ಮಾಲಿ: 300 ನಾಗರಿಕರ ಸಾಮೂಹಿಕ ಹತ್ಯೆಗೆ ಎಚ್ಆರ್ಡಬ್ಲ್ಯೂ ಖಂಡನೆ

Update: 2022-04-05 17:37 GMT

ನ್ಯೂಯಾರ್ಕ್, ಎ.5: ಮಾಲಿ ದೇಶದ ಸೇನೆ ಮತ್ತು ವಿದೇಶದ ಯೋಧರು ಮಾಲಿಯ ಮೌರಾ ನಗರದಲ್ಲಿ ನಡೆಸಿದ ಸೇನಾ ಕಾರ್ಯಾಚರಣೆಯಲ್ಲಿ ಸುಮಾರು 300 ನಾಗರಿಕರ ಸಾಮೂಹಿಕ ಹತ್ಯೆ ಪ್ರಕರಣವನ್ನು ಅಂತರಾಷ್ಟ್ರೀಯ ಮಾನವ ಹಕ್ಕುಗಳ ನಿಗಾ ಸಮಿತಿ(ಎಚ್ಆರ್ಡಬ್ಲ್ಯೂ) ಖಂಡಿಸಿದೆ.

ಮಾಲಿಯಲ್ಲಿ ದಶಕಗಳಿಂದಲೂ ನಡೆಯುತ್ತಿರುವ ಸಂಘರ್ಷದಲ್ಲಿ ವರದಿಯಾದ ಅತ್ಯಂತ ಘೋರ ದೌರ್ಜನ್ಯ ಇದಾಗಿದ್ದು, ಮಾರ್ಚ್ 27ರಿಂದ ಮೌರಾ ನಗರದಲ್ಲಿ ನಡೆಯುತ್ತಿರುವ ಸೇನಾ ಕಾರ್ಯಾಚರಣೆಯಲ್ಲಿ ಸಶಸ್ತ್ರ ಬಂಡುಗೋರ ಸಂಘಟನೆಯ ಶಂಕಿತ ಸದಸ್ಯರು ಸೇರಿದಂತೆ 300 ನಾಗರಿಕರ ಸಾಮೂಹಿಕ ಹತ್ಯೆಯಾಗಿದೆ ಎಂದು ಎಚ್ಆರ್ಡಬ್ಲ್ಯೂ ಹೇಳಿದೆ. ‘ಆರ್ಮ್ಡ್ ಇಸ್ಲಾಮಿಸ್ಟ್ ಗ್ರೂಫ್’  (ಜಿಐಎ)ನ ಕೃತ್ಯಗಳಿಗೆ ಪ್ರತಿಕ್ರಿಯೆ ಎಂಬ ಕಾರಣ ನೀಡಿ ಜನರನ್ನು ಕಸ್ಟಡಿಯಲ್ಲಿ ಉದ್ದೇಶಪೂರ್ವಕ ಹತ್ಯೆ ನಡೆಸಿರುವ ಸೇನೆಯ ಕ್ರಮ ಸಮರ್ಥನೀಯವಲ್ಲ . ಈ ದೌರ್ಜನ್ಯವನ್ನು ಮಾಲಿಯ ಸೇನೆ ಅಥವಾ ಸೇನೆಗೆ ಬೆಂಬಲ ನೀಡುತ್ತಿರುವ ವಿದೇಶದ ಯೋಧರು ನಡೆಸಿರಲಿ, ಇದಕ್ಕೆ ಮಾಲಿಯ ಸರಕಾರ ಹೊಣೆಯಾಗಿದೆ ಎಂದು ಎಚ್ಆರ್ಡಬ್ಲ್ಯೂನ ಸಹೇಲ್ ವಿಭಾಗದ ನಿರ್ದೇಶಕಿ ಕೊರಿನೆ ಡುಫ್ಕಾ ಹೇಳಿದ್ದಾರೆ.

ಮಾರ್ಚ್ 23ರಿಂದ ಎಪ್ರಿಲ್ 3ರವರೆಗೆ ಮೌರಾ ನಗರದಲ್ಲಿ ಸೇನೆ ಮತ್ತು ವಾಯುಪಡೆ ನಡೆಸಿದ ಕಾರ್ಯಾಚರಣೆಯಲ್ಲಿ 203 ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಮಾಲಿಯ ರಕ್ಷಣಾ ಸಚಿವರು ಹೇಳಿಕೆ ನೀಡಿದ್ದರು. ಮೃತರಲ್ಲಿ ಸಮುದಾಯ ಮುಖಂಡರು, ರಾಜತಾಂತ್ರಿಕರು, ಭದ್ರತಾ ವಿಶ್ಲೇಷಕರು, ಪ್ರತ್ಯಕ್ಷದರ್ಶಿಗಳು ಸೇರಿದ್ದಾರೆ ಎಂದು ಮಾನವ ಹಕ್ಕು ನಿಗಾ ಸಮಿತಿ ಹೇಳಿದೆ. ಮಾಲಿ ಸೇನೆ ಮತ್ತು ಬಿಳಿ ವರ್ಣೀಯರಾದ ಫ್ರೆಂಚ್ ಮಾತನಾಡದ ಯೋಧರು ಸಾಮೂಹಿಕ ಹತ್ಯೆ ನಡೆಸಿದ್ದಾರೆ. ಸೆರೆಸಿಕ್ಕವರನ್ನು 10 ಮಂದಿಯ ಒಂದು ತಂಡವನ್ನಾಗಿ ವಿಭಾಜಿಸಿ, ಅವರನ್ನು ಸುಮಾರು 1 ಕಿಮೀ ದೂರದಿಂದ ನಡೆದುಕೊಂಡು ಬರುವಂತೆ ಆದೇಶಿಸಲಾಗಿದೆ. ಹೀಗೆ ಬರುತ್ತಿದ್ದವರನ್ನು ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ ಎಂದು ಪ್ರತ್ಯಕ್ಷದರ್ಶಿಗಳನ್ನು ಉಲ್ಲೇಖಿಸಿ ಎಚ್ಆರ್ಡಬ್ಲ್ಯೂ ವರದಿ ಮಾಡಿದೆ. ಜಿನೆವಾ ಒಪ್ಪಂದದ 3ನೇ ಪರಿಚ್ಛೇದದ ಪ್ರಕಾರ, ಯುದ್ಧದ ಸಂದರ್ಭ ಸೆರೆಸಿಕ್ಕ ಯೋಧರು ಅಥವಾ ನಾಗರಿಕರ ಸಾಮೂಹಿಕ ಹತ್ಯೆ ಅಂತರಾಷ್ಟ್ರೀಯ ಕಾನೂನಿನ ಉಲ್ಲಂಘನೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News