ್ಲಿ ಪೊಲೀಸರು ಆತನಿಂದ ಕಾರ್ಯಕಾರಿಣಿ ಅದೇಶದಲ್ಲಿ ಸೂಚಿಸಲಾದ ವಿಧಾನದಲ್ಲಿ ಬಲವಂತದಿಂದ ಮಾಹಿತಿಯನ್ನು ಸಂಗ್ರಹಿಸಬಹುದಾಗಿದೆ. ಮಾಹಿತಿ ಸಂಗ್ರಹಣೆಯನ್ನು ನಿರಾಕರಿಸಲು ವ್ಯಕ್ತಿಗೆ ಈ ವಿಧೇಯಕದಲ್ಲಿ ಅತ್ಯಂತ ಸೀಮಿತವಾದ ಅಧಿಕಾರವನ್ನು ನೀಡಲಾಗಿದೆ. ವ್ಯಕ್ತಿಯು ಏಳು ವರ್ಷಕ್ಕಿಂತ ಕಡಿಮೆ ಅವಧಿಯ ಜೈಲು ಶಿಕ್ಷೆಯನ್ನು ವಿಧಿಸಬಹುದಾದಂತಹ ಅಪರಾಧ ಪ್ರಕರಣದಲ್ಲಿ ಬಂಧಿತನಾಗಿದ್ದಲ್ಲಿ ಹಾಗೂ ಮಹಿಳೆ ಅಥವಾ ಮಕ್ಕಳ ವಿರುದ್ಧದ ಅಪರಾಧ ಪ್ರಕರಣವಾಗಿರದೆ ಇದ್ದಲ್ಲಿ ಆರೋಪಿಯು ಜೈವಿಕ ಮಾದರಿಗಳನ್ನು ನೀಡಲು ನಿರಾಕರಿಸಬಹುದಾಗಿದೆ ಎಂದು ವಿಧೇಯಕವು ಹೇಳಿದೆ. ಹೀಗಾಗಿ ಇತರ ಪ್ರಕರಣಗಳಲ್ಲಿ ಪೊಲೀಸರು ವ್ಯಕ್ತಿಯ ಒಪ್ಪಿಗೆಯಿಲ್ಲದೆ ಮಾಹಿತಿಯನ್ನು ಕಲೆಹಾಕಬಹುದಾಗಿದೆ.

ಈ ರೀತಿಯಾಗಿ ಸಂಗ್ರಹಿಸಲಾಗುವ ಮಾಹಿತಿಯನ್ನು 75 ವರ್ಷಗಳವರೆಗೆ ಉಳಿಸಿಕೊಳ್ಳಲಾಗುವುದು. ಕೇಂದ್ರ ಗೃಹ ಸಚಿವಾಲಯದ ಅಧೀನದಲ್ಲಿರುವ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ದತ್ತಾಂಶಗಳನ್ನು ಸಂಗ್ರಹಿಸುವ, ದಾಸ್ತಾನು ಮಾಡುವ, ಸಂಸ್ಕರಿಸುವ, ಹಂಚುವ ಹಾಗೂ ನಾಶಪಡಿಸುವ ಅಧಿಕಾರವನ್ನು ಹೊಂದಿದೆ.

ಪೊಲೀಸರು ಆಯಾ ರಾಜ್ಯ ಸರಕಾರದ ನಿಯಂತ್ರಣದಲ್ಲಿರುವುದರಿಂದ ರಾಜ್ಯ ಸರಕಾರಗಳು ಹಾಗೂ ಕೇಂದ್ರಾಡಳಿತಗಳು ತಮ್ಮ ಕಾರ್ಯವ್ಯಾಪ್ತಿಯಲ್ಲಿ ದತ್ತಾಂಶಗಳ ಸಂಗ್ರಹ, ಸಂರಕ್ಷಣೆ ಹಾಗೂ ಹಂಚುವಿಕೆಗಾಗಿ ಸಮರ್ಪಕ ಏಜೆನ್ಸಿಗೆ ಅಧಿಸೂಚನೆಯನ್ನು ಹೊರಡಿಸುವ ಅಧಿಕಾರವನ್ನು ಹೊಂದಿವೆ.

ವಿಧೇಯಕವು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಬಿಡುಗಡೆಗೊಂಡ ಅಥವಾ ದೋಷಮುಕ್ತಗೊಂಡಂತಹ ಮೊದಲ ಬಾರಿಯ ಅಪರಾಧಿಗಳ ಕುರಿತಾದ ಮಾಹಿತಿಗಳನ್ನು ಎಲ್ಲಾ ರೀತಿಯ ಕಾನೂನು ಪರಿಹಾರ ಕ್ರಮಗಳು ಮುಕ್ತಾಯಗೊಂಡ ಆನಂತರ ನಾಶಪಡಿಸಬಹುದಾಗಿದೆ. ಆದಾಗ್ಯೂ ನ್ಯಾಯಾಲಯ ಅಥವಾ ಮ್ಯಾಜಿಸ್ಟ್ರೇಟರು ಈ ಅಳಿಸುವಿಕೆಯ ವಿರುದ್ಧ ಆದೇಶವನ್ನು ನೀಡಬಹುದಾಗಿದೆ.

ನೂತನ ವಿಧೇಯಕದಡಿ ವ್ಯಕ್ತಿಗಳ ಜೈವಿಕ ಮಾದರಿಗಳ ಸಮೀಕ್ಷೆಯನ್ನು ಮಂಪರು ಪರೀಕ್ಷೆ ಮತ್ತು ಮೆದುಳಿನ ಮ್ಯಾಪಿಂಗ್‌ನಂತಹ ಪ್ರಕ್ರಿಯೆಗಳಿಗೂ ವಿಸ್ತರಿಸಬಹುದಾಗಿದೆ. ಒಂದು ವೇಳೆ ಅವು ಬಲವಂತದಿಂದ ನಡೆದಿದ್ದೇ ಆದಲ್ಲಿ ಅದು ಆರೋಪಿಗಳ ಮೂಲಭೂತ ಹಕ್ಕುಗಳ ಮೇಲೆ ಪರಿಣಾಮ ಬೀರಲಿದೆ. ನೂತನ ವಿಧೇಯಕದ ಉದ್ದೇಶವು ಕೇವಲ ಕೈದಿಗಳನ್ನು ಗುರುತಿಸುವುದಷ್ಟೇ ಅಲ್ಲದೆ ಆರೋಪಿಯ ಅಪರಾಧವನ್ನು ಸಾಬೀತುಪಡಿಸುವುದು ಕೂಡಾ ಆಗಿದೆ. ಪ್ರಸಕ್ತ ವಿಧೇಯಕದಲ್ಲಿ ಸಾಕಷ್ಟು ಲೋಪದೋಷಗಳಿರುವುದರಿಂದ ಅದು ಹಲವಾರು ಸಂದರ್ಭಗಳಲ್ಲಿ ದುರ್ಬಳಕೆಯಾಗುವ ಸಾಧ್ಯತೆಯೇ ಅಧಿಕವಾಗಿದೆಯೆಂದು ನಾಗರಿಕ ಹಕ್ಕುಗಳ ಸಂಘಟನೆಯಾದ ಇಂಟರ್‌ನೆಟ್ ಸ್ವಾತಂತ್ರ ಪ್ರತಿಷ್ಠಾನವು ತಿಳಿಸಿದೆ.

ಈಗಾಗಲೇ ಸಾರ್ವಜನಿಕರ ಖಾಸಗಿತನಗಳನ್ನು ಬೇರೆ ಬೇರೆ ಕಾರಣಗಳಿಂದ ಕಿತ್ತುಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಈ ವಿಧೇಯಕ ಜಾರಿಗೊಂಡರೆ, ಸರಕಾರದ ವಿರುದ್ಧ ಧ್ವನಿಯೆತ್ತುವ ಹೋರಾಟಗಾರರ ವಿರುದ್ಧ ಇದು ದುರುಪಯೋಗವಾಗುವ ಸಾಧ್ಯತೆಗಳೇ ಹೆಚ್ಚು. ಪೊಲೀಸ್ ಇಲಾಖೆಗಳು ಹೆಚ್ಚು ಹೆಚ್ಚು ಪೂರ್ವಾಗ್ರಹ ಪೀಡಿತವಾಗಿರುವಾಗ ಈ ಕಾನೂನು ಅಮಾಯಕರ ಮೇಲೆ ದೊಡ್ಡ ಪ್ರಮಾಣದಲ್ಲಿ ದುಷ್ಪರಿಣಾಮ ಬೀರಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News