ಕರ್ನಾಟಕದ ಜನತೆ ತೋರಿದ ವಿವೇಕ

Update: 2022-04-05 04:44 GMT

ಶತಮಾನಗಳಿಂದ ಪ್ರೀತಿ, ವಿಶ್ವಾಸ ಮತ್ತು ನೆಮ್ಮದಿಯಿಂದ ಬದುಕುತ್ತಾ ಬಂದ ಕರ್ನಾಟಕದ ಜನತೆ ಯುಗಾದಿಯ ದಿನ ತಮ್ಮ ನಡುವೆ ಒಡಕಿನ ವಿಷಬೀಜ ಬಿತ್ತಲು ಬಂದ ಛಿದ್ರಕಾರಿ ಶಕ್ತಿಗಳ ಪ್ರಚೋದನೆಗೆ ಒಳಗಾಗದೆ ಶಾಂತಿ ಸೌಹಾರ್ದದಿಂದ ಹಬ್ಬವನ್ನು ಆಚರಿಸಿದ್ದಾರೆ. ರಾಜಕೀಯ ಕಾರಣಗಳಿಗಾಗಿ ಹುಟ್ಟು ಹಾಕಿದ ವಿವಾದಗಳ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಸರಕಾರದ ಮಂತ್ರಿಗಳೇ ಪ್ರಚೋದನಕಾರಿ ಮಾತುಗಳನ್ನು ಆಡಿದರೂ ಭಾವೋದ್ರೇಕಕ್ಕೆ ಒಳಗಾಗದೇ ಜೊತೆ ಸೇರಿ ಸಂಭ್ರಮಿಸಿದ್ದಾರೆ. ಅಧಿಕಾರದಲ್ಲಿರುವವರು ಅವಿವೇಕದಿಂದ ಎಡವಿದರೂ ಜನಸಾಮಾನ್ಯರು ಎಡವಲಿಲ್ಲ ಎಂಬುದು ಎಲ್ಲರೂ ಸಂತೋಷ ಪಡಬೇಕಾದ ವಿಚಾರ.

ಮುಂದಿನ ವರ್ಷ ವಿಧಾನಸಭಾ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಅಧಿಕಾರಕ್ಕೆ ಬರಬೇಕೆಂಬುದು ಪ್ರಮುಖ ರಾಜಕೀಯ ಪಕ್ಷಗಳ ಸಹಜ ಆಕಾಂಕ್ಷೆಯಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಗಳಿಸಲಾಗದೆ ಬಾನಗಡಿ ಮಾಡಿ ಅಧಿಕಾರಕ್ಕೆ ಬಂದವರು ಕೂಡ ಮತ್ತೆ ಜನರ ಬಳಿ ಹೋಗಲೇಬೇಕು. ಆದರೆ ಜನರ ಮುಂದೆ ಹೇಳಿಕೊಳ್ಳಲು ಯಾವ ಸಾಧನೆಗಳೂ ಅವರ ಬಳಿ ಇಲ್ಲ. ಬದಲಾಗಿ ಬ್ರಹ್ಮಾಂಡ ಭ್ರಷ್ಟಾಚಾರದ ಆರೋಪಗಳು ಹಾಗೂ ಶೇ. 40 ಕಮಿಶನ್ ಕುರಿತ ಗುತ್ತಿಗೆದಾರರು ಪ್ರಧಾನಿ ಹಾಗೂ ರಾಷ್ಟ್ರಪತಿಗಳಿಗೆ ಬರೆದ ಪತ್ರ, ಬೆಲೆ ಏರಿಕೆ, ನಿರುದ್ಯೋಗ ಇವುಗಳ ಬಗ್ಗೆ ಜನರ ಗಮನವನ್ನು ಬೇರೆಡೆ ಸೆಳೆಯಲು ಸಂಘ ಪರಿವಾರದ ಪ್ರಯೋಗ ಶಾಲೆಯಲ್ಲಿ ರೂಪಿಸಲಾದ ‘ಲವ್ ಜಿಹಾದ್’, ಮತಾಂತರ, ಗೋ ಹತ್ಯೆಗಳಂತೆ ‘ಹಲಾಲ್-ಜಟ್ಕಾ’ ಎಂಬ ಹೊಸ ತಂತ್ರವನ್ನು ಈ ಬಾರಿ ರಮಝಾನ್ ಮುನ್ನ ಯುಗಾದಿಯ ದಿನ ರೂಪಿಸಿ ಕಲಹದ ಕಿಡಿ ಹೊತ್ತಿಸಲು ಯತ್ನಿಸಲಾಯಿತು. ಆದರೆ ಕರ್ನಾಟಕದ ಜನತೆ ಅವರು-ಹಿಂದೂಗಳಾಗಿರಲಿ, ಮುಸಲ್ಮಾನರಾಗಿರಲಿ, ಲಿಂಗಾಯತರಾಗಿರಲಿ, ಬಿಲ್ಲವರಾಗಿರಲಿ, ಒಕ್ಕಲಿಗರಾಗಿರಲಿ-ಇಂತಹ ಪ್ರಚೋದನೆಗಳಿಗೆ ಸೊಪ್ಪುಹಾಕದೆ ಪರಸ್ಪರ ಸೌಹಾರ್ದದಿಂದ ಹಬ್ಬವನ್ನು ಆಚರಿಸಿದ್ದು ಸ್ವಾಗತಾರ್ಹ ಬೆಳವಣಿಗೆಯಾಗಿದೆ.

ಜನರು ಹಿಂದೂ-ಮುಸ್ಲಿಮರ ಅಂಗಡಿಗಳೆನ್ನದೆ ಮಾಂಸದ ಗುಣಮಟ್ಟವನ್ನು ನೋಡಿ ಖರೀದಿ ಮಾಡಿದ್ದಾರೆ. ಕರಪತ್ರ ಹಂಚಿ ಜಟ್ಕಾ ಮಾಂಸ ಖರೀದಿ ಮಾಡಿ ಎಂದು ಬೀದಿಗಳಲ್ಲಿ ನಿಂತು ಪ್ರಚೋದಿಸಿದ ಕೋಮುವಾದಿ ಸಂಘಟನೆಗಳ ಕಾರ್ಯಕರ್ತರ ಮಾತುಗಳನ್ನು ಕಿವಿಯ ಮೇಲೆ ಹಾಕಿ ಕೊಂಡಿಲ್ಲ.

ಮೈಸೂರಿನಲ್ಲಿ ನಾಡಿನ ಹಿರಿಯ ಲೇಖಕ ದೇವನೂರ ಮಹಾದೇವ ನೇತೃತ್ವದಲ್ಲಿ ನೂರಾರು ಮಂದಿ ಯಾವುದೇ ಪ್ರಚೋದನೆಗೆ ಒಳಗಾಗದೆ ಮುಸ್ಲಿಮರ ಅಂಗಡಿಗಳಲ್ಲಿ ಬಾಡು ಖರೀದಿಸಿದ್ದಾರೆ. ರಾಜಧಾನಿ ಬೆಂಗಳೂರಿನಲ್ಲಿ ರವಿವಾರ ಹಲಾಲ್-ಜಟ್ಕಾ ವಿವಾದಕ್ಕೆ ಕಿವಿಗೊಡದೆ ತಮಗೆ ಬೇಕಾದ ಕುರಿ, ಕೋಳಿ ಹಾಗೂ ಮೀನು ಮಾರಾಟ ಮಳಿಗೆಯ ಎದುರು ಸಾಲಾಗಿ ನಿಂತು ಖರೀದಿ ಮಾಡಿದ್ದಾರೆ. ‘ಹಲಾಲ್ ಮಾಂಸ ತಿರಸ್ಕರಿಸಿ, ಜಟ್ಕಾ ಮಾಂಸ ಖರೀದಿಸಿ’ ಎಂಬ ಸಂಘ ಪರಿವಾರದ ಅದರಲ್ಲೂ ಬಜರಂಗದಳದ ಕಾರ್ಯಕರ್ತರ ಅಭಿಯಾನದ ನಡುವೆ ಜನರು ತಮ್ಮ ಇಷ್ಟದ ಅಂಗಡಿಗಳಲ್ಲಿ ಖರೀದಿ ಮಾಡಿದ್ದಾರೆ. ಮಳವಳ್ಳಿ, ಮೈಸೂರು, ತಿಪಟೂರು, ಕಲಬುರಗಿ, ಬೆಂಗಳೂರು ಮುಂತಾದ ಕಡೆ ರೈತ ಸಂಘಟನೆಗಳು ಮತ್ತು ದಲಿತ ಸಂಘಟನೆಗಳು ಹಾಗೂ ಎಡಪಂಥೀಯ ಸಂಘಟನೆಗಳು ಒಂದಾಗಿ ಸೌಹಾರ್ದ ಯುಗಾದಿಯನ್ನು ಆಚರಿಸುವ ಮೂಲಕ ಭಾವೈಕ್ಯದ ಬಾವುಟವನ್ನು ಎತ್ತಿ ಹಿಡಿದಿವೆ.

ಭಾರತೀಯರನ್ನು ಒಡೆಯಲು ಕೋಮುವಾದಿ ಶಕ್ತಿಗಳು ಹೊಸ ಹೊಸ ತಂತ್ರಗಳನ್ನು ಪ್ರಯೋಗಿಸುತ್ತಲೇ ಇವೆ. ಇದರಿಂದಾಗಿ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗುತ್ತಾ ಬಂದಿದೆ. ಮತಾಂತರ, ಲವ್ ಜಿಹಾದ್, ಹಿಜಾಬ್ ಎಂಬ ಕುತಂತ್ರಗಳ ನಂತರ ಈ ಬಾರಿ ಹಲಾಲ್ ಮತ್ತು ಜಟ್ಕಾ ಎಂಬ ಹೊಸ ತಂತ್ರವನ್ನು ರೂಪಿಸಿದರು. ಸಂಘ ಪರಿವಾರದ ಶಾಖೆಗಳಂತಾಗಿರುವ ಮಾಧ್ಯಮಗಳು ಅದರಲ್ಲೂ ವಿದ್ಯುನ್ಮಾನ ಮಾಧ್ಯಮಗಳು ಸಾಮಾಜಿಕ ಶಾಂತಿ, ನೆಮ್ಮದಿಯನ್ನು ಕದಡುವ ದುಷ್ಟಕಾರ್ಯದಲ್ಲಿ ಛಿದ್ರಕಾರಿ ಸಂಘಟನೆಗಳ ಜೊತೆ ಕೈ ಜೋಡಿಸಿದವು. ಹಲಾಲ್-ಜಟ್ಕಾ ಎಂದು ವಾರಗಟ್ಟಲೆ ಕೋಮು ಉನ್ಮಾದ ಕೆರಳಿಸಲು ಮುಂದಾದವು. ಇಂತಹ ಸೂಕ್ಷ್ಮ ಸನ್ನಿವೇಶದಲ್ಲಿ ಮಧ್ಯಪ್ರವೇಶ ಮಾಡಿ ಜನಸಾಮಾನ್ಯರಲ್ಲಿ ಭರವಸೆಯನ್ನು ಮೂಡಿಸಬೇಕಾದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಹಲಾಲ್ ಕುರಿತ ವಿವಾದಕ್ಕೆ ಸರಕಾರದ ಪರವಾಗಿ ಯಾವುದೇ ನಿಲುವನ್ನು ಪ್ರಕಟಿಸದೆ ಯಾವಾಗ ಪ್ರತಿಕ್ರಿಯೆ ಕೊಡಬೇಕೋ ಆಗ ಕೊಡುತ್ತೇನೆ ಎಂದು ಜಾರಿಕೊಂಡರು. ಇನ್ನೊಂದು ಕಡೆ ಹಿರಿಯ ಮಂತ್ರಿ ಶಶಿಕಲಾ ಜೊಲ್ಲೆಯವರು ಹಲಾಲ್-ಜಟ್ಕಾ ಹೆಸರಿನಲ್ಲಿ ಪುಂಡಾಟಿಕೆಗೆ ಇಳಿದ ಸಂಘಟನೆಗಳ ಪರವಾಗಿ ಬಹಿರಂಗ ಹೇಳಿಕೆ ನೀಡಿದರು. ಈ ನಡುವೆ ಉದ್ಯಮಿ ಕಿರಣ್ ಮಜುಂದಾರ್ ಸರಕಾರದ ಮೌನವನ್ನು ತರಾಟೆಗೆ ತೆಗೆದುಕೊಂಡರು. ಆ ನಂತರ ಎಚ್ಚೆತ್ತ ಮುಖ್ಯ ಮಂತ್ರಿಗಳು ಪುಂಡಾಟಿಕೆ ನಡೆಸಿದ ಸಂಘಟನೆಗಳ ಹೆಸರು ಹೇಳದೆ ಶಾಂತಿ ಪಾಲನೆಗೆ ಕಾಟಾಚಾರದ ಮನವಿ ಮಾಡಿದರು. ಇಂತಹ ಪರಿಸ್ಥಿತಿಯಲ್ಲೂ ಎಲ್ಲ ಸಮುದಾಯಗಳ ಜನ ಯಾವುದೇ ಪ್ರಚೋದನೆಗೆ ಒಳಗಾಗದೆ ಸೌಹಾರ್ದದಿಂದ ಹಬ್ಬವನ್ನು ಆಚರಿಸಿದ್ದು ಹೆಮ್ಮೆ ಪಡಬೇಕಾದ ಸಂಗತಿಯಾಗಿದೆ.

ಕವಿರಾಜ ಮಾರ್ಗಕಾರನಿಂದ ಹಿಡಿದು ಕುವೆಂಪುವರೆಗೆ ಕರ್ನಾಟಕ ಸರ್ವಧರ್ಮ ಸಮನ್ವಯ ಮತ್ತು ಜಾತ್ಯತೀತ ಮೌಲ್ಯಗಳನ್ನು ಎತ್ತಿ ಹಿಡಿಯುತ್ತ ಬಂದಿದೆ. ಶರಣರು, ಸೂಫಿಗಳು, ದಾಸರು ಆಗಾಗ ನೀಡುತ್ತ ಬಂದ ವಿವೇಕದ ಬೆಳಕು ಈ ನಾಡನ್ನು ಮುನ್ನಡೆಸುತ್ತ ಬಂದಿದೆ.ಚುನಾವಣೆಯಲ್ಲಿ ಬಹುಸಂಖ್ಯಾತ ವೋಟ್ ಬ್ಯಾಂಕ್ ನಿರ್ಮಿಸುವ ಕೋಮುವಾದಿ ಶಕ್ತಿಗಳ ಮಸಲತ್ತಿಗೆ ಸುಲಭಕ್ಕೆ ಬಲಿಯಾಗುವ ನಾಡು ಕರ್ನಾಟಕವಲ್ಲ. ಆದರೂ ದಕ್ಷಿಣ ಭಾರತದಲ್ಲಿ ನೆಲೆ ಕಂಡುಕೊಳ್ಳಲು ಕರ್ನಾಟಕವನ್ನು ಆಯ್ಕೆ ಮಾಡಿಕೊಂಡಿರುವ ಕೋಮುವಾದಿ, ಫ್ಯಾಶಿಸ್ಟ್ ಶಕ್ತಿಗಳು ಈ ಸೌಹಾರ್ದ ಪರಂಪರೆಗೆ ಕೊಳ್ಳಿ ಇಡಲು ಹುನ್ನಾರಗಳನ್ನು ನಡೆಸುತ್ತಲೇ ಬಂದಿವೆ.

ಜನತೆಯಿಂದ ಚುನಾಯಿತರಾದ ಪ್ರತಿನಿಧಿಗಳು ಮತ್ತು ಸರಕಾರ ಸಂವಿಧಾನಾತ್ಮಕ ಜವಾಬ್ದಾರಿಯನ್ನು ಜಾಣತನದಿಂದ ಮರೆತು ಹಾಗೂ ಕೆಲವು ಮಂತ್ರಿಗಳು ಶಾಂತಿ ಕದಡುವ ಬೀದಿ ಗೂಂಡಾಗಳ ಜೊತೆಗೆ ಗುರುತಿಸಿಕೊಳ್ಳಲು ಸಂಕೋಚ ಪಡದ ಈ ದಿನಗಳಲ್ಲಿ ಜನಸಾಮಾನ್ಯರು ತೋರಿದ ಸಹನೆ, ಸೌಹಾರ್ದ ಮತ್ತು ವಿವೇಕಗಳು ಈ ನಾಡಿನ ಭವಿಷ್ಯದ ಬಗ್ಗೆ ಭರವಸೆಯನ್ನು ಮೂಡಿಸುತ್ತವೆ. ಚುನಾವಣಾ ಗೆಲುವಿಗಾಗಿ ದಂಗೆಕೋರ ಕೋಮುವಾದಿ ಶಕ್ತಿಗಳ ಜೊತೆ ಶಾಮೀಲಾಗುವ ರಾಜಕಾರಣಿಗಳಿಂದ ಉತ್ತಮವಾದ ಆಡಳಿತವನ್ನು ನಿರೀಕ್ಷೆ ಮಾಡಲು ಆಗುವುದಿಲ್ಲ. ಜನಸಾಮಾನ್ಯರೇ ಇದೇ ರೀತಿ ವಿವೇಕ ಮತ್ತು ಸಹನೆಯಿಂದ ಕನ್ನಡ ನಾಡನ್ನು ಉಳಿಸಿಕೊಳ್ಳಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News