ಇಂಡಿಯನ್ ನರ್ಸಿಂಗ್ ಕೌನ್ಸಿಲ್ ಸಂಶೋಧನೆ: ವರದಕ್ಷಿಣೆಯಿಂದ ಲಾಭಗಳಿವೆಯಂತೆ!

Update: 2022-04-07 03:30 GMT

ಹೆಣ್ಣನ್ನು ಹೆತ್ತವರ ಪಾಲಿಗೆ ಒಂದು ಹೊರೆಯಾಗಿಸಿರುವುದು ‘ವರದಕ್ಷಿಣೆ’ ಎನ್ನುವುದು ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೂ ಗೊತ್ತಿರುವ ವಿಷಯ. ವರದಕ್ಷಿಣೆ ಸಮಾಜಕ್ಕೆ ಹೇಗೆ ಮಾರಕ? ಎಂಬ ವಿಷಯವನ್ನಿಟ್ಟು ನಾಲ್ಕನೆಯ ತರಗತಿಯ ವಿದ್ಯಾರ್ಥಿಯೂ ಒಂದು ಗಂಟೆ ಮಾತನಾಡಬಲ್ಲ. ವರದಕ್ಷಿಣೆಯ ಹೆಸರಿನಲ್ಲಿ ಹೆಣ್ಣಿನ ಮೇಲೆ ಮತ್ತು ಹೆಣ್ಣು ಹೆತ್ತವರ ಮೇಲೆ ನಡೆಯುತ್ತಿರುವ ದೌರ್ಜನ್ಯಕ್ಕೆ ಬಹುದೊಡ್ಡ ಇತಿಹಾಸವೇ ಇದೆ. ಇದರ ವಿರುದ್ಧ ಕಾನೂನುಗಳನ್ನು ಮಾಡಿದರೂ, ಕಾನೂನಿನ ಬೇಲಿ ಹಾರಿ, ಕದ್ದು ಮುಚ್ಚಿ ವರದಕ್ಷಿಣೆ ಪಡೆಯುವ, ಅನಿವಾರ್ಯವಾಗಿ ವರದಕ್ಷಿಣೆಯನ್ನು ನೀಡುವ ಪಾಲಕರು ನಮ್ಮ ನಡುವೆ ಮುಕ್ತವಾಗಿ ಓಡಾಡುತ್ತಿದ್ದಾರೆ. ಕನಿಷ್ಠ ಈ ಕುರಿತಂತೆ ತನ್ನನ್ನು ಹಣಕ್ಕೆ ಮಾರಿಕೊಳ್ಳುವ ‘ಪುರುಷ’ನಿಗಾದರೂ ಲಜ್ಜೆ ಎನ್ನುವುದು ಇರಬೇಕು. ಆದರೆ ಆತನೂ ವರದಕ್ಷಿಣೆ ಎನ್ನುವುದು ತನ್ನ ‘ಗಂಡಸುತನ’ಕ್ಕೆ ಕಟ್ಟುವ ಬೆಲೆ ಎಂದೇ ಭಾವಿಸಿ ನಾಚಿಕೆಯಿಲ್ಲದೆ ಹೆಣ್ಣು ಹೆತ್ತವರ ಮುಂದೆ ಹಣಕ್ಕೆ ಕೈ ಚಾಚುತ್ತಾನೆ. ವಿದ್ಯಾವಂತ ಕುಟುಂಬದಲ್ಲೇ ವರದಕ್ಷಿಣೆ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡ ಹೆಣ್ಣು ಮಕ್ಕಳ ಸಂಖ್ಯೆ ದೊಡ್ಡದಿದೆ. ಇನ್ನು ಗ್ರಾಮೀಣ ಪ್ರದೇಶದಲ್ಲಿ ಈ ಸ್ಥಿತಿ ಎಷ್ಟು ಹೀನಾಯವಾಗಿರಬಹುದು ಎನ್ನುವುದನ್ನು ಪ್ರತ್ಯೇಕವಾಗಿ ವಿವರಿಸುವ ಅಗತ್ಯವಿಲ್ಲ.

ವರದಕ್ಷಿಣೆಯ ಬಗ್ಗೆ ದೇಶಾದ್ಯಂತ ಭಾರೀ ಪ್ರಮಾಣದ ಜಾಗೃತಿ ಮೂಡಿಸಲಾಗುತ್ತಿದೆ. ಆದರೆ ವಿದ್ಯಾವಂತ ವಲಯದಲ್ಲೇ ಈ ವರದಕ್ಷಿಣೆಯನ್ನು ಹೇಗೆ ಮಾನಸಿಕವಾಗಿ ಸಮರ್ಥಿಸಿಕೊಳ್ಳಲಾಗುತ್ತದೆ ಎನ್ನುವುದಕ್ಕೆ ಉದಾಹರಣೆಯಾಗಿ ‘ಭಾರತೀಯ ನರ್ಸಿಂಗ್’ನ ತರಗತಿಯಲ್ಲಿ ವರದಕ್ಷಿಣೆಯ ಅನುಕೂಲತೆಯನ್ನು ಪಟ್ಟಿ ಮಾಡುವ ಪಾಠವೊಂದನ್ನು ಬೋಧಿಸಲಾಗುತ್ತಿದೆ. ‘ಟೆಕ್ಸ್ಟ್ ಬುಕ್ ಆಫ್ ಸೋಶಿಯಾಲಜಿ ಫಾರ್ ನರ್ಸ್’ ಪುಸ್ತಕದಲ್ಲಿ, ವರದಕ್ಷಿಣೆ ರೂಪದಲ್ಲಿ ಹೆತ್ತವರ ಪಾಲು ಪಡೆಯುವುದರಿಂದ ಹೆಣ್ಣಿಗೆ ಲಾಭವಿದೆ ಎಂದು ಪ್ರತಿಪಾದಿಸುವ ಮೂಲಕ ವರದಕ್ಷಿಣೆಯನ್ನು ಸಮರ್ಥಿಸಲಾಗಿದೆ. ಅಷ್ಟೇ ಅಲ್ಲ ಹೆಣ್ಣಿನ ಕುರಿತಂತೆ ಅತ್ಯಂತ ನಿಕೃಷ್ಟವಾದ ಮನಸ್ಥಿತಿಯನ್ನು ಈ ಪಠ್ಯ ವ್ಯಕ್ತಪಡಿಸುತ್ತದೆ. ಈ ಪಠ್ಯದ ಪ್ರಕಾರ ‘ವರದಕ್ಷಿಣೆ ಮೂಲಕ ಕುರೂಪಿ ಮಹಿಳೆಯರಿಗೂ ಮದುವೆ ಮಾಡಿಸುವುದಕ್ಕೆ ಸಾಧ್ಯವಾಗುತ್ತದೆ’ ಎಂದು ಲೇಖಕಿ ಹೇಳುತ್ತಾರೆ. ‘ವರದಕ್ಷಿಣೆ ಪಡೆಯುವುದರಿಂದ ಹೆಣ್ಣು ತನ್ನ ಮನೆಗೆ ಬೇಕಾದ ಪೀಠೋಪಕರಣಗಳನ್ನು ಖರೀದಿಸಬಹುದು, ವಾಹನಗಳನ್ನು ಖರೀದಿಸಬಹುದು’ ಎಂದು ಅವರು ಲಾಭಗಳನ್ನು ಪಟ್ಟಿ ಮಾಡುತ್ತಾರೆ. ಅಷ್ಟೇ ಅಲ್ಲ, ವರದಕ್ಷಿಣೆಯ ಸಮಸ್ಯೆಯನ್ನು ಈ ಪಠ್ಯದಲ್ಲಿ ಎಷ್ಟು ಲಘುವಾಗಿ ನೋಡಲಾಗಿದೆ ಎಂದರೆ ‘ಪೋಷಕರು ತಮ್ಮ ಮಗಳು, ತಂಗಿಯಂದಿರಿಗೆ ವರದಕ್ಷಿಣೆ ಕೊಡಬೇಕಾಗುತ್ತದೆಯಾದುದರಿಂದ ಸಹಜವಾಗಿಯೇ ಗಂಡು ಮಕ್ಕಳಿಗಾಗಿ ವರದಕ್ಷಿಣೆಯನ್ನು ಪಡೆದುಕೊಳ್ಳುತ್ತಾರೆ’ ಎಂದು ಸಮರ್ಥಿಸುತ್ತಾರೆ.

ಈ ಪಠ್ಯವನ್ನು ಇಂಡಿಯನ್ ನರ್ಸಿಂಗ್ ಕೌನ್ಸಿಲ್‌ನ ಪಠ್ಯಕ್ರಮಕ್ಕೆ ಅನುಗುಣವಾಗಿ ಬರೆಯಲಾಗಿದೆ ಎಂದು ಪುಸ್ತಕದ ಮೊದಲ ಪುಟದಲ್ಲೇ ಹೇಳಲಾಗಿದೆ. ಅಂದರೆ ಇಂಡಿಯನ್ ನರ್ಸಿಂಗ್ ಕೌನ್ಸಿಲ್ ವರದಕ್ಷಿಣೆಯನ್ನು ಸಮರ್ಥಿಸುತ್ತದೆ ಎಂದಾಯಿತಲ್ಲವೆ? ಇದೀಗ ರಾಷ್ಟ್ರೀಯ ಮಹಿಳಾ ಆಯೋಗ ಈ ಬಗ್ಗೆ ಕ್ರಮ ತೆಗೆದುಕೊಳ್ಳುವಂತೆ ಕೇಂದ್ರ ಶಿಕ್ಷಣ ಸಚಿವರಿಗೆ ಸೂಚಿಸಿದೆ. ಆದರೆ ಪಠ್ಯದೊಳಗೆ ಇಂತಹದೊಂದು ಜೀವವಿರೋಧಿ, ಮಹಿಳಾ ವಿರೋಧಿ ಸಾಲುಗಳು ಸೇರಿರುವುದು ಯಾಕೆ ಪುಸ್ತಕ ತಜ್ಞರ ಗಮನಕ್ಕೆ ಬರಲಿಲ್ಲ? ಪಠ್ಯ ಪುಸ್ತಕ ಮಂಡಳಿಯಲ್ಲಿರುವ ತಜ್ಞರಿಗೆ ವರದಕ್ಷಿಣೆಯಂತಹ ಸಮಸ್ಯೆಯ ಮೂಲವನ್ನೇ ಅರ್ಥ ಮಾಡಿಕೊಳ್ಳಲು ಸಾಧ್ಯವಾಗಿಲ್ಲ ಎಂದರೆ, ಅವರಿಂದ ರೂಪಿತವಾಗಿರುವ ಇತರ ಪಠ್ಯ ಪುಸ್ತಕಗಳ ಸ್ಥಿತಿ ಹೇಗಿರಬಹುದು? ಇದು ಕೇವಲ ಪಠ್ಯದ ಸಾಲುಗಳನ್ನು ಬದಲಿಸುವ ವಿಷಯ ಅಲ್ಲವೇ ಅಲ್ಲ. ಇಂತಹ ಜೀವವಿರೋಧಿ ಮನಸ್ಥಿತಿಯನ್ನು ಹೊಂದಿರುವ ಲೇಖಕಿ ಮತ್ತು ಅದನ್ನು ಅನುಮೋದಿಸಿದ ಪಠ್ಯ ಪುಸ್ತಕ ಮಂಡಳಿಯ ಸದಸ್ಯರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಪುರುಷನ ಹಿರಿಮೆಯನ್ನು ಎತ್ತಿಹಿಡಿಯುವ, ಹೆಣ್ಣನ್ನು ಅತ್ಯಂತ ಹೀನಾಯವಾಗಿ ಕಾಣುವ ಈ ಪಠ್ಯದಿಂದ ಈ ದೇಶದ ದಾದಿಯರು ಅಥವಾ ನರ್ಸ್‌ಗಳು ಏನನ್ನೂ ಕಲಿಯುವುದಕ್ಕಿಲ್ಲ. ಹೆಣ್ಣಿಗೆ ಆತ್ಮವಿಶ್ವಾಸವನ್ನು ತುಂಬಬೇಕಾದ, ಆರೋಗ್ಯ ವಲಯದಲ್ಲಿ ಆಕೆಯ ಪಾತ್ರವನ್ನು ತಿಳಿಸಬೇಕಾದ ಪಠ್ಯಗಳು, ಹೆಣ್ಣನ್ನು ಪುರುಷನ ತೊತ್ತಾಗಿಸುವ ಪ್ರಯತ್ನ ನಡೆಸುತ್ತಿದೆ ಎನ್ನುವುದೇ, ನಮ್ಮ ಶಿಕ್ಷಣ ವ್ಯವಸ್ಥೆ ಯಾವ ದಿಕ್ಕಿನತ್ತ ಸಾಗುತ್ತಿದೆ ಎನ್ನುವುದಕ್ಕೆ ಉದಾಹರಣೆಯಾಗಿದೆ.

 ಇದು ಕೇವಲ ನರ್ಸಿಂಗ್ ವಿಷಯಕ್ಕೆ ಸಂಬಂಧಿಸಿದ್ದಷ್ಟೇ ಅಲ್ಲ. ಇಂದು ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆಯನ್ನು ಬಯಸುವ ಬಹುತೇಕರು ಇಂತಹದೇ ಪುರುಷ ಪ್ರಧಾನ ವ್ಯವಸ್ಥೆಯ ಪ್ರತಿನಿಧಿಗಳಾಗಿ ಆಲೋಚಿಸುತ್ತಿದ್ದಾರೆ. ಹೆಣ್ಣು ಹೆಚ್ಚು ಕಲಿಯುವುದನ್ನು ವಿರೋಧಿಸುವ, ಹೆಣ್ಣು ಗಂಡಿನ ಜೀತವಾಗಿ ಬದುಕಬೇಕು ಎಂದು ಬಯಸುವ ವರ್ಗವೊಂದು ಶಿಕ್ಷಣವನ್ನು ನಿಯಂತ್ರಿಸಲು ಮುಂದಾಗಿದೆ. ಇತ್ತೀಚೆಗೆ ಕರ್ನಾಟಕದಲ್ಲಿ ಪಠ್ಯಪುಸ್ತಕದೊಳಗಾಗಿರುವ ಬದಲಾವಣೆಗಳನ್ನು ನಾವು ಇದಕ್ಕೆ ಉದಾಹರಣೆಯಾಗಿ ನೀಡಬಹುದು. ತಮ್ಮ ರಾಜಕೀಯ ದುರುದ್ದೇಶಗಳಿಗಾಗಿ ಇತಿಹಾಸ ವಿಷಯಗಳನ್ನೇ ತಿರುಚಲು ಮುಂದಾಗಿದ್ದಾರೆ. ಟಿಪ್ಪು ಸುಲ್ತಾನ್‌ನ ಎಲ್ಲ ಜನಪರ ಕಾರ್ಯಗಳ ವಿವರಗಳಿಗೆ ಕತ್ತರಿ ಹಾಕಿ, ಆತನ ವ್ಯಕ್ತಿತ್ವವನ್ನು ಕಿರಿದು ಮಾಡಲು ಪ್ರಯತ್ನಿಸಿದ್ದಾರೆ. ಟಿಪ್ಪು ಸುಲ್ತಾನ್ ಇಂದು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಡುವ ಹೆಸರು. ಆತ ಮತ್ತು ಆತನ ವಂಶಜರ ಬಗ್ಗೆ ಬ್ರಿಟಿಷರು ಈಗಲೂ ತಮ್ಮ ಗೌರವವನ್ನು ವ್ಯಕ್ತಪಡಿಸುತ್ತಿದ್ದಾರೆ. ಇತಿಹಾಸ ಪುಸ್ತಕಗಳು ಆತನ ಶೌರ್ಯವನ್ನು ಮಾತ್ರವಲ್ಲ, ಆತನ ಆಡಳಿತ ಮತ್ತು ರಾಜಕೀಯ ದೂರದೃಷ್ಟಿಯ ಬಗ್ಗೆ ವಿಸ್ಮಯದಿಂದ ವರ್ಣಿಸುತ್ತವೆ. ಆರ್ಥಿಕ ಮತ್ತು ಸಾಮಾಜಿಕ ಸುಧಾರಣೆಗಳನ್ನು ಬ್ರಿಟಿಷರೇ ಮೆಚ್ಚಿದ್ದಾರೆ. ಆದರೆ ಇವೆಲ್ಲವನ್ನು ಪಠ್ಯದಲ್ಲಿ ದಾಖಲಿಸಲು ಪಠ್ಯ ಪುಸ್ತಕ ಮಂಡಳಿಗೆ ರಾಜಕೀಯ ಕಾರಣಗಳು ಅಡ್ಡ ಬರುತ್ತಿವೆ. ಆದರೆ ಇದರಿಂದ ನಷ್ಟ ಕರ್ನಾಟಕಕ್ಕೆ. ಇಡೀ ವಿಶ್ವ ಕೊಂಡಾಡುವ, ನಾಸಾದಲ್ಲೂ ಟಿಪ್ಪುವನ್ನು ಸ್ಮರಿಸುವ ಜನರಿರುವಾಗ, ಟಿಪ್ಪು ನಮ್ಮ ನಾಡಿನಲ್ಲಿ ಹುಟ್ಟಿದವನು ಎಂದು ಕನ್ನಡಿಗರು ಎದೆ ತಟ್ಟಿ ಹೇಳಬೇಕು. ಆದರೆ ನಮ್ಮ ರಾಜಕೀಯ ಆತನ ವ್ಯಕ್ತಿತ್ವಕ್ಕೆ ಕಳಂಕ ತಂದು ಕರ್ನಾಟಕದ ಇತಿಹಾಸವನ್ನೇ ಕುಬ್ಜ ಗೊಳಿಸುವ ಪ್ರಯತ್ನ ನಡೆಸುತ್ತಿದೆ. ಯಾಕೆಂದರೆ ಪಠ್ಯ ಪುಸ್ತಕ ಪರಿಶೀಲನಾ ಸಮಿತಿಯಲ್ಲಿ ಇತಿಹಾಸ ತಜ್ಞರೇ ಇಲ್ಲ. ವಿಕೀ ಪೀಡಿಯಾದ ಮಾಹಿತಿಗಳ ಆಧಾರದಲ್ಲಿ ಪತ್ರಿಕೆಗಳಲ್ಲಿ ಅಂಕಣವನ್ನು ಬರೆಯುವ ಲೇಖಕನೊಬ್ಬ ಪಠ್ಯ ಪುಸ್ತಕ ಪರಿಶೀಲನಾ ಸಮಿತಿಯ ಮುಖ್ಯಸ್ಥನಾದರೆ ಇನ್ನೇನಾದೀತು?

ಇದೇ ಸಂದರ್ಭದಲ್ಲಿ ಬೌದ್ಧ ಧರ್ಮದ ಉದಯಕ್ಕೆ ಕಾರಣಗಳೇನು ಎನ್ನುವ ಅಂಶವನ್ನೂ ಕೈ ಬಿಡಲಾಗಿದೆ. ಯಾಕೆಂದರೆ ಈ ಕಾರಣಗಳನ್ನು ನಾವು ಪಟ್ಟಿ ಮಾಡಿದರೆ ಅದರಿಂದ ಕೆಲವರ ಭಾವನೆಗಳಿಗೆ ಧಕ್ಕೆಯಾಗುತ್ತದೆಯಂತೆ. ಆದರೆ ಇದೇ ಬೌದ್ಧ ಧರ್ಮೀಯರನ್ನು ಅಮಾನುಷವಾಗಿ ಕೊಂದು ಹಾಕಿದ, ದೇಶದಲ್ಲಿ ಮತ್ತೆ ಪುರೋಹಿತಶಾಹಿ ವ್ಯವಸ್ಥೆಯನ್ನು ಸ್ಥಾಪಿಸಿದ ಶಂಕರಾಚಾರ್ಯರನ್ನು ಪಠ್ಯ ಪುಸ್ತಕಗಳು ಹಾಡಿ ಕೊಂಡಾಡುವಾಗ ಈ ನೆಲದ ಜನರ ಭಾವನೆಗಳಿಗೆ ನೋವಾಗುತ್ತದೆ ಎನ್ನುವುದನ್ನು ಗಮನಕ್ಕೆ ತೆಗೆದುಕೊಳ್ಳಲಾಗಿಲ್ಲ. ಪಠ್ಯ ಪುಸ್ತಕಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಅಭಾಸಗಳು, ಶಿಕ್ಷಣ ವ್ಯವಸ್ಥೆ ಮತ್ತೆ ಉಳ್ಳವರ ಸೊತ್ತಾಗಿ, ಪುರೋಹಿತಶಾಹಿಯ ನಿಯಂತ್ರಣಕ್ಕೊಳಗಾಗುತ್ತಿರುವ ಸೂಚನೆಗಳನ್ನು ನೀಡುತ್ತಿವೆ. ಈ ತಪ್ಪುಗಳು ಉದ್ದೇಶಪೂರ್ವಕವಾಗಿ ನುಸುಳುತ್ತಿವೆ. ನಮ್ಮ ಮಕ್ಕಳು ಅರಿವು, ತಿಳಿವಿನ ಹೆಸರಿನಲ್ಲಿ ದ್ವೇಷ, ಲಿಂಗಭೇದಗಳಂತಹ ವಿಷವನ್ನು ಉಣ್ಣುವಂತಾಗಬಾರದು. ಹಾಲು ಕುಡಿದ ಮಕ್ಕಳೇ ಬದುಕುವುದಿಲ್ಲ, ಇನ್ನು ವಿಷ ಕುಡಿದ ಮಕ್ಕಳ ಸ್ಥಿತಿ ಏನಾಗಬಹುದು? ಪೋಷಕರು ತಮ್ಮ ಮಕ್ಕಳು ಏನನ್ನು ಕಲಿಯಲು ಹೊರಟಿದ್ದಾರೆ ಎನ್ನುವುದರ ಬಗ್ಗೆ ಕಣ್ಗಾವಲಾಗುವುದು ಇಂದಿನ ಅಗತ್ಯವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News