ವಕೀಲ ಪಿ.ಎ. ಹಮೀದ್ ಪಡುಬಿದ್ರೆಗೆ ʼಡಾ. ಎಪಿಜೆ ಅಬ್ದುಲ್ ಕಲಾಂ ಶಾಂತಿ ಪ್ರಶಸ್ತಿʼ

Update: 2022-04-12 14:46 GMT

ಪಡುಬಿದ್ರಿ: ಕಾನೂನು, ಸಾಮಾಜಿಕ ಮತ್ತು ಮಾನವೀಯ ಸೇವಾ ಕಾರ್ಯಗಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವ, ಉಡುಪಿಯ ಪಡುಬಿದ್ರಿ ಮೂಲದ ಪ್ರಸ್ತುತ ಸೌದಿ ಅರೇಬಿಯಾದ ರಿಯಾದ್ ನ ರಕ್ಷಣಾ ಕಂಪೆನಿಯಲ್ಲಿ ಕಾನೂನು ಸಲಹೆಗಾರರಾಗಿ ಉದ್ಯೋಗ ಮಾಡುತ್ತಿರುವ  ವಕೀಲರೂ, ಸಮಾಜಸೇವಕರೂ ಆದ ಪಿ.ಎ. ಹಮೀದ್  ಪಡುಬಿದ್ರಿಯವರಿಗೆ, 'ಗ್ಲೋಬಲ್ ಹ್ಯೂಮನ್ ಪೀಸ್ ಯೂನಿವರ್ಸಿಟಿ' ವತಿಯಿಂದ ಡಾ. ಎಪಿಜೆ ಅಬ್ದುಲ್ ಕಲಾಂ ಶಾಂತಿ ಪ್ರಶಸ್ತಿಯನ್ನು ಕೊಡಮಾಡಿದ್ದು, ಇದರೊಂದಿಗೆ ಗೌರವ ಡಾಕ್ಟರೇಟ್‍ನ್ನು ನೀಡಿ ಗೌರವಿಸಿದೆ.

ಎಪ್ರಿಲ್ 9ರಂದು ತಮಿಳುನಾಡಿನ ಕೋಯಂಬತ್ತೂರಿನಲ್ಲಿ ನಡೆದ ಘಟಿಕೋತ್ಸವ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಗೌರವನ್ನು ಸ್ವೀಕರಿಸಿದ್ದಾರೆ. ತಮ್ಮ ದೈನಂದಿನ ಕಂಪೆನಿಯ ಕೆಲಸದ ನಿಬಿಢತೆಯ ಜೊತೆಗೆ, ಸಮಾಜಸೇವೆಯನ್ನು  ಕಾಯಕ ಮಾಡಿಕೊಂಡು, ಬೇರೆಬೇರೆ ಭಾಗಗಳಲ್ಲಿರುವ ಅನಿವಾಸಿ ಭಾರತೀಯರ ವಿವಿಧ ಸಮಸ್ಯೆ ಮತ್ತು ಸಂಕಷ್ಟಗಳಿಗೆ ಸ್ಪಂದಿಸಿ, ಅವನ್ನು ಪರಿಹರಿಸುವಲ್ಲಿ ಡಾ.ಪಿ.ಎ.ಹಮೀದ್ ರವರು  ಮಾಡುತ್ತಿರುವ ಮಾನವೀಯ ಸೇವೆಯನ್ನು ಗುರುತಿಸಿದ ಚೆನ್ನೈ ಮೂಲದ 'ಗ್ಲೋಬಲ್ ಹ್ಯೂಮನ್ ಪೀಸ್ ಯೂನಿವರ್ಸಿಟಿ' ಈ ಪ್ರತಿಷ್ಠಿತ ಗೌರವವನ್ನು ನೀಡಿದೆ.

ರಾಜಕೀಯ, ಸಾಮಾಜಿಕ, ಸಾಮುದಾಯಿಕ, ಸಾಹಿತ್ತಿಕ, ಮಾನವ ಹಕ್ಕುಗಳ ಸಂರಕ್ಷಣೆ ಸಹಿತ ವಿಭಿನ್ನ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಇವರು 1995-2000ನೇ ಸಾಲಿನ ತಾಲೂಕು ಪಂಚಾಯತು ಸದಸ್ಯರಾಗಿದ್ದರು.

ಕಳೆದ ಕೋವಿಡ್ 19ರ ಸಮಯದಲ್ಲಿ ಸೌದಿ ಅರೇಬಿಯಾಕ್ಕೆ ಹೊರಟು ಪ್ರಯಾಣ ನಿಷೇಧದ ನಿಮಿತ್ತ ದುಬೈಯಲ್ಲಿ ಸಿಲುಕಿದ್ದ ಭಾರತೀಯರನ್ನು (ಸೌದಿಗೆ) ಕರೆಸುವ ಸಲುವಾಗಿ ಅವಿರತ ಶ್ರಮವಹಿಸಿ, ವಿವಿಧ ರೀತಿಯಲ್ಲಿ ಸಹಾಯಹಸ್ತ ನೀಡಿದ್ಧ ಡಾ. ಹಮೀದ್ ರವರು, ಆ ಸಂದರ್ಭದಲ್ಲಿ ಸೌದಿಯಲ್ಲಿ ಕೋವಿಡ್‍ಗೆ ತುತ್ತಾಗಿದ್ದ ಮತ್ತು ಶಂಕಿತ ಪೂರ್ವ-ಕೋವಿಡ್ ರೋಗಕ್ಕೆ ಬೇಕಾದ ವ್ಯವಸ್ಥೆಯನ್ನು ಕಲ್ಪಿಸಿ, ಜನರ ಪಾಲಿಗೆ ಆಶಾಕಿರಣವಾಗಿ  ಕೆಲಸ ಮಾಡಿದ್ದರು.

ಅಲ್ಲದೆ, ರಶ್ಯಾ-ಯುಕ್ರೇನ್ ಯುದ್ಧದಾರಂಭದಲ್ಲಿ ಯುಕ್ರೇನ್ ನ ರಾಜಧಾನಿ ಕಿವ್ ಮತ್ತು ಇತರ ಕಡೆಗಳಲ್ಲಿ ಸಂಕಷ್ಟಲ್ಲಿದ್ದ ಭಾರತೀಯರು, ಅದರಲ್ಲೂ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರೊಂದಿಗೆ ನಿಖಟಸಂಪರ್ಕವನ್ನು  ಹೊಂದಿ, ದೆಹಲಿ ವಿದೇಶಾಂಗ ಸಚಿವಾಲಯ ಹಾಗೂ ಯುಕ್ರೇನ್-ಪೋಲ್ಯಾಂಡ್- ಅರ್ಮೇನಿಯಾ-ಸ್ಲುವೇಕಿಯಾ ಮುಂತಾದ ಕಡೆಗಳಲ್ಲಿ ಕಾರ್ಯಾಚಾರಿಸುತ್ತಿದ್ದ  ಭಾರತೀಯ ರಾಯಭಾರಿ ಅಧಿಕಾರಿಗಳೊಂದಿಗೆ ಅವಿರತ ಸಂಪರ್ಕಹೊಂದಿ, ಸುಮಾರು 225 ಮಂದಿಯನ್ನು ಪೋಲ್ಯಾಂಡ್ ಮುಖೇನ "ಏರ್ ಗಂಗಾ ಆಪರೇಷನ್" ಸಹಕಾರದ ಮೂಲಕ ಭಾರತಕ್ಕೆ ಕಳುಹಿಸುವಲ್ಲಿ ಯಶಸ್ವಿಯಾಗಿದ್ದರು. 

ಮನೆಗೆಲಸಕ್ಕೆಂದು ಏಜಂಟರ ವಿವಿಧ ರೀತಿಯ ಆಮಿಷಕ್ಕೊಳಗಾಗಿ  ವಿದೇಶಗಳಲ್ಲಿ ಅದರಲ್ಲೂ ಗಲ್ಫ್ ದೇಶಗಳಲ್ಲಿ ದುಡಿಯುವ ಹಲವಾರು ಮಹಿಳೆಯರ ವಿವಿಧ ಸಮಸ್ಯೆ-ಸಂಕಷ್ಟಗಳನ್ನು ಸೂಕ್ತವಾಗಿ ಪರಿಹರಿಸುವಲ್ಲಿ ಯಶಸ್ವಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News