ದೇಶದಲ್ಲಿ ಕೋವಿಡ್ ಸೋಂಕು ಶೇ. 35ರಷ್ಟು ಹೆಚ್ಚಳ

Update: 2022-04-18 01:36 GMT

ಹೊಸದಿಲ್ಲಿ: ಸತತ ಹನ್ನೊಂದು ವಾರಗಳ ಇಳಿಕೆ ಪ್ರವೃತ್ತಿ ಬಳಿಕ ಇದೇ ಮೊದಲ ಬಾರಿಗೆ ದೇಶದಲ್ಲಿ ಸಾಪ್ತಾಹಿಕ ಕೋವಿಡ್-19 ಪ್ರಕರಣಗಳ ಸಂಖ್ಯೆ ಶೇಕಡ 35ರಷ್ಟು ಹೆಚ್ಚಳವಾಗಿದೆ.

ದೆಹಲಿ, ಹರ್ಯಾಣ ಮತ್ತು ಉತ್ತರ ಪ್ರದೇಶ ರಾಜ್ಯಗಳಲ್ಲಿ ಪ್ರಕರಣಗಳು ಹೆಚ್ಚುತ್ತಿರುವುದು ಇದಕ್ಕೆ ಪ್ರಮುಖ ಕಾರಣ. ಆದಾಗ್ಯೂ ಒಟ್ಟಾರೆ ಪ್ರಕರಣಗಳ ಸಂಖ್ಯೆ ಕಡಿಮೆ ಪ್ರಮಾಣದಲ್ಲೇ ಇದ್ದು, ಪ್ರಕರಣಗಳ ಏರಿಕೆ ಈ ಮೂರು ರಾಜ್ಯಗಳಿಗೆ ಸೀಮಿತವಾಗಿದೆ. ಎಪ್ರಿಲ್ 11 ರಿಂದ 17ರ ಅವಧಿಯಲ್ಲಿ ದೇಶದಲ್ಲಿ 6610 ಪ್ರಕರಣಗಳು ದಾಖಲಾಗಿದ್ದು, ಇದು ಹಿಂದಿನ ವಾರ ದಾಖಲಾಗಿದ್ದ 4900 ಪ್ರಕರಣಗಳಿಗೆ ಹೋಲಿಸಿದರೆ ಶೇಕಡ 35ರಷ್ಟು ಅಧಿಕ.

ಹಿಂದಿನ ವಾರ 7100 ಪ್ರಕರಣಗಳು ದಾಖಲಾಗಿದ್ದರೂ, ಕೇರಳದ ಪ್ರಕರಣಗಳನ್ನು ಒಟ್ಟು ಸಂಖ್ಯೆಯಿಂದ ಕಡಿತಗೊಳಿಸಲಾಗಿತ್ತು. ಏಕೆಂದರೆ ಕೇರಳ ಕೋವಿಡ್-19 ಅಂಕಿ ಅಂಶಗಳನ್ನು ಬಿಡುಗಡೆ ಮಾಡುವುದನ್ನು ಈ ವಾರದಿಂದ ಸ್ಥಗಿತಗೊಳಿಸಿದೆ. ಕೇರಳದಲ್ಲಿ ಕಳೆದ ವಾರ 2185 ಪ್ರಕರಣಗಳು ವರದಿಯಾಗಿದ್ದು, ಇದು ದೇಶದ ಒಟ್ಟು ಪ್ರಕರಣಗಳ ಮೂರನೇ ಒಂದರಷ್ಟಾಗಿದೆ.

ಸೋಂಕಿತರ ಸಾವಿನ ಸಂಖ್ಯೆ ಮತ್ತಷ್ಟು ಇಳಿದಿದ್ದು, ಒಂದು ವಾರದ ಅವಧಿಯಲ್ಲಿ ಕೇವಲ 27 ಮಂದಿ ಸೋಂಕಿತರಷ್ಟೇ ಮೃತಪಟ್ಟಿದ್ದಾರೆ. ಇದು 2020ರ ಮಾರ್ಚ್ 23-29 ಅವಧಿಯಲ್ಲಿ ದಾಖಲಾದ ಪ್ರಕರಣಗಳನ್ನು ಹೊರತುಪಡಿಸಿದರೆ ಇದು ಕನಿಷ್ಠ ಸಂಖ್ಯೆಯಾಗಿದೆ. ಕಳೆದ ವಾರ ದೇಶದಲ್ಲಿ ಒಟ್ಟು 54 ಮಂದಿ ಸೋಂಕಿತರು ಮೃತಪಟ್ಟಿದ್ದರು.

ಪ್ರಕರಣಗಳ ಏರಿಕೆ ಕಂಡುಬಂದಿರುವ ಎಲ್ಲ ಮೂರು ರಾಜ್ಯಗಳಲ್ಲಿ ಹಿಂದಿನ ವಾರಕ್ಕೆ ಹೋಲಿಸಿದರೆ ಪ್ರಕರಣಗಳು ದ್ವಿಗುಣಗೊಂಡಿವೆ. ದೆಹಲಿಯಲ್ಲಿ 2307 ಹೊಸ ಪ್ರಕರಣಗಳು ದಾಖಲಾಗಿದ್ದು, ಇದು ಕಳೆದ ವಾರದ ಸಂಖ್ಯೆ (943) ಗೆ ಹೋಲಿಸಿದರೆ ಶೇಕಡ 145ರಷ್ಟು ಅಧಿಕ. ಇದೇ ಅವಧಿಯಲ್ಲಿ ಹರ್ಯಾಣದಲ್ಲಿ ಶೇಕಡ 118ರಷ್ಟು ಪ್ರಕರಣಗಳು ಮತ್ತು ಉತ್ತರ ಪ್ರದೇಶದಲ್ಲಿ ಶೇಕಡ 141ರಷ್ಟು ಪ್ರಕರಣಗಳು ಹೆಚ್ಚಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News