ಕಸಗುಡಿಸುವವರು, ಬೀದಿ ವ್ಯಾಪಾರಿಗಳು ಕಂಪೆನಿಗಳ ಸಿಇಒ - ಇದು ವಂಚಕರ ಹೊಸ ತಂತ್ರ!

Update: 2022-04-19 08:44 GMT
ಸಾಂದರ್ಭಿಕ ಚಿತ್ರ

ವಡೋದರಾ: ಗುಜರಾತ್‍ನ ವಡೋದರಾದಲ್ಲಿ ಇತ್ತೀಚೆಗೆ ಸೈಬರ್ ಕ್ರೈಂ ಅಧಿಕಾರಿಗಳು ತನಿಖೆಗೆಂದು ವ್ಯಕ್ತಿಯೊಬ್ಬನ ಮನೆಬಾಗಿಲಿಗೆ ತಲುಪಿದಾಗ ಆತ ಕಂಪೆನಿಯೊಂದರ ಎಂಡಿಯಾಗಿದ್ದುಕೊಂಡು ಗುಡಿಸಲಿನಂತಹ ಮನೆಯಲ್ಲಿದ್ದುದನ್ನು ಕಂಡು ದಂಗಾಗಿದ್ದರು. ವಾಸ್ತವವಾಗಿ ಆ ವ್ಯಕ್ತಿ ನಗರದಲ್ಲಿ ಹಲವಾರು ವರ್ಷಗಳಿಂದ ಕಸ ಗುಡಿಸುವವನಾಗಿದ್ದ. ಅಧಿಕಾರಿಗಳು ಆತನ ಮನೆ ಬಾಗಿಲಿಗೆ ಬಂದಾಗಲಷ್ಟೇ ಆತನಿಗೆ ತಾನು ಕಂಪೆನಿಯೊಂದರ ಎಂಡಿ ಎಂದು ತಿಳಿದು ಬಂದಿತ್ತು ಎಂದು timesofindia ವರದಿ ಮಾಡಿದೆ.

ಅಷ್ಟಕ್ಕೂ ಇದರ ಹಿಂದೆ ದೊಡ್ಡ ವಂಚನೆಯ  ಜಾಲವೇ ಇದೆ ಎಂದು ಎಸಿಪಿ(ಸೈಬರ್ ಕ್ರೈಂ) ಹರ್ದಿಕ್ ಮಕಾಡಿಯಾ ಹೇಳಿದ್ದಾರೆ.

ಬಡ ಹಾಗೂ ಮುಗ್ಧ ಜನರನ್ನು ವಂಚಿಸಿ ಈ ರೀತಿ ಕೋಟಿಗಟ್ಟಲೆ ಹಣ ವಗಾವಣೆ ಮಾಡಲಾಗುತ್ತಿದೆ ಎಂದು ಅವರು ಹೇಳುತ್ತಾರೆ.

ಹೂಡಿಕೆಗಳ ಮೇಲೆ ಉತ್ತಮ ಬಡ್ಡಿ ದೊರೆಯುತ್ತದೆ ಎಂದು ವಡೋದರಾದಲ್ಲಿ ವಂಚಿಸಿದ ಪ್ರಕರಣದ ಬೆನ್ನು ಹತ್ತಿದ ಅಧಿಕಾರಿಗಳಿಗೆ ಈ ಮಾಹಿತಿ ದೊರಕಿತ್ತಲ್ಲದೆ ವಿವಿಧ ರಾಜ್ಯಗಳಲ್ಲಿ ಈ ಉದ್ದೇಶಕ್ಕೆ ಶೆಲ್ ಕಂಪೆನಿಗಳನ್ನು ಸೃಷ್ಟಿಸಲಾಗಿತ್ತು ಎಂದು ತಿಳಿದು ಬಂದಿದೆ.

ಈ ರೀತಿ ಸುಮಾರು ಎರಡು ಡಜನ್ ಕಂಪೆನಿಗಳ ನಿರ್ದೇಶಕರು ಮತ್ತು ಸಿಇಒಗಳ ವಿಳಾಸ ದೊರೆತ ತನಿಖಾ ಏಜನ್ಸಿಗಳು ಅವರ ನಿವಾಸಗಳಿಗೆ ಹೋದಾಗ ಅವರೆಲ್ಲಾ ರಸ್ತೆ ಬದಿ ಮಾರಾಟಗಾರರು, ಅಡುಗೆಯಾಳುಗಳು, ಕಸ ಗುಡಿಸುವವರೆಂದು ತಿಳಿದು ಬಂದಿತ್ತು. ಈ ಬಡಪಾಯಿಗಳೂ  ಖಾಸಗಿ ಕಂಪೆನಿಗಳ ಉನ್ನತ ಹುದ್ದೆಯಲ್ಲಿ ತಮ್ಮ ಹೆಸರುಗಳಿವೆ ಎಂದು ತಿಳಿದು ದಂಗಾಗಿದ್ದರಲ್ಲದೆ ತಮ್ಮ ಹೆಸರಿನಲ್ಲಿ ಬೇರೆ ಯಾರೋ ಬ್ಯಾಂಕ್ ಖಾತೆಗಳನ್ನು ತೆರೆದು ವಂಚಿಸಿದ್ದಾರೆಂದೂ ಅವರು ತಿಳಿದಿರಲಿಲ್ಲ.

ಬಡ ವ್ಯಕ್ತಿಗಳ ಗುರುತು ಸಂಬಂಧಿ ಮಾಹಿತಿಗಳನ್ನು ಸಂಗ್ರಹಿಸಿ ಅವರ ಹೆಸರಿನಲ್ಲಿ ಕಂಪೆನಿಗಳನ್ನು ಹಾಗೂ ಬ್ಯಾಂಕ್ ಖಾತೆಗಳನ್ನು ರಚಿಸಿ ಹಣ ವರ್ಗಾವಣೆ ಮಾಡಿ ನಂತರ ಅದನ್ನು ಕ್ರಿಪ್ಟೋಕರೆನ್ಸಿಗೆ ಪರಿವರ್ತಿಸಿ ಚೀನಾಗೆ ವರ್ಗಾಯಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News