ಅಭಿವ್ಯಕ್ತಿಯ ಮೇಲೆ ಹೆಚ್ಚುತ್ತಿರುವ ದಾಳಿ

Update: 2022-04-09 05:10 GMT

ಆಳುವ ಸರಕಾರ ಭ್ರಷ್ಟವಾಗುತ್ತಿದ್ದ ಹಾಗೆಯೇ ಅದು ಮೊತ್ತ ಮೊದಲು ಮಾಧ್ಯಮಗಳ ಬಾಯಿಯನ್ನು ಮುಚ್ಚಿಸಲು ಯತ್ನಿಸುತ್ತದೆ. ಅದರ ಭಾಗವಾಗಿಯೇ ಮೊದಲು, ಅವುಗಳನ್ನು ಹಣದ ಮೂಲಕ ಕೊಂಡುಕೊಳ್ಳಲು ಯತ್ನಿಸುತ್ತದೆ. ಅದು ಸಾಧ್ಯವಾಗದೇ ಇದ್ದರೆ ವ್ಯವಸ್ಥೆಯನ್ನು ಬಳಸಿಕೊಂಡು ಅವುಗಳನ್ನು ದಮನಿಸಲು ಯತ್ನಿಸುತ್ತದೆ. ಅದೂ ಸಾಧ್ಯವಾಗದೇ ಇದ್ದಾಗ, ಬೇರೆ ಬೇರೆ ವಿಧಾನದಲ್ಲಿ ಕಿರುಕುಳಗಳನ್ನು ನೀಡ ತೊಡಗುತ್ತದೆ. ಅದೂ ಸಾಧ್ಯವಾಗದೇ ಇದ್ದಾಗ ಜೀವಬೆದರಿಕೆಯನ್ನು ಒಡ್ಡುತ್ತದೆ. ದೇಶದ ಬಹುತೇಕ ಮಾಧ್ಯಮಗಳನ್ನು ಈಗಾಗಲೇ ಕೊಂಡುಕೊಳ್ಳುವ ಮೂಲಕ ಸರಕಾರ ಕೊಂದು ಹಾಕಿದೆ. ಆದುದರಿಂದಲೇ ಸರಕಾರ ಅದೆಷ್ಟು ಭ್ರಷ್ಟಾಚಾರಗಳನ್ನು ಮಾಡಿದರೂ, ಜನವಿರೋಧಿ ಕಾನೂನುಗಳನ್ನು ಜಾರಿಗೊಳಿಸಿದರೂ, ಬೆಲೆಯೇರಿಕೆಯಿಂದ ಜನಜೀವನ ತತ್ತರಿಸಿದರೂ ಈ ದೇಶದ ಪ್ರಮುಖ ಪತ್ರಿಕೆಗಳು, ಟಿವಿ ಚಾನೆಲ್‌ಗಳು ಅವುಗಳನ್ನು ಚರ್ಚಿಸದೆ, ಜನರ ಗಮನವನ್ನು ಬೇರೆಡೆಗೆ ಸೆಳೆಯುವಂತಹ ಉದ್ವಿಗ್ನಕಾರಿ ವಿಷಯಗಳನ್ನು ಮುಂದಿಡುತ್ತಿವೆ. ಇಂತಹ ಸಂದರ್ಭದಲ್ಲಿ ಬೆರಳೆಣಿಕೆಯ ಟಿವಿ ಚಾನೆಲ್‌ಗಳು, ವೆಬ್‌ಸೈಟ್‌ಗಳು ಸರಕಾರದ ವಿರುದ್ಧ ಬರೆಯುತ್ತಿವೆಯಾದರೂ, ಸರಕಾರದ ಭಾಗವಾಗಿರುವ ವಿವಿಧ ತನಿಖಾ ಸಂಸ್ಥೆಗಳ ಮೂಲಕ ಅವುಗಳಿಗೆ ಕಿರುಕುಳಗಳನ್ನು ನೀಡಲಾಗುತ್ತಿದೆ.

ಉತ್ತರ ಪ್ರದೇಶ, ಮಧ್ಯ ಪ್ರದೇಶದಂತಹ ರಾಜ್ಯಗಳಲ್ಲಿ ಸರಕಾರದ ವಿರುದ್ಧ ಪತ್ರಕರ್ತ ಬರೆಯುವುದೇ ದೇಶದ್ರೋಹ ಎನ್ನುವಂತಹ ಸ್ಥಿತಿ ನಿರ್ಮಾಣವಾಗಿದೆ. ಹಾಥರಸ್ ಅತ್ಯಾಚಾರ ಪ್ರಕರಣವನ್ನು ವರದಿ ಮಾಡಲು ಹೋದ ಕೇರಳದ ಪತ್ರಕರ್ತರ ವಿರುದ್ಧ ದೇಶದ್ರೋಹದ ಆರೋಪ ಹೊರಿಸಿ ಅವರನ್ನು ಜೈಲಿಗೆ ತಳ್ಳಿರುವುದನ್ನು ನಾವು ಈಗಾಗಲೇ ನೋಡಿದ್ದೇವೆ. ಇತ್ತೀಚೆಗೆ ಉತ್ತರ ಪ್ರದೇಶದ ಬಲಿಯಾ ಜಿಲ್ಲೆಯಲ್ಲಿ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವುದು ಸುದ್ದಿಯಾಯಿತು. ಈ ಸೋರಿಕೆಯನ್ನು ಬಯಲು ಮಾಡಿರುವುದು ಸ್ಥಳೀಯ ಪತ್ರಿಕೆಯ ಪತ್ರಕರ್ತರು. ಆರೋಪಿಗಳನ್ನೇನೋ ಬಂಧಿಸಲಾಯಿತು. ಆದರೆ ಇದರ ಜೊತೆಜೊತೆಗೆ ಸುದ್ದಿಯನ್ನು ಪ್ರಕಟಿಸಿದ ಪತ್ರಕರ್ತರನ್ನು ಕೂಡ ಬಂಧಿಸಲಾಗಿದೆ. ಅವರನ್ನೂ ಆರೋಪಿಗಳ ಸ್ಥಾನದಲ್ಲಿ ವ್ಯವಸ್ಥೆ ನಿಲ್ಲಿಸಿದೆ. ಇದರ ವಿರುದ್ಧ ಪತ್ರಕರ್ತರು ಒಂದಾಗಿ ಪ್ರತಿಭಟಿಸಿದರು. ಆದರೆ ಆ ಪ್ರತಿಭಟನೆಯನ್ನು ದಮನಿಸಲಾಯಿತಲ್ಲದೆ, ಪ್ರತಿಭಟನೆಯಲ್ಲಿ ಭಾಗವಹಿಸಿದ ಪತ್ರಕರ್ತರ ಮೇಲೂ ಮೊಕದ್ದಮೆಗಳನ್ನು ದಾಖಲಿಸಲಾಯಿತು. ಈ ಮೂಲಕ ಸರಕಾರದ ಭ್ರಷ್ಟಾಚಾರಗಳನ್ನು ವರದಿ ಮಾಡುವವರಿಗೆ ಬಹಿರಂಗ ಎಚ್ಚರಿಕೆಯನ್ನು ಸರಕಾರ ನೀಡಿದೆ. ಅಲ್ಲಿ ಅತ್ಯಾಚಾರ ಆರೋಪಿಗಳು ಸಾರ್ವಜನಿಕವಾಗಿ ಮುಕ್ತವಾಗಿ ತಿರುಗಾಡುತ್ತಾರೆ. ಆದರೆ ಅತ್ಯಾಚಾರಗಳ ಕುರಿತಂತೆ ಮಾಧ್ಯಮಗಳಲ್ಲಿ ವರದಿ ಮಾಡಿದ ಪತ್ರಕರ್ತರು ಜೈಲು ಸೇರುತ್ತಾರೆ. ಭ್ರಷ್ಟಾಚಾರ ಎಸಗಿದ ಅಧಿಕಾರಿಗಳನ್ನು ಮುಟ್ಟದೆ, ಅವರ ಬಗ್ಗೆ ವರದಿ ಮಾಡಿದ ಪತ್ರಕರ್ತರನ್ನು ಬಂಧಿಸಲಾಗುತ್ತದೆ. ತಮ್ಮನ್ನು ಪ್ರಶ್ನಿಸುವ ಪತ್ರಕರ್ತರೇ ಇರಬಾರದು ಎನ್ನುವುದನ್ನು ಸರಕಾರ ಬಯಸುತ್ತದೆ.

ಮಧ್ಯಪ್ರದೇಶದಲ್ಲಿ ಇದಕ್ಕಿಂತಲೂ ಭೀಕರವಾದುದು ನಡೆದಿದೆ. ಸ್ಥಳೀಯ ಬಿಜೆಪಿ ಶಾಸಕ ಮತ್ತು ಪುತ್ರನ ಭ್ರಷ್ಟಾಚಾರವನ್ನು ಪ್ರಶ್ನಿಸಿದ ಪತ್ರಕರ್ತರು ಮತ್ತು ರಂಗಕಲಾವಿದರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ಅವರನ್ನು ಅರೆನಗ್ನ ಸ್ಥಿತಿಯಲ್ಲಿ ನಿಲ್ಲಿಸಿ, ದೌರ್ಜನ್ಯ ಎಸಗಿರುವುದು ಮಾಧ್ಯಮಗಳಲ್ಲಿ ಪ್ರಕಟವಾಗಿವೆ. ಅಷ್ಟೇ ಅಲ್ಲ, ಒಂದಿಡೀ ದಿನ ಅವರನ್ನು ಜೈಲಲ್ಲಿಡಲಾಗಿದೆ. ಮುಂದೆ ಶಾಸಕರ ವಿರುದ್ಧ ವರದಿ ಮಾಡಿದ್ದೇ ಆದರೆ ನಗರದಲ್ಲಿ ಬೆತ್ತಲೆಯಾಗಿ ಮೆರವಣಿಗೆ ಮಾಡುವುದಾಗಿಯೂ ಪೊಲೀಸರು ಬೆದರಿಕೆ ಒಡ್ಡಿದ್ದಾರೆ. ಬಹುಶಃ ಭಾರತದಲ್ಲಿ ಪತ್ರಕರ್ತರಿಗೆ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಇಂತಹದೊಂದು ಸ್ಥಿತಿ ನಿರ್ಮಾಣವಾಗಿತ್ತು. ಆದರೆ ಪ್ರಜಾಸತ್ತಾತ್ಮಕವಾದ ವ್ಯವಸ್ಥೆಯಲ್ಲಿ ಬಹಿರಂಗವಾಗಿ ಪತ್ರಕರ್ತರನ್ನು ಬೆದರಿಸುತ್ತಿರುವುದು, ಅವರಿಗೆ ಜೀವಭಯವನ್ನು ಒಡ್ಡುತ್ತಿರುವುದು ಭಾರತಕ್ಕೆ ತೀರಾ ಹೊಸತು. ಈ ಹಿಂದೆಲ್ಲ ಪಾತಕ ಜಗತ್ತಿನಿಂದ ಅಥವಾ ದುಷ್ಕರ್ಮಿಗಳಿಂದ ಪತ್ರಕರ್ತರಿಗೆ ಬೆದರಿಕೆಯಿತ್ತು. ಆದರೆ ಈಗ ಪ್ರಜಾಸತ್ತಾತ್ಮಕ ವ್ಯವಸ್ಥೆಯ ಭಾಗವಾಗಿರುವ ಪೊಲೀಸ್ ಇಲಾಖೆ, ಐಟಿ, ಸಿಬಿಐ ಮೊದಲಾದವುಗಳನ್ನೇ ಬಳಸಿಕೊಂಡು ಪತ್ರಕರ್ತರ ಬಾಯಿ ಮುಚ್ಚಿಸುವ ಪ್ರಯತ್ನ ನಡೆಯುತ್ತಿದೆ.

ಸರಕಾರವಿಂದು ಮಾಧ್ಯಮ ರಂಗವನ್ನು ಸಂಪೂರ್ಣವಾಗಿ ಬೆತ್ತಲಾಗಲು ಒತ್ತಾಯಿಸುತ್ತಿದೆ. ಈಗಾಗಲೇ ಸರಕಾರದ ಹಣ ಮತ್ತು ಬೆದರಿಕೆಗೆ ತಲೆಬಾಗಿ ಬಹುಸಂಖ್ಯೆಯ ಹಿರಿಯ ಪತ್ರಕರ್ತರು ಸಂಪೂರ್ಣ ಬೆತ್ತಲಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಕೆಲವು ಸ್ಥಳೀಯ ಪತ್ರಿಕೆಗಳ ಪತ್ರಕರ್ತರು, ಸಾಮಾಜಿಕ ಮಾಧ್ಯಮಗಳ ಬರಹಗಾರರು ಬಟ್ಟೆ ಧರಿಸಿ ಓಡಾಡುತ್ತಿರುವುದು ಸರಕಾರಕ್ಕೆ ಬಹುದೊಡ್ಡ ತಲೆನೋವಾಗಿದೆ. ಆದುದರಿಂದಲೇ ಅವರನ್ನು ಬಟ್ಟೆ ಬಿಚ್ಚಿಸಿ ಬೆತ್ತಲಾಗಿಸುವ ಕೆಲಸವನ್ನು ಸರಕಾರ ನೇರವಾಗಿ ಪೊಲೀಸ್ ಇಲಾಖೆಗೇ ಕೊಟ್ಟಂತಿದೆ. ಭಾರತದಲ್ಲಿ ಪತ್ರಕರ್ತರ ಮೇಲೆ ದಾಳಿಗಳು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿವೆ ಎನ್ನುವುದನ್ನು ಈಗಾಗಲೇ ಅಂತರ್‌ರಾಷ್ಟ್ರೀಯ ಸಮೀಕ್ಷೆಗಳು ಬಹಿರಂಗಪಡಿಸಿವೆ. ಕಳೆದ ವರ್ಷ ವೃತ್ತಿ ನಿರ್ವಹಿಸುತ್ತಿರುವ ಸಂದರ್ಭದಲ್ಲಿ ಐವರು ಪತ್ರಕರ್ತರು ತಮ್ಮ ಪ್ರಾಣವನ್ನು ತೆತ್ತಿದ್ದಾರೆ. ವರದಿಗಾರರ ಮೇಲೆ 2014ರಿಂದ 2020 ಅವಧಿಯಲ್ಲಿ 200ಕ್ಕೂ ಅಧಿಕ ದಾಳಿಗಳು ನಡೆದಿವೆ. 50ಕ್ಕೂ ಅಧಿಕ ಪತ್ರಕರ್ತರನ್ನು ಕೊಲೆಗೈಯಲಾಗಿದೆ. ಅವರಲ್ಲಿ 20ಕ್ಕೂ ಅಧಿಕ ಮಂದಿ ತಮ್ಮ ವೃತ್ತಿಯ ಕಾರಣಕ್ಕಾಗಿಯೇ ಕೊಲೆಗೈಯಲ್ಪಟ್ಟಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಬಹುತೇಕ ಪ್ರಕರಣಗಳಲ್ಲಿ ಸಂತ್ರಸ್ತರಿಗೆ ಪೊಲೀಸ್ ಇಲಾಖೆಯಿಂದ ಯಾವ ನ್ಯಾಯವೂ ದೊರಕಿಲ್ಲ.

ಪತ್ರಕರ್ತರ ಬದುಕು ತೀರಾ ಅಭದ್ರತೆಯಿಂದ ಕೂಡಿದೆ. ಒಂದೆಡೆ, ತಮ್ಮ ಖಾಸಗಿ ಬದುಕನ್ನು ಉಳಿಸಿಕೊಳ್ಳಬೇಕು. ಅದರ ಜೊತೆ ಜೊತೆಗೇ ತನ್ನ ವೃತ್ತಿಯನ್ನು ನಿಭಾಯಿಸಿಕೊಂಡು ಹೋಗಬೇಕು. ಇತ್ತೀಚಿನ ದಿನಗಳಲ್ಲಿ ಪತ್ರಿಕೆ ನಷ್ಟದ ಬಾಬ್ತಾಗಿ ಪರಿವರ್ತನೆ ಹೊಂದಿದೆ. ರಾಜಕೀಯ ಅಥವಾ ಇನ್ನಿತರ ಕಾರಣಗಳಿಲ್ಲದೆ ಪತ್ರಿಕೆಗೆ ಹಣ ಹೂಡುವವರ ಸಂಖ್ಯೆ ಕಡಿಮೆಯಾಗಿದೆ. ಇಂತಹ ವಾತಾವರಣದಲ್ಲಿ ಪತ್ರಕರ್ತರನ್ನು ಕೊಂಡು ಕೊಳ್ಳುವುದು ವ್ಯವಸ್ಥೆಗೆ ತೀರಾ ಸುಲಭ ಎನ್ನುವಂತಾಗಿದೆ. ಆದರೆ ಇಲ್ಲೂ ತಮ್ಮ ಬದ್ಧತೆಯನ್ನು ಉಳಿಸಿಕೊಂಡು ವೃತ್ತಿ ಧರ್ಮವನ್ನು ಪಾಲಿಸಿಕೊಂಡು ಬರುತ್ತಿರುವ ಪತ್ರಕರ್ತರು ಒಳಗಿನ ಹಾಗೂ ಹೊರಗಿನ ದಾಳಿಗಳ ನಡುವೆಯೇ ತಮ್ಮ ವೃತ್ತಿಯನ್ನು ನಿಭಾಯಿಸಬೇಕಾಗಿದೆ. ಅಳಿದುಳಿದ ಪ್ರಾಮಾಣಿಕ ಪತ್ರಿಕೆಗಳನ್ನು ಮತ್ತು ಪತ್ರಕರ್ತರನ್ನು ಉಳಿಸಿ ಬೆಳೆಸುವ, ಅವರಿಗೆ ಬೆಂಬಲವಾಗಿ ನಿಲ್ಲುವ ಜವಾಬ್ದಾರಿ ಸಮಾಜಕ್ಕೂ ಇದೆ. ಇಂತಹ ಪತ್ರಿಕೆಗಳ ಮತ್ತು ಪತ್ರಕರ್ತರ ಮೇಲೆ ದಾಳಿಗಳು ಸಂಭವಿಸಿದಾಗ ಅದು ಸಮಾಜದ ಮೇಲೆ ನಡೆಯುವ ದಾಳಿಯೆಂದು ಬಗೆದು ಅಭಿವ್ಯಕ್ತಿ ಸ್ವಾತಂತ್ರದ ಜೊತೆಗೆ ನಿಂತಾಗ ಮಾತ್ರ, ನಮ್ಮ ಭವಿಷ್ಯದ ನೆಮ್ಮದಿ ಉಳಿದೀತು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಭ್ರಷ್ಟ ವ್ಯವಸ್ಥೆಯನ್ನು ಪ್ರಶ್ನಿಸುವವರೇ ಇಲ್ಲವಾಗಿ ಬಿಡಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News