ಮೂಲವೇತನದ ಮರುಜಾರಿಯನ್ನು ನಿರೀಕ್ಷಿಸಿದ್ದ ಇಂಡಿಗೋ ಪೈಲಟ್ ಗಳನ್ನು ನಿರಾಶಗೊಳಿಸಿದ ಶೇ.8ರಷ್ಟು ವೇತನ ಏರಿಕೆ

Update: 2022-04-04 16:34 GMT

ಹೊಸದಿಲ್ಲಿ,ಎ.4: ದೇಶದ ಅತ್ಯಂತ ದೊಡ್ಡ ವಿಮಾನಯಾನ ಸಂಸ್ಥೆಯಾಗಿರುವ ಇಂಡಿಗೋದ ಪೈಲಟ್ ಗಳು ತಮ್ಮ ವೇತನದಲ್ಲಿ ಶೇ.8ರಷ್ಟು ಏರಿಕೆಯನ್ನು ಪ್ರಕಟಿಸಿರುವ ಬಗ್ಗೆ ನಿರಾಶೆಯನ್ನು ವ್ಯಕ್ತಪಡಿಸಿದ್ದಾರೆ. ಅವರು ಇಂಡಿಗೋ ಸಂಸ್ಥೆಯು ಎರಡು ವರ್ಷಗಳ ಹಿಂದೆ ತಮ್ಮ ವೇತನದಲ್ಲಿ ಮಾಡಿದ್ದ ಶೇ.28ರ ಕಡಿತವನ್ನು ಮರುಸ್ಥಾಪಿಸುವ ನಿರೀಕ್ಷೆಯಲ್ಲಿದ್ದರು.

‘ಸಾಂಕ್ರಾಮಿಕದ ಸಂದರ್ಭದಲ್ಲಿ ನಮ್ಮ ವೇತನವನ್ನು ಶೇ.28ರಷ್ಟು ಕಡಿತಗೊಳಿಸಲಾಗಿತ್ತು. ಸಾಂಕ್ರಾಮಿಕದ ಮೊದಲಿನ ವೇತನವನ್ನು ಮರುಜಾರಿಗೊಳಿಸುವ ಬದಲು ಅವರು ನಮ್ಮ ವೇತನವನ್ನು ಶೇ.8ರಷ್ಟು ಹೆಚ್ಚಿಸಿದ್ದಾರೆ. ಇದು ನಮ್ಮ ಮೂಲವೇತನಕ್ಕಿಂತ ಶೇ.20ರಷ್ಟು ಕಡಿಮೆಯಾಗಿದೆ ’ ಎಂದು ಹೆಸರು ಹೇಳಿಕೊಳ್ಳಲು ಬಯಸದ ಪೈಲಟ್‌ವೋರ್ವರು ಹೇಳಿದರು.

ಇಂಡಿಗೋ ಇತ್ತೀಚಿಗೆ ಎ.1ರಿಂದ ಜಾರಿಗೆ ಬರುವಂತೆ ಪೈಲಟ್‌ಗಳ ವೇತನದಲ್ಲಿ ಶೇ.8ರಷ್ಟು ಏರಿಕೆಯನ್ನು ಪ್ರಕಟಿಸಿತ್ತು. ವಿಮಾನ ಯಾನಗಳಿಗೆ ಯಾವುದೇ ವ್ಯತ್ಯಯವುಂಟಾಗದಿದ್ದರೆ ನವಂಬರ್ನಲ್ಲಿ ಇನ್ನೂ ಶೇ.6.5 ಏರಿಕೆಯನ್ನು ಪೈಲಟ್‌ಗಳು ನಿರೀಕ್ಷಿಸಬಹುದು ಎಂದೂ ಅದು ಹೇಳಿತ್ತು.

ಕೆಲವು ಪೈಲಟ್‌ಗಳು ತಮ್ಮ ನಿರಾಶೆಯನ್ನು ವ್ಯಕ್ತಪಡಿಸಿದ್ದರಿಂದ ದಂಡನಾ ಕ್ರಮವಾಗಿ ಅವರನ್ನು ಕರ್ತವ್ಯದಿಂದ ವಿಮುಖಗೊಳಿಸಲಾಗಿದೆ ಮತ್ತು ಅವರಿಂದ ವಿವರಣೆಯನ್ನೂ ಕೇಳಲಾಗಿದೆ ಎನ್ನಲಾಗಿದೆ. ಸುದ್ದಿಸಂಸ್ಥೆಯು ಇಂಡಿಗೋವನ್ನು ಸಂಪರ್ಕಿಸಿತ್ತಾದರೂ ಅದು ಪ್ರತಿಕ್ರಿಯಿಸಿಲ್ಲ.

‘ಈ ಶೇ.8ರಷ್ಟು ಏರಿಕೆಯು ನಮ್ಮ ಉತ್ಸಾಹವನ್ನು ಹೆಚ್ಚಿಸುವ ಬದಲು ನಮ್ಮನ್ನು ಸ್ಥೈರ್ಯಗೆಡಿಸಿದೆ. ನಮ್ಮಲ್ಲಿ ಹೆಚ್ಚುಕಡಿಮೆ ಎಲ್ಲರೂ ಕೋವಿಡ್ ಮೊದಲಿನ ಶೇ.100ರಷ್ಟು ಕೆಲಸದ ಅವಧಿಯನ್ನು ನಿರ್ವಹಿಸುತ್ತಿದ್ದೇವೆ ’ ಎಂದು ಇನ್ನೋರ್ವ ಪೈಲಟ್ ತಿಳಿಸಿದರು. ಹಲವಾರು ಪೈಲಟ್‌ಗಳು ಇದೇ ರೀತಿ ನಿರಾಶೆಯನ್ನು ವ್ಯಕ್ತಪಡಿಸಿದ್ದಾರೆ.

ಅಂತರರಾಷ್ಟ್ರೀಯ ವಿಮಾನ ಯಾನಗಳ ಪುನರಾರಂಭದ ನಡುವೆ ಇಂಡಿಗೋ ಇತ್ತೀಚಿಗೆ ಹೊಸದಾಗಿ 20 ವಿಮಾನ ಯಾನಗಳನ್ನು ಆರಂಭಿಸಿದೆ. 2022,ಜನವರಿಗೆ ಇದ್ದಂತೆ ಅದು ಮಾರುಕಟ್ಟೆಯಲ್ಲಿ ಶೇ.55.5ರಷ್ಟು ಪಾಲನ್ನು ಹೊಂದಿದೆ. 
2006 ಆಗಸ್ಟ್‌ನಲ್ಲಿ ಸ್ಥಾಪನೆಗೊಂಡಿದ್ದ ಸಂಸ್ಥೆಯು ಒಟ್ಟು 276 ವಿಮಾನಗಳನ್ನು ಹೊಂದಿದೆ. ಅದು 73 ದೇಶಿಯ ಮತ್ತು 24 ಅಂತರರಾಷ್ಟೀಯ ತಾಣಗಳು ಸೇರಿದಂತೆ ಒಟ್ಟು 97 ಸ್ಥಳಗಳಿಗೆ ಯಾನಗಳನ್ನು ನಿರ್ವಹಿಸುತ್ತಿದೆ. 3,000ಕ್ಕೂ ಅಧಿಕ ಪೈಲಟ್‌ಗಳು ಇಂಡಿಗೋದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News