ಚೆನ್ನೈ: ಟೇಬಲ್ ಟೆನಿಸ್ ಆಟಗಾರ ಅಪಘಾತದಲ್ಲಿ ಮೃತ್ಯು

Update: 2022-04-18 13:52 GMT
ವಿಶ್ವ ದೀನದಯಾಳನ್

ಚೆನ್ನೈ: ತಮಿಳುನಾಡಿನ ಉದಯೋನ್ಮುಖ ಟೇಬಲ್ ಟೆನಿಸ್ ಆಟಗಾರ ವಿಶ್ವ ದೀನದಯಾಳನ್ (18) ರವಿವಾರ ಗುವಾಹತಿಯಿಂದ ಶಿಲ್ಲಾಂಗ್‍ಗೆ ಟ್ಯಾಕ್ಸಿಯಲ್ಲಿ ಪ್ರಯಾಣಿಸುತ್ತಿದ್ದ ವೇಳೆ ವಾಹನ ಅಪಘಾತಕ್ಕೀಡಾಗಿ ಮೃತಪಟ್ಟಿದ್ದಾರೆ ಎಂದು ಟೇಬಲ್ ಟೆನಿಸ್ ಫೆಡರೇಷನ್ ಆಫ್ ಇಂಡಿಯಾ (ಟಿಟಿಎಫ್‍ಐ) ಪ್ರಕಟಿಸಿದೆ.

ಸೋಮವಾರದಿಂದ ಆರಂಭವಾಗಬೇಕಿದ್ದ 83ನೇ ರಾಷ್ಟ್ರೀಯ ಮತ್ತು ಅಂತರರಾಜ್ಯ ಟೇಬಲ್ ಟೆನಿಸ್ ಚಾಂಪಿಯನ್‍ಶಿಪ್‍ನಲ್ಲಿ ಭಾಗವಹಿಸಲು ವಿಶ್ವ, ಇತರ ಮೂವರು ಸಹ ಆಟಗಾರರ ಜತೆ ತೆರಳುತ್ತಿದ್ದರು.

ವಿಶ್ವ ಜತೆ ಪ್ರಯಾಣಿಸುತ್ತಿದ್ದ ಸಹ ಆಟಗಾರರಾದ ರಮೇಶ್ ಸಂತೋಷ್ ಕುಮಾರ್, ಅಭಿನಾಶ್ ಪ್ರಸನ್ನಾಜಿ ಶ್ರೀನಿವಾಸನ್ ಮತ್ತು ಕಿಶೋರ್ ಕುಮಾರ್ ತೀವ್ರವಾಗಿ ಗಾಯಗೊಂಡಿದ್ದಾರೆ. ಆದರೆ ಮೂವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ಹೇಳಿದ್ದಾರೆ.

"ಎದುರಿನಿಂದ ಬಂದ 12 ಚಕ್ರದ ಟ್ರೈಲರ್, ಉಮ್ಲಿ ಚೆಕ್‍ ಪೋಸ್ಟ್ ಬಳಿಯ ಶಾಂಗ್‍ ಬಂಗ್ಲಾ ಬಳಿ ರಸ್ತೆ ವಿಭಜಕದ ಮೇಲೆ ಹರಿದು ಟ್ಯಾಕ್ಸಿಗೆ ಢಿಕ್ಕಿ ಹೊಡೆದಿದೆ. ಬಳಿಕ ಕಂದಕಕ್ಕೆ ಉರುಳಿದೆ ಎಂದು ಟಿಟಿಎಫ್‍ಐ ಪ್ರಕಟಣೆ ಹೇಳಿದೆ.

ಕಾರು ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದು, ವಿಶ್ವ, ಇಂದಿರಾಗಾಂಧಿ ಈಶಾನ್ಯ ಪ್ರಾದೇಶಿಕ ಆರೋಗ್ಯ ಮತ್ತು ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಕರೆ ತರುವ ವೇಳೆ ಮೃತಪಟ್ಟಿದ್ದಾರೆ. ಮೇಘಾಲಯ ಸರ್ಕಾರದ ನೆರವಿನೊಂದಿಗೆ ತಕ್ಷಣವೇ ಟೂರ್ನಿ ಸಂಘಟಕರು ಆಸ್ಪತ್ರೆಗೆ ಕರೆದೊಯ್ದರು ಎಂದು ಹೇಳಲಾಗಿದೆ.

ಹಲವು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಪದಕಗಳನ್ನು ಗೆದ್ದಿದ್ದ ವಿಶ್ವ ಭರವಸೆಯ ಆಟಗಾರರಾಗಿದ್ದರು. ಎಪ್ರಿಲ್ 27ರಿಂದ ಆಸ್ಟ್ರಿಯಾದ ಲಿನ್ಸ್ ನಲ್ಲಿ ನಡೆಯಲಿರುವ ಡಬ್ಲ್ಯುಟಿಟಿ ಯೂತ್ ಕಂಟೆಂಡ‌ರ್ ನಲ್ಲಿ ಭಾರತವನ್ನು ವಿಶ್ವ‌ ದೀನದಯಾಳನ್ ಪ್ರತಿನಿಧಿಸಬೇಕಿತ್ತು. ಅಣ್ಣಾನಗರ ಕೃಷ್ಣಸ್ವಾಮಿ ಟಿಟಿ ಕ್ಲಬ್‍ನಲ್ಲಿ ರಾಮನಾಥ್ ಪ್ರಸಾದ್ ಮತ್ತು ಜೈ ಪ್ರಭುರಾಮ್ ಬಳಿ ತರಬೇತಿ ಪಡೆಯುತ್ತಿದ್ದ ಇವರು ಖ್ಯಾತ ಆಟಗಾರ ಶರತ್ ಕಮಲ್ ಅವರಿಂದಲೂ ಮೆಚ್ಚುಗೆ ಪಡೆದಿದ್ದರು. ಮೇಘಾಲಯ ಸಿಎಂ ಕೊನಾರ್ಡ್ ಸಂಗ್ಮಾ, ವಿಶ್ವ ದೀನದಯಾಳನ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News