ಮುಸ್ಲಿಮರ ವಿರುದ್ಧ ದ್ವೇಷಪೂರಿತ ಭಾಷಣಗಳ ಬಗ್ಗೆ ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದ ಕಾಂಗ್ರೆಸ್

Update: 2022-04-07 06:43 GMT

ಹೊಸದಿಲ್ಲಿ: ದೇಶದ ವಿವಿಧ ಭಾಗಗಳಲ್ಲಿ ಮುಸ್ಲಿಮರ ವಿರುದ್ಧ ದ್ವೇಷಪೂರಿತ ಭಾಷಣಗಳ ಬಗ್ಗೆ ರಾಜ್ಯಸಭೆಯಲ್ಲಿ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಬುಧವಾರ ಪ್ರಸ್ತಾಪಿಸಿದರು.

ಬುರಾರಿಯಲ್ಲಿ ಇತ್ತೀಚಿಗೆ ನಡೆದ  ಹಿಂದೂ ಮಹಾಪಂಚಾಯತ್ ಅನ್ನು ಖರ್ಗೆ ಪ್ರಸ್ತಾಪಿಸಿದರು. ಬುರಾರಿಯಲ್ಲಿ ವಿವಾದಿತ ಹಿಂದುತ್ವದ ನಾಯಕ ಯತಿ ನರಸಿಂಗಾನಂದ ತನ್ನ ಜಾಮೀನು ಷರತ್ತುಗಳನ್ನು ಉಲ್ಲಂಘಿಸಿ ಮತ್ತೊಮ್ಮೆ ಶಸ್ತ್ರಾಸ್ತ್ರಗಳನ್ನು ಕೈಗೆತ್ತಿಕೊಳ್ಳುವಂತೆ ಜನರಿಗೆ ಒತ್ತಾಯಿಸಿದ್ದ ಎಂದು ಆರೋಪಿಸಲಾಗಿದೆ.

ತೃಣಮೂಲ ಕಾಂಗ್ರೆಸ್‌ನ ಸುಶ್ಮಿತಾ ದೇವ್, ಲುಝಿನ್ಹೊ ಜೋಕಿಮ್ ಫಲೈರೊ ಹಾಗು ಮುಹಮ್ಮದ್ ನದಿಮುಲ್ ಹಕ್ ಅವರೊಂದಿಗೆ ಖರ್ಗೆ ಅವರು ಬೆಲೆ ಏರಿಕೆ ಹಾಗೂ ದ್ವೇಷದ ಭಾಷಣಗಳ ಕುರಿತು ನಿಯಮ 267 ರ ಅಡಿಯಲ್ಲಿ ನೋಟಿಸ್ ನೀಡಿದ್ದರು.

ಆದರೆ, ಸದನ ಸೇರಿದಾಗ ಸಭಾಪತಿ ಎಂ.ವೆಂಕಯ್ಯ ನಾಯ್ಡು ಅವರು ನಿಯಮ 267ರ ಅಡಿಯಲ್ಲಿ ಈ ವಿಷಯಗಳನ್ನು ಪ್ರಸ್ತಾಪಿಸಲು ಅವಕಾಶ ನೀಡಿಲ್ಲ ಎಂದರು.

ಕೇವಲ ಒಂದು ವಾಕ್ಯವನ್ನು ಹೇಳಲು ಬಯಸುತ್ತೇನೆ ಎಂದು ಖರ್ಗೆ ಹೇಳಿದರು. ಆಗ ನಾಯ್ಡು ಅವರು ಖರ್ಗೆಗೆ ಮಾತನಾಡಲು ಅವಕಾಶ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ  ಖರ್ಗೆ “ಸರ್, ದೇಶದಲ್ಲಿ ಹೆಚ್ಚುತ್ತಿರುವ ದ್ವೇಷದ ಭಾಷಣಗಳ  ಬಗ್ಗೆ ಹಾಗೂ  ಪತ್ರಕರ್ತರಿಗೆ ಅದರಲ್ಲೂ ವಿಶೇಷವಾಗಿ ಹಿಂದೂಸ್ತಾನ್ ಗೆಝೆಟ್, ನ್ಯೂಸ್‌ಲಾಂಡ್ರಿ, ದಿ ಕ್ವಿಂಟ್, ಆರ್ಟಿಕಲ್ 14 ಇತ್ಯಾದಿಗಳ ಬಗ್ಗೆ ನಾನು ನಿಯಮ 267 ರ ಅಡಿಯಲ್ಲಿ ನೋಟಿಸ್ ನೀಡಿದ್ದೇನೆ. ಇದು ನಡೆಯುತ್ತಲೇ ಇದೆ. ಸ್ವಾಮಿಗಳು ಹರಿದ್ವಾರದಿಂದ ದಿಲ್ಲಿಯವರೆಗೆ ಪ್ರಚೋದನಕಾರಿ ಭಾಷಣಗಳನ್ನು ಮಾಡುತ್ತಿದ್ದಾರೆ"ಎಂದರು.

ಹಿಂದೂ ಮಹಾಪಂಚಾಯತ್ ಅನ್ನು ಉಲ್ಲೇಖಿಸಿದ ಖರ್ಗೆ ಅವರು, ರವಿವಾರ ಒಬ್ಬ ಸ್ವಾಮಿ ಎಲ್ಲಾ ಮುಸ್ಲಿಮರನ್ನು ಕೊಲ್ಲಬೇಕು ಎಂದು ಹೇಳಿದ್ದರು" ಎಂದು ಆರೋಪಿಸಿದರು.

ಈ ಸಂದರ್ಭದಲ್ಲಿ ನಾಯ್ಡು ಅವರು “ಇದು ದಾಖಲೆಯಲ್ಲಿ ಹೋಗುವುದಿಲ್ಲ. ಯಾವುದೇ ಸಮುದಾಯದ ಹೆಸರು ದಾಖಲಾಗುವುದಿಲ್ಲ ಎಂದು ನಿರ್ದೇಶನ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News