ದಿಲ್ಲಿ ಗಲಭೆ ಪ್ರಕರಣ: ಮೀರಾನ್ ಹೈದರ್ ಗೆ ಜಾಮೀನು ನಿರಾಕರಣೆ

Update: 2022-04-05 18:30 GMT

ಹೊಸದಿಲ್ಲಿ, ಎ. 5: ನಗರದಲ್ಲಿ 2020 ಫೆಬ್ರವರಿಯಲ್ಲಿ ನಡೆದ ಕೋಮು ಗಲಭೆಗೆ ಸಂಬಂಧಿಸಿದ ಪ್ರಕರಣದಲ್ಲಿ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿದ್ಯಾರ್ಥಿ ಮೀರಾನ್ ಹೈದರ್ ಸಲ್ಲಿಸಿದ ಜಾಮೀನು ಅರ್ಜಿಯನ್ನು ದಿಲ್ಲಿ ನ್ಯಾಯಾಲಯ ಮಂಗಳವಾರ ತಿರಸ್ಕರಿಸಿದೆ.

ಹೆಚ್ಚುವರಿ ಸತ್ರ ನ್ಯಾಯಾಧೀಶ ಅಮಿತಾಭ್ ರಾವತ್ ಈ ಆದೇಶ ನೀಡಿದ್ದಾರೆ.
ಸೊತ್ತು ನಾಶ ಹಾಗೂ ಅಗತ್ಯದ ಸೇವೆಗಳ ಅಡ್ಡಿಗೆ ಕಾರಣವಾದ ಗಲಭೆಯನ್ನು ನಿಖರವಾಗಿ ಯೋಜಿಸಲಾಗಿತ್ತು ಎಂದು ಪ್ರಾಸಿಕ್ಯೂಷನ್ ಪರ ವಕೀಲರು ವಾದಿಸಿದರು.
ಗಲಭೆಗಳನ್ನು ಪ್ರಚೋದಿಸಲು ಸಂಚಿಗೆ ಸಂಬಂಧಿಸಿದ ಪ್ರಕರಣದಲ್ಲಿ ರಾಷ್ಟ್ರೀಯ ಜನತಾ ದಳದ ಯುವ ಘಟಕದ ನಾಯಕ ಹೈದರ್ ಅವರ ಹೆಸರನ್ನು ಕಾನೂನು ಬಾಹಿರ ಚಟುವಟಿಕೆ ತಡೆ ಕಾಯ್ದೆ ಅಡಿಯಲ್ಲಿ ದಾಖಲಿಸಲಾಗಿರುವ ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.
 ಈ ಪ್ರಕರಣದ ಇತರ ಆರೋಪಿಗಳೆಂದರೆ ಸಾಮಾಜಿಕ ಹೋರಾಟಗಾರ ಉಮರ್ ಖಾಲಿದ್, ಶರ್ಜೀಲ್ ಇಮಾಮ್, ಖಾಲಿದ್ ಸೈಫಿ, ಕಾಂಗ್ರೆಸ್‌ನ ಮಾಜಿ ಕೌನ್ಸಿಲರ್ ಇಸ್ರತ್ ಜಹಾನ್, ಮಾಜಿ ಎಎಪಿಯ ಕೌನ್ಸಿಲರ್ ತಾಹಿರ್ ಹುಸೈನ್, ಪಿಂಜ್ರಾ ತೋಡ್ ಹೋರಾಟಗಾರರಾದ ನತಾಶಾ ನರ್ವಾಲ್, ದೇವಾಂಗನ ಕಲೀಟಾ, ವಿದ್ಯಾರ್ಥಿ ಹೋರಾಟಗಾರರಾದ ಗುಲ್ಫಿಶಾ ಫಾತಿಮಾ, ಸಫೂರಾ ಝರ್ಗಾರ್ ಹಾಗೂ ಶಿಕ್ಷಣ ಸಮಾಲೋಚಕರಾದ ತಸ್ಲೀಮ್ ಅಹ್ಮದ್.

ಗುಲ್ಫಿಶಾ ಫಾತಿಮಾ ಹಾಗೂ ತಸ್ಲೀಮ್ ಅಹ್ಮದ್ ಅವರ ಜಾಮೀನು ಅರ್ಜಿಯನ್ನು ದಿಲ್ಲಿ ನ್ಯಾಯಾಲಯ ಮಾರ್ಚ್ 16ರಂದು ತಿರಸ್ಕರಿಸಿತ್ತು. ಉಮರ್ ಖಾಲಿದ್ ಅವರ ಜಾಮೀನು ಅರ್ಜಿಯನ್ನು ನ್ಯಾಯಮೂರ್ತಿ ರಾವತ್ ಅವರು ಮಾರ್ಚ್ 24ರಂದು ತಿರಸ್ಕರಿಸಿದ್ದರು.
2020 ಫೆಬ್ರವರಿ 23 ಹಾಗೂ ಫೆಬ್ರವರಿ 26ರ ನಡುವೆ ಈಶಾನ್ಯ ದಿಲ್ಲಿಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಗರು ಹಾಗೂ ವಿರೋಧಿಗಳ ನಡುವೆ ಕೋಮು ಹಿಂಸಾಚಾರ ಭುಗಿಲೆದ್ದಿತ್ತು. ಈ ಹಿಂಸಾಚಾರದಲ್ಲಿ 53 ಮಂದಿ ಪ್ರಾಣ ಕಳೆದುಕೊಂಡಿದ್ದರು. ನೂರಾರು ಜನರು ಗಾಯಗೊಂಡಿದ್ದರು. ಮೃತಪಟ್ಟವರಲ್ಲಿ ಹೆಚ್ಚಿನವರು ಮುಸ್ಲಿಮರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News