ಮಾನವ ಹಕ್ಕು ಮಂಡಳಿಯಿಂದ ರಷ್ಯಾ ಉಚ್ಚಾಟನೆಗೆ ಸಿದ್ಧತೆ

Update: 2022-04-07 01:42 GMT
ಮಾನವ ಹಕ್ಕು ಮಂಡಳಿ (ಫೈಲ್‌ ಫೋಟೊ)

ನ್ಯೂಯಾರ್ಕ್: ವಿಶ್ವಸಂಸ್ಥೆಯ ಮಾನವ ಹಕ್ಕು ಮಂಡಳಿಯಿಂದ ರಷ್ಯಾವನ್ನು ಉಚ್ಚಾಟಿಸುವ ಬಗೆಗಿನ ನಿರ್ಣಯದ ಮೇಲೆ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಗುರುವಾರ ಮತದಾನ ನಡೆಯಲಿದೆ ಎಂದು ವರದಿಗಳು ತಿಳಿಸಿವೆ.

ಉಕ್ರೇನ್- ರಷ್ಯಾ ಕದನ 43ನೇ ದಿನವನ್ನು ತಲುಪಿದ್ದು, ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರು ರಷ್ಯಾ ವಿರುದ್ಧ ಹೊಸ ನಿರ್ಬಂಧಗಳನ್ನು ಘೋಷಿಸಿದ್ದಾರೆ. ರಷ್ಯಾದ ಅತಿದೊಡ್ಡ ಬ್ಯಾಂಕ್ ಮತ್ತು ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ಪುತ್ರಿಯರನ್ನು ಗುರಿ ಮಾಡಿ ಹೊಸ ನಿರ್ಬಂಧ ಹೇರಲಾಗಿದೆ. ಪುಟಿನ್ ಪ್ರಮುಖ ಯುದ್ಧ ಅಪರಾಧಗಳನ್ನು ಎಸಗುತ್ತಿದ್ದು, ಈ ಬಗ್ಗೆ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.

ಅಂತರರಾಷ್ಟ್ರೀಯ ತನಿಖೆಯ ಬಗ್ಗೆ ಆಗ್ರಹಗಳು ಹೆಚ್ಚುತ್ತಿರುವ ಬೆನ್ನಲ್ಲೇ ರಷ್ಯಾ, ಯುದ್ಧಾಪರಾಧದ ಸಾಕ್ಷಿಗಳನ್ನು ನಾಶಪಡಿಸುತ್ತಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಆಪಾದಿಸಿದ್ದಾರೆ.

ಉಕ್ರೇನ್‍ನ ಖರ್ಕೋವ್, ಡೊನೆಸ್ಕ್ ಮತ್ತು ಲುಹಾನಸ್ಕ್ ಪ್ರದೇಶಗಳ ಮೇಲೆ ಹೊಸ ದಾಳಿಗೆ ರಷ್ಯನ್ ಪಡೆಗಳು ಮುಂದಾಗಿವೆ ಎಂದು ಉಕ್ರೇನ್ ಸರ್ಕಾರ ಆಪಾದಿಸಿದೆ.

ನಿವಾಸಿಗಳು ತಕ್ಷಣ ಈ ಪ್ರದೇಶಗಳಿಂದ ಹೊರ ಹೋಗುವಂತೆ ಸಲಹೆ ಮಾಡಿದೆ. "ಇಲ್ಲಿನ ಜನತೆಗೆ ಗುಂಡು ಮತ್ತು ಸಾವಿನ ಭೀತಿ ಎದುರಾಗಿದೆ" ಎಂದು ಉಪ ಪ್ರಧಾನಿ ಇರಿನಾ ವೆರೆಶ್ಕೆಕ್ ಪ್ರಕಟಣೆಯಲ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News