"ವರ್ಗಾವಣೆ ಬೇಕಾದರೆ ಹೆಂಡತಿಯನ್ನು ಕಳಿಸು" ಎಂದ ಮೇಲಧಿಕಾರಿ: ನೊಂದ ನೌಕರ ಆತ್ಮಹತ್ಯೆ‌

Update: 2022-04-11 18:37 GMT

ಲಕ್ನೋ,ಎ.11: ಉತ್ತರ ಪ್ರದೇಶ ವಿದ್ಯುತ್ ಇಲಾಖೆಯ ಉದ್ಯೋಗಿಯೋರ್ವ ಆತ್ಮಹತ್ಯೆಗೆ ಶರಣಾಗಿದ್ದಾನೆ. ‘ವರ್ಗಾವಣೆ ಬೇಕಿದ್ದಲ್ಲಿ ಒಂದು ರಾತ್ರಿಯ ಮಟ್ಟಿಗೆ ನಿನ್ನ ಹೆಂಡತಿಯನ್ನು ನನ್ನ ಬಳಿ ಕಳುಹಿಸು’ ಎಂದು ಹೇಳಿದ್ದ ಮೇಲಧಿಕಾರಿಯ ಮಾತಿನಿಂದ ನೊಂದು ಆತ ಈ ಕೃತ್ಯವನ್ನೆಸಗಿದ್ದಾನೆ ಎನ್ನಲಾಗಿದೆ.


ಲೈನ್ಮನ್ ಗೋಕುಲ ಪ್ರಸಾದ್ (45) ಲಖಿಂಪುರದ ಜ್ಯೂನಿಯರ್ ಇಂಜಿನಿಯರ್ ಕಚೇರಿಯ ಹೊರಗೆ ತನ್ನ ಮೈಮೇಲೆ ಡೀಸೆಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದ. ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ರವಿವಾರ ಕೊನೆಯುಸಿರೆಳೆದಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಜ್ಯೂ.ಇಂ.ನಾಗೇಂದ್ರ ಕುಮಾರ ಮತ್ತು ಓರ್ವ ಗುಮಾಸ್ತೆಯನ್ನು ಅಮಾನತುಗೊಳಿಸಲಾಗಿದೆ. ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

ಪ್ರಸಾದ ಮೈಗೆ ಬೆಂಕಿ ಹಚ್ಚಿಕೊಂಡ ಬಳಿಕ ಚಿತ್ರೀಕರಿಸಲಾಗಿದ್ದ ವೀಡಿಯೊದಲ್ಲಿ ತೀವ್ರ ನೋವಿನಲ್ಲಿಯೂ ತನ್ನ ಕೃತ್ಯಕ್ಕೆ ಕಾರಣವನ್ನು ತಿಳಿಸಿದ್ದಾನೆ. ಕುಮಾರ ಮತ್ತು ಆತನ ಸಹಾಯಕ ತನಗೆ ಕಿರುಕುಳ ನೀಡುತ್ತಿದ್ದರು,ತಾನು ಪೊಲೀಸರ ಮೊರೆ ಹೋಗಿದ್ದರೂ ಅವರು ನೆರವಾಗಿರಲಿಲ್ಲ ಎಂದು ಆರೋಪಿಸಿದ್ದಾನೆ.

ಆರೋಪಿಗಳು ಮೂರು ವರ್ಷಗಳಿಂದಲೂ ತನ್ನ ಪತಿಗೆ ಹಿಂಸೆ ನೀಡುತ್ತಿದ್ದರು. ಹೀಗಾಗಿ ಖಿನ್ನತೆಗೆ ಜಾರಿದ್ದ ಅವರು ಅದಕ್ಕಾಗಿ ಔಷಧಿ ತೆಗೆದುಕೊಳ್ಳುತ್ತಿದ್ದರು. ಆದರೂ ಆರೋಪಿಗಳು ಕಿರುಕುಳವನ್ನು ನಿಲ್ಲಿಸಿರಲಿಲ್ಲ. ತನ್ನ ಪತಿಯನ್ನು ಅಲಿಗಂಜ್ಗೆ ವರ್ಗಾವಣೆ ಮಾಡಲಾಗಿತ್ತು,ಆದರೆ ಅವರಿಗೆ ಪ್ರಯಾಣ ಕಷ್ಟವಾಗುತ್ತಿತ್ತು. ಹೀಗಾಗಿ ಮನೆಗೆ ಸಮೀಪ ವರ್ಗಾಯಿಸುವಂತೆ ಕೋರಿದ್ದರು. ‘ನಿನ್ನ ಹೆಂಡತಿಯನ್ನು ನಮ್ಮ ಬಳಿಕ ಕಳುಹಿಸು,ನಿನಗೆ ವರ್ಗಾವಣೆ ಮಾಡುತ್ತೇವೆ ’ಎಂದು ಆರೋಪಿಗಳು ಹೇಳಿದ್ದರು ಎಂದು ಪ್ರಸಾದ ಪತ್ನಿ ಪ್ರತ್ಯೇಕ ವೀಡಿಯೊದಲ್ಲಿ ಆರೋಪಿಸಿದ್ದಾಳೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News