ಅಸ್ಸಾಂ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ಟಿಎಂಸಿಗೆ ಸೇರ್ಪಡೆ

Update: 2022-04-18 02:18 GMT

ಗುವಾಹತಿ: ಅಸ್ಸಾಂ ಪ್ರದೇಶ ಕಾಂಗ್ರೆಸ್‍ನ ಮಾಜಿ ಅಧ್ಯಕ್ಷ, ಮಾಜಿ ಸಚಿವ ಹಾಗೂ ರಾಜ್ಯಸಭಾ ಸದಸ್ಯ ರಿಪುನ್ ಬೋರಾ ರವಿವಾರ ಕೊಲ್ಕತ್ತಾದಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದು, ಇದರಿಂದ ಕಾಂಗ್ರೆಸ್ ಗೆ ದೊಡ್ಡ ನಷ್ಟವಾದಂತಾಗಿದೆ. ರಿಪುನ್ ಬೋರಾ ಎರಡು ಪುಟಗಳ ರಾಜೀನಾಮೆ ಪತ್ರವನ್ನು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರಿಗೆ ಕಳುಹಿಸಿದ್ದಾರೆ.

ಬಂಗಾಳದ ಸಿಎಂ ಹಾಗೂ ಟಿಎಂಸಿ ಅಧಿನಾಯಕಿ ಮಮತಾ ಬ್ಯಾನರ್ಜಿಯವರ ಪಕ್ಷಕ್ಕೆ ಈಶಾನ್ಯ ಭಾರತದಲ್ಲಿ ಇದೀಗ ರಿಪುನ್ ಬೋರಾ, ಮೇಘಾಲಯ ಸಿಎಂ ಮುಕುಲ್ ಸಂಗ್ಮಾ ಹಾಗೂ ರಾಜ್ಯಸಭಾ ಸದಸ್ಯ ಸುಷ್ಮಿತಾ ದೇವ್ ಸೇರ್ಪಡೆಯಾದಂತಾಗಿದೆ. 2024ರ ಲೋಕಸಭಾ ಚುನಾವಣೆಯಲ್ಲಿ ಮತ್ತು ಈ ಭಾಗದ ವಿಧಾನಸಭಾ ಚುನಾವಣೆಗಳಲ್ಲಿ ಇವರು ಪಕ್ಷವನ್ನು ಮುನ್ನಡೆಸಲಿದ್ದಾರೆ.

ಕಾಂಗ್ರೆಸ್ ಜತೆ ಮೂರು ದಶಕಗಳ ನಂಟು ಹೊಂದಿದ್ದ 66 ವರ್ಷ ವಯಸ್ಸಿನ ರಿಪುನ್ ಬೋರಾ, ಬಿಜೆಪಿಯ ಕೋಮು ಹಾಗೂ ವಿಭಜನಕಾರಿ ಶಕ್ತಿಯ ವಿರುದ್ಧ ಸಂಘಟಿತ ಹೋರಾಟ ನಡೆಸುವ ಬದಲು ಕಾಂಗ್ರೆಸ್ ಸದಸ್ಯರು ತಮ್ಮ ಹಿತಾಸಕ್ತಿಗಾಗಿ ಪರಸ್ಪರ ಕಚ್ಚಾಡಿಕೊಳ್ಳುತ್ತಿದ್ದಾರೆ ಎಂದು ಸೋನಿಯಾಗಾಂಧಿಗೆ ಬರೆದ ಪತ್ರದಲ್ಲಿ ವಿವರಿಸಿದ್ದಾರೆ.

ಇತ್ತೀಚೆಗೆ ಅಸ್ಸಾನಿಂದ ರಾಜ್ಯಸಭೆಯ ಎರಡು ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‍ನ ಕೆಲ ಸದಸ್ಯರು ಬಿಜೆಪಿ ಕೂಟದ ಗೆಲುವಿಗೆ ಕಾರಣರಾಗಿದ್ದಾರೆ ಎಂದು ಅವರು ಆಪಾದಿಸಿದ್ದಾರೆ.

ಟಿಎಂಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿಯವರು ರಿಪುನ್ ಬೋರಾ ಅವರನ್ನು ಪಕ್ಷಕ್ಕೆ ಸ್ವಾಗತಿಸಿ, ಅಸ್ಸಾಂನ ಮಾಜಿ ಸಚಿವರು ಅತ್ಯಂತ ಕುಶಲ ರಾಜಕಾರಣಿ ಎಂದು ಬಣ್ಣಿಸಿದ್ದಾರೆ. ಬೋರಾ ಅವರ ಜತೆ ಪತ್ನಿ ಹಾಗೂ ಮಾಜಿ ಶಾಸಕಿ ಮೋನಿಕಾ ಬೋರಾ ಮತ್ತು ಪುತ್ರ ಕೂಡಾ ವೇದಿಕೆಯಲ್ಲಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News